ಗಿರಿಜಾ
ಆಕಾಶವಾಣಿಯ ಉದ್ಯೋಗದ ಬಗ್ಗೆ ಹೇಳಿದಾಗ ಅದು ಯಾವ ರೀತಿಯ ಕೆಲಸ,ಏನು,ಎತ್ತ ಎಂದು ಒಂದೂ ತಿಳಿದರಲಿಲ್ಲ. ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ,ಮಾತನಾಡುವ ಕೆಲಸ,ಲೆಕ್ಕಪಕ್ಕ ಬರೆಯುವಂಥದಲ್ಲ ಇತ್ಯಾದಿ ಆಕೆ ಹೇಳಿದ್ದರೂ ನಿಜವಾದ ಕೆಲಸದ ಸ್ವರೂಪ ತಿಳಿದಿರಲಿಲ್ಲ.ಆದರೂ ಪೂರ್ಣಕಾಲಿಕವಾದ ಸ್ಥಿರ ಉದ್ಯೋಗ ಅನ್ನುವುದಷ್ಟೇ ನನಗೆ ಮುಖ್ಯವಾಗಿತ್ತು.ಅಕೌಂಟ್ಸ್ ಬರೆಯುವ ಕೆಲಸ ಅಲ್ಲ ಅನ್ನುವುದು ಇನ್ನೊಂದು ಸಮಾಧಾನಕರ ಅಂಶವಾಗಿತ್ತು.ಯಾಕೆಂದರೆ ಎಸ್.ಎಸ್.ಎಲ್.ಸಿ ಯಲ್ಲಿ ಗಣಿತವನ್ನು ಮೂಗಿಗೆ ಕೈ ಹಿಡಿದು ಪಾಸಾದ ಕಷ್ಟ ನನಗೆ ಮಾತ್ರ ಗೊತ್ತು.ಅಲ್ಲದೆ ಕೊಂಕಣಿಭಾಷಾ ಜ್ನಾನ ಅಪೇಕ್ಷಣೀಯ ಎಂದಿದ್ದ ಕಾರಣ ಇನ್ನಷ್ಟು ಧೈರ್ಯ ಬಂತು.ಅಂತೂ ಅರ್ಜಿ ಗುಜರಾಯಿಸಿದೆ.
ಆ ಹೊತ್ತಿಗೆ ನಾನು ಕೆಲಸ ಮಾಡುವ ಕಾಲೇಜುಗಳಿಗೆ ಪರೀಕ್ಷೆ ಕಳೆದು ಬೇಸಿಗೆ ರಜಾ ಸಿಕ್ಕಿದ ಕಾರಣ,ನಾನು ಸುಮ್ಮನೆ ಹಾಸ್ಟೆಲ್ ಫೀಸ್ ತುಂಬುವುದೇಕೆಂದು ಊರಿಗೆ ಹೋಗಿದ್ದೆ.ಮನೆಯಲ್ಲಿ ಯಥಾಪ್ರಕಾರ ನನ್ನ ಮದುವೆಗಾಗಿ ವರಾನ್ವೇಷಣೆಯೂ ಜೋರಾಗಿ ನಡೆದಿತ್ತು.ಒಂದು ವರ್ಷವಿಡೀ ನಾಲ್ಕು ಕಾಲೇಜುಗಳಿಗೆ ಬಿಡುವಿಲ್ಲದೆ ಓಡಾಡುತ್ತಾ ಹಾಸ್ಟೆಲ್ ಊಟ ಮಾಡುತ್ತಾ ನನ್ನ ಸ್ವಾವಲಂಬೀಬದುಕಿನ ಕನಸೂ ಕರಗತೊಡಗಿತ್ತು.ಅಲ್ಲದೆ ರಜೆಯಲ್ಲಿ ಅಣ್ಣಂದಿರ,ಅಕ್ಕಂದಿರ ಮಕ್ಕಳೂ ಮನೆ ತುಂಬ ಇದ್ದ ಕಾರಣ ಅಮ್ಮನಿಗೆ ಮನೆ ಕೆಲಸದಲ್ಲಿ ನೆರವಾಗುತ್ತಾ,ಮಕ್ಕಳಿಗೆ ದಿನಕ್ಕೊಂದು ಕಥೆ ಹೇಳುತ್ತಾ ,ವಿವಿಧ ಆಟಗಳನ್ನು ಆಡಿಸುತ್ತಾ ನಾನು ಆಕಾಶವಾಣಿಗೆ ಅರ್ಜಿ ಹಾಕಿದ್ದನ್ನೂ ಮರೆತೇ ಬಿಟ್ಟಿದ್ದೆ.ಅಲ್ಲದೇ ಆ ಅರ್ಜಿಯನ್ನು ಸಲ್ಲಿಸುವಾಗಲೇ ಸರಕಾರೀ ಕೆಲಸ ಹಾಗೆಲ್ಲಾ ವಶೀಲಿಯಿಲ್ಲದೆ ಸುಲಭದಲ್ಲಿ ಸಿಗುವಂತದಲ್ಲ ಎಂಬ ಔದಾಸೀನ್ಯವೂ ಮನೆಮಾಡಿತ್ತು.ಇಂಥ ಒಂದು ದಿವ್ಯ ಸುಷುಪ್ತಿಗೆ ನಾನು ಸಂದು ಹೋಗಿದ್ದ ಸಂದರ್ಭದಲ್ಲೇ ಒಂದುದಿನ ನನಗೆ ಮಂಗಳೂರು ಆಕಾಶವಾಣಿಯಿಂದ ಲಿಖಿತಪರೀಕ್ಷೆಗೆ ಕರೆಪತ್ರ ಬಂದಿತು.ಆ ಪತ್ರದಲ್ಲಿ ಲಿಖಿತಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮರುದಿನವೇ ಧ್ವನಿಪರೀಕ್ಷೆ,ಸಂದರ್ಶನ ಇತ್ಯಾದಿ ಇರುವುದರಿಂದ ಎಲ್ಲ ಮೂಲ ದಾಖಲೆಗಳೊಡನೆ ಲಿಖಿತಪರೀಕ್ಷೆಗೆ ಹಾಜರಾಗಬೇಂದು ನಮೂದಿಸಲಾಗಿತ್ತು.
ಸರಿ,ಎಲ್ಲ ದಾಖಲೆ ಪತ್ರಗಳೊಡನೆ ನಿಗದಿತ ದಿನ ಆಕಾಶವಾಣಿಗೆ ಹೋದೆ.ನಾವು ಸುಮಾರು ಎಂಬತ್ತು ಮಂದಿ ಅಭ್ಯರ್ಥಿಗಳಿದ್ದೆವು.ನಮ್ಮನ್ನೆಲ್ಲ ದಾಖಲೆಪತ್ರಗಳ ತಪಾಸಣೆಯ ಬಳಿಕ ಕದ್ರಿಗುಡ್ಡಲ್ಲಿರುವ ಕಿರಿಯ ತಾಂತ್ರಿಕ ಶಾಲೆಗೆ ಬರುವಂತೆ ತಿಳಿಸಲಾಯಿತು.ಅಲ್ಲಿ ಲಿಖಿತಪರೀಕ್ಷೆ ನಡೆಯಿತು.ಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ಪ್ರಶ್ನೆಗಳನ್ನೂ ಸುಲಲಿತವಾಗಿ ಉತ್ತರಿಸಿದೆ.ಮಕ್ಕಳಿಗಾಗಿ ಬಾಲಧ್ರುವನ ಕಥೆಯನ್ನು ನಿರೂಪಿಸುವ ಶೈಲಿಯಲ್ಲಿ ಬರೆಯುವಂತೆ ಕೇಳಿದ್ದರು.ರಜೆಯಲ್ಲಿ ಮನೆಮಕ್ಕಳಿಗೆ ವರ್ಣರಂಜಿತವಾಗಿ ಕಥೆ ಹೇಳಿದ ಅನುಭವ ಇಲ್ಲಿ ಪ್ರಯೋಜನಕ್ಕೆ ಬಂದಿತು.ಸೊಗಸಾಗಿ ಕಥೆ ಬರೆದೆ.ಇಂಗ್ಲಿಷ್ ನಿಂದ ಕನ್ನಡಕ್ಕೆ,ಕನ್ನಡದಿಂದ ಕೊಂಕಣಿಗೆ ತರ್ಜುಮೆ ಮಾಡುವ ಕೆಲಸವೂ ಚೆನ್ನಾಗಿಯೇ ನಡೆಯಿತು.ಆದರೆ ಟೆಲಿಗ್ರಾಫಿಕ್ ಭಾಷೆಯಲ್ಲಿದ್ದ ಹವಾಮಾನದ ಮುನ್ಸೂಚನಾ ವರದಿಯನ್ನು ಮಾತ್ರ ಅಂದಾಜಿನಲ್ಲಿ ಕನ್ನಡೀಕರಿಸಿದೆ.ಲಿಖಿತಪರೀಕ್ಷೆ ಹೂವಿನ ಸರ ಎತ್ತಿದಷ್ಟು ಸುಲಭವಾಗಿ ನಡೆದು ಹೋಯಿತು.ಲಿಖಿತಪರೀಕ್ಷೆಯ ಫಲಿತಾಂಶವನ್ನು ಸಂಜೆಯ ಒಳಗೆ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದೆಂದೂ ಅದರಲ್ಲಿ ತೇರ್ಗಡೆಯಾದವರು ಮರುದಿನ ಧ್ವನಿ ಪರೀಕ್ಷೆಗೆ ಬೆಳಗ್ಗೆ ಹತ್ತು ಗಂಟೆಗೆ ಹಾಜರಾಗಬೇಕೆಂದೂ ಹೇಳಿದರು.ಸರಿ,ಎರಡು ದಿನಗಳಿಗಾಗಿ ಮತ್ತೆ ಹಾಸ್ಟೆಲ್ ಗೆ ಏಕೆ ಹೋಗುವುದೆಂದು ಬಿಕರ್ನಕಟ್ಟೆಯಲ್ಲಿರುವ ವಾರಿಜಕ್ಕನ ಮನೆಗೆ ಹೋದೆ.ಆಗೆಲ್ಲ ಫೋನ್ ಗಳಿಲ್ಲದ ಕಾಲ. ಮೊದಲೇ ತಿಳಿಸಿ ಹೋಗಲೂ ಆಗಿರಲಿಲ್ಲ.ಅವರ ಮನೆಗೆ ಬೀಗ ಹಾಕಿದ್ದರು.ಅದು ಮದುವೆಗಳ ಕಾಲವಾದುದರಿಂದ ಯಾವುದಾದರೂ ಮದುವೆಗೆ ಹೋಗಿರಬಹುದೆಂದು ಅಲ್ಲೇ ಹತ್ತಿರವಿದ್ದ ನನ್ನ ಇನ್ನೋರ್ವ ಸಂಬಂಧಿ ಸುಮತೆಕ್ಕನ ಮನೆಗೆ ಹೋದೆ.ಅಲ್ಲೂ ಮನೆಮಂದಿಯೆಲ್ಲಾ ಯಾವುದೋ ಮದುವೆಗೆ ಹೋಗಿದ್ದರು.ಆದರೆ ಸುಮತೆಕ್ಕನ ಮಗಳು ಮಾತ್ರ ಮನೆಯಲ್ಲಿದ್ದರು. ಉರಿಬಿಸಿಲಿನಲ್ಲಿ ಬಂದ ನನ್ನನ್ನು ಅವರು ಕೈಕಾಲು ತೊಳೆಯಲು ಹೇಳಿ ಕೂರಿಸಿ ಹೊಟ್ಟೆ ತುಂಬಾ ಬಡಿಸಿ ಉಪಚರಿಸಿದರು. ತಾನೇ ಮುತುವರ್ಜಿ ವಹಿಸಿ ಸಂಜೆ ನನ್ನೊಡನೆ ತನ್ನ ಮನೆಯಿಂದ ಆಕಾಶವಾಣಿಯವರೆಗೂ ಕಾಲು ನಡಿಗೆಯಲ್ಲಿ ಬಂದು ಸೂಚನಾ ಫಲಕ ನೋಡಲು ಸಹಕರಿಸಿದರು.ಸೂಚನಾಫಲಕದಲ್ಲಿ ನನ್ನ ಹೆಸರಿಗಾಗಿ ತುದಿಕಾಲಿನಲ್ಲಿ ನಿಂತು ಹುಡುಕಿದೆ.ನನ್ನ ಕಣ್ಣುಗಳನ್ನೇ ನಾನು ನಂಬಲಿಲ್ಲ.ನನ್ನ ಹೆಸರನ್ನು ಆ ಪಟ್ಟಿಯಲ್ಲಿ ನಮೂದಿಸಲಾಗಿತ್ತು.ಮತ್ತೆ ಮತ್ತೆ ನೋಡಿ ಖಾತ್ರಿಪಡಿಸಿ ಕೊಂಡೆ.ನಾನು ಮತ್ತೆ ಮತ್ತೆ ನೋಡುವದನ್ನು ಗಮನಿಸಿಯೋ ಏನೋ ,ಓರ್ವ ವ್ಯಕ್ತಿ ನನ್ನ ಬಳಿ ಬಂದು “ನೀವು ಪಾಸಾ?”.ಎಂದು ಕೇಳಿದರು ನಾನು ಉತ್ಸಾಹದಿಂದ”ನಾನು ಪಾಸ್,ನೀವು?” ಅಂತ ಕೇಳಿದೆ.ಆಗ ಅವರು ನಗುತ್ತಾ “ನಾನು ಇಲ್ಲಿಯ ಸ್ಟಾಫ್ “ಅಂದರು .ಅವರು ಕೆಂಚನಕುರ್ಲರಿ ಖ್ಯಾತಿಯ ಪಟಾಕಿ ತುಕ್ರಣ್ಣ ಅಂತೆ,ಅವರ ಹೆಸರು ಭಾಸ್ಕರ ಕಾರ್ನಾಡ್ ಅಂತ ಮತ್ತೆ ಗೊತ್ತಾಯಿತು.
“ಹೇಗೂ ಕದ್ರಿಗುಡ್ಡದ ವರೆಗೂ ಬಂದಿದ್ದೇವಲ್ಲ,ಇಲ್ಲೇ ಒಳದಾರಿಯಲ್ಲಿ ಇಳಿದರೆ ಕದ್ರಿ ಮಂಜುನಾಥಸ್ವಾಮಿ ದೇವಸ್ಥಾನ ಇದೆ.ಹೋಗಿ ಕೈ ಮುಗಿದು ಬರುವ”,ಅಂತ ಸುಮತೆಕ್ಕನ ಮಗಳು ಹೇಳಿದ ಕಾರಣ ನಾವು ಅಲ್ಲೇ ಜಿಂಕೆಪಾರ್ಕಿನ ಪಕ್ಕದ ಕಚ್ಚಾ ದಾರಿಯಲ್ಲಿ ನಡೆಯುತ್ತಾ ದೇವಸ್ಥಾನಕ್ಕೆ ಬಂದೆವು .ದೇವರ ದರ್ಶನ ಆಗಿ ಹೊರಡುವ ಹೊತ್ತಿಗೆ ನನ್ನ ಸೋದರ ಸಂಬಂಧಿ ರಮಣೆಕ್ಕ ದೇವಸ್ಥಾನಕ್ಕೆ ಬಂದರು.ನನ್ನನ್ನು ನೋಡಿ ಎಷ್ಟು ಹೇಳಿದರೂ ಬಿಡದೆ ಒತ್ತಾಯದಿಂದ ಅಲ್ಲೆ ಪಕ್ಕದಲ್ಲಿರುವ ಅವರ ಮನೆಗೆ ಕರೆದುಕೊಂಡು ಹೋದರು.ಅಲ್ಲೇ ಅಂದಿನ ದಿನ ಉಳಿಯವಂತೆ ಪ್ರೀತಿಯಿಂದ ನಿರ್ಬಂಧಿಸಿದರು.ಪಾಪ ಸುಮತೆಕ್ಕನ ಮಗಳು ಒಬ್ಬರೇ ತನ್ನ ಮನೆಗೆ ಮರಳಬೇಕಾಯಿತು.ಅಷ್ಟು ಮಾತ್ರವಲ್ಲದೆ ಅವರ ಮನೆಯಲ್ಲಿ ನಾನು ಇಟ್ಟಿದ್ದ ನನ್ನ ಬಟ್ಟೆಯ ಬ್ಯಾಗನ್ನು ತನ್ನ ತಮ್ಮನ ಕೈಯಲ್ಲಿ ಕೊಟ್ಟು ಕಳುಹಿಸಿಕೊಟ್ಟರು ಕೂಡಾ.ಇಷ್ಟು ದಿನಗಳ ಬಳಿಕವೂ ನನಗೆ ಅವರು ಅಂದು ನನ್ನಲ್ಲಿ ತೋರಿದ ಆ ಪ್ರೀತಿ,ಮಮತೆ ಇನ್ನೂ ನೆನಪಾಗುತ್ತದೆ,ಬಹುಶ:ನನ್ನ ತಂದೆ ತಾಯಿ ನೆಂಟರಿಷ್ಟರನ್ನು ಉಪಚರಿಸುತ್ತಿದ್ದ ರೀತಿಯಿಂದ ಮಕ್ಕಳಾದ ನಮಗೂ ಹೋದಲ್ಲೆಲ್ಲಾ ಅದೇ ರೀತಿಯ ಆದರಾತಿಥ್ಯ ಸಲ್ಲುತ್ತಿತ್ತೇನೋ.ಮರುದಿನ ರಮಣೆಕ್ಕನ ಮನೆಯಿಂದಲೇ ಧ್ವನಿಪರೀಕ್ಷೆಗೆ ಆಕಾಶವಾಣಿಗೆ ಹೋದೆ.ಲಿಖಿತಪರೀಕ್ಷೆಯಲ್ಲಿ ಪಾಸಾದ ಸುಮಾರು ಇಪ್ಪತ್ತು ಜನರನ್ನು ಒಂದು ಕೋಣೆಯೊಳಗೆ ಕೂರಿಸಿ ಒಬ್ಬೊಬ್ಬರನ್ನೇ ಧ್ವನಿ ಪರೀಕ್ಷೆಗೆ ಕಳುಹಿಸುತ್ತಿದ್ದರು.ಆ ಇಪ್ಪತ್ತು ಜನರಲ್ಲಿ ತರಹೇವಾರಿ ಜನರಿದ್ದರು.ಒಬ್ಬೊಬ್ಬರ ಕಥೆ ಕೇಳಿದರೂ ನಾನೇ ಎಷ್ಟೋ ಸುಖಿ ಎಂದು ಅನಿಸುತಿತ್ತು.ಅದರಲ್ಲೂ ಕೆಲವರ ಆತ್ಮವಿಶ್ವಾಸದ ಮಾತುಗಳನ್ನು ಕೇಳಿದಾಗ ಈ .ಕೆಲಸವೂ ನನಗೆ ದಕ್ಕುವಂತದಲ್ಲ ಎಂದೂ ಅನಿಸುತಿತ್ತು.ಈಗಾಗಲೇ ಅಲ್ಲಿ ಕ್ಯಾಶುವಲ್ ಉದ್ಘೋಷಕರಾಗಿ ಕೆಲಸ ಮಾಡುತಿದ್ದವರೊಬ್ಬರು ತಾನು ಮೂರು ಭಾಷೆಗಳಲ್ಲಿ ನಿರೂಪಣೆ ಮಾಡಿದ ದಾಖಲೆ ಇದೆ,ಬೇಕಾದರೆ ಲಾಗ್ ಬುಕ್ ನೋಡಲಿ ಎಂದು ಘಂಟಾಘೋಷವಾಗಿ ಪಂಥಾಹ್ವಾನ ನೀಡುತ್ತಿದ್ದರು.ಅವರ ಮಾತುಗಳನ್ನು ಕೇಳುವಾಗ ವಾತಾನುಕೂಲಿಯಾದ ಆ ಕೋಣೆಯಲ್ಲೂ ನಾನು ಸಣ್ಣಗೆ ಬೆವರುತ್ತಿದ್ದೆ.ಕೊನೆಗೂ ನನ್ನ ಧ್ವನಿ ಪರೀಕ್ಷೆ ಆಯಿತು.ನಾಲಗೆ ತೊಡರುವಂಥ ಹಳೆಗನ್ನಡ ಕಾವ್ಯದ ಭಾಗಗಳನ್ನು,ಶ್ರುತಿಕಟು ಪದಗಳನ್ನು ಓದಲು ಕೊಟ್ಟಿದ್ದರು.ಆದರೆ ಅದು ನನ್ನ ನಾಲಗೆಗೆ ಅಂಥ ತೊಂದರೆಯನ್ನೇನೂ ಮಾಡಲಿಲ್ಲ. ಧ್ವನಿಪರೀಕ್ಷೆಯಲ್ಲಿ ತೇರ್ಗಡೆಯಾದವರ ಹೆಸರನ್ನು ಮಧ್ಯಾನ್ಹ ಎರಡು ಗಂಟೆಯೊಳಗೆ ಸೂಚನಾ ಫಲಕದಲ್ಲಿ ಹಾಕುವುದಾಗಿಯೂ,ಅಂಥವರು ಎರಡೂವರೆ ಗಂಟೆಗೆ ಆರಂಭವಾಗುವ ಸಂದರ್ಶನಕ್ಕೆ ಹಾಜರಾಗಬೇಕೆಂದೂ ತಿಳಿಸಿದರು.
ಆಗ ಕದ್ರಿಗುಡ್ಡದ ಮೇಲೆ ಸಾಯುತ್ತೇನೆಂದರೆ ವಿಷ ಕೂಡಾ ಸಿಗುತ್ತಿರಲಿಲ್ಲ.ಒಂದೇ ಒಂದು ಅಂಗಡಿ ಇರಲಿಲ್ಲ.ಊಟಕ್ಕಾಗಿ ಮತ್ತೆ ಜಿಂಕೆಪಾರ್ಕಿನ ಬದಿಯಲ್ಲಿರುವ ಕಚ್ಚಾ ರಸ್ತೆಯಲ್ಲಿ ರಮಣೆಕ್ಕನ ಮನೆಗೆ ಹೋಗಿ ಊಟ ಮಾಡಿ ಅವರ ಮನೆಯ ಫೋನಿನಿಂದಲೇ ಆಕಾಶವಾಣಿಯ ಡ್ಯೂಟಿರೂಮಿಗೆ ಕರೆ ಮಾಡಿ ಧ್ವನಿ ಪರೀಕ್ಷೆಯ ಫಲಿತಾಂಶದ ಬಗ್ಗೆ ಕೇಳಿದಾಗ ನಾನು ಅದರಲ್ಲೂ ಪಾಸಾದ ವರ್ತಮಾನ ಸಿಕ್ಕಿತು.ಮೇ ತಿಂಗಳ ಆ ಉರಿ ಬಿಸಿಲಿನಲ್ಲೂ ಬಹಳ ಉತ್ಸಾಹದಿಂದ ಗುಡ್ಡವೇರಿ ಸಂದರ್ಶನದ ನನ್ನ ಪಾಳಿಗೆ ಕಾಯತೊಡಗಿದೆ.ನಾಲ್ಕೂವರೆ ಒಳಗೆ ಸಂದರ್ಶನ ಮುಗಿದರೆ ನನಗೆ ಊರಿಗೆ ಹೋಗುವ ಕನೆಕ್ಷನ್ ಬಸ್ ಸರಿಯಾಗಿ ಸಿಕ್ಕಿ ಮನೆ ಮುಟ್ಟುವ ಭರವಸೆ ಇತ್ತು.ಆದರೆ ನನ್ನನ್ನು ಒಳಗೆ ಕರೆಯುವಾಗಲೇ ನಾಲ್ಕೂವರೆ ಆಗಿತ್ತು.ಹೇಗೂ ಈ ಕೆಲಸ ನನಗೆ ಸಿಕ್ಕುವಂಥದಲ್ಲ,ರಾತ್ರಿ ಒಳಗೆ ಮನೆಗಾದರೂ ಹೋಗಿ ಸುಸೂತ್ರ ಮುಟ್ಟಬೇಕಾದರೆ ಈಗಿಂದೀಗಲೇ ಇಲ್ಲಿಂದ ಹೊರಡು ಅಂತ ನನ್ನ ಒಳ ಮನಸ್ಸು ಹೇಳುತ್ತಿತ್ತು.ಆ ರಾತ್ರಿಯೊಳಗೆ ನಾನು ಮನೆ ಮುಟ್ಟಿದರೆ ಮರುದಿನ ಮೊದಲ ಬಸ್ ನಲ್ಲಿ ಪಯ್ಯನೂರಿನ ಅಕ್ಕನ ಮನೆಗೆ ಅಣ್ಣನೊಡನೆ ಹೋಗಿ ಅಲ್ಲಿಂದ ತ್ರಿಶ್ಶೂರಿಗೆ ಅಕ್ಕನ ಮೈದುನನ ಮದುವೆಗೆ ಹೋಗುವ ಪ್ಲಾನ್ ಇತ್ತು. ಆದರೆ ಲಿಖಿತ ಹಾಗೂ ಧ್ವನಿ ಪರೀಕ್ಷೆ ಎರಡರಲ್ಲೂ ತೇರ್ಗಡೆಯಾಗಿದೆ.ಇನ್ನು ಈ ಸಂದರ್ಶನದ ಸೌಭಾಗ್ಯವನ್ನೂ ನೋಡೇ ಬಿಡುವ ಅಂತ ತೀರ್ಮಾನಿಸಿದೆ.
ಅದೇ ಹುಮ್ಮಸ್ಸಿನಲ್ಲಿ ಸಂದರ್ಶಕರ ಮುಂದೆ ಕುಳಿತೆ .ಆ ಕಾರಣಕ್ಕೋ ಏನೋ ಈ ಸಂದರ್ಶನವನ್ನು ಮಾತ್ರ ಯಾವುದೇ ಅಂಜಿಕೆಯಿಲ್ಲದೇ ಎದುರಿಸಿದೆ.ನನಗೆ ಯಾವುದೇ ನಿರೀಕ್ಷೆ,ಅಪೇಕ್ಷೆಗಳಿರಲಿಲ್ಲ,ಸೋತರೂ ಬೇಸರವಿರಲಿಲ್ಲ.ಕೆಲಸ ಸಿಕ್ಕರೆ ಸರಿ,ಇಲ್ಲವಾದರೆ ಹೋಗಲಿ ಎಂಬ ಅಸಡ್ಡೆಯೂ ನನ್ನನ್ನು ಆವರಿಸಿಕೊಳ್ಳುತ್ತಿತ್ತು.ಈ ತೀರ್ಮಾನಕ್ಕೆ ಬಂದ ಮೇಲೆ ನನಗೆ ಯಾವುದೇ ಮುಲಾಜಿರಲಿಲ್ಲ.ಪ್ರತಿ ಪ್ರಶ್ನೆಯನ್ನೂ ಆತ್ಮವಿಶ್ವಾಸದಿಂದ ಉತ್ತರಿಸಿದೆ.ಏ.ಕೆ.ರಾಮಾನುಜಂ ಅವರ “ಮತ್ತೊಬ್ಬನ ಆತ್ಮಚರಿತ್ರೆ”,ಅನಂತಮೂರ್ತಿಯವರ “ಅವಸ್ಥೆ”ಕಾದಂಬರಿಗಳ ಬಗ್ಗೆ ನಿಲಯನಿರ್ದೇಶಕರಾದ ಶ್ರೀ ಎಚ್.ವಿ.ರಾಮಚಂದ್ರರಾಯರು(ಅದು ಅವರೆಂದು ನನಗೆ ಮತ್ತೆ ಗೊತ್ತಾದದ್ದು)ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು.ನಾನು ಕೊಡುವ ದಿಟ್ಟ ಉತ್ತರಗಳಿಂದ ಅವರಿಗಾಗುತ್ತಿದ್ದ ಸಮಾಧಾನ,ಸಂತೋಷವನ್ನು ನಾನು ಗುರುತಿಸಬಲ್ಲವಳಾಗಿದ್ದೆ.,ಅದು ನನ್ನಲ್ಲಿ ಮತ್ತಷ್ಟು ಸ್ಪೂರ್ತಿಯನ್ನು ತುಂಬಿತು.ಅಲ್ಲಿದ್ದ ಇನ್ನೋರ್ವ ವ್ಯಕ್ತಿ ನನಗೆ ಸಿಕ್ಕ ಚಿನ್ನದ ಪದಕಗಳ ಬಗ್ಗೆ,ಆ ಘಟಿಕೋತ್ಸವದ ಬಗ್ಗೆ,ಆ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ವ್ಯಕ್ತಿಗಳ ಬಗ್ಗೆ ಕೇಳಿದರು.ತಾನು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯನೆಂದೂ,ತಾನೂ ಆ ಘಟಿಕೋತ್ಸವದಲ್ಲಿ ವೇದಿಕೆ ಮೇಲೆ ಇದ್ದೆನೆಂದೂ ಅವರೇ ಹೇಳಿದರು.ಅದು ಅರವತ್ತನೆಯ ಘಟಿಕೋತ್ಸವವಾದುದರಿಂದ ರಾಷ್ಟ್ರಪತಿಗಳಾದ ಮಾನ್ಯ ನೀಲಂ ಸಂಜೀವ ರೆಡ್ಡಿಯವರು ಮುಖ್ಯ ಅತಿಥಿಗಳಾಗಿದ್ದರು.ಅವರ ಭಾಷಣದ ಮುಖ್ಯಾಂಶಗಳನ್ನು ಕೊಂಕಣಿಯಲ್ಲೂ ತುಳುವಿನಲ್ಲೂ ಹೇಳಲು ಹೇಳಿದರು.ನನ್ನೊಳಗೆ ಅದ್ಯಾವ ಭೂತ ಹೊಕ್ಕಿತ್ತೋ ಕಾಣೆ,ಎಲ್ಲ ಪ್ರಶ್ನೆಗಳಿಗೂ ಅವರು ದಂಗಾಗುವಂತೆ , ನನಗೇ ಅಚ್ಚರಿಯಾಗುವಂತೆ ನಾನು ಉತ್ತರಿಸಿದ ನೆನಪು ನಿಚ್ಚಳವಾಗಿದೆ..ಕೊನೆಯಲ್ಲಿ ಎಚ್.ವಿ ರಾಮಚಂದ್ರರಾಯರು ಆಕಾಶವಾಣಿಯಲ್ಲಿ ಮಾಡಬೇಕಾದ ಪಾಳಿಯ ಡ್ಯೂಟಿಯ ಬಗ್ಗೆ ನನ್ನ ಅಭಿಪ್ರಾಯ ಕೇಳಿದರು.ಈಗಾಗಲೇ ನಾಲ್ಕು ಕಾಲೇಜುಗಳಲ್ಲಿ ಅಂಶಕಾಲಿಕ ಉದ್ಯೋಗಮಾಡುತ್ತಾ ಸಮಯದ ಹೊಂದಾಣಿಕೆಯಲ್ಲಿ ಪರಿಣತಳಾಗಿದ್ದೇನೆ,ಸಮಯ ಈಗ ನನ್ನ ಸಮಸ್ಯೆಯಲ್ಲ,ನನಗೆ ಹಣ ಸಿಗುವ ಸ್ಥಿರ ಉದ್ಯೋಗ ಒಂದು ಬೇಕು ಎಂದು ಸ್ಥಿರದನಿಯಲ್ಲಿ ಉಚ್ಚರಿಸಿದೆ.ಸರಿ ನೀವಿನ್ನು ಹೋಗಬಹುದು ಎಂದರವರು. ನಾನು ಊರಿನ ಕೊನೆಯ ಬಸ್ ತಪ್ಪಿದ ಸಂಕಟದಲ್ಲಿ ವೇಗದ ಹೆಜ್ಜೆಗಳೊಡನೆ ಹೊರಗೆ ಬಂದೆ.ಕೊನೆಗೂ ಕೊನೆಯ ಬಸ್ ತಪ್ಪಿ ನಾನು ಉಕ್ಕಿನಡ್ಕದ ದೊಡ್ಡಪ್ಪನ ಮಗನ ಮನೆಯಲ್ಲಿ ಅಂದಿನ ರಾತ್ರಿ ಕಳೆದೆ.ಆ ಕಾಲದಲ್ಲಿ ನನ್ನ ಸರೀಕರಲ್ಲಿ ಯಾರೂ ನನ್ನಷ್ಟು ಓದಿದ ಹೆಣ್ಣು ಮಗಳಿರಲಿಲ್ಲ.ಅದರಲ್ಲೂ ಈ ಅಪರಾತ್ರಿಯಲ್ಲಿ ಕೆಲಸದ ಬೇಟೆ ಮುಗಿಸಿ ನನ್ನಂತೆ ಓಡಾಡುವ ಹೆಣ್ಣುಮಗಳಂತೂ ಇರಲಿಲ್ಲವೆಂದೇ ಹೇಳಬಹುದು.ಮದುವೆ ವಯಸ್ಸು ಮೀರುತ್ತಿದ್ದರೂ ಕೆಲಸದ ಹುಡುಕಾಟದಲ್ಲಿ ಊರೂರು ಸುತ್ತುವ ನನ್ನ ಬಗ್ಗೆ ಸಂಬಂಧಿಕರು ಸಣ್ಣಗೆ ಅಸಹನೆ ತೋರುತ್ತಿದ್ದಾರೋ ಏನೋ,ಅಪಹಾಸ್ಯ ಮಾಡುತ್ತಿದ್ದಾರೋ ಎಂಬ ಸಂದೇಹ ನನ್ನನ್ನು ಕಾಡುತ್ತಿದ್ದಂತೆಯೇ ಇನ್ನು ಮುಂದೆ ಯಾವುದೇ ಕೆಲಸಕ್ಕಾಗಿ ಅರ್ಜಿ ಗುಜರಾಯಿಸುವುದಿಲ್ಲ ಎಂಬ ಶಪಥವನ್ನೂ ಅದೇ ರಾತ್ರಿ ಮಾಡಿದೆ.
ಮುಂದಿನ ವಾರಕ್ಕೆ ►




