ಜೆಪ್ಪು ಸಂತ ಅಂತೋನಿ ಆಶ್ರಮವು ಪದುವಾ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ಸಜ್ಜಾಗಿದ್ದು, ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ವಂ| ಬೊನವೆಂಚರ್ ನಜ್ರೆತ್ ರವರು ಮೇ 31, 2024 ರಂದು ಸಂಜೆ ಮಿಲಾಗ್ರಿಸ್ ಚರ್ಚ್‌ನಲ್ಲಿ ನೊವೆನಾದ ಮೊದಲ ದಿನದ ಪವಿತ್ರ ಬಲಿಪೂಜೆಯನ್ನು ಆರ್ಪಿಸುವ ಮೂಲಕ ಸಂಭ್ರಮದ ಮಹೋತ್ಸವಕ್ಕೆ ಚಾಲನೆ ನೀಡಿದರು.
ಜೆಪ್ಪುವಿನ ಸಂತ ಆಂತೋಣಿ ಸೆವಾ ಸಂಸ್ಥೆಗಳ ನಿರ್ದೇಶಕ ವಂದನೀಯ ಜೆ.ಬಿ ಕ್ರಾಸ್ತಾ, ಮತ್ತು ಸಹಾಯಕ ನಿರ್ದೇಶಕರಾದ ವಂದನೀಯ ಅವಿನಾಶ್ ಪಾಯ್ಸ್ ಜೊತೆಯಾಗಿ ನೊವೆನಾ ಪೂಜಾ ಸಮಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು. ಪೂಜಾ ಸಮಯದಲ್ಲಿ ವಿಶೇಷವಾಗಿ ಸ್ತ್ರೀಯರಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. “ಪ್ರಾರ್ಥನೆ ಮತ್ತು ಭೇಟಿಯಿಂದ ನಮ್ಮ ದೇವರ ಹಾಗೂ ನೆರೆಹೊರೆಯವರ ಜೊತೆಗಿನ ಸಂಬಂಧ ಹತ್ತಿರವಾಗುತ್ತದೆ.” ಎಂಬ ವಿಷಯ ಕುರಿತಾಗಿ ವಂ| ಬೊನವೆಂಚರ್ ಪ್ರವಚನ ನೀಡಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ನೊವೆನಾ ಪ್ರಾರ್ಥನಾ ವಿಧಿಗಳು 2024 ರ ಜೂನ್ 12 ರವರೆಗೆ ನಡೆಯಲಿರುವುದು. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮತ್ತು 11.30 ಗಂಟೆಗೆ ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿ ಪೂಜೆ ನೊವೆನಾ ಮತ್ತು ಭಕ್ತಿ ಕಾರ್ಯಗಳು ನಡೆಯಲಿರುವುದು. ಎಲ್ಲಾ ಭಕ್ತಾಧಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯು ಮಾಡಲಾಗಿದೆ.
ಜೂನ್ 13 ರಂದು ಮಿಲಾಗ್ರಿಸ್ ಚರ್ಚ್‌ನಲ್ಲಿ ಸಂಜೆ 6 ಗಂಟೆಗೆ ನಡೆಯುವ ಪ್ರಮುಖ ಹಬ್ಬದ ಪವಿತ್ರ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ನಡೆಸುವರು ಮತ್ತು ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ| ಫ್ರಾನ್ಸಿಸ್ ಸೆರಾವೊರವರು ನಡೆಸುವರು. “ಪ್ರಭು, ನಮಗೆ ಪ್ರಾರ್ಥಿಸಲು ಕಲಿಸಿರಿ” ಈ ಬಾರಿಯ ಹಬ್ಬದ ಸಂದೇಶವಾಗಿರುತ್ತದೆ.
ಜೂನ್ 13 ರ ಹಬ್ಬದ ದಿನದಂದು ಇತರ ಪೂಜೆಗಳು, ಕೊಂಕಣಿಯಲ್ಲಿ ಬೆಳಿಗ್ಗೆ 6 ಗಂಟೆಗೆ ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿ ಮತ್ತು 8.15 ಗಂಟೆಗೆ ಮಿಲಾಗ್ರಿಸ್ ಚರ್ಚ್‌ನಲ್ಲಿ ಆಚರಿಸಲಾಗುವುದು. ಮಲಯಾಳಂನಲ್ಲಿ ಬಲಿಪೂಜೆ ಸಂಜೆ 4.30 ಕ್ಕೆ ಮಿಲಾಗ್ರಿಸ್ ಚರ್ಚಿನಲ್ಲಿ ನಡೆಯುವುದು.
■ ಚಿತ್ರ / ವರದಿ : ಕೆನರಾ ಕಮ್ಯುನಿಕೇಶನ್ ಸೆಂಟರ್, ಮಂಗಳೂರು