ಕೊಂಕಣಿ ಸಾಹಿತ್ಯಕ್ಕೆ 33 ಕ್ಕಿಂತಲೂ ಹೆಚ್ಚು ಕಾದಂಬರಿ, ನೂರಕ್ಕಿಂತಲೂ ಹೆಚ್ಚಿನ ಸಣ್ಣ ಕಥೆಗಳನ್ನು ನೀಡಿರುವ ಎಡ್ವಿನ್ ಡಿ’ಸೋಜಾರವರ ಕೊಡುಗೆಯನ್ನು ಕೊಂಕಣಿಗರು ಸ್ಮರಿಸುವುದರೊಂದಿಗೆ ಅವರ ಅಪಾರ ಸಾಹಿತ್ಯವನ್ನು ಓದಿ, ಅಧ್ಯಯನ ಮಾಡುವ ಮುಖಾಂತರ ಎಡ್ವಿನ್ ಡಿ’ಸೋಜಾರವರನ್ನು ಅಮರಾಗಿಸೋಣ” ಎಂದರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಫಾ| ಪ್ರವೀಣ್ ಮಾರ್ಟಿಸ್ ಜೆ.ಸ. ಇತ್ತೀಚೆಗೆ ನಿಧನರಾದ ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕೊಂಕಣಿಯ ಹಿರಿಯ ಸಾಹಿತಿ ಎಡ್ವಿನ್ ಜೆ. ಎಫ್. ಡಿ’ಸೋಜಾರ ನುಡಿನಮನ ಕಾರ್ಯಕ್ರಮದಲ್ಲಿ ನೆರೆದಿದ್ದ ಎಡ್ವಿನ್ ಡಿ’ಸೋಜಾರ ಅಭಿಮಾನಿ ಬಳಗವನ್ನು ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು.








ದಿ| ಎಡ್ವಿನ್ ಡಿಸೋಜಾರ ಸಮಗ್ರ ಸಾಹಿತ್ಯವನ್ನು ಡಿಜಿಟಲೀಕರಿಸುವುದು, ಕನ್ನಡ ಲಿಪಿಯಲ್ಲಿರುವ ಅವರ ಆಯ್ದ ಸಾಹಿತ್ಯವನ್ನು ದೇವನಾಗರಿಗೆ ಲಿಪಿಯಂತರಿಸುವುದು, ಅವರ ವಿಶಿಷ್ಠ ಸಾಹಿತ್ಯ ಕೃತಿಗಳನ್ನು ಇತರ ಭಾರತೀಯ ಭಾಶೆಗಳಿಗೆ ಅನುವಾದಿಸುವುದು ಮತ್ತು ಅವರ ಆಯ್ದ ಸಣ್ಣಕಥೆಗಳನ್ನು ’ಕಥಾರಂಗ’ದಂತಹ ರಂಗಪ್ರಕಾರಗಳಲ್ಲಿ ಅಳವಡಿಸುವುದು ಈ ನಾಲ್ಕು ನಿರ್ಣಯಗಳನ್ನು ಈ ನುಡಿನಮನ ಕಾರ್ಯಕ್ರಮದಲ್ಲಿ ಅಂಗೀಕರಿಸಲಾಯಿತು.


ಈ ಕಾರ್ಯಕ್ರಮವನ್ನು ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಕೊಂಕಣಿ ಸಂಸ್ಥೆಯ ನೇತೃತ್ವದಲ್ಲಿ ಸಾಹಿತ್ಯ ಅಕಾಡೆಮಿ, ಹೊಸ ದೆಹಲಿ, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಮೈಕಲ್ ಡಿಸೋಜಾ ವಿಶನ್ ಕೊಂಕಣಿ ಮತ್ತು ರಾಕ್ಣೊ ವಾರಪತ್ರಿಕೆಯ ಸಹಯೋಗದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ’ಸಹೋದಯ’ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸುಮಾರು 11 ವರ್ಷಗಳ ಕಾಲ ಕೊಂಕಣಿ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಎಡ್ವಿನ್ ಜೆ. ಎಫ್. ಡಿ’ಸೋಜಾರವರು ಕನ್ನಡ ಲಿಪಿಯಲ್ಲಿ ಕಳೆದ 40 ವರ್ಷಗಳಿಂದ ಪ್ರಕಟಗೊಳ್ಳಿತ್ತಿರುವ ಏಕ ಮಾತ್ರ ಕೊಂಕಣಿ ಸಂಶೋಧನಾ ಷಣ್ಮಾಸಿಕ ’ಅಮರ್ ಕೊಂಕಣಿ’ ಇದರ 35 ಸಂಚಿಕೆಗಳ ಸಂಪಾದಕರಾಗಿ ದುಡಿದ ಅವರ ಸೇವೆಯನ್ನು ಸಂತ ಅಲೋಶಿಯಸ್ ಕಾಲೇಜು ಈ ವೇಳೆಯಲ್ಲಿ ಅತಿ ಗೌರವಾಧರಗಳಿಂದ ಸ್ಮರಿಸುತ್ತದೆ ಎಂದರು.


ಎಡ್ವಿನ್ ಡಿ’ಸೋಜಾರವರ ಸಾಹಿತ್ಯದ ಅಧ್ಯಯನದ ಮುಖಾಂತರ ಅವರನ್ನು ಹೇಗೆ ಜೀವಂತವಾಗಿರಿಸಬಹುದು ಎನ್ನುವ ಬಗ್ಗೆ ಕೊಂಕಣಿ ಸಾಹಿತಿ ಕಿಶೂ ಬಾರ್ಕೂರ್ ಮತ್ತು ಎಡ್ವಿನ್ ಡಿ’ಸೋಜಾರ ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕೃತಿ ‘ಕಾಳೆಂ ಭಾಂಗಾರ್’ ಮತ್ತು ಅಸ್ತಿತ್ವವಾದಿ ನೆಲೆಯ ಕೃತಿ ‘ಹಾಂವ್ ಜಿಯೆತಾಂ’ ಬಗ್ಗೆ ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ವಿಭಾಗದ ವಿಶ್ರಾಂತ ಮುಖ್ಯಸ್ಥೆ ಡಾ| ಚಂದ್ರಲೇಖಾ ಡಿ’ಸೋಜಾರವರು ಮಾತನಾಡಿದರು.



ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಕೊಂಕಣಿ ಸಲಹಾ ಸಮಿತಿ ಮುಖ್ಯಸ್ಥ ಶ್ರೀ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಕೇಂದ್ರದ ಡಾ| ಬಿ. ದೇವದಾಸ್ ಪೈ, ‘ಸಾಕಾ’ದ ಅಧ್ಯಕ್ಷರಾದ ಶ್ರೀ ಸುನಿಲ್ ಕುಂದರ್, ಸಂತ ಅಲೋಶಿಯಸ್ ಕಾಲೇಜಿನ ಕುಲಸಚಿವರಾದ ಡಾ| ಆಲ್ವಿನ್ ಡೆ’ಸಾ, ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಸಿಕ್ವೇರಾ ಹಾಜರಿದ್ದು, ಫುಷ್ಪನಮನ ಸಲ್ಲಿಸಿದರು.


ಕೊಂಕಣಿ ಸಂಸ್ಥೆಯ ನಿರ್ದೇಶಕ ಡಾ| ಫಾ| ಮೆಲ್ವಿನ್ ಪಿಂಟೊ ಜೆ.ಸ. ಧನ್ಯವಾದಗಳನ್ನು ಸಮರ್ಪಿಸಿದರು. ಕೊಂಕಣಿ ಸಾಹಿತಿ, ಪತ್ರಕರ್ತ ಎಚ್. ಎಮ್. ಪೆರ್ನಾಲ್ ನಿರೂಪಿಸಿದರು.




