ಅನಿವಾಸಿ ಭಾರತೀಯ ಉದ್ಯಮಿ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ ಸೊಜಾ ಮತ್ತು ಶ್ರೀಮತಿ ಫ್ಲಾವಿಯಾ ಡಿ ಸೊಜಾ ಇವರನ್ನು ಬೆಂಗಳೂರಿನ ಸೇಂಯ್ಟ್ ಜಾನ್ಸ್ ನ್ಯಾಶನಲ್ ಅಕಾಡೆಮಿ ಒಫ್ ಹೆಲ್ತ್ ಸೈನ್ಸ್ ಸಭಾಂಗಣದಲ್ಲಿ, ಭಾರತೀಯ ಕಥೊಲಿಕ್ ಬಿಶಪ್ಪರ ಮಹಾಮಂಡಳದ – ‘ಕಥೊಲಿಕ್ ಕನೆಕ್ಟ್’ ಮೊಬೈಲ್ ಅಪ್ಲಿಕೇಶನ್ ಲೊಕಾರ್ಪಣೆಯ ಸಂದರ್ಭದಲ್ಲಿ, ಭಾರತದ ಕಥೊಲಿಕ್ ಧರ್ಮಸಭೆ ಮತ್ತು ಧರ್ಮಸಭೆಯ ಸಂಸ್ಥೆಗಳಿಗೆ ಅವರು ನೀಡಿದ ಅಪಾರ ಕೊಡುಗೆಗಾಗಿ ಮತ್ತು ಸಹಾಯಹಸ್ತದ ನಿರೀಕ್ಷೆಯಲ್ಲಿರುವ ಜನರ ಅಗತ್ಯಗಳಿಗೆ ಸ್ಪಂದಿಸುವುದನ್ನು ತಮ್ಮ ಬದುಕಿನ ಅಂಗವಾಗಿ ರೂಡಿಸಿಕೊಂಡಿರುವುದನ್ನು ಗುರುತಿಸಿ ಭಾರತದ ಎಲ್ಲಾ ಕಥೊಲಿಕ್ ಬಿಶಪ್ಪರ ಪರವಾಗಿ ಸನ್ಮಾನಿಸಲಾಯಿತು.



ಭಾರತೀಯ ಕಥೊಲಿಕ್ ಬಿಶಪ್ಪರ ಮಹಾಮಂಡಳದ ಅಧ್ಯಕ್ಷ ಕಾರ್ಡಿನಲ್ ಪಿಲಿಫ್ ನೇರಿ ಫೆರಾವೊ ಇವರು ಮುಂಬಯಿ ಕಾರ್ಡಿನಲ್ ಓಸ್ವಲ್ಡ್ ಗ್ರೇಶಿಯಸ್, ಹೈದರಾಬಾದ್ ಕಾರ್ಡಿನಲ್ ಅಂತೋನಿ ಪೂಲಾ, ಮದ್ರಾಸ್ ಮಯ್ಲಾಪುರ್ ಮಹಾಧರ್ಮಾಧ್ಯಕ್ಷ ಜಾರ್ಜ್ ಅಂತೋಣಿ ಸ್ವಾಮಿ, ದೆಹಲಿಯ ಮಹಾದರ್ಮಾಧ್ಯಕ್ಷ ಅಂತೋಣಿ ಕುಟೋ, ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೋ ಇವರ ಸಮ್ಮುಖದಲ್ಲಿ , ಸೋಜಾ ದಂಪತಿಗೆ , ಶಾಲು – ಹಾರ ಮತ್ತು ಸನ್ಮಾನಪತ್ರ ನೀಡಿ ಗೌರವಿಸಿದರು.



ಈ ಸಂದರ್ಭದಲ್ಲಿ ಸ್ಥಳೀಯ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ| ಜೆರಾಲ್ದ್ ಐಸಾಕ್ ಲೋಬೊ, ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ|ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಜರಿದ್ದರು.



ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಮೈಕಲ್ ಡಿಸೊಜಾ, ತಮ್ಮ ತಂದೆಯಿಂದ ಪ್ರೇರೇಪಿತರಾಗಿ, ಪೂತ್ತೂರಿನಲ್ಲಿ ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯಿಂದ ಉದ್ಯಮ ಆರಂಭಿಸಿ, ಮಂಗಳೂರಿನಲ್ಲಿ ಸೋಜಾ ಇಲೆಕ್ಟ್ರೋನಿಕ್ಸ್ ಎಂಬ ಸಂಸ್ಥೆಗೆ ವಿಸ್ತರಿಸಿ, ಅಲ್ಲಿಂದ ದುಬಾಯ್‌ಗೆ ಪ್ರಯಾಣ ಬೆಳೆಸಿ ಪ್ರಸ್ತುತ ಅಬುದಾಬಿಯಲ್ಲಿ ಉದ್ಯಮಿಯಾಗಿದ್ದಾರೆ. ಎಚ್.ಎ.ಎಸ್ ಹಾಸ್ಪಿಟಾಲಿಟಿ ಎಂಬ ಉದ್ಯಮ ಸಂಸ್ಥೆ ಕಟ್ಟಿ ದುಬಾಯಾದ್ಯಂತ ಡ್ಯೂನ್ಸ್ ಮತ್ತು ಐವರಿ ಗ್ರಾಂಡ್ ಎಂಬ ಹೆಸರಿನ ಹೋಟೆಲ್ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಅವರ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ಜೀವನೋಪಾಯ ಕಂಡುಕೊಂಡಿದ್ದಾರೆ.

ಮಂಗಳೂರು ಧರ್ಮಕ್ಷೇತ್ರದಲ್ಲಿ ಸಿ.ಒ.ಡಿ.ಪಿ. ಸಂಸ್ಥೆಯ ಮೂಲಕ 25 ಕೋಟಿ ರೂಪಾಯಿ ಎಡುಕೇರ್ ವಿದ್ಯಾನಿಧಿಯನ್ನು ಸ್ಥಾಪಿಸಲಾಗಿದ್ದು, 2013 ರಿಂದ ಈ ತನಕ ಸುಮಾರು 3,500 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಸಮಾಜದ ಅಶಕ್ತ ವರ್ಗದವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ 10 ಕೋಟಿ ರುಪಾಯಿ ನಿಧಿ ಸ್ಥಾಪಿಸಿ ಸ್ವ – ಸಹಾಯ ಗುಂಪುಗಳಿಗೆ ನೀಡಲಾಗಿದೆ. ಸುಮಾರು 10,000 ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿವೆ.
ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐಎಎಸ್, ಐಪಿಎಸ್ ಮತ್ತಿತರ ಸರಕಾರಿ ಅಧಿಕಾರಿಗಳಾಗಬೇಕೆಂಬ ಉದ್ದೇಶದಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ಕೊಂಕಣಿ ಭಾಷೆ – ಸಾಹಿತ್ಯ – ಕಲೆಗಾಗಿ ಮಹತ್ವಾಕಾಂಕ್ಷಿ ‘ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಉತ್ತಮ ಗುಣಮಟ್ಟದ 100 ಕೊಂಕಣಿ ಪುಸ್ತಕಗಳನ್ನು ಪ್ರಕಟಿಸಲು ಪುಸ್ತಕ ಪ್ರಾಧಿಕಾರ ಸ್ಥಾಪಿಸಿ ರೂಪಾಯಿ 40 ಲಕ್ಷ, ಕೊಂಕಣಿ ಸಿನೇಮಾ ನಿರ್ಮಾಣಕ್ಕೆ 25 ಲಕ್ಷ ಮತ್ತು 25 ಕೊಂಕಣಿ ಹಾಡುಗಳ ನಿರ್ಮಾಣಕ್ಕೆ 10 ಲಕ್ಷ ನಿಧಿಯನ್ನು ಮೀಸಲಿಟ್ಟಿದ್ದಾರೆ.


ಇತ್ತೀಚೆಗೆ ಫಾ। ಮುಲ್ಲರ್ ಆಸ್ಪತ್ರೆಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಾಜದ ಅಶಕ್ತ ವರ್ಗದವರಿಗೂ ಉತ್ತಮ ಚಿಕಿತ್ಸೆ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕೆಂಬ ಒತ್ತಾಸೆಯಿಂದ ವಿಶೇಷ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕೆಳ ಮತ್ತು ಮದ್ಯಮ ವರ್ಗದ ಜನರಿಗೆ, ಅದರಲ್ಲೂ ಕೊಂಕಣಿ ಸಾಹಿತಿ ಮತ್ತು ಕಲಾವಿದರಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆಗಾಗಿ ಒಡಂಬಡಿಕೆಯನ್ನು ಮಾಡಿರುತ್ತಾರೆ.
ಸಾಹಿತ್ಯ, ಕಲೆಗೆ ಸದಾ ಪ್ರೋತ್ಸಾಹ ನೀಡುತ್ತಲೇ ಬಂದಿರುವ ಸೋಜಾ ದಂಪತಿ, ಬಡಜನರ ವಸತಿಗೆ, ಶಿಕ್ಷಣ ಸಂಸ್ಥೆಗಳಿಗೆ, ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು – ಸದಾ ನೆರವಿನ ಹಸ್ತ ನೀಡುತ್ತಾ ಬಂದಿದ್ದು, ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂರ್ತ್ಯಗಳ ಧರ್ಮಕೇಂದ್ರಗಳಿಗೆ ಬೃಹತ್ ಮೊತ್ತದ ದೇಣಿಗೆಯನ್ನು ನೀಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದ ಯೋಜನೆಗೂ ಅಡಿಪಾಯ ಹಾಕಿ ಬೆನ್ನೆಲುಬಾಗಿ ನಿಂತಿದ್ದಾರೆ.

ದೇಶ ವಿದೇಶಗಳಲ್ಲಿ ನಡೆಯುವ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ನಾಟಕ ಕಾರ್ಯಕ್ರಮಗಳಿಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವುದಲ್ಲದೇ, 2023 ನವೆಂಬರ್ ನಲ್ಲಿ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಮ್ಮೇಳನದ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ. ಸ್ವ ಉದ್ಯಮ ಸ್ಥಾಪಿಸಲು ಬಯಸುವ ಸಮಾಜ ಭಾಂದವರಿಗೆ, ಪ್ರತ್ಯೇಕವಾಗಿ ಯುವಜನತೆಗೆ ಸೋಜಾ ದಂಪತಿ ಬಂಡವಾಳ ಒದಗಿಸುವ ಮೂಲಕ ಸಹಾಯಹಸ್ತ ನೀಡುತ್ತಲೇ ಬಂದಿರುತ್ತಾರೆ.
ಪ್ರಸ್ತುತ ಕುಟುಂಬ ಸಮೇತ ಶ್ರೀ ಮೈಕಲ್ ಮತ್ತು ಶ್ರೀಮತಿ ಫ್ಲಾವಿಯಾ ಡಿ ಸೊಜಾ ಅಬುದಾಬಿಯಲ್ಲಿ ವಾಸವಾಗಿದ್ದಾರೆ.




