ನನ್ನ ಅಮ್ಮನ ಹದಿನಾಲ್ಕು ಬಾಣಂತನಗಳಲ್ಲಿ ಚೊಚ್ಚಲ ಹಾಗೂ ನಡುವಿನ ಒಂದೆರಡು ಮಕ್ಕಳು ಗತಿಸಿದ ಕಾರಣ, ಉಳಿದವರಲ್ಲಿ ನಾನು ಎಂಟನೆಯ ಸಂತಾನ. ಮೊದಲ ನಾಲ್ಕು ಗಂಡು ಮಕ್ಕಳು, ಮತ್ತೆ ಹುಟ್ಟಿದ ಮೂವರು ಹೆಣ್ಣುಮಕ್ಕಳ ಬೆನ್ನಿಗೆ ಹುಟ್ಟಿದ ಹೆಣ್ಣುಮಗು ನಾನು. ಆದುದರಿಂದ ನನ್ನ ಹುಟ್ಟು ಅಂಥ ಸಂಭ್ರಮಿಸುವ ಸಂಗತಿಯಾಗಿರಲಿಲ್ಲ. ಮನೆ ತುಂಬ ಮಕ್ಕಳು, ನೆಂಟರು, ಅವಿಭಕ್ತ ಕುಟುಂಬದ ಸದಸ್ಯರ ನಡುವೆ ಹತ್ತರಲ್ಲಿ ಹನ್ನೊಂದಾಗಿ ನಾನು ಬೆಳೆದೆ. ಹುಟ್ಟಿ ಎಷ್ಟೋ ವರ್ಷಗಳ ವರೆಗೆ ನನ್ನ ಹುಟ್ಟಿದ ದಿನ ಯಾವುದೆಂದು ತಿಳಿಯದ ನಾನು ನನ್ನ ಉಳಿದ ಒಡಹುಟ್ಟಿದವರಂತೆ ಎಂದೂ ಹುಟ್ಟಿದ ಹಬ್ಬವನ್ನು ಆಚರಿಸಿ ಕೊಂಡವಳಲ್ಲ. ನನಗಿಂತ ದೊಡ್ಡವರು ಹಾಕಿ ಗಿಡ್ಡದಾದ ಬಟ್ಟೆಬರೆಗಳನ್ನು ಹಾಕಿಕೊಳ್ಳುತ್ತಾ, ಅವರು ಓದಿ ಜೀರ್ಣವಾದ ಪುಸ್ತಕಗಳನ್ನು ಓದುತ್ತಾ, ಊಟದ ಮನೆಯ ಉದ್ದನೆಯ ಸಾಲುಗಳಲ್ಲಿ ಸಾಲಾಗಿ ಬಡಿಸಿದ ಬಟ್ಟಲೊಂದರ ಮುಂದೆ ಕುಳಿತು ಉಣ್ಣುತ್ತಾ, ಗದ್ದೆ, ಗುಡ್ಡ, ಹೊಳೆ, ಮರಗಳಲ್ಲಿ ಆಡುತ್ತಾ ಬೆಳೆಯುತ್ತಿದ್ದ ನನ್ನ ಮನಸ್ಸಿನಲ್ಲಿ ಸೂಕ್ಷ್ಮತೆಯನ್ನು ಬೆಳೆಸಿ, ಸಂವೇದನೆಯ ಬೀಜ ಬಿತ್ತಿದ್ದು ನನ್ನಜ್ಜಿ, ಅಮ್ಮ, ಅಣ್ಣಂದಿರು ಹೇಳುತ್ತಿದ್ದ ಕಥೆಗಳು, ನಮ್ಮಪ್ಪ ಹಾಡುತ್ತಿದ್ದ ಯಕ್ಷಗಾನದ ಹಾಡುಗಳು, ಸೋದರಮಾವನ ಮನೆಗೆ ರಜೆಗೆಂದು ಹೋಗುತ್ತಿದ್ದಾಗ ಓದುತ್ತಿದ್ದ ಚಂದಮಾಮಾದ ಸಚಿತ್ರ ಕಥೆಗಳು ಹಾಗೂ ನಮ್ಮಪ್ಪ ತರಿಸುತ್ತಿದ್ದ ೩-೪ ಪತ್ರಿಕೆಗಳು(ಸೇವಾಮೃತ, ರಾಷ್ಟ್ರಬಂಧು, ಪಂಚ್ಕಾದಾಯಿ, ನವಭಾರತ). ಬಾಲ್ಯಕಾಲದ ಈ ಪ್ರೇರಣೆಗಳು ಕ್ರಮೇಣ ನನ್ನನ್ನು ಪುಸ್ತಕದ ಹುಳುವನ್ನಾಗಿಸಿದುವು. ಪುಸ್ತಕದ ಓದಿನಲ್ಲಿ ನಾನು ವಿಲಕ್ಷಣವಾದ ಆನಂದವನ್ನು, ಬಿಡುಗಡೆಯನ್ನು ಪಡೆಯುತ್ತಿದ್ದೆ ಎಂದೆನಿಸುತ್ತದೆ. ಆ ಕಾಲಕ್ಕೇ ನಾನು ಸುಮಾರು ೮-೧೦ರ ವಯಸ್ಸಿಗೆ ವಾರಕ್ಕೆ ನಾಲ್ಕೈದು ಕಾದಂಬರಿಗಳನ್ನು ಓದುವ ಮಟ್ಟಿಗೆ ಪುಸ್ತಕದ ಹುಳುವಾಗಿದ್ದೆ.
ಮೊದಲ ಬಾರಿಗೆ ಓದಿನ ಜೊತೆಗೆ ಹಾಡು, ನಾಟಕ ಮುಂತಾದ ವಿಷಯಗಳೂ ಸುಖಕೊಡಬಲ್ಲುವು ಎಂದು ಅರಿವಾದದ್ದು ರಜೆಯಲ್ಲಿ ಸೋದರ ಮಾವನ ಮನೆಗೆ ಹೋಗಿದ್ದಾಗ. ಅವರ ಮನೆಯ ಹಜಾರದ ಎತ್ತರದ ಸ್ಟಾಂಡಿನಲ್ಲಿರಿಸಿದ ರೇಡಿಯೋ ಎಂಬ ಪೆಟ್ಟಿಗೆಗೆ ಕಟ್ಟಿದ ತಂತಿಯೊಂದು ಗಿಡದಾಚೆಗಿನ ಎತ್ತರದ ಮರವೊಂದಕ್ಕೆ ಬಿಗಿಯಲ್ಪಟ್ಟಿದ್ದು, ಆ ರೇಡಿಯೋದಿಂದ ಹಾಡು, ನಾಟಕದ ಮಾತುಗಳು ಕೇಳಿಬರುತ್ತಿದ್ದಾಗ ಅನುಭವಿಸಿದ ಅಚ್ಚರಿಗೆ ಸಮಾನವಾದದ್ದು ಆ ಕಾಲದಲ್ಲಿ ಬೇರಾವುದೂ ಇರಲಿಲ್ಲ. ಅದರ ಬಿರಡೆಯನ್ನು ಅತ್ತಿತ್ತ ತಿರುಗಿಸಿ ಹಾಡು, ಮಾತುಗಳನ್ನು ಅದರಿಂದ ಹೊರಡಿಸುತ್ತಿದ್ದ ಮಾವ ನನಗಾಗ ಮಾಂತ್ರಿಕನಂತೆ ತೋರುತ್ತಿದ್ದರು.
ಈ ನಡುವೆ ನಮ್ಮ ಊರಿನ ಕೃಷ್ಣಭಟ್ಟರ ಮನೆಗೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅವರ ಮಗ ರೇಡಿಯೋ ಎಂಬ ಪುಟ್ಟ ಪೆಟ್ಟಿಗೆಯನ್ನು ತಂದದ್ದು, ಸಂಜೆಹೊತ್ತು ಅದರಿಂದ ಮೂಡಿಬಂದ ‘ಗಗನವು ಎಲ್ಲೋ, ಭೂಮಿಯು ಎಲ್ಲೋ’ ಎಂಬ ‘ಗೆಜ್ಜೆಪೂe’ ಚಿತ್ರದ ಹಾಡನ್ನು ಕೇಳಲು ಅವರ ಮನೆಯಾಚೆಯ ಗದ್ದೆಹುಣಿಯ ಮೇಲೆ ಕತ್ತಲು ಮೀರುತ್ತಿದ್ದರೂ ನಿಂತದ್ದು, ಪ್ರತಿ ಸಂಜೆ ಹಾಡುಗಳನ್ನು ಕೇಳಲೆಂದೇ ಅವರ ಮನೆಯಾಚೆಗೆ ಎಡತಾಕುತ್ತಿದ್ದುದು, ಕ್ರಮೇಣ ಕೆಲವು ತಿಂಗಳ ಬಳಿಕ, ಸೆಲ್ ತೀರಿದ ಬಳಿಕ ಅದನ್ನು ಬಳಸದೆ ಅದು ಮೂಲೆಗುಂಪಾದದ್ದು ಎಲ್ಲ ಅಸ್ಪಷ್ಟ ನೆನಪು.
ಈ ನಡುವೆ ನನ್ನ ಕೆಲವು ಅಣ್ಣಂದಿರು ಮಂಗಳೂರು, ಪುತ್ತೂರುಗಳಿಗೆ ಕಾಲೇಜು ವಿದ್ಯಾಭ್ಯಾಸಕ್ಕೆಂದು ತೆರಳಿದವರು ಅಲ್ಲಿ ನೋಡಿದ ಕನ್ನಡ ಹಾಗೂ ಹಿಂದಿ ಚಲನಚಿತ್ರದ ಗೀತೆಗಳನ್ನು ಕಲಿತೋ, ಬರೆದೋ, ಆಗ ಥಿಯೇಟರ್‌ಗಳಲ್ಲಿ ಮಾರುತ್ತಿದ್ದ ಚಿತ್ರಗೀತೆಗಳ ಪುಸ್ತಿಕೆಯನ್ನು ಕೊಂಡು ತಂದೋ ಮನೆಯಲ್ಲಿ ನಮ್ಮ ಮುಂದೆ ಹಾಡುತ್ತಿದ್ದ ಕಾರಣ ಬೈಜೂಬಾವ್ರಾ, ಬಸಂತ್ ಬಹಾರ್, ದೇಖ್ ಕಬೀರ್ ರೋಯಾ, ಸಂಗೀತ್ ಸಾಮ್ರಾಟ್ ತಾನ್ ಸೇನ್, ಛಲಿಯಾ, ಸಂತ ಕನಕದಾಸ, ಸತಿ ಅನಸೂಯಾ, ಸಂಧ್ಯಾರಾಗ, ಮಿಸ್ ಲೀಲಾವತಿ ಮುಂತಾದ ಚಿತ್ರಗಳ ಗೀತೆಗಳು ನಮಗೂ ರಾಗ ಸಹಿತ ಹಾಡಲು ಬರುತ್ತಿದ್ದುವು. ಮಾತ್ರವಲ್ಲ ಶಾಲೆಯ ಗಾಯನ ಸ್ಪರ್ಧೆಗಳಲ್ಲಿ ಹಾಡಿ ಬಹುಮಾನಗಳನ್ನು ತಂದಿತ್ತವು. ‘ಮಿಸ್ ಲೀಲಾವತಿ’ ಚಿತ್ರದ ‘ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’, ‘ಸಂತ ತುಕಾರಾಮ್ ಚಿತ್ರದ ‘ಜಯತು ಜಯ ವಿಠಲಾ’ ಗೀತೆಗಳು ಚೆನ್ನಾಗಿ ಹೃದ್ಗತವಾದುವು. ಬಳಿಕ ಈ ಗೀತೆಗಳನ್ನು ಎಲ್ಲಾದರೂ, ಯಾರ ಮನೆಯಲ್ಲಾದರೂ ರೇಡಿಯೋದಲ್ಲಿ ಕೇಳಿದಾಗ ಅಪರಿಮಿತವಾದ ಆನಂದವಾಗುತ್ತಿತ್ತು. ಈಗಲೂ ಆ ಕಾಲಘಟ್ಟದಲ್ಲಿ ಬಿಡುಗಡೆಯಾದ ಚಿತ್ರದ ಹಾಡುಗಳನ್ನು ಕೇಳುವಾಗ ನನಗೆ ಪೂರ್ವಜನ್ಮ ಸ್ಮರಣೆಯಂಥ ಅನುಭೂತಿ ಉಂಟಾಗುತ್ತದೆ. ಅಲ್ಲದೆ ಆಗ ಮದುವೆ ಮನೆಗಳಲ್ಲಿ ಗ್ರಾಮೊಫೋನ್ ರೆಕೋರ್ಡ್ಡ್ ಗಳಲ್ಲಿ ‘ದೂರದಿಂದ ಬಂದವರೆ, ಬಾಗಿಲಲ್ಲಿ ನಿಂದವರೆ’ ಎಂಬ ಎಲ್.ಆರ್.ಈಶ್ವರಿ ಎಂಬ(ಆಗ ಆಕೆಯೇ ಹಾಡಿದ್ದು ಎಂದು ಗೊತ್ತಿರಲಿಲ್ಲ) ಸ್ವರ ವೈಯ್ಯಾರಿಯ ಕಂಠದಲ್ಲಿ ಮೂಡಿಬರುತ್ತಿದ್ದ ಹಾಡು ಕೂಡಾ ಮದುವೆಮನೆಯ ಸಡಗರವನ್ನು ಇಮ್ಮಡಿಸಿ ಬಿಡುತ್ತಿತ್ತು.
ಹೀಗೆ ಯಾರದೋ ಮನೆಯಲ್ಲಿ, ಯಾವುದೋ ಮದುವೆ ಚಪ್ಪರದಲ್ಲಿ ಕೇಳಿದ ಹಾಡುಗಳನ್ನು ನಾನೇ ಬಿರಡೆ ತಿರುಗಿಸಿ ಕೇಳುವ ಸೌಭಾಗ್ಯ ಪ್ರಾಪ್ತಿಯಾದದ್ದು ಸಾವಿರದ ಒಂಬೈನೂರ ಎಪ್ಪತ್ತ ಎರಡರ ಜೂನ್ ತಿಂಗಳಲ್ಲಿ ನಾನು ಪಿ.ಯು.ಸಿ ಓದಲೆಂದು ಬೆಂಗಳೂರಿನ ಅಣ್ಣನ ಮನೆಗೆ ಹೋಗಿ ನೆಲೆ ನಿಂತ ಮೇಲೆಯೇ. ಅಣ್ಣನ ಮನೆಯ ಹಾಲ್ ನಲ್ಲಿಟ್ಟ ಮೇಜಿನ ಮೇಲೆ ಇದ್ದ ದೊಡ್ಡ ರೇಡಿಯೊ, ಅದರಲ್ಲಿ ಮೀಡಿಯಮ್ ವೇವ್, ಶಾರ್ಟ್ ವೇವ್ ಇತ್ಯಾದಿ ವಿವಿಧ ಸ್ಟೇಶನ್ ಗಳನ್ನು ಕೇಳುವ ವ್ಯವಸ್ಥೆ ಇದ್ದು ಆಗ ತಾನೆ ಬೆಂಗಳೂರಿನಲ್ಲಿ ಬಿಡುಗಡೆಯಾದ ‘ಭಲೇ ಹುಚ್ಚ’ ಚಿತ್ರದ ‘ಬಳ್ಳಿಗೇ ಹೂವು ಚಂದ’, ‘ಸಂಪತ್ತಿಗೆ ಸವಾಲ್ ಚಿತ್ರದ ಎಮ್ಮೆ ಹಾಡು, ‘ಬಂಗಾರದ ಮನುಷ್ಯ ಚಿತ್ರದ ಎಲ್ಲ ಹಾಡುಗಳು- ಹೀಗೆ ನಾನು ಕಲಿತ ಹಾಡುಗಳಿಗೆ ಲೆಕ್ಕ ಇಲ್ಲ. ಶಾರ್ಟ್ ವೇವ್ ನಲ್ಲಿ ಸಿಗುತ್ತಿದ್ದ ಬಾಲ್ಯಕಾಲದಲ್ಲಿ ನಾನು ಕಲಿತ ಹಳೆಯ ಹಿಂದಿ ಹಾಡುಗಳು ಬಿನಾಕಾ ಗೀತ್ ಮಾಲಾ, ಭೂಲೇ ಬಿಸರೆ ಗೀತ್, ಬೇಲಾ ಕಾ ಫೂಲ್, ಸಂಗೀತ್ ಸರಿತ, ಆಪ್ ಕಿ ಫರಮಾಯಿಶ್ ಹೀಗೆ ಹಲವಾರು ಕಾರ್ಯಕ್ರಮಗಳು. ‘ಸಂಗೀತ್ ಸರಿತ’ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿತ್ತು.
ಅಣ್ಣನ ಬೆಂಗಳೂರಿನ ಮನೆಯ ರೇಡಿಯೋ ಇದ್ದ ಮೇಜಿನ ಡ್ರಾವರಿನ ಒಳಗಡೆ ನಾನು ಇಟ್ಟಿದ್ದ ಪುಸ್ತಕವೊಂದರಲ್ಲಿ ಪ್ರತಿ ಬಾರಿ ಹಾಡುಗಳನ್ನು ವೇಗವಾಗಿ ಬರೆದು ಅಪೂರ್ಣಗೊಳಿಸಿದ ತುಣುಕುಗಳ ಸಾಲು ಸಾಲೆ ಇದ್ದುವು. ಅದೇ ಹುಚ್ಚು, ಮುಂದಿನ ಬಾರಿಯ ಪ್ರಸಾರಕ್ಕಾಗಿ ಕಾಯುತ್ತ ಪೂರ್ಣಗೊಳಿಸಲು ಉಳಿದ ಅಪೂರ್ಣ ಸಾಲುಗಳ ಗೀತೆಗಳು. ಪ್ರತಿ ಭಾನುವಾರ ವೆಂದರೆ ಏನೋ ಹುರುಪು, ಅಂದು ಪ್ರಸಾರವಾಗುತ್ತಿದ್ದ ಚಲನಚಿತ್ರ ಧ್ವನಿವಾಹಿನಿಗಾಗಿ ಕಾದು ಕುಳಿತುಕೊಳ್ಳುತ್ತಿದ್ದ ಕ್ಷಣಗಳು… ಹೀಗೆ ಬೆಂಗಳೂರು ಓದಿನ ಜೊತೆಗೆ ರೇಡಿಯೋ ಎಂಬ ಸಂಗಾತಿಯನ್ನು ನನಗಿತ್ತ ಊರು, ಜೊತೆಗೆ ಅಣ್ಣನ ಮನೆ ಮುಂದೆಯೇ ಇದ್ದ ವೆಂಕಟೇಶ್ವರ ಟೂರಿಂಗ್ ಟಾಕೀಸ್‌ನಲ್ಲಿ ನಾನು ಎಂಟಾಣೆಗೆ ನೋಡಿದ ಅಸಂಖ್ಯಾತ ಕನ್ನಡ ಹಳೆಯ ಕಪ್ಪುಬಿಳುಪು ಚಿತ್ರಗಳು, ಅವುಗಳಲ್ಲಿದ್ದ ಸೊಗಸಾದ ಹಾಡುಗಳು, ನಮೋ ವೆಂಕಟೇಶಾ ಎಂಬ ಹಾಡು ಆರಂಭವಾದೊಡನೆ ಉಟ್ಟ ಬಟ್ಟೆಯಲ್ಲೇ ಮನೆಯಿಂದ ಓಡಿ ಹೋಗಿ ನೋಡುತ್ತಿದ್ದ ಆ ಚಿತ್ರಗಳು… ಇವನ್ನೆಲ್ಲ ಮರೆಯುವಂತೆಯೆ ಇಲ್ಲ.
ಸಾವಿರದ ಒಂಬೈನೂರ ಎಪ್ಪತ್ತನಾಲ್ಕರಲ್ಲಿ ಅಣ್ಣನಿಗೆ ಅರಸೀಕೆರೆಗೆ ವರ್ಗವಾದಾಗ ನಾನೂ ಕೂಡಾ ಅವರ ಸಂಸಾರದೊಡನೆ ಅರಸೀಕೆರೆಗೆ ಮುಂದಿನ ಶಿಕ್ಷಣಕ್ಕಾಗಿ ಹೋದೆ. ಮೂರು ವರ್ಷಗಳ ಕಾಲ ಬಿ.ಎ ಓದುವ ಸಮಯದಲ್ಲಿ ಭದ್ರಾವತಿ ಆಕಾಶವಾಣಿಯನ್ನೂ ಕೇಳುವ ಅವಕಾಶ ಅಲ್ಲಿ ಸಿಕ್ಕಿತು. ಅಗೋಚರ ತರಂಗಾಂತರಗಳಲ್ಲಿ ತೇಲಿಬರುತ್ತಿದ್ದ ಸುಮಧುರಗೀತೆಗಳು, ಕಥೆ, ಕಾದಂಬರಿಗಳ ಓದು ನೀಡುತ್ತಿದ್ದ ಸುಖಕ್ಕಿಂತ ವಿಭಿನ್ನ ರೀತಿಯ ಆನಂದದ ಲಹರಿಯಲ್ಲಿ ಓಲಾಡಿಸುತ್ತಿದ್ದ ದಿನಗಳವು. ವರ್ಷಗಟ್ಟಲೆ ಅಮ್ಮ, ಅಪ್ಪ, ಊರನ್ನು ಬಿಟ್ಟು ಪರ ಊರಿನಲ್ಲಿ ಇರಬೇಕಾಗಿ ಬಂದ ಆ ದಿನಗಳಲ್ಲಿ ರೇಡಿಯೋದಲ್ಲಿ ಬರುತ್ತಿದ್ದ ‘ಅಮ್ಮಾ ಎಂದರೆ ಮೈ ಮನವೆಲ್ಲಾ ಹೂವಾಗುವುದಮ್ಮಾ ಎಂಬ ಹಾಡು ಕಣ್ಣನ್ನು ತೇವಗೊಳಿಸುತ್ತಿದ್ದ ನೆನಪು.
ಅಪಭ್ರಂಶ ಭಾಷಾಪ್ರಯೋಗದ ನಿರೂಪಣೆಯೊಡನೆ ದಕ್ಷಿಣಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಮ್ ಭಾಷಾ ಹಾಡುಗಳನ್ನು ಮಧ್ಯಾನ್ಹ ಎರಡು ಗಂಟೆ ಸುಮಾರಿಗೆ ಪ್ರಸಾರ ಮಾಡುತ್ತಿದ್ದ ಸ್ಟೇಶನೊಂದನ್ನು ಕಷ್ಟದಲ್ಲಿ ಟ್ಯೂನ್ ಮಾಡಿ ಅದರಲ್ಲಿ ಬರುವ ಏಕೈಕ ಕನ್ನಡ ಹಾಡನ್ನು ಕೇಳುವ ಶತಪ್ರಯತ್ನವನ್ನು ನನ್ನ ಅತ್ತಿಗೆ ಮಾಡುತ್ತಿದ್ದರು. ನನ್ನ ರೇಡಿಯೋ ಕೇಳುವಿಕೆಯ ಮೂಲ ಪ್ರೇರಣೆ ಅವರೇ ಆಗಿದ್ದರು. ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಸರ್ವೀಸ್ ಆಫ್ ಇಂಡಿಯ, ಏಶಿಯಾ ಸೇವಾ ವಿಭಾಗದವರು ಪ್ರಸಾರ ಮಾಡುತ್ತಿದ್ದ ಆ ಹಾಡುಗಳು ಸರಿಯಾದ ರೇಂಜ್ ಸಿಗದೇ ಗಾಳಿಗೆ ಓಲಾಡಿದಂತೆ ಒಮ್ಮೆ ಸ್ಪಷ್ಟವಾಗಿ, ಇನ್ನೊಮ್ಮೆ ಅಸ್ಪಷ್ಟವಾಗಿ ಹರಿದು ಬರುತ್ತಿದ್ದುವು. ‘ಅರಸಿನ ಕುಂಕುಮ’ ಚಿತ್ರದ ‘ನಾನೂ ನೀನೂ ಜೊತೆಗಿರಲು ಕಾಲದ ನೆನಪೇ ನಮಗಿಲ್ಲ, ‘ಅರಸಿನ ಕುಂಕುಮ ಸೌಭಾಗ್ಯ ತಂದ ತಾಯಾಗುವ ಭಾಗ್ಯ ನಿನದಾಯಿತು’-ಈ ಮುಂತಾದ ಅಪರೂಪದ ಹಾಡುಗಳು ಆ ನಿಲಯದಿಂದ ಮೂಡಿಬರುತ್ತಿದ್ದುವು. ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಮುಂತಾದವರ ಸಿರಿಕಂಠದಲ್ಲಿ ಮೂಡಿಬರುತ್ತಿದ್ದ ಆ ಹಾಡುಗಳನ್ನು ಕಣ್ಣು, ಕಿವಿ, ಕಾಲು ಕೀಲಿಸಿ ನಿಂತು ಆಸ್ವಾದಿಸುತ್ತಿದ್ದ ದಿನಗಳಲ್ಲಿ ಮತ್ತೆ ಮುಂದೆ ನಾನೇ ಯಾವಾಗ ಬೇಕೋ ಆವಾಗ, ಎಷ್ಟು ಬಾರಿ ಬೇಕೋ ಅಷ್ಟು ಬಾರಿ ಆ ಹಾಡುಗಳನ್ನು ಕೇಳುವ ಯೋಗ ನನಗೊಂದು ಕಾಲದಲ್ಲಿ ದಕ್ಕೀತು ಎಂಬ ಕಲ್ಪನೆಯೂ ನನಗಿರಲಿಲ್ಲ.
ಸಾವಿರದ ಒಂಬೈನೂರ ಎಪ್ಪತ್ತ ಏಳು-ಎಪ್ಪತ್ತೆಂಟರಲ್ಲಿ ಮುಂದೆ ನಾನು ಕನ್ನಡ ಎಂ.ಎ ಓದಲು ಕೊಣಾಜೆಗೆ ಬಂದು ಹಾಸ್ಟೆಲ್ ವಾಸಿಯಾದ ಸಂದರ್ಭದಲ್ಲಿ, ಆಗ ತಾನೇ ಮಂಗಳೂರು ಆಕಾಶವಾಣಿ ತನ್ನ ಪ್ರಸಾರವನ್ನು ಆರಂಭಿಸಿತ್ತು. ‘ಡಾ.ಶಿವರಾಮ ಕಾರಂತರ ಸಂದರ್ಶನ ರಾತ್ರಿ ಪ್ರಸಾರವಾಗುತ್ತದೆ, ಕೇಳಿ, ನಾಳೆ ಆ ಬಗ್ಗೆ ಪ್ರಶ್ನಿಸ್ತೇನೆ’ ಎಂಬುದಾಗಿ ನಮ್ಮ ಅಧ್ಯಾಪಕರಾದ ಪಂಡಿತಾರಾಧ್ಯರು ಹೇಳಿ ಹೋಗಿದ್ದರು. ಅವರು ಕೇಳುವ ಪ್ರಶ್ನೆಗಳಿಗೆ ಅಂಜಿ ನಮ್ಮ ಹಾಸ್ಟೆಲ್‌ನ ಆಫೀಸ್ ಹುಡುಗನ ಬಳಿ ಇದ್ದ ಪೊಟ್ಟು ಟ್ರಾನ್ಸಿಸ್ಟರ್ ಒಂದನ್ನು ಅದರ ಬೆನ್ನಿಗೆ ಕುಟ್ಟೀ ಕುಟ್ಟಿ ಅದು ಹೊರಡಿಸಿದ ಸದ್ದನ್ನು ಕೇಳಿದ್ದೆವು. ಆದರೆ ಏನೂ ಅರ್ಥವಾಗಿರಲಿಲ್ಲ.
ಇದಾದ ಕೆಲವೇ ದಿನಗಳಲ್ಲಿ ವಾಣಿಜ್ಯ ವಿಭಾಗದ ಪ್ರೊ. ದಾಮೋದರ ಪೊದುವಾಳರು ಭಾನುವಾರದ ನಮ್ಮ ಎನ್.ಎಸ್.ಎಸ್ ಶ್ರಮದಾನದ ಬಳಿಕ ಬಾಬಣ್ಣನ ಗೂಡಂಗಡಿಯಲ್ಲಿ ಚಾ ಮತ್ತು ದೋಸೆ ಮೆಲ್ಲುವ ಸಂದರ್ಭದಲ್ಲಿ ನಾವು ಆಕಾಶವಾಣಿಯ ಯುವವಾಣಿಯಲ್ಲಿ ಸಂಯೋಜಿತ ಕಾರ್ಯಕ್ರಮವೊಂದನ್ನು ನೀಡುವ ಬಗ್ಗೆ ಪ್ರಸ್ತಾಪ ಮಾಡಿದರು. “ಯಾರು ಹಾಡ್ತೀರಿ” ಎಂಬ ಪ್ರಶ್ನೆಗೆ ನಾನು ತಣ್ಣನೆ ನೀರು ಸ್ನಾನ ಮಾಡಲಾರದ ಕಷ್ಟಕ್ಕೆ ಹಾಡಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡ ಹುಡುಗಿಯೊಬ್ಬಳು ನನ್ನ ಬಗ್ಗೆ ಚಾಡಿ ಹೇಳಿದಳು- “ಶಕ್ಕು ಚೆನ್ನಾಗಿ ಹಾಡ್ತಾಳೆ ಸರ್ ಅಂತ. ಕೊನೆಗೆ ಅವರ ಮುಂದೆ ಹಾಡಿ ತೋರಿಸಿ ಅಂತೂ ನನ್ನ ಕುತ್ತಿಗೆಗೆ ಉರುಳು ಬಿದ್ದೇ ಬಿತ್ತು. ಎಷ್ಟೋ ಭಾನುವಾರಗಳ ಕಾಲ ಬಾಬಣ್ಣನ ದೋಸೆ ಮತ್ತು ಚಾಗಳ ಆಮಿಷ ತೋರಿಸಿ ನಮ್ಮನ್ನೆಲ್ಲ ಒಟ್ಟು ಹಾಕಿ ಭರ್ಜರಿ ರಿಹರ್ಸಲ್ ನಡೆಸಿಯೇ ನಡೆಸಿದರು ಪೊದುವಾಳರು. ಮಲೆಯಾಳಂ ಮನೆಮಾತಿನ ಅವರು ಬಹು ಇಂಪಾಗಿ ಕನ್ನಡ ಭಾವಗೀತೆಗಳನ್ನು ಹಾಡುತ್ತಿದ್ದರು. ನನ್ನ ಸೀನಿಯರ್ ಬಿ.ಎನ್.ಜಯಶ್ರೀ ಬೆಂಗಳೂರು ಕನ್ನಡದಲ್ಲಿ ಪರಿಸರ ಸಂರಕ್ಷಣೆಯನ್ನು ಕುರಿತು ಬರೆದ ಭಾಷಣದಲ್ಲಿ ಬಳಸಿದ ‘ಬರುತ್ತೆ, ಹೋಗುತ್ತೆ, ಆಗುತ್ತೆ’-ಇತ್ಯಾದಿ ಭಾಷಾ ಪ್ರಯೋಗಗಳನ್ನು ನಾವು ಬೆರಗಾಗಿ ಕೇಳಿದ್ದೆವು. ನಮ್ಮೆಲ್ಲರನ್ನೂ ಕಲೆಹಾಕಿ ಕೊಣಾಜೆಯಿಂದ ಹೊರಡುವ ಐವತ್ತೊಂದು ರೂಟ್ ನಂಬರಿನ ವಜ್ರೇಶ್ವರಿ ಬಸ್‌ನಲ್ಲಿ ಕುಳ್ಳಿರಿಸಿ ಜ್ಯೋತಿಯಲ್ಲಿಳಿಸಿ ಅಲ್ಲಿಂದ ಮುಂದೆ ರೂಟ್ ನಂ ಹತ್ತೊಂಬತ್ತು ಎಂಬ ನವಮಾಸ ತುಂಬಿದ ಗರ್ಭಿಣಿಯಂಥ ಬಸ್‌ನ ಹೊಟ್ಟೆಯೊಳಕ್ಕೆ ತೂರಿಸಿ, ಎಂದಿಗೆ ಬಂದೀತೋ ಕದ್ರಿಗುಡ್ಡ ಎಂಬಷ್ಟು ದೀರ್ಘವಾದ ಪ್ರಯಾಣ ಮುಗಿಸಿ, ಆಕಾಶವಾಣಿಯ ಸೆಕ್ಯುರಿಟಿ ತಪಾಸಣೆಯ ಬಳಿಕ ನಮ್ಮನ್ನು ರಿಹರ್ಸಲ್‌ಗೆಂದು ಒಂದು ಕೊಠಡಿಯೊಳಗೆ ಕೂರಿಸಿದರು. ಅಲ್ಲಿಂದ ಮುಂದೆ ವಸುಂಧರಾ ಎಂಬ ಹೆಣ್ಣು ಮಗಳು ಸ್ಟುಡಿಯೊಗೆ ಕರೆದೊಯ್ದರು. ಅವರು ಮಾತು ಮಾತಿಗೂ ನಮ್ಮನ್ನು ದಬಾಯಿಸುತ್ತಿದ್ದರು. ಕೆಂಪು ದೀಪ ಉರಿದೊಡನೇ ಮಾತನಾಡಿ ಎಂದವರು ಹೇಳಿದ ಕಾರಣ ನಾವು ಕೆಂಪು ದೀಪ ಉರಿದೊಡನೆ ಮಾತನಾಡಿ ಬಿಡಬೇಕೆಂಬ ಧಾವಂತದಿಂದ ಏನಾದರೊಂದು ತಪ್ಪು ಮಾಡಿ ಬಿಡುತ್ತಿದ್ದೆವು. ಫಿಸಿಕ್ಸ್ ವಿಭಾಗದ ಸರಸ್ವತಿ ಕಾಲಿಗೆ ಹಾಕಿಕೊಂಡು ಬಂದಿದ್ದ ಗೆಜ್ಜೆ, ಆಕೆ ಸ್ವಲ್ಪ ಅಲುಗಾಡಿದರೂ ಸದ್ದು ಮಾಡಿ ಬಿಡುತ್ತಿತ್ತು. ಒಟ್ಟಿನಲ್ಲಿ ಪೊದುವಾಳ್ ಸರ್ ನಮ್ಮಿಂದಾಗಿ ಸಿಕ್ಕಾಪಟ್ಟೆ ಮುಜುಗರವನ್ನು ಎದುರಿಸಬೇಕಾಗಿ ಬಂದಿತ್ತು. ಅಂತೂ ರೆಕಾರ್ಡಿಂಗ್ ಮುಗಿಸಿ ಕೊಣಾಜೆಗೆ ಬಂದಾಗ ನಮ್ಮ ಮನಸ್ಸಿನಲ್ಲಿ ಉಳಿದದ್ದು ವಸುಂಧರಾ ಎಂಬ ಹೆಣ್ಣುಮಗಳ ಧೈರ್ಯ, ಠೀವಿ, ನಡಿಗೆಯ ಗತ್ತು, ಮಾತಲ್ಲಿ ತುಂಬಿ ತುಳುಕುವ ಆತ್ಮ ವಿಶ್ವಾಸ. ಉದ್ಯೋಗಸ್ಥರಾದರೆ ಮಾತ್ರ ಇಂಥ ಆತ್ಮವಿಶ್ವಾಸ ಹುಟ್ಟಲು ಸಾಧ್ಯ, ಮಾಡುವ ಕೆಲಸದಲ್ಲಿ ನೈಪುಣ್ಯವಿದ್ದರೆ ಮಾತ್ರ ಅಧಿಕಾರಯುತವಾಗಿ ಗಟ್ಟಿದನಿಯಲ್ಲಿ ಮಾತನಾಡಲು ಸಾಧ್ಯ ಎಂಬ ಅರಿವನ್ನು ಮೂಡಿಸಿದ ವಸುಂಧರಾ ಎಂಬ ಎಣ್ಣೆಗಪ್ಪಿನ, ಸಾದಾ ನಿಲುವಿನ ಮಹಿಳೆಗೆ ನನ್ನ ಮೊದಲ ನಮನ. ಅಲ್ಲಿಂದ ನಾನು ಉದ್ಯೋಗಸ್ಥಳಾಗಬೇಕು, ಹೆದರುಪುಕ್ಕಲುತನವನ್ನು ಕೊಡವಿ ಮೇಲೇಳಬೇಕು ಎಂಬ ಛಲ ನನ್ನಲ್ಲಿ ಮೂಡಿತು.
ಮುಂದಿನ ವಾರಕ್ಕೆ ►




