ಮಂಗಳೂರು ಅಂತರಾಷ್ಟ್ರೀಯ ಗುಣಮಟ್ಟದ ನಗರವಾಗಿ ಬೆಳೆಯಬೇಕು ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನದ ಅಗತ್ಯವಿದೆ – ಎಂದುರೋಹನ್ ಕಾರ್ಪೋರೇಷನ್ನ ಸ್ಥಾಪಕ ಮತ್ತು ಅಧ್ಯಕ್ಷ ರೋಹನ್ ಮೊಂತೇರೊ ತಿಳಿಸಿದ್ದಾರೆ. ಅವರು ಗುರುವಾರ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.
“ಮಂಗಳೂರು ನಗರ ಇನ್ನಷ್ಟು ಬೆಳೆಯಲು ಬೇಕಾದ ನೈಸರ್ಗಿಕ ಸೌಲಭ್ಯವನ್ನು ಹೊಂದಿದೆ. ಮಂಗಳೂರು ಜಲ,ವಾಯು,ನೆಲ ಸಾರಿಗೆ ಸಂಪರ್ಕ ಹೊಂದಿರುವ ನಗರ. ಹೆಚ್ಚು ಸುಶಿಕ್ಷಿತ ಜನರು ಇದ್ದಾರೆ. ಜಾತಿ,ಮತದ ದೊಡ್ಡ ಸಮಸ್ಯೆ ಇಲ್ಲ. ಒಂದು ರೀತಿಯಲ್ಲಿ ಮಂಗಳೂರು ಸ್ವರ್ಗದ ರೀತಿಯ ಪ್ರದೇಶ. ಮಂಗಳೂರಿನ ಜನ ದುಬೈಗೆ ಹೋಗುತ್ತಾರೆ. ಮಂಗಳೂರನ್ನೇ ದುಬೈ ರೀತಿಯಲ್ಲಿ ಬೆಳೆಸಬೇಕು. ಇಲ್ಲಿನ ಜನರು ಹಲವು ಭಾಷೆಗಳಲ್ಲಿ ವ್ಯವಹಾರ ಮಾಡ ಬಲ್ಲವರಾಗಿದ್ದಾರೆ. ನಾನು ಉದ್ಯಮ ಕ್ಷೇತ್ರದಲ್ಲಿ ಬೆಳೆಯಲು ಮಂಗಳೂರಿನ ಜನ ಸಹಕಾರ ನೀಡಿರುವುದನ್ನು ನಾನು ಮರೆಯಲು ಸಾಧ್ಯವಿಲ್ಲ” ಎಂದು ರೋಹನ್ ಮೊಂತೆರೋ ಈ ಸಂದರ್ಭದಲ್ಲಿ ನುಡಿದರು.
“ಒಂಭತ್ತನೆ ತರಗತಿಯ ನಂತರ ಔಪಚಾರಿಕವಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ಇದ್ದಾಗ, ಕೃಷಿಕನಾದ ನನ್ನ ತಂದೆಯವರು ಕೃಷಿ ಕೆಲಸ ಮಾಡಿಕೊಂಡು ಇರಲು ಹೇಳಿದರು. ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ನಾನು ಹೊಲದಲ್ಲಿ ದುಡಿದಿದ್ದೇನೆ. ಬಳಿಕ ಕ್ಯಾಂಟೀನ್ ಕೆಲಸ, ಆಟೋ ಇಲೆಕ್ಟ್ರೀಶಿಯನ್, ಏರ್ ಕಂಡೀಶನ್ ಟೆಕ್ನಿಶಿಯನ್, ಕ್ಯಾಟರಿಂಗ್ ಹೀಗೆ ನಾನಾಕಡೆ ಕೆಲಸ ಮಾಡಿ ಲಾಂಡ್ರಿಯ ಮೂಲಕ ಸ್ವ ಉದೋಗದಲ್ಲೂ ತೊಡಗಿಸಿಕೊಂಡಿದ್ದೆ. ಅಲ್ಲಿಂದ ಬೇಕರಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಎಂಟು ವರ್ಷ ಕೆಲಸ ಮಾಡಿ ಮಾರುಕಟ್ಟೆಯ ಅನುಭವ ಪಡೆದುಕೊಂಡು ಬಳಿಕ ಮನೆ ಬಾಡಿಗೆ ವ್ಯವಹಾರದಂತಹ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಇಂದು ಬೃಹತ್ ಬಡಾವಣೆಗಳನ್ನು ನಿರ್ಮಿಸುವ ಹಂತಕ್ಕೆ ತಲುಪಿದ್ದೇನೆ” ಎಂದು ರೋಹನ್ ಮೊಂತೆರೋ ತಾನು ಉದ್ಯಮಿಯಾಗಿ ಬೆಳೆದು ಬಂದ ಹಾದಿಯನ್ನು ಹಂತ ಹಂತವಾಗಿ ವಿವರಿಸುತ್ತಾ ” ರಿಯಲ್ ಎಸ್ಟೇಟ್ ಕಷ್ಟ ನಷ್ಟಗಳ ಅನುಭವ ನನಗೆ ಸಾಕಷ್ಟು ಪಾಠ ಕಲಿಸಿದೆ” ಎಂದು ಮಾರ್ಮಿಕವಾಗಿ ನುಡಿದರು.
ರೋಹನ್ ಮೊಂತೆರೋ ಕಳೆದ 32 ವರ್ಷಗಳಲ್ಲಿ 40 ರಿಯಲ್ಎಸ್ಟೇಟ್ ಪ್ರೊಜೆಕ್ಟ್ ಗಳನ್ನು ಪೂರ್ಣಗೊಳಿಸಿ 1400 ಜನರಿಗೆ ಉದ್ಯೋಗ ನೀಡಿದ್ದಾರೆ. 3000ಕ್ಕೂ ಅಧಿಕ ಮನೆ ನಿರ್ಮಿಸಿದ್ದಾರೆ. ಮಂಗಳೂರಿನ ಪಡೀಲ್, ಸುರತ್ಕಲ್ , ಯೆಯ್ಯಾಡಿ, ಸುರತ್ಕಲ್ ನಲ್ಲಿ 8ಸಾವಿರ ಕೋಟಿ ರೂಪಾಯಿಯ ಯೋಜನೆ ಕೈ ಗೆತ್ತಿಕೊಳ್ಳಲಿರುವುದಾಗಿ ಅವರು ಈ ಸಮ್ದರ್ಭದಲ್ಲಿ ತಿಳಿಸಿದರು. ಮುಂದಿನ ಹಂತದಲ್ಲಿ ಮೈಸೂರು, ಗೋವಾಕ್ಕೂ ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಿಸುವ ಚಿಂತನೆ ಹೊಂದಿರುವುದಾಗಿ ರೋಹನ್ ಮೊಂತೆರೋ ವಿವರಿಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಪೋರೆಟ್ ಸಂವಹನಾಧಿಕಾರಿ ಜೈದೀಪ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ , ಕಾರ್ಯಕ್ರಮ ನಿರ್ದೇಶಕ ವಿಲ್ಫೆಡ್ ಡಿ ಸೋಜ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡಸ್ಥಳ ವಂದಿಸಿದರು.