spot_imgspot_img
spot_img

ತಂತಿರೂಪದಲ್ಲಿ ಬಂದ ಭಾಗ್ಯದ ಸಂದೇಶ.

ಮೇ ತಿಂಗಳ ಉರಿಬಿಸಿಲಿನ ಸಮಯ. ನಮ್ಮ ಹಳ್ಳಿಯಲ್ಲಿ ಮನೆ ಮನೆಯಲ್ಲೂ ಹಲಸಿನಕಾಯಿ ಹಪ್ಪಳ ಮಾಡುವ ತರಾತುರಿ. ಯಾಕೆಂದರೆ ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಕರಿಮೋಡ ಕಾಣಿಸಿಕೊಂಡು ಆತಂಕ ಮೂಡಿಸುತ್ತಿತ್ತು. ಬಲಿತ ಹಲಸಿನಕಾಯಿಗಳನ್ನು ಆದಷ್ಟು ಬೇಗ ಹಪ್ಪಳವಾಗಿಸಿ ಅಮ್ಮನ ಡಬ್ಬಗಳಲ್ಲಿ ಶೇಖರಿಸಿಟ್ಟುಕೊಳ್ಳದೇ ಹೋದಲ್ಲಿ ಮಳೆಗಾಲದಲ್ಲಿ ಹಾಗೂ ವರ್ಷವಿಡೀ ನಮಗೆ ಹಳ್ಳಿಯಲ್ಲಿ ಯಾರೇ ನೆಂಟರು ಬರಲಿ, ಮನೆಮಕ್ಕಳಿಗೇ ಇರಲಿ ದಿಢೀರ್ ಎಂದು ಒದಗುವ ಏಕೈಕ ಆಪ್ತರಕ್ಷಕ ಕುರುಕಲು ತಿಂಡಿಯಾದ ಹಪ್ಪಳವನ್ನು ಮಾಡಿ ಶೇಖರಿಸಲು ಕಷ್ಟವಾಗುತ್ತಿತ್ತು. ಪೇಟೆಯಲ್ಲಿರುವ ನೆಂಟರ ಮನೆಗೆ ಹೋಗುವಾಗಲೂ ಎರಡು ಕಟ್ಟು ಹಪ್ಪಳವನ್ನು ಅಮ್ಮ ತನ್ನ ಚೀಲದಲ್ಲಿ ಹಾಕಿ ಕೊಂಡೊಯ್ದು ಕೊಡುವುದಿತ್ತು. ಆ ಹಪ್ಪಳದ ರುಚಿಗಿಂತಲೂ ಅದರ ತಯಾರಿಯ ಹಿಂದಿರುವ ಅಮ್ಮನ ಶ್ರಮ, ಕಾಳಜಿ, ಮೇಲಾಗಿ ಉತ್ಸಾಹವೇ ನನಗೀಗ ಎದ್ದು ತೋರುತ್ತಿದೆ.

ಏಪ್ರಿಲ್ ತಿಂಗಳಿಡೀ ಮಕ್ಕಳ ಜೊತೆ ಆಟ, ಮದುವೆ, ಮುಂಜಿ, ಸಂದರ್ಶನಗಳಲ್ಲಿ ಮುಳುಗಿದ್ದ ನನಗೆ ಮೇ ತಿಂಗಳಲ್ಲಿ ಹಪ್ಪಳದ ಕಾಯಕದ ಧ್ಯಾನಸ್ಥ ಬದುಕು. ಹಲಸಿನ ಹಪ್ಪಳಮಾಡುವುದು ಎಂಥಾ ರೇಜಿಗೆಯ ಕೆಲಸ ಅನ್ನುವುದು ಅದನ್ನು ಮಾಡಿ ಅನುಭವವಿರುವವರಿಗೆಲ್ಲಾ ಗೊತ್ತಿರುವುದರಿಂದ ಅದರ ವರ್ಣನೆಗೆ ಹೋಗುವುದಿಲ್ಲ. ಇಂಥಾ ಒಂದು ಹಪ್ಪಳದ ಮಹಾಯಜ್ಞದ  ದಿನ. ಸಾವಿರದ ಒಂಬೈನೂರ ಎಂಬತ್ತೊಂದರ ಮೇ ಇಪ್ಪತ್ತೆಂಟರಂದು ಉಕ್ಕಿನಡ್ಕದಿಂದ ಕೆಳಗಿಳಿದು ಬರುವ ನಡುಮನೆ ಸಂಕಪ್ಪ ರೈಗಳ ಕೈಗೆ ಅಂಚೆ ಕಚೇರಿಯವರು ಕಳುಹಿಸಿಕೊಟ್ಟ  ನನ್ನ ಹೆಸರಿಗೆ ಬಂದ ಆಕಾಶವಾಣಿಯಿಂದ ಬಂದ ತಂತಿಯೊಂದು ಮಧ್ಯಾನ್ಹ ಎರಡು ಗಂಟೆ ಸುಮಾರಿಗೆ ನನ್ನ ಕೈ ಸೇರಿತು. ಅಂದೇ ಸೇರಿಕೊಳ್ಳದೇ ಹೋದರೆ ಆ ಕೆಲಸ ವಜಾ ಆಗುವುದೆಂಬ ಅರ್ಥದ, ಟೆಲಿಗ್ರಾಫಿಕ್ ಭಾಷೆಯ ತಂತಿ ಅದು. (ಪೂರ್ಣ ಬರಹ ರೂಪದ ಆಫರ್ ಪತ್ರ ಮತ್ತೆರಡು ದಿನಗಳಲ್ಲಿ ನನ್ನ ಕುಗ್ರಾಮವನ್ನು ತಲುಪಿತ್ತು) ಗಡಿಯಾರದ ಗೂಡಿನ ಕಡೆಗೆ ನೋಡಿದರೆ ಆಗಲೇ ಎರಡು ಗಂಟೆ ದಾಟಿದೆ. ಉಕ್ಕಿನಡ್ಕವನ್ನು ಬಳ್ಳಂಬೆಟ್ಟಿನಿಂದ ಗುಡ್ಡದ ಏರುಹಾದಿಯಲ್ಲಿ ನಡೆದು ಸೇರಲು ಓಡುತ್ತಾ ಹೋದರೆ ಹದಿನೈದು – ಇಪ್ಪತ್ತು ನಿಮಿಷಗಳು ಬೇಕು. ಅಷ್ಟರಲ್ಲೇ ಪೆರ್ಲ ಕಡೆಯಿಂದ ಬದಿಯಡ್ಕ ಕಡೆಗೆ  ಹೋಗುವ ಬಸ್ ಗಳು ಹೋಗಿ ಆಗಿರುತ್ತವೆ. ಮತ್ತೆ ನಾಲ್ಕು ಗಂಟೆವರೆಗೂ ಮುನ್ನ ಬಸ್ ಸಂಚಾರವಿರಲಿಲ್ಲ. ಸ್ನಾನವೂ ಆಗಿಲ್ಲ.ಮೈ ಕೈಗಳಲ್ಲಿ ಅಂಟುತ್ತಿರುವ ಹಲಸಿನ ಮಯಣ. ಯಾವುದನ್ನೂ ಲೆಕ್ಕಿಸಲಿಲ್ಲ. ಕೈಗೆ ಸಿಕ್ಕ ಬಟ್ಟೆಬರೆ ತೊಟ್ಟುಕೊಂಡೆ. ಅಪ್ಪ, ಅಮ್ಮ, ಅಣ್ಣ, ಅತ್ತಿಗೆಯರ ಕಾಲಿಗೆ ನಮಸ್ಕರಿಸಿ ಉಕ್ಕಿನಡ್ಕದ ಗುಡ್ಡದ ಹಾದಿಯಲ್ಲಿ ಒಂದೇ ಓಟ ಓಡಿದೆ. ರಸ್ತೆ ತಲುಪಿದ ಕೆಲವೇ ಹೊತ್ತಿನಲ್ಲಿ ಪೆರ್ಲ ಕಡೆಯಿಂದ ಬಂದ ಒಂದು  ಕಾರಿನತ್ತ ಕೈ ತೋರಿಸಿ ನಿಲ್ಲಿಸಿ ನನ್ನ ಕಷ್ಟ ಅರಿಕೆ ಮಾಡಿಕೊಂಡೆ, ಅವರು ನನ್ನನ್ನು ಬದಿಯಡ್ಕದಲ್ಲಿ ಇಳಿಸುವರೆ ಸಮ್ಮತಿಸಿದರು. ಕಾರನ್ನೇರುವ ಮುನ್ನ ಒಮ್ಮೆ ಗೇರುಮರಗಳ ಎಡೆಯಿಂದ  ದೂರದಿಂದ ತೋರುವ ನನ್ನ ಮನೆಯ ಮೇಲಣ ಮಜಲು ಗದ್ದೆಯಂಚನ್ನು ನೋಡಿದೆ, ನನ್ನ ಊಹೆಗೆ ಸರಿಯಾಗಿ ನನ್ನ ಅಣ್ಣನ ಸಣ್ಣ ಆಕೃತಿ ಕಾಣಿಸಿತು. ಅಷ್ಟು ಹೊತ್ತಿನಲ್ಲಿ ಬದಿಯಡ್ಕ ಕಡೆಗೆ ಹೋಗುವ ಯಾವ ಬಸ್ ಗಳೂ ಇಲ್ಲದ ಕಾರಣ ನಾನು ಹೇಗೆ ಹೋಗುವೆನೋ ಎಂಬ ಕಾತರದಿಂದ ಅವರು ಅಲ್ಲಿ ಕಾದು ನಿಂತಿರುತ್ತಾರೆಂಬ ನನ್ನ ಊಹೆ ನಿಜವಾಗಿತ್ತು, ತುಂಬಿದ ಕಣ್ಣುಗಳಿಂದ ಅಣ್ಣನೆಡೆಗೆ ಕೈ ಬೀಸಿದೆ, ಅದು ಬಳ್ಳಂಬೆಟ್ಟಿಗೇ ನಾನು ಬೀಸಿದ ಕೊನೆಯ ವಿದಾಯವಾಗಿತ್ತು ಅನ್ನುವ ಸತ್ಯ ಆಗ ನನಗೆ ಆಗ ಹೊಳೆದಿರಲಿಲ್ಲ.

ಕಾರಿನಿಂದ ಬದಿಯಡ್ಕದಲ್ಲಿ ಇಳಿದು, ಅಲ್ಲಿಂದ ಕುಂಬಳೆಗೆ, ಕುಂಬಳೆಯಿಂದ ತಲಪಾಡಿಗೆ, ತಲಪಾಡಿಯಿಂದ ಪಂಪವೆಲ್ ಸರ್ಕಲ್ ವರೆಗೆ  ವಿವಿಧ ಬಸ್ ಗಳನ್ನು ಏರುತ್ತ ಇಳಿಯುತ್ತಾ, ಅಲ್ಲಿಂದ ರಿಕ್ಷಾದಲ್ಲಿ ಮಂಗಳೂರು ಆಕಾಶವಾಣಿಯ ಗೇಟಿನ ಎದುರು ಇಳಿಯವಾಗ ಸಂಜೆ ನಾಲ್ಕೂವರೆ.  ಸೆಕ್ಯೂರಿಟಿಗಾರ್ಡ್ ಬಳಿ ನಾನು ಬಂದ ಕಾರ್ಯವನ್ನು ವಿವರಿಸಿದೆ. ನಿಲಯ ನಿರ್ದೇಶಕರಾದ ಶ್ರೀ ಎಚ್ .ವಿ ರಾಮಚಂದ್ರರಾಯರು ತುರ್ತು ಕೆಲಸದ ನಿಮಿತ್ತ ಅಂದು ಸ್ವಲ್ಪ ಬೇಗನೇ ಕಚೇರಿಯಿಂದ ನಿರ್ಗಮಿಸಿದ ನಿಮಿತ್ತ ಆತ ನನ್ನನ್ನು ನೇರವಾಗಿ ನಿಲಯದ ಅಭಿಯಂತರರಾದ ಶ್ರೀ ಪಿ. ಕೆ. ಪೈ ಅವರ ಬಳಿಗೆ ಕರೆದೊಯ್ದರು. ಗೌರವರ್ಣದ, ನೀಳ ಹಾಗೂ ಕೃಶಕಾಯದ, ನೇರ ನಿಲುವಿನ ಅವರು ಮನೆಗೆ ಹೋಗುವ ಸಮಯ ಸಮೀಪಿಸುತ್ತಾ ಇದ್ದರೂ ನಗುನಗುತ್ತ ನನ್ನ ಆಕಾಶವಾಣಿಗೆ ಸೇರಿಕೊಳ್ಳುವ ಪ್ರಕ್ರಿಯೆಯನ್ನು ಸಾಂಗವಾಗಿ ನೆರವೇರಿಸಿಕೊಟ್ಟರು. ಎಲ್ಲವೂ ಎಷ್ಟು ಅನಿರೀಕ್ಷಿತವಾಗಿ ನಡೆದು ಹೋಯಿತೆಂದರೆ, ಆ ಕ್ಷಣದ ವಿಸ್ಮಯ, ಸಂತೋಷ, ವಿಭ್ರಮೆಗಳನ್ನು ಹೇಳಿಕೊಳ್ಳಲು ನನ್ನ ಬಳಿ ಶಬ್ದಗಳಿಲ್ಲ. ಎಷ್ಟೋ ಸಮಯದ ಹಂಬಲಿಕೆ ಕ್ಷಣಾರ್ಧದಲ್ಲಿ ಈಡೇರಿದ ನಿರಾಳತೆ ಒಮ್ಮೆಲೇ ಮೈಮನಗಳನ್ನು ಆವರಿಸಿತು. ಆಗಲೇ ಸಮಯ ಐದು ಗಂಟೆ ದಾಟಿತ್ತು. ಈ ಹಿಂದೆ ನಾನು  ಉಳಿದುಕೊಳ್ಳುತ್ತಿದ್ದ  ಹಾಸ್ಟೆಲ್ ಗೆ ಮರಳಿದೆ. ನನ್ನ ಬಟ್ಟೆಬರೆಗಳ ಚೀಲದ ಸಮೇತ ಅಪ್ಪಯ್ಯ ಅಲ್ಲಿ ನನಗಾಗಿ ಕಾಯುತ್ತಿದ್ದರು. ಮರುದಿನ ಬರುವಾಗ ಇಬ್ಬರು ಖ್ಯಾತನಾಮರಿಂದ ನನ್ನನ್ನವರು ತಿಳಿದಿರುವರೆಂಬ ಪ್ರಮಾಣ ಪತ್ರವನ್ನೂ ಸರ್ಕಾರಿ ಆಸ್ಪತ್ರೆಯಿಂದ ಮೆಡಿಕಲ್ ಸರ್ಟಿಫಿಕೇಟನ್ನೂ ತರಬೇಕೆಂದು ಆಕಾಶವಾಣಿಯಲ್ಲಿ ತಿಳಿಸಿದ ಕಾರಣ ನಾನು ಅಪ್ಪಯ್ಯನೊಡನೆ ಆ ಕೆಲಸಗಳಿಗಾಗಿ ಹೊರಗೆ ಅನ್ವೇಷಣೆಗೆ ತೊಡಗಿದೆ. ಅಂದಿನ ರಾತ್ರಿ ಅಪ್ಪಯ್ಯ ನೆಂಟರ ಮನೆಯಲ್ಲಿ ಉಳಿದು ಮರುದಿನ ಬೆಳಗ್ಗೆ ಮತ್ತೆ ನನ್ನನ್ನು ಅಪೇಕ್ಷಿತ ದಾಖಲೆಪತ್ರಗಳೊಡನೆ ಆಕಾಶವಾಣಿಗೆ ಕರೆದುಕೊಂಡು ಬಂದರು.

ತಂದ ದಾಖಲೆ ಪತ್ರಗಳನ್ನು ಕಚೇರಿಯಲ್ಲಿ ಒಪ್ಪಿಸಿದ ಅನಂತರ ನಿಲಯನಿರ್ದೇಶಕರಾದ ಶ್ರೀ ಎಚ್.ವಿ.ರಾಮಚಂದ್ರರಾಯರು ನಮ್ಮಿಬ್ಬರನ್ನು ತಮ್ಮ ಛೇಂಬರಿಗೆ ಕರೆಸಿಕೊಂಡು ಆತ್ಮೀಯವಾಗಿ ಸ್ವಾಗತದ ಮಾತುಗಳನ್ನು ಆಡಿದರು. ಸರಕಾರೀ ಆದೇಶದ ಪ್ರತಿಯಲ್ಲಿನ ಅರ್ಥವಾಗದ ಕೆಲವು ಪದಗಳ ಬಗ್ಗೆ ನನ್ನ ತಂದೆಯವರು ವ್ಯಕ್ತಪಡಿಸಿದ ಸಂದೇಹವನ್ನು ಅವರು ನನಗುತ್ತಾ ನಿವಾರಿಸಿದರು. “ಆಕಾಶವಾಣಿಯೆನ್ನುವುದು ಒಂದು ದೊಡ್ಡ ಕುಟುಂಬ ಇದ್ದಂತೆ ರಾಯರೇ, ಇಂದಿನಿಂದ ನಿಮ್ಮ ಮಗಳು ಈ ಕುಟುಂಬಕ್ಕೆ ಸೇರಿದವಳು. ನಿಮ್ಮಷ್ಟೇ ಪ್ರೀತಿಯಿಂದ ನಾವು ಅವಳನ್ನು ನೋಡಿಕೊಳ್ಳುತ್ತೇವೆ, ನಿಶ್ಚಿಂತೆಯಿಂದಿರಿ, ಎಲ್ಲವೂ ಒಳ್ಳೆಯದಾಗುತ್ತದೆ”ಎಂದು ಭರವಸೆ ನೀಡಿದರು. ಅವರು ನೀಡಿದ ಆ ಭರವಸೆಯ ಮಾತುಗಳಿಂದ ಅಪ್ಪಯ್ಯ ಸಂತೃಪ್ತರಾದರು. ನಿಲಯ ನಿರ್ದೇಶಕರು ನನ್ನಿಂದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಪ್ರಮಾಣ ವಚನವನ್ನು ಪಡೆದರು.

ಆ ಬಳಿಕ ಅವರು ಹೇಳಿದ ಕೆಲವು ಮಾತುಗಳು ಭರತವಾಕ್ಯದಂತೆ ಕಿವಿಯಲ್ಲಿ ಇನ್ನೂ ಮೊರೆಯುತ್ತಿವೆ.”ನೀನು ಮೈಕ್ರೋಫೋನ್ ಮೂಲಕ ಆಡುವ ಮಾತುಗಳನ್ನು ಲಕ್ಷಾಂತರ ಜನ ಕೇಳುತ್ತಾರೆ. ಆದುದರಿಂದ ತಪ್ಪಾಗದಂತೆ ಎಚ್ಚರಿಕೆ ವಹಿಸಿ ಮಾತನಾಡು. ಮಾಡಿದ ತಪ್ಪನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ತಪ್ಪಾದಲ್ಲಿ ಅದನ್ನು ಅಲ್ಲೇ ಸರಿಪಡಿಸಿಕೋ. ದಿನ ನಿತ್ಯ ರೇಡಿಯೋ ಕೇಳು. ಇತರ ಬಾನುಲಿಕೇಂದ್ರಗಳನ್ನೂ ಕೇಳುತ್ತಿರು. ನೀನು ಬೆಳೆಯಲು, ನಿನ್ನನ್ನು ತಿದ್ದಲು ಅದೇ ಸರಿಯಾದ ಮಾರ್ಗ. ಸಂದರ್ಶನದ ಸಮಯದಲ್ಲಿ ನಿನ್ನ ಧೈರ್ಯ, ಆತ್ಮವಿಶ್ವಾಸ ಹಾಗೂ ಪ್ರಾಮಾಣಿಕ ಅನಿಸಿಕೆಗಳನ್ನು ಮೆಚ್ಚಿ ನಿನ್ನನ್ನು ಆರಿಸಿದ್ದೇನೆ. ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕತೆಯಿಂದ ದುಡಿ, ನಿನಗೆ ಒಳ್ಳೆಯದಾಗಲಿ.”ಎಂಬುದಾಗಿ. ಬಹುಶ ಶ್ರೀ ಎಚ್.ವಿ.ರಾಮಚಂದ್ರರಾಯರು ಇಂದಿಗೂ, ಎಂದಿಗೂ ನನಗೆ ಪ್ರಾತ:ಸ್ಮರಣೀಯರು: ಅವರು ನನ್ನಲ್ಲಿಟ್ಟ ಭರವಸೆಯನ್ನು ಹುಸಿಯಾಗಿಸಬಾರದೆಂದು ನಾನು ಅಂದೇ ತೀರ್ಮಾನಿಸಿದೆ.

ಉದ್ಘೋಷಕರು ಮತ್ತು ಕರ್ತವ್ಯಾಧಿಕಾರಿಗಳೆಂಬವರು ಕರ್ತವ್ಯ ಕೊಠಡಿಯಲ್ಲಿರತಕ್ಕವರು. ಅವರ ಉಸ್ತುವಾರಿಯ ಹೊಣೆ ಕಾರ್ಯಕ್ರಮ ನಿರ್ವಾಹಕ ಸಮನ್ವಯಾಧಿಕಾರಿಯವರದು. ಆಗ ಶ್ರೀ ವಿ.ಬಸವರಾಜ್ ಎಂಬವರು ಈ ಹುದ್ದೆಯಲ್ಲಿದ್ದವರು. ನೀಳಕಾಯದ ಸೌಮ್ಯ ವ್ಯಕ್ತಿ. ಮಾತು ಬಹಳ ಕಮ್ಮಿ. ಅವರು ನನ್ನನ್ನು ಹಾಗೂ ಅಪ್ಪಯ್ಯನನ್ನು ಆಕಾಶವಾಣಿಯ ಪ್ರತಿಯೊಂದು ವಿಭಾಗಕ್ಕೂ ಕರೆದುಕೊಂಡು ಹೋಗಿ ಪರಿಚಯಿಸಿದರು. ಎಲ್ಲರೂ ಪ್ರೀತಿಯಿಂದ ನಗುನಗುತ್ತಾ ನನ್ನನ್ನು ಸ್ವಾಗತಿಸಿದರು. ನಾನು ಕರ್ತವ್ಯ ಕೊಠಡಿಗೆ ಬರುವಾಗಲೇ ದೂರದಿಂದಲೇ ಗಟ್ಟಿದನಿಯೊಂದು ಕೇಳಿಬರುತ್ತಿತ್ತು. ರೇಡಿಯೋದಲ್ಲಿ ಕೃಷಿರಂಗದಲ್ಲಿ ನಾನು ಈ ಮೊದಲು ಕೇಳಿದ್ದ ದನಿಯದು. ಆ ಸ್ವರದ ಭಾರ, ಅಬ್ಬರ ಕೇಳಿದರೆ ಯಾರೋ ಜೋರಿನ ವ್ಯಕ್ತಿ ಇರಬೇಕು ಅಂತ ಭಾವಿಸಿದೆ. ಅವರನ್ನು ಕೆ. ಆರ್. ರೈಗಳೆಂದು ಬಸವರಾಜ್ ಅವರು ಬಳಿಕ ಪರಿಚಯಿಸಿದರು. ಅಲ್ಲದೆ ಅಂದಿನ ಪ್ರಸಾರಕಾರ್ಯದಲ್ಲಿ ಅವರೊಡನೆ ನಾನು ಸೇರಿಕೊಳ್ಳಬೇಕೆಂದು ಸೂಚಿಸಿದರು. ಅಬ್ಬ,ಈ ಭಾರೀ ಧ್ವನಿಯ, ಜನಪ್ರಿಯ ವ್ಯಕ್ತಿಯೊಡನೆ ನಾನು, ಬಾನುಲಿ ಪ್ರಸಾರದ ಬಗ್ಗೆ ಏನೇನೂ ತಿಳಿಯದವಳು ಹೇಗೆ, ಏನು ಅಂತ ಹಿಂಜರಿಕೆಯಲ್ಲಿದ್ದ ನನ್ನನ್ನು ಆಗಲೇ ತುಳುವಿನಲ್ಲಿ “ಅಕ್ಕೆ,ಅಕ್ಕೆ….”(ಸಹೋದರಿ)ಎಂದು ಆತ್ಮೀಯ ಶೈಲಿಯಲ್ಲಿ ಅವರು ಮಾತನಾಡಿಸುವ ರೀತಿಗೇ ನನ್ನ ಭಯವೆಲ್ಲ ಮಾಯವಾಯಿತು. ನಾನು ಅವರೊಡನೆ ಪ್ರಸಾರ ಕೊಠಡಿಯನ್ನು ಸೇರಿಕೊಂಡೆ. ಅಪರಿಚಿತವಾದ, ಮುಟ್ಟಿದರೆ ಶಾಕ್ ಹೊಡೆಯುತ್ತದೋ ಎಂಬಂತೆ ತೋರುವ ವಿವಿಧ ಯಂತ್ರ, ಬೆಳಕಿನ ಸಿಗ್ನಲ್ ಗಳ ನಡುವೆ ರೈಗಳೊಡನೆ ನಾನು ಬೆಪ್ಪುತಕ್ಕಡಿಯಂತೆ ಕುಳಿತಂತೆ ಅಪ್ಪಯ್ಯ ತಾನು ಊರಿಗೆ ಹೊರಡುವುದಾಗಿ ಹೇಳಿ ನನ್ನನ್ನು ಬೀಳ್ಕೊಟ್ಟು ಮತ್ತಷ್ಟು ತಬ್ಬಿಬ್ಬು ಮಾಡಿದರು.

ಹೊಸದೊಂದು ಪ್ರಪಂಚ. ಸಂಪೂರ್ಣ ವಾತಾನುಕೂಲಿ ಕೋಣೆ. ನನಗೋ ಬೆವರು ಕಿತ್ತು ಬರುತ್ತಿತ್ತು. ದೊಡ್ಡ ದೊಡ್ಡ ಟೇಪಿನ ಸುರುಳಿಗಳು, ಹಾಡಿನ ಗರಗರ ತಿರುಗುವ  ತಟ್ಟೆಗಳು, ನನ್ನೊಡನೆ ಹರಟುತ್ತಿರುವಾಗಲೂ ಅದರ ಮೇಲೆ ಪಿಕಪ್ ಎಂಬ ಸಾಧನವನ್ನು ಲೀಲಾಜಾಲವಾಗಿ ಎತ್ತಿ ಆಯಕಟ್ಟಿನ ಜಾಗದಲ್ಲಿರಿಸುತ್ತಾ, ತಿರುಗಿಸುತ್ತಾ ಕೆಂಪು ದೀಪ ಉರಿದೊಡನೆ ಬಲ ಕಿವಿಗೆ ಬಲ ಕೈಯ್ಯನ್ನು ಅಡ್ಡ ಹಿಡಿದು, ಎಡಕೈಯಿಂದ ಯಾವುದೋ ಬಟನ್ ತೆರೆದು ಮಾತನಾಡುವ ಕೆ.ಆರ್.ರೈಗಳು, ಗಳಿಗೆಗಳಿಗೆಗೂ ಗೋಡೆ ಗಡಿಯಾರದತ್ತ ಕಣ್ಣು ಕೀಲಿಸಿ, ಓಡುವ ಸೆಕೆಂಡಿನ ಮುಳ್ಳಿನ ಗತಿಗೆ ಅನುಗುಣವಾಗಿ ಗಾಳಿಯಲ್ಲಿ ಕಾರ್ಯಕ್ರಮಗಳನ್ನು ತೇಲಿಬಿಡುವಾತನ ಎಚ್ಚರವನ್ನು ಕ್ಷಣ ಕ್ಷಣಕ್ಕೂ ಅಪೇಕ್ಷಿಸುವ ಈ ಹೊಸಪರಿಗೆ ನಾನು ಹೆದರಿ ಕಂಗಾಲಾಗಿ ಹೋದೆ. ಅಪ್ಪಯ್ಯ ಬಸ್ ಹತ್ತಿ ಹೋಗಿರಬಹುದು. ನಾನೂ ಅವರ ಹಿಂದೆಯೇ ಹೊರಟು ಹೋಗಲೇ?

“ಅಕ್ಕೆ,ಬಲ್ಲೆ…ಇಂಚಿ ತೂಲೆ…”(ಅಕ್ಕ,ಇಲ್ಲಿ ನೋಡು) ರೈಗಳ ಆತ್ಮೀಯ ಕರೆ. “ಈ  ಕೆಲಸ ನನ್ನಿಂದ ಆಗಲಿಕ್ಕಿಲ್ಲ. ಉದ್ಘೋಷಕರ ಕೆಲಸ ಅಂದರೆ ಹೀಗೆಂದು ಗೊತ್ತಿರಲಿಲ್ಲ…”ನನ್ನ ಹಿಂಜರಿಕೆಯ ಮಾತಿಗೆ ಸೂರು ಕಿತ್ತು ಹೋಗುವಂತೆ ರೈಗಳ ಅಬ್ಬರದ ನಗು. “ಅಕ್ಕೆ, ಉಂದು ದಾಲಾ ಬ್ರಹ್ಮವಿದ್ಯೆ ಅತ್ತ್, ಏರೆಗಾಂಡಲಾ ಮಲ್ಪೊಲಿ. ಯಾನ್ಲಾ ಈರೆನ ಲೆಕ್ಕನೇ ಹಳ್ಳಿಡ್ದ ಬತ್ತಿನಾಯೆ, ದಾಲಾ ಪೊಡೋಡ್ಚಿ”(ಅಕ್ಕ,ಇದೇನೂ ಬ್ರಹ್ಮವಿದ್ಯೆ ಅಲ್ಲ,ಯಾರಾದರೂ ಮಾಡಬಹುದು.ನಾನೂ ಕೂಡಾ ನಿಮ್ಮಂತೆಯೆ ಹಳ್ಳಿಯಿಂದ ಬಂದವನು,ಏನೂ ಹೆದರಬೇಡಿ)ಅಂತ ಭಯವನ್ನು ಕಳೆದು ಅಭಯವನ್ನು ನೀಡಿದವರು ಕೆ. ಆರ್. ರೈಗಳು. ಅವರ ಧ್ವನಿ ಮಾತ್ರ ಅಬ್ಬರದ್ದು, ಹೃದಯ ನನಗಿಂತಲೂ ಪುಕ್ಕಲು ಅಂತ ಮುಂದೆ ಹಲವಾರು ಸಂದರ್ಭಗಳಲ್ಲಿ ಹಾಗೂ ಅವರ ಜೊತೆಗಿನ ಮುಂದಿನ ಇಪ್ಪತ್ತೇಳು ವರ್ಷಗಳ ವೃತ್ತಿಸಹಜೀವನದಲ್ಲಿ ನಾನು ಕಂಡುಕೊಂಡೆ. ಭಯ ಹುಟ್ಟಿಸುವ ಯಂತ್ರಗಳ ಬಗ್ಗೆ ಆತ್ಮೀಯತೆಯನ್ನು ಹುಟ್ಟಿಸಿದವರು ಅವರು “ಅಕ್ಕೆ, ಈ ಕುಟ್ಟಿ ಉಂಡತ್ತ, ಉಂದೆನ್ ಅಂಚಿಗ್ ಪಾಂಡ ಎಲ್ ಪಿ, ಇಂಚಿಗ್ ಪಾಂಡ ಈಪಿ, ಈ ಟರ್ನ್ ಟೇಬಲ್ದ ಲಾಡಿ ಲಕ್ಕದ್ ಬರ್ಪುಂಡು, ವೊಂತೆ ಜಾಗೃತೆ ಮಲ್ತೊನ್ಲೆ”(ಈ ಕೀ ಉಂಟಲ್ಲ,ಇದನ್ನು ಆ ಕಡೆ ಹಾಕಿದರೆ ಎಲ್ ಪಿ,ಈ ಕಡೆ ಹಾಕಿದರೆ ಈಪಿ.ಈ ಟರ್ನ್ ಟೇಬಲಿನ ಬೆಲ್ಟ್ ಕಿತ್ತು ಹೋಗಬಹುದು,ಜಾಗೃತೆ ಮಾಡಿಕೊಳ್ಳಿ)ಅಂತ ಹಾಸ್ಯಲೇಪನದೊಡನೆ ಪ್ರತಿಯೊಂದು ಯಂತ್ರವನ್ನೂ ಪರಿಚಯಿಸುತ್ತಾ, ಪ್ರಸಾರಕ್ಕೆ ನನ್ನನ್ನು ಸಜ್ಜುಗೊಳಿಸಿದವರು ಅವರು. ಅತ್ಯಂತ ಹೆದರಿಕೆಯಿಂದ, ನಡುಗುವ ಸ್ವರದಿಂದ ಅಂದು ಮಧ್ಯಾನ್ಹ ಒಂದೂವರೆ ಗಂಟೆಗೆ ನನ್ನಿಂದ ಒಂದು ಉದ್ಘೋಷಣೆಯನ್ನು ಅವರು ಗಾಳಿಯಲ್ಲಿ ತೇಲಿಸಿಯೇ ಬಿಟ್ಟರು. ಯಂತ್ರಗಳ ಬಗ್ಗೆ, ಕೆಂಪುದೀಪದ ಬಗ್ಗೆ, ಕನ್ಸೋಲ್ ನಲ್ಲಿರುವ ಅಸಂಖ್ಯ ಫೇಡರ್ ಗಳ ಬಗ್ಗೆ ಹೆದರಿಕೆ ನೀಗದೆ ಧ್ವನಿಯಲ್ಲಿ ಆತ್ಮೀಯ ಸ್ಪರ್ಶ ಸಾಧ್ಯವಿಲ್ಲ ಎನ್ನುವುದು ನನಗೆ ಅರಿವಾಯಿತು.

► ಮುಂದಿನ ವಾರಕ್ಕೆ

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.