ಇದೇ ಆಗಸ್ಟ್ ತಿಂಗಳ 1 ನೇ ತಾರೀಕಿನಂದು ಆರಂಭವಾಗಿ ದಿನಾಂಕ 21 ರಂದು ಸಂಪನ್ನವಾದ ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ನಿ. (ಎಂ.ಸಿ.ಸಿ. ಬ್ಯಾಂಕ್) ಇದರ ನಿರ್ದೇಶಕರ ಚುನಾವಣೆಯಲ್ಲಿ, 2023 ರಿಂದ 2028 ರ 5 ವರ್ಷಗಳ ಅವಧಿಗೆ, ಸಾಮಾನ್ಯ ವಿಭಾಗದಿಂದ 11, ಮಹಿಳಾ ಮೀಸಲು ವಿಭಾಗದಿಂದ 2 ಮತ್ತು ಹಿಂದುಳಿದ ವರ್ಗ ‘ಬಿ’ ಯಿಂದ 1 – ಹೀಗೆ 14 ಮಂದಿ ನಿರ್ದೇಶಕರು ಅವಿರೋಧವಾಗಿ ಚುನಾಯಿತರಾಗಿದ್ದು, 28 ಅಗೋಸ್ತ್ 2023 ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಶ್ರೀ ಅನಿಲ್ ಲೋಬೊ, ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಜೆರಾಲ್ಡ್ ಜೂಡ್ ಡಿ’ಸಿಲ್ವ, ಮುಂದಿನ 5 ವರ್ಷಗಳ ಅವಧಿಗೆ ಸರ್ವಾನುಮತಿಯಿಂದ ಪುನರಾಯ್ಕೆಗಿರುತ್ತಾರೆ. ಶ್ರೀ ಸುಧೀರ್ ಕುಮಾರ್ ಜೆ., ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಇವರ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಗೆ ಶ್ರೀ ಎನ್ ಜೆ. ಗೋಪಾಲ್, ಸುಪರಿಟೆಂಡೆಂಟ್ ಸಹಕರಿಸಿದರು. ಬ್ಯಾಂಕಿನ ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಚುನಾಯಿತರಾದ ಶ್ರೀ ಅನಿಲ್ ಲೋಬೊ, ಬ್ಯಾಂಕಿನ ಸ್ಥಾಪಕ ದಿ| ಫಿ. ಎಫ್. ಎಕ್ಸ್. ಸಲ್ಡಾನ್ಹಾರನ್ನು ಸ್ಮರಿಸಿ, ಬ್ಯಾಂಕಿನ ಸದಸ್ಯರು, ಗ್ರಾಹಕರ ಸಹಕಾರ ಮತ್ತು ಸಿಬ್ಬಂದಿಯ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದರು. ಉತ್ಕೃಷ್ಠ ವೃತ್ತಿಪರತೆಯಿಂದ ಕೂಡಿದ ಗುಣಮಟ್ಟದ ಗ್ರಾಹಕ ಸೇವೆ, ಸಿಬ್ಬಂದಿಯ ಜ್ಞಾನ ಕೌಶಲ್ಯ ಅಭಿವೃದ್ದಿಗೆ ಒತ್ತು ಮತ್ತು ದೇಶದ ಸಂಪತ್ತಿಯಾದ ಯುವಜನರ ಶಿಕ್ಷಣ ಸಾಲಕ್ಕೆ ಆದ್ಯತೆ – ಈ ಮೂರು ಪ್ರಮುಖ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು ಎಂದರು.
ಪ್ರತೀ ವಿತ್ತೀಯ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಪತ್ರಿಕಾಗೋಷ್ಠಿ ಕರೆಯುವುದರ ಮೂಲಕ ಗ್ರಾಹಕರು ಮತ್ತು ಸದಸ್ಯರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡುವ ಇಂಗಿತ ವ್ಯಕ್ತಪಡಿಸಿದ ಶ್ರಿ ಲೋಬೊ, ಈಗಾಗಲೇ ಎರಡು ಜಿಲ್ಲೆಗಳಲ್ಲಿ ಬ್ಯಾಂಕ್, 16 ಶಾಖೆಗಳನ್ನು ಹೊಂದಿದ್ದು, ಸುಮಾರು ಒಂದೂವರೆ ಲಕ್ಷ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದ್ದು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ – ಹೀಗೆ 5 ಜಿಲ್ಲೆಗಳಿಗೆ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವ ಅನುಮತಿ ಈಗಾಗಲೇ ದೊರಕಿದ್ದು, ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ ಪ್ರತೀ ಜಿಲ್ಲೆಯಲ್ಲಿ, ಪ್ರತೀ ವಿತ್ತೀಯ ವರ್ಷದಲ್ಲಿ ಒಂದು ಶಾಖೆಯನ್ನು ತೆರೆಯುವ ಕಾರ್ಯಯೋಜನೆ ರೂಪಿಸಲಾಗಿದೆ. ಈಗಾಗಲೇ ಸುಮಾರು 50 ಪರಿಣತ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಮುಂದಿನ 2 ವರ್ಷಗಳ ಒಳಗೆ ಮತ್ತೆ 50 ಮಂದಿ ನುರಿತ ಸಿಬ್ಬಂದಿಯನ್ನು ನೇಮಕ ಮಾಡುವುದರ ಮೂಲಕ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.
ಗ್ರಾಹಕ ಸೇವೆಯಲ್ಲಿ ಗಮನಾರ್ಹ ಸುಧಾರಣೆಯನ್ನು ತರುವುದರ ಮೂಲಕ, ಕಳೆದ ವರ್ಷ ಶಾಖಾವಾರು ನಡೆಸಿದ ಎಲ್ಲಾ ಗ್ರಾಹಕ ಸಮಾವೇಶಗಳಲ್ಲೂ ಬ್ಯಾಂಕಿನ ಗ್ರಾಹಕ ಸೇವೆಯ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತವಾಗಿದ್ದು, ಗ್ರಾಹಕ ಸೇವೆಯನ್ನು ಇನ್ನೂ ಸುಧಾರಿಸುವ ನಿಟ್ಟಿನಲ್ಲಿ ಆಡಳಿತ ಕಛೇರಿಯಲ್ಲಿ ವಿಶೇಷ ಗ್ರಾಹಕ ಕುಂದು ಕೊರತೆ ನಿವಾರಣಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಇಬ್ಬರು ಪೂರ್ಣಕಾಲಿನ ಅಧಿಕಾರಿಗಳನ್ನು ಕೇಂದ್ರಕ್ಕೆ ನಿಯುಕ್ತಿಗೊಳಿಸಿ, ಗ್ರಾಹಕರ ಅಹವಾಲುಗಳಿಗೆ ತ್ವರಿತ ಸ್ಪಂದಿಸಿ ಕುಂದು ಕೊರತೆಗಳನ್ನು ನಿವಾರಿಸಲಾಗುವುದು – ಎಂದು ಶ್ರೀ ಅನಿಲ್ ಲೋಬೊ ಹೇಳಿದರು.
ಇತರ ಬ್ಯಾಂಕ್‌ಗಳ ಹೋಲಿಕೆಯಲ್ಲಿ ಎಂ.ಸಿ.ಸಿ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲದ ಬದ್ಡಿದರ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ದೇಶ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಶೇಕಡಾ 8.7% ದರದಲ್ಲಿ ಶೈಕ್ಷಣಿಕ ಸಾಲವನ್ನು ನೀಡಲಾಗುತ್ತಿದ್ದು, ಸೀಮಿತ ಅವಧಿಯ ವರೆಗೆ ರೂಪಾಯಿ 10 ಲಕ್ಷದವರೆಗಿನ ಶಿಕ್ಷಣ ಸಾಲಕ್ಕೆ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಈಗಷ್ಟೇ ಸಿ.ಇ.ಟಿ., ನೀಟ್ ಪರೀಕ್ಷೆ ತೇರ್ಗಡೆಯಾಗಿ ಶೈಕ್ಷಣಿಕ ಸಾಲದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು – ಎಂದು ಶ್ರೀ ಲೋಬೊ ಮಾಹಿತಿ ನೀಡಿದರು.
ಮೊಬಾಯ್ಲ್ ಬ್ಯಾಂಕಿಂಗ್ ಆಪ್ ಮೂಲಕ ಬ್ಯಾಂಕ್ ಸಾಕಷ್ಟು ಗ್ರಾಹಕರನ್ನು ಬ್ಯಾಂಕ್ ತಲುಪಿದ್ದು, ಸ್ವತಂತ್ರ ಯುಪಿಐ, ಆರ್.ಟಿ.ಜಿ.ಎಸ್, ನೆಫ್ಟ್ ಮುಂತಾದ ಸೇವೆಗಳನ್ನು ಒದಗಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಸದರಿ ವಿತ್ತೀಯ ವರ್ಷದಲ್ಲಿ ಬ್ಯಾಂಕಿನ ಎಲ್ಲಾ ವಿತ್ತೀಯ ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳುವ ನಿರೀಕ್ಷೆಯಿದೆ ಎಂಬ ಭರವಸೆಯನ್ನೂ ಶ್ರೀ ಅನಿಲ್ ಲೋಬೊ ಪತ್ರಿಕಾಗೋಷ್ಠಿಯಲ್ಲಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀ ಅನಿಲ್ ಲೋಬೊ, ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿ’ಸಿಲ್ವ ಇವರ ಜೊತೆಗೆ ಬ್ಯಾಂಕಿನ ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೋ ಕಲ್ಯಾಣ್‌ಪುರ, ಆಂಡ್ರು ಡಿ’ಸೋಜ ಪಾಲಡ್ಕ , ಜೋಸೆಫ್ ಎಂ.ಅನಿಲ್ ಪತ್ರಾವೊ ದೆರೆಬೈಲ್, ಡೇವಿಡ್ ಡಿ’ಸೋಜ ಬಜಪೆ, ಎಲ್‌ರೊ ಕಿರಣ್ ಕ್ರಾಸ್ಟೊ, ಗಂಗೊಳ್ಳಿ, ಜೆ.ಪಿ.ರೋಡ್ರಿಗಸ್ ಪುತ್ತೂರು, ರೋಶನ್ ಡಿ’ಸೋಜ ಮುಡಿಪು, ಹೆರಾಲ್ಡ್ ಜೋನ್ ಮೊಂತೆರೊ ಕೆಲರಾಯ್, ಐರಿನ್ ರೆಬೆಲ್ಲೊ ಕುಲಶೇಖರ, ಡಾ| ಫ್ರೀಡಾ ಫ್ಲಾವಿಯಾ ಡಿ’ಸೋಜ ಬಳ್ಕುಂಜೆ, ಮೆಲ್ವಿನ್ ಅಕ್ವಿನಸ್ ವಾಸ್ ಮಿಲಾಗ್ರಿಸ್, ವಿನ್ಸೆಂಟ್ ಅನಿಲ್ ಲಸ್ರಾದೊ, ಬಂಟ್ವಾಳ ಮತ್ತು ಬ್ಯಾಂಕಿನ ಮಹಾ ಪ್ರಬಂಧಕರಾದ ಶ್ರೀ ಸುನಿಲ್ ಐ. ಮಿನೇಜಸ್ ಹಾಜರಿದ್ದು ಬ್ಯಾಂಕಿನ ಮಾಧ್ಯಮ ಸಂಯೋಜಕರಾದ ಶ್ರೀ ಟೈಟಸ್ ನೊರೊನ್ಹಾ ಸಹಕರಿಸಿದರು.





👍🏻🙏 May God bless Mr. Anil Lobo,the Chairman and all the directors of our MCC Bank with His Wisdom and Grace always 💐
Good coverage👍by H.M and I personally feel Mr. Anil Lobo as a Chairman of M.C.C Bank Ltd , has proved his mettle slowly and steadily over the years to get back on the saddle for the 2nd consecutive term of 5 more years and won the hearts❤️ of the esteemed Bank’s customers. End of the day, what matters is the overall growth of the Bank’s business and the confidence level of Bank’s Shareholders an it’s customers must go northward.