ಮದುವೆ, ಮಗು – ಈ ಎರಡೂ ಹೊಸ ಸಂಗತಿಗಳಿಗೆ ನಾನು ಒಗ್ಗಿಕೊಳ್ಳುತ್ತಿದ್ದಂತೆಯೆ ನನ್ನನ್ನು ಆರಂಭದಿಂದ ಬಲ್ಲವರು, ನನ್ನನ್ನು ತಿದ್ದಿ ತೀಡಿದವರು, ತಪ್ಪುಗಳನ್ನು ಮನ್ನಿಸಿ ಒಪ್ಪಿನ ದಾರಿ ತೋರಿದವರು ಒಬ್ಬೊಬ್ಬರೇ ನಿವೃತ್ತಿ, ವರ್ಗಾವಣೆಗಳ ಮೂಲಕ ಹೊರಹೋಗತೊಡಗಿದರು. ಹೊಸಬರ ಪ್ರವೇಶವೂ ಭರದಿಂದ ಆರಂಭವಾಯಿತು. ಕೆಲವು ಹಿರಿಯರು ವರ್ಗಾವಣೆಗಳ ಮೂಲಕ, ಇನ್ನು ಕೆಲವು ಕಿರಿಯರು ಹೊಸ ನೇಮಕಾತಿಯ ಮೂಲಕ ಹಿಂಡು ಹಿಂಡಾಗಿ ಆಕಾಶವಾಣಿಯನ್ನು ಪ್ರವೇಶಿಸಿದರು. ದೊಡ್ಡ ದೊಡ್ಡ ವಟವೃಕ್ಷಗಳ ನೆರಳಿನಲ್ಲಿ ಕಿರು ಸಸಿಯಂತಿದ್ದ ನನ್ನ ಮೇಲೆ ಇದ್ದಕ್ಕಿದ್ದಂತೆಯೇ ಬೀಳತೊಡಗಿದ ಬಿರುಬಿಸಿಲು ಹಾಗೂ ಮಳೆಗಾಳಿಯಿಂದ ನಾನು ತತ್ತರಿಸತೊಡಗಿದರೂ ಬಂದ ಕಿರಿಯರು ನನ್ನನ್ನು ಹಿರಿಯಳೆಂದು ಭಾವಿಸತೊಡಗಿದ ಕಾರಣ ನಾನೂ ಹಿರಿಯ ತಲೆಮಾರಿಗೆ ಸಲ್ಲತೊಡಗುತ್ತಾ ಬೆಳೆಯತೊಡಗಿದೆ. ಕಿರಿಯರು ನನ್ನ ಮಾರ್ಗದರ್ಶನ ಕೇಳತೊಡಗಿದರೆ, ಹೊಸದಾಗಿ ಬಂದ ಹಿರಿಯರು ಈ ನಿಲಯದಲ್ಲಿ ನಡೆದುಬರುತ್ತಿರುವ ಕ್ರಮಾನುಕ್ರಮಗಳ ಬಗ್ಗೆ ನನ್ನ ಅನುಭವದ ಮಾಹಿತಿಯನ್ನು ಪಡೆದುಕೊಳ್ಳುತ್ತಾ ನನ್ನ ಮೇಲೆ ಜವಾಬ್ದಾರಿ, ಹಿರಿತನಗಳ ಹೊಣೆಯನ್ನು ಕೊಂಚ ಕೊಂಚವೇ ಹೇರುತ್ತಾ ಬಂದು ಯಾವಾಗ ನಾನೂ ತಿಳಿದವಳು, ಹಿರಿಯಳು ಎಂಬಲ್ಲಿಗೆ ನಾನು ಹೊರಳಿಕೊಂಡೆ ಅನ್ನುವುದೇ ತಿಳಿಯದಾಯಿತು.
ಅದುವರೆಗೆ ಹಿರಿಯರ ಕಾರ್ಯವೈಖರಿಯನ್ನು ಅತಿಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಕಾರಣ ನಿಲಯವು ಹಲವಾರು ವಿಶಿಷ್ಟ ಸಂದರ್ಭಗಳಲ್ಲಿ ಪಾಲಿಸಿಕೊಂಡು ಬರುತ್ತಿದ್ದ ನೀತಿನಿಯಮಗಳ, ನಡಾವಳಿಗಳ ಕುರಿತು ದಿನನಿತ್ಯ ಕಾರ್ಯಕ್ರಮ ಮೀಟಿಂಗ್ ನಲ್ಲಿ ನೆನಪಿಟ್ಟುಕೊಂಡು ಎಚ್ಚರಿಸುವ ಕೆಲಸವನ್ನು ನಾನು ಮುತುವರ್ಜಿಯಿಂದ ಮಾಡುತ್ತಿದ್ದುದರಿಂದಲೋ ಏನೋ ಇದು ನನಗೊಂದು “ಅನುಭವಿ” ಎಂಬ ಅನಿವಾರ್ಯ ಪರಿವೇಷವನ್ನು ಕಟ್ಟಿತು. ಉದಾಹರಣೆಗೆ, ಸ್ವಾತಂತ್ರ್ಯದಿನಾಚರಣೆಯಂದು ಹಾಗೂ ಅದರ ಮುನ್ನಾ ದಿನದಂದು, ಗಣರಾಜ್ಯೋತ್ಸವ ಹಾಗೂ ಅದರ ಮುನ್ನಾ ದಿನದಂದು ನಿಲಯ ಪ್ರಸಾರಿಸುವ ಕಾರ್ಯಕ್ರಮಗಳ ರೀತಿ, ದೀಪಾವಳಿಯ ಸಂದರ್ಭದಲ್ಲಿ ಮುಂಜಾನೆ ಎಂದಿಗಿಂತಲೂ ಒಂದು ಗಂಟೆ ಮುಂಚಿತವಾಗಿ ಪ್ರಸಾರಿಸುವ ನಾಗಸ್ವರ ವಾದನ, ಜನವರಿ ಮೂವತ್ತರಂದು ಗಾಂಧೀಜಿ ಹುತಾತ್ಮರಾದ ದಿನ ಬೆಳಗ್ಗೆ ಮಂಗಳಧ್ವನಿಯನ್ನು ನುಡಿಸದಿರುವುದು, ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿಯ ರೀತಿರಿವಾಜುಗಳು, ರಾಷ್ಟ್ರೀಯ ಹಬ್ಬಗಳಂದು ಮುಂಜಾನೆ ಆ ಹಬ್ಬಗಳ ಶುಭಾಶಯವನ್ನು ಹೇಳುವುದು, ಗಣರಾಜ್ಯೋತ್ಸವದ ಮುನ್ನಾ ದಿನ ಸರ್ವಭಾಷಾಸಮ್ಮೇಳನದ ಪ್ರಯುಕ್ತ ರಾತ್ರಿ ದೆಹಲಿ ಕೇಂದ್ರದಿಂದ ಮೂಡಿಬರುವ ಸಂಸ್ಕೃತ ಭಾಷಾ ಕವಿತೆ, ಅದರ ಬೆನ್ನಿಗೇ ಬರುವ ಕೈ ಚಪ್ಪಾಳೆಯ ಸದ್ದು ಮುಗಿಯುತ್ತಿದ್ದಂತೆಯೆ ಚಾಕಚಕ್ಯತೆಯಿಂದ ನಮ್ಮ ನಿಲಯದಿಂದ ಆರಂಭಿಸಬೇಕಾದ ಕನ್ನಡಾನುವಾದದ ಇತರ ಭಾಷಾ ಕವಿತೆಗಳನ್ನು ಪ್ರಸಾರಿಸುವಲ್ಲಿ ತೋರುವ ಜಾಣ್ಮೆ, ಆಕಾಶವಾಣಿ ಸಂಗೀತಸಮ್ಮೇಳನದಂಥ ಪ್ರತಿಷ್ಠಿತ ಕಾರ್ಯಕ್ರಮಗಳ ಉದ್ಘೋಷಣೆಯಲ್ಲಿ ಪಾಲಿಸುವ ನಿಯಮಗಳು – ಹೀಗೆ ಹಲವಾರು ವಿಚಾರಗಳನ್ನು ನಿಖರವಾಗಿ ನೆನಪಿಟ್ಟು ಹಿರಿಯ ಅಧಿಕಾರಿಗಳಿಗೆ ಅದನ್ನು ಆಯಾ ಸಂದರ್ಭಗಳಲ್ಲಿ ಹೇಳುವ ಕೆಲಸ ಮಾಡುತ್ತಿದ್ದುದರಿಂದ ಈ “ಹಿರಿತನ”ದ ಪಟ್ಟ ಲಭಿಸಿತೋ ಏನೋ. ನನಗಿಂತ ಹಿರಿಯ ಉದ್ಘೋಷಕರು ಕೆಲವೊಮ್ಮೆ ನಮಗ್ಯಾಕೆ ಆ ಉಸಾಬರಿ ಎಂದು ತಣ್ಣಗಿರುತ್ತಿದ್ದುದೇ ಸರಿಯೇ, ನನ್ನದು ಸರಿಯೇ ಎಂಬ ತಪ್ಪುಒಪ್ಪುಗಳ ವಿಮರ್ಶೆಗೆ ನಾನೀಗ ತೊಡಗುವುದಿಲ್ಲ. ಆದರೆ ತಪ್ಪು ಘಟಿಸುವ ಮೊದಲೇ ಎಚ್ಚೆತ್ತುಕೊಳ್ಳುವುದೇ ಒಳ್ಳೆಯದು ಎಂದೆನಿಸುತ್ತಿದ್ದ ಕಾರಣ ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದೆ. ಆದರೆ ಸರಕಾರೀ ವ್ಯವಸ್ಥೆಯಲ್ಲಿ ಈ ರೀತಿಯ ಕೆಲಸಗಳಿಗೆ ಯಾವುದೇ ಪುರಸ್ಕಾರ, ಗುರುತಿಸುವಿಕೆ ಇಲ್ಲ ಅನ್ನುವುದು ಕ್ರಮೇಣ ಅರಿವಾಗುತ್ತಾ ಬಂದರೂ, ನನ್ನ ನಿವೃತ್ತಿಯ ದಿನದ ವರೆಗೂ ಈ ಎಚ್ಚರಿಕೆಯ ಗಂಟೆಯನ್ನು ನಾನು ಬಾರಿಸುತ್ತಲೇ ಬಂದೆ. ಕೆಲವರು ಕೇಳಿಸಿಕೊಂಡು ಅನುಷ್ಠಾನಕ್ಕೆ ತರುತ್ತಿದ್ದರು, ಕೆಲವರು ಜಾಣ ಕಿವುಡುತನ ತೋರಿ ಜಾರಿಕೊಳ್ಳುತ್ತಿದ್ದರು.
ಕರ್ತವ್ಯ ಕೊಠಡಿಗೆ ಹೊಸ ನೇಮಕಾತಿಯ ಮೂಲಕ ಬಹಳಷ್ಟು ಜನ ಎಳೆಯರು ಲಗ್ಗೆಯಿಟ್ಟರು. ಅಂತೆಯೇ ಕಾರ್ಯಕ್ರಮ ನಿರ್ವಾಹಕ ಸ್ಥಾನಕ್ಕೂ ನೇರವಾಗಿ ಯು.ಪಿ.ಎಸ್.ಸಿ ಯಿಂದ ಆಯ್ಕೆಯಾದವರು ಬಂದರು. ಸಂಗೀತ ವಿಭಾಗಕ್ಕೂ ಹೊಸ ಮುಖಗಳ ಪ್ರವೇಶವಾಯಿತು. ನೇರವಾಗಿ ಬಂದವರಲ್ಲಿ ಆಕಾಶವಾಣಿಯ ಬಗ್ಗೆ ತಳಮಟ್ಟದ ಅರಿವು ಕಡಿಮೆಯಾದರೂ ಹೊಸ ಸಂವೇದನೆ, ಹೊಸ ಹುರುಪು, ಅವರಿಗಿದ್ದ ನಮಗಿಂತ ಅವರದು ಉನ್ನತ ಗ್ರೇಡ್ ಎಂಬ ಅರಿವು – ಇವೆಲ್ಲವುಗಳಿಂದ ನನಗೆ ಈ ಹೊಸಬರೊಡನೆ ವ್ಯವಹರಿಸುವಾಗ ಕೆಲವೊಮ್ಮೆ ತಬ್ಬಿಬ್ಬಾಗುತ್ತಿತ್ತು. ಅಲ್ಲದೆ ಬಂದ ಹೊಸಬರಲ್ಲಿ ಕೆಲವರು ಕೆಲಸ ಕಲಿಯುವುದಕ್ಕೂ ಮುನ್ನ ಕಾನೂನು ಕಲಿತರು, ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ದಿಟ್ಟತನ ತೋರಿದರು. ಸಮಯ, ಶಿಸ್ತುಪಾಲನೆಯ ಬಗ್ಗೆ ಅಸಡ್ಡೆ ತೋರುತ್ತಾ ಮೊದಲ ಬಾರಿಗೆ ನನ್ನ ಅದುವರೆಗಿನ ಸೇವಾವಧಿಯಲ್ಲೇ ನಾನು ತೋರದ ಹಲವಾರು ಸೀಮೋಲ್ಲಂಘನ ಕೆಲಸಗಳನ್ನು ಅವರು ಮಾಡುವ ಧೈರ್ಯ ತೋರುತ್ತಾ, ಆಗಲೂ ನನ್ನಲ್ಲಿ ನಾನು ಹೋಗುತ್ತಿರುವ ಮಾರ್ಗ ಸರಿಯಾದುದೇ ಅಥವಾ ನಾನೂ ಯಾಕೆ ಅವರಂತಿರದೇ ಕಷ್ಟ ಸಹಿಸಿಕೊಳ್ಳಬೇಕು ಎಂಬ ಪ್ರಶ್ನೆಗಳನ್ನೂ ದ್ವಂದ್ವಗಳನ್ನೂ ಮೂಡಿಸತೊಡಗಿತು. ಮಗ ತೀರಾ ಚಿಕ್ಕವನಿರುವಾಗಲೂ ರಿಲೀವರ್ ಬಾರದೇ ಹೋಗಬಾರದು ಎಂಬ ನಿಯಮಕ್ಕಂಟಿಕೊಂಡಿದ್ದ ನಾನು ಕೆಲವರು ಬೇಕಾಬಿಟ್ಟಿ ಬಂದು ಹೋಗುವ ರೀತಿಯನ್ನು ನೋಡಿ ಎಷ್ಟೋ ಬಾರಿ ಅಂಥ ಆಮಿಷಕ್ಕೆ ಒಳಗಾಗಿದ್ದುದು ಇದೆ. ಆದರೆ ನನ್ನ ನಿವೃತ್ತಿಯ ಕೊನೆಯ ಕೆಲವು ವರ್ಷಗಳಲ್ಲಿ ಎಲ್ಲರಲ್ಲೂ ಮೊಬೈಲ್ ಇದ್ದುದರಿಂದ ಹಾಗೂ ನನ್ನ ರಿಲೀವರ್ ಗಳು ಕ್ಯಾಶ್ಯೂವಲ್ ಉದ್ಘೋಷಕರೇ ಆಗಿದ್ದುದರಿಂದ ಅವರು ಬರುವುದನ್ನು ಖಾತ್ರಿಮಾಡಿಕೊಂಡು ನನ್ನ ಪ್ರಸಾರ ಮುಗಿಸಿ ರಿಲೀವರ್ ಬರುವ ಮೊದಲೇ ಹೊರಟದ್ದು ಇದೆ. ಈ ರೀತಿಯ ನನ್ನ ಸ್ಥಿತ್ಯಂತರಕ್ಕೆ ಬಲವಾದ ಕಾರಣಗಳಿದ್ದು ಅದನ್ನು ನಾನು ಮುಂದಿನ ಬೇರೊಂದು ಕಂತಿನಲ್ಲಿ ಬರೆಯುವೆ.
ಹೊಸದಾಗಿ ಬಂದವರೆಲ್ಲರೂ ಪ್ರತಿಭಾನ್ವಿತರೇ ಆಗಿದ್ದು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡತೊಡಗಿದರು. ಆದರೆ ಎಲ್ಲೋ ಏನೋ ಹಳೆಯ ಬಿಗುತನ ಸಡಿಲವಾಗತೊಡಗಿತು. “ಪ್ರಸಾರಭಾರತಿ” ಎಂಬ ಹೊಸ ನಾಮಕರಣದೊಡನೆ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ “ಆ ಶಬ್ದ ಕೂಡದು, ಈ ಶಬ್ದ ಬೇಡ, ಇದು ಹೀಗಿರಬೇಕು, ಅದು ಹಾಗಿರಬಾರದು” ಎಂಬ ಜಿಗುಟುತನ ಹೊರಟು ಹೋಯಿತು. ಸಾಲದ್ದಕ್ಕೆ ಪ್ರಾಯೋಜಿತ ಕಾರ್ಯಕ್ರಮಗಳ ಪ್ರವೇಶದಿಂದ ಕಮರ್ಶಿಯಲ್ ಪದಗಳೆಂದರೆ ಮಾರು ದೂರ ಓಡಿ ಮೈಮೇಲೆ ಕಪ್ಪೆ ಎಸೆದವರಂತೆ ಹೌಹಾರುತ್ತಿದ್ದ ನಾವು ಈಗ ದಿನ ಬೆಳಗಾದರೆ ಕಮರ್ಶಿಯಲ್ ಪದಗಳ ಸಹಸ್ರ ನಾಮಾರ್ಚನೆ ಆರಂಭಿಸುತ್ತಿದ್ದೆವು. ಕಣ್ಣಲ್ಲಿ ಎಣ್ಣೆ ಹಾಕಿ ಸ್ಕ್ರಿಪ್ಟ್ ಪರಿಶೀಲನೆ, ಎಡಿಟಿಂಗ್ ಗಳ ಬದಲು ಕೆಲವೊಮ್ಮೆ ಸಡಿಲ ನೀತಿ ಪ್ರಕಟವಾಗಿ, ಕಟ್ಟುನಿಟ್ಟಿನ ಎಡಿಟಿಂಗ್ ಜಾಗದಲ್ಲಿ ನಡುನಡುವ ಉಚಿತ ತೊದಲು, ಕೆಮ್ಮು, ಪುನರಾವೃತ್ತಿಗಳು ಕೇಳತೊಡಗಿದುವು. ಅವುಗಳನ್ನು ಕಿವಿಗೆ ಎಣ್ಣೆ ಬಿಟ್ಟುಕೊಂಡು ಕೇಳಿಸಿಕೊಂಡು ವರದಿ ಮಾಡುತ್ತಿದ್ದ ವರದಿಗಾರರೂ ಬಿಗಿಯನ್ನು ತಮ್ಮಷ್ಟಕ್ಕೇ ಸಡಿಲಿಸಿಕೊಂಡು ಒಟ್ಟಿನಲ್ಲಿ ನಮ್ಮಂಥ ಸ್ವಲ್ಪ ಹಳೆಯ ತಲೆಮಾರಿನವರಿಗೆ ಇರಿಸುಮುರಿಸು ಉಂಟಾಗುವಂತೆ, ಜೊತೆಗೆ ಹೊಸ ಕ್ಯಾಶ್ಯುವಲ್ ಉದ್ಘೋಷಕರೂ ಕೆಲವು ತಪ್ಪುಗಳನ್ನು ಮಾಡುತ್ತಾ ಅದು ತಪ್ಪೇ, ಒಪ್ಪೇ ಅನ್ನುವುದು ಹೊಸ ವರದಿಗಾರರಿಗೂ ಗೊತ್ತಿರದೇ, ಹೀಗೆ ಆಕಾಶವಾಣಿಯು ತನ್ನ ಹಿಂದಿನ ಬಿಗಿ, ಜಿಗುಟುತನದ ಜಾಗದಲ್ಲಿ, ಹೊಸ ಗಾಳಿ, ಹೊಸ ಮಾದರಿಗಳೊಡನೆ ಹಳೆಹೊಳಪು ಮಾಸುತ್ತಾ, ಹೊಸತನದ ಖದರಿನಲ್ಲಿ ಪ್ರಕಟಗೊಳ್ಳತೊಡಗಿತು.
ವಾಣಿಜ್ಯೀಕರಣದ ನಾಗಾಲೋಟಕ್ಕೆ ಸಿಲುಕಿದ ಆಕಾಶವಾಣಿಯ ಕಾರ್ಯಕ್ರಮಗಳು ಪ್ರತಿಯೊಂದಕ್ಕೂ ಪ್ರಾಯೋಜಕತ್ವದ ಬಾಲಂಗೋಚಿ ಅಂಟಿಸಿಕೊಂಡು ಕಾರ್ಯಕ್ರಮದ ಆರಂಭದಲ್ಲಿ, ನಡುವಿನಲ್ಲಿ, ಕೊನೆಯಲ್ಲಿ ಪ್ರಾಯೋಜಕರ ಪ್ರಾಡಕ್ಟ್ ನ ಬಗ್ಗೆ ಹೇಳುತ್ತಾ ನಿಜ ಕಾರ್ಯಕ್ರಮದ ಪರಿಣಾಮ ತೀವ್ರತೆ ಕುಗ್ಗತೊಡಗಿತು. ಚಿತ್ರಗೀತೆಗಳ ಕಾರ್ಯಕ್ರಮದಲ್ಲಾದರೆ ಒಂದು ರೇಟ್, ವಾರ್ತೆಗೆ ಮೊದಲಾದರೆ ಮಗದೊಂದು ರೇಟ್, ವಾರ್ತೆಯ ಅನಂತರವಾದರೆ ಇನ್ನೊಂದು ರೇಟ್ – ಎಂದು ಮಾರುಕಟ್ಟೆ ದರಗಳೊಡನೆ ಬಂದ ಕಮರ್ಷಿಯಲ್ ಸ್ಪೋಟ್ ಗಳು ಅವನ್ನು ನಾಲ್ಕು ಬಾರಿ, ಆರು ಬಾರಿ, ಎಂಟು ಬಾರಿ ಪ್ರಸಾರಿಸಿ ಎಂಬಂಥ ಕಮರ್ಷಿಯಲ್ ವಿಭಾಗದವರ ಅಪ್ಪಣೆಯಂತೆ ಚಾಚೂ ತಪ್ಪದೆ ಲೆಕ್ಕ ಹಿಡಿದು ಪ್ರಸಾರಿಸುವತ್ತಲೇ ಚಿತ್ತ ನೆಟ್ಟು, ನಾವು ಉದ್ಘೋಷಕರು ತಲೆಚಿಟ್ಟು ಹಿಡಿದು ಎಡಬಿಡಂಗಿಗಳಂತಾಗುತಿದ್ದೆವು. ಕೆಲವೊಮ್ಮೆ ಮಾಲೆ ಪಟಾಕಿಯಂತೆ ಒಮ್ಮೆಲೇ ಐದಾರು ಸ್ಪೋಟ್ ಗಳನ್ನು ಸ್ಪೋಟಿಸಿಬಿಡುವ ಅನಿವಾರ್ಯತೆ ಎದುರಾಗುತ್ತಿತ್ತು. ಇನ್ನು ಕೆಲವು 15 ಸೆಕೆಂಡಿನವು 25,30,60 ಸೆಕೆಂಡಿನವು ಎಂದು ಅವುಗಳನ್ನು ಜಾಹೀರಾತುಗಳ ಗೊಂಡಾರಣ್ಯದಲ್ಲಿ ಹುಡುಕುವುದು, ಕೆಲವು ಸ್ಕೀಮುಗಳ ಅವಧಿಯ ದಿನ ತಪ್ಪಿ ಹೋಗದಂತೆ ಇಂದು, ನಾಳೆ – ಇತ್ಯಾದಿಗಳನ್ನು ಸರಿಯಾಗಿ ಪರಿಶೀಲಿಸಿ ಹಾಕಬೇಕಾದವುಗಳು. ಮುಖ್ಯ ಕಾರ್ಯಕ್ರಮವನ್ನು ಅರ್ಧಕ್ಕೇ ಎಳೆದು ಪ್ರಾಯೋಜಕರ ಹೆಸರು, ಪ್ರಾಡಕ್ಟ್ ಗಳ ಗುಣವಿಶೇಷ ಸಾರುವ ಜಾಹೀರಾತುಗಳನ್ನು ಪ್ರಸಾರಿಸಬೇಕಾದ ಅನಿವಾರ್ಯತೆ. ಜಾಹೀರಾತಿನ ಕಬಂಧ ಬಾಹುಗಳಲ್ಲಿ ಸಿಲುಕಿದ ಕಾರ್ಯಕ್ರಮಗಳು ಕೆಲವೊಮ್ಮೆ ಜಾಹೀರಾತಿಗಾಗಿ ಕಾರ್ಯಕ್ರಮ ಎಂಬಂತಾಗುತ್ತಿದ್ದುವು. ಹತ್ತು ನಿಮಿಷಗಳ ಅವಧಿಯ ಸ್ವರಮಾಧುರ್ಯ, ಗೀತಲಹರಿ, ರಾಗರಂಜನಿ ಮುಂತಾದವುಗಳಲ್ಲಿ ಎರಡು – ಮೂರು ನಿಮಿಷಗಳನ್ನು ಜಾಹೀರಾತುಗಳೇ ಕಬಳಿಸಿ, ಹಾಡಿನ ತುದಿ ಮತ್ತು ಬುಡ ಎರಡೂ ಕತ್ತರಿಸಲ್ಪಟ್ಟು ಅಂಗವಿಕಲ ಹಾಡುಗಳಷ್ಟನ್ನೇ ನಾವು ಪ್ರಸಾರಿಸಿ ಕೇಳುಗರ ಅತೃಪ್ತಿಗೆ ಪಾತ್ರರಾಗುತ್ತಿದ್ದೆವು. ಈ ಪ್ರಾಯೋಜಕತ್ವದ ಕಾರ್ಯಕ್ರಮಗಳು ಮೊದಮೊದಲು ಅಲ್ಲೋ ಇಲ್ಲೋ ಎಂಬಂತಿದ್ದುದು ಕ್ರಮೇಣ ಪ್ರಾಯೋಜಕತ್ವವಿಲ್ಲದ ಕಾರ್ಯಕ್ರಮಗಳೇ ವಿರಳವಾದುವು. ಆರಾಮವಾಗಿ ಸ್ಟುಡಿಯೋದೊಳಗೆ ನಿಗದಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ನಮ್ಮ ಪಾಡಿಗೆ ನಾವು ಎಂಬಂತಿದ್ದವರು ಗಳಿಗೆಗಳಿಗೆಗೂ ಜಾಗೃತ ಸ್ಥಿತಿಯನ್ನು ಮೈಮೇಲೆ ಆವಾಹಿಸಿಕೊಳ್ಳುತ್ತಾ ಯುದ್ಧರಂಗದಲ್ಲಿ ಕಾದಾಡುವ ಸಿಪಾಯಿಗಳಂತೆ ಜಾಹೀರಾತುಗಳ ಬಾಣಗಳನ್ನು ಪುಂಖಾನುಪುಂಖವಾಗಿ ಕೇಳುಗರ ಮೇಲೆ ಪ್ರಯೋಗಿಸುವ ಸ್ಥಿತಿ ಪ್ರಾಪ್ತವಾಯಿತು.
ಇಂತಿಷ್ಟೇ ಪದಗಳನ್ನು ತೂಕಮಾಡಿ ಮಾತನಾಡುತ್ತಿದ್ದ, ಪ್ರತಿಯೊಂದಕ್ಕೂ ಸ್ಕ್ರಿಪ್ಟ್ ನ್ನು ಮುಂಚಿತವಾಗಿ ತೋರಿಸಿ ಸಹಿ ಪಡೆದೇ ಮಾತನಾಡಿ ರೂಢಿಯಾಗಿದ್ದ ನಾನು ಈ ಸಂಕ್ರಮಣದ ಹೊರಳಾಟದಲ್ಲಿ ಅನಿವಾರ್ಯವಾಗಿ ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಹೋದರೂ ನನ್ನೊಳಗೆ ಕೊನೆಯವರೆಗೂ ಬದಲಾವಣೆಯನ್ನು ಹಾರ್ದಿಕವಾಗಿ ಒಪ್ಪಿಕೊಳ್ಳದ ಮಡಿವಂತಿಕೆಯೊಂದಿತ್ತು ಅನ್ನುವುದು ಸತ್ಯ. ಈಗಲೂ ಹಿರಿಯರು ಕಲಿಸಿದ ಆ ಕಟ್ಟುನಿಟ್ಟಿನ, ಶಿಸ್ತಿನ ಪ್ರಸಾರ ವ್ಯವಸ್ಥೆ ಕನಸಿನಲ್ಲಿ ಪ್ರಕಟವಾಗಿ ಬೆನ್ನು ಹುರಿಯನ್ನು ನೆಟ್ಟಗಾಗಿಸುತ್ತದೆ, ಗಡಿಯಾರದ ಸೆಕೆಂಡಿನ ಮುಳ್ಳುಗಳು ಚುಚ್ಚಲು ಬಂದಂತೆ ಹೆದರಿಸುತ್ತವೆ.
ಮುಂದಿನ ವಾರಕ್ಕೆ ►




