spot_imgspot_img
spot_img

ಬೇಕೆಂದಾಗ ಸಿಗದ ತರಬೇತಿಯ ನುಣುಪು

BanuliPayana 3ಈಗ ಆಕಾಶವಾಣಿಯಲ್ಲಿ ಉದ್ಘೋಷಕರ ಕೆಲಸ ನಿರ್ವಹಿಸಬೇಕೆಂದರೆ ವಾಣಿ ಸರ್ಟಿಫಿಕೇಟ್ ಪಡೆದಿರಬೇಕು. ವಾಣಿ ಸರ್ಟಿಫಿಕೇಟ್ ಅಂದರೆ ಆಕಾಶವಾಣಿಯು ಅಭ್ಯರ್ಥಿಗಳಿಗೆ ಅದು ನಡೆಸುವ ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ, ಸಂದರ್ಶನಗಳನ್ನು ದಾಟಿ ಬಂದ ಮೇಲೆ ಪ್ರಸಾರ ಪರಿಣತರಿಂದ ಥಿಯರೆಟಿಕಲ್ ಹಾಗೂ ಪ್ರಾಕ್ಟಿಕಲ್ ತರಬೇತಿಯನ್ನು ನೀಡಿದ ಬಳಿಕ ಪ್ರದಾನ ಮಾಡುವ ಪ್ರಮಾಣಪತ್ರ. ಉದ್ಘೋಷಕರ ಧ್ವನಿ ಗಾಳಿಯಲ್ಲಿ ಪ್ರಸಾರವಾಗಬೇಕೆಂದರೆ ಈಗ ಅವಶ್ಯವಾಗಿ ವಾಣಿ ಸರ್ಟಿಫಿಕೇಟ್ ಪಡೆದಿರಲೇ ಬೇಕು. ಆದರೆ ನಾವು ಕೆಲಸಕ್ಕೆ ಸೇರಿದ ಸಮಯದಲ್ಲಿ ನೀರಿಗೆ ಬಿದ್ದಾಗ ಪ್ರಾಣ ಭಯಕ್ಕೆ ಈಜು ಕಲಿತಂತೆ, ನೇರವಾಗಿ ಪ್ರಸಾರ ಸಾಗರಕ್ಕೆ ನಮ್ಮನ್ನು ದೂಡಿ ಬಿಟ್ಟಾಗ ನಾವು ಅದರಲ್ಲಿ ಮುಳುಗೇಳುತ್ತ, ನೀರು ಕುಡಿಯುತ್ತಾ, ಕೈಕಾಲು ಬಡಿಯುತ್ತಾ ಸ್ವಪ್ರಯತ್ನದಿಂದ ಈಜು ಕಲಿತು ಪ್ರಸಾರಸಾಗರವನ್ನು ಭವಸಾಗರವೆಂಬಂತೆ ಈಜಿ ದಡ ಸೇರಿದ್ದೆವು. ನನ್ನ ಅನಂತರ ಆಕಾಶವಾಣಿಗೆ ಸೇರ್ಪಡೆಗೊಂಡ ಶ್ರೀ ಮುದ್ದು ಮೂಡುಬೆಳ್ಳೆಯವರು ಸ್ವತಂತ್ರವಾಗಿ ಕೆಲಸ ನಿರ್ವಹಿಸುವ ಮುನ್ನ ಕೆಲವು ವಾರಗಳ ತರಬೇತಿ ಅವರಿಗೆ ಹಿರಿಯರಿಂದ ದೊರಕಿತ್ತು.

 ಆಕಾಶವಾಣಿಯು ವಿವಿಧ ಪ್ರಾದೇಶಿಕ ತರಬೇತಿ ಕೇಂದ್ರಗಳ ಮೂಲಕ ತನ್ನ ಸಿಬ್ಬಂದಿಗಳಿಗೆ ತರಬೇತಿ ನೀದುವ ಪದ್ಧತಿ ಇದ್ದು, ಇಂಥ ಪ್ರಾಥಮಿಕ ತರಬೇತಿ ಕೇಂದ್ರಗಳು ನವದೆಹಲಿ, ಮುಂಬೈ, ಅಲಹಾಬಾದ್, ಭುವನೇಶ್ವರ, ಶಿಲ್ಲೊಂಗ್, ಹೈದರಾಬಾದ್, ತಿರುವನಂತಪುರಗಳಲ್ಲಿ ಕಾರ್ಯಾಚರಿಸುತ್ತಿವೆ. ನಮಗೆ ದಕ್ಷಿಣ ಭಾರತೀಯ ಆಕಾಶವಾಣಿ ಕೇಂದ್ರಗಳಿಗೆ ಸಾಮಾನ್ಯವಾಗಿ ಹೈದರಾಬಾದ್ ಇಲ್ಲವೇ ತಿರುವನಂತಪುರ ಕೇಂದ್ರದವರು ನೆನಪಾದಾಗ ಒಂದುವಾರದ ಮಟ್ಟಿಗೆ ತರಬೇತಿಗೆ ಕರೆಯುವುದುಂಟು. ನಾನು ಕೆಲಸಕ್ಕೆ ಸೇರಿ ನಾಲ್ಕು ವರ್ಷಗಳಾದ ಬಳಿಕ ನನಗೆ ಮೊದಲ ತರಬೇತಿಗೆ ಆಕಾಶವಾಣಿಯ ಮೈಸೂರು ಕೇಂದ್ರದಲ್ಲಿ ಹೈದರಾಬಾದಿನ ಪ್ರಾ. ತ. ಕೇಂದ್ರದಿಂದ ಕರೆ ಬಂತು. ಈ ತರಬೇತಿಯಲ್ಲಿ ಕರ್ನಾಟಕ ಹಾಗೂ ಆಂಧ್ರದ ಉದ್ಘೋಷಕರು ಇದ್ದೆವು. ಆ ಕಾಲದಲ್ಲಿ ನಮಗೆ ಅವರು ನೀಡುತ್ತಿದ್ದ ಪ್ರಯಾಣ, ವಸತಿಗಳ ಭತ್ತೆಯ ಮೊತ್ತ ಯಾತಕ್ಕೂ ಸಾಲದ ಕಾರಣ ನಾನು ನನ್ನ ಮೂರುವರ್ಷ ವಯಸ್ಸಿನ ಮಗ ಹಾಗೂ ಮಗನನ್ನು ನೋಡಿಕೊಳ್ಳುತ್ತಿದ್ದ ಪ್ರೇಮಳೊಡನೆ ಆಗ ಮೈಸೂರಿನಲ್ಲಿದ್ದ ನನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದು ಈ ತರಬೇತಿಗೆ ಹಾಜರಾದೆ.

 ಮೊದಲ ತರಬೇತಿ, ಹೊಸ ವಿಷಯಗಳು, ಹೊಸ ಮಂದಿ – ಹೀಗೆ ಈ ತರಬೇತಿಯ ಸಮಯದಲ್ಲಿ ಬಹಳಷ್ಟು ವಿಚಾರಗಳನ್ನು ಹೇಳಲಾಯಿತಾದರೂ ಅವೆಲ್ಲಾ ನನಗೆ ಮೊದಲೇ ಕರಗತವಾಗಿತ್ತು. ಆದರೆ ಬೆಂಗಳೂರಿನ ಎಚ್. ಆರ್. ಕೃಷ್ಣಮೂರ್ತಿ, ಹಲವಾರು ನಿವೃತ್ತ ಅಧಿಕಾರಿಗಳು, ನಿಲಯ ನಿರ್ದೇಶಕರು ನಮಗೆ ತುಂಬಾ ಮುತುವರ್ಜಿಯಿಂದ ಪಾಠ ಹೇಳಿದರು. ಧಾರವಾಡದಿಂದ ಬಂದ ಖ್ಯಾತ ಬರಹಗಾರ ಹಾಗೂ ಆಕಾಶವಾಣಿಯ ಹಿರಿಯ ತಲೆ ಎನ್ಕೆ, ನಾಟಕಕಾರರಾದ ವಾಮನರಾವ್, ಯಮುನಾ ಮೂರ್ತಿ, ಪರ್ವತವಾಣಿ, ಕವಲಿಯವರು ಹೀಗೆ – ಹಲವಾರು ಉನ್ನತ ಚೇತನರ ಪರಿಚಯವಾಯಿತು. ಎಲ್ಲರೂ ನಮ್ಮ ಜವಾಬ್ದಾರಿ, ನಮ್ಮ ಹುದ್ದೆಯ ಹಿರಿಮೆ, ಗರಿಮೆಗಳನ್ನು ಕೊಂಡಾಡುವವರೇ. ನಮ್ಮ ಹುದ್ದೆಗಿರುವಷ್ಟು ಆಕರ್ಷಣೆ ಯಾವ ಕೇಡರ್ ಗೆ ಕೂಡಾ ಇಲ್ಲ ಎಂಬುದಾಗಿ ಅವರೆಲ್ಲಾ ಸಾರಿ ಸಾರಿ ಹೇಳುತ್ತಿದ್ದರೂ ವಸ್ತು ಸ್ಥಿತಿ ಹಾಗಿಲ್ಲ ಅನ್ನುವುದು ಅವರಿಗೂ ಗೊತ್ತಿತ್ತು. ಈ ತರಬೇತಿ ಸಮಯದಲ್ಲಿ ವಿಜಯವಾಡದ ಶಾರದಾ, ಭದ್ರಾವತಿಯ ಜಿ.ಕೆ.ರವೀಂದ್ರಕುಮಾರ್, ಗುಲ್ಬರ್ಗಾದ ದೇಶಪಾಂಡೆ, ಬೆಂಗಳೂರಿನ ಕುಲಕರ್ಣಿ, ನೇತ್ರಾವತಿ ಅಭಿರಾಮಮೂರ್ತಿ, ಸೀತಮ್ಮ,ಮೈಸೂರು ಕೇಂದ್ರದಲ್ಲಿ ಆಗಷ್ಟೇ ಸೇವೆಗೆ ನಿಯುಕ್ತರಾದ ಬಾಲಸುಬ್ರಮಣ್ಯ, ಬಿ.ಆರ್.ಅನುರಾಧಾ, ಇಂದ್ರಾಣಿ – ಹೀಗೆ ಹಲವರ ಪರಿಚಯವಾಯಿತು. ಸುಂದರ ನಿರೂಪಣೆ ಹಾಗೂ ಮಧುರ ಕಂಠಕ್ಕೆ ಹೆಸರಾದ ನೇತ್ರಾವತಿ ಅಭಿರಾಮಮೂರ್ತಿಯವರು ಎಷ್ಟು ಸರಳ, ಸಜ್ಜನರು ಅನ್ನುವುದನ್ನು ಪ್ರತ್ಯಕ್ಷವಾಗಿ ಮನಗಂಡೆ. ನಮಗೆ ತರಬೇತಿ ನೀಡಲು ಬಂದ ನಿಲಯ ನಿರ್ದೇಶಕರಾದ ಗುಲ್ಬರ್ಗಾ ಕೇಂದ್ರದ ಜಿ. ಬಿ. ಆಲದಕಟ್ಟಿಯವರು ಉದ್ಘೋಷಣೆಯ ಸಮಯದಲ್ಲಿ ಮುಖದಲ್ಲೊಂದು ಮುಗುಳುನಗೆಯಿರಲಿ ಎಂದು ಹೇಳಿದ ಕಿವಿಮಾತು ಮಾತ್ರ ನಾನು ಅಲ್ಲಿಂದ ಪಡೆದುಕೊಂಡುಬಂದ ಅಮೂಲ್ಯ ಪಾಠ.

Banuli23 ನನ್ನ ಮಗ ಎರಡನೆಯ ಕ್ಲಾಸಿನಲ್ಲಿದ್ದಾಗ ನನಗೆ ಧಾರವಾಡ ಕೇಂದ್ರದಲ್ಲಿ ತರಬೇತಿಗೆ ಕರೆ ಬಂತು. ಆಗ ಮಗನಿಗೆ ದಸರಾ ರಜೆಯಿದ್ದ ಕಾರಣ ಬೆಂಗಳೂರಿನಲ್ಲಿದ್ದ ನನ್ನ ಅಕ್ಕನ ಮನೆಯಲ್ಲಿ ಅವನನ್ನು ಬಿಟ್ಟು ನಾನು ಮತ್ತು ನನ್ನ ಯಜಮಾನರು ಧಾರವಾಡಕ್ಕೆ ಹೋದೆವು. ಆಗ ಹೈದರಾಬಾದಿನ ಪ್ರಾದೇಶಿಕ ತರಬೇತಿ ಕೇಂದ್ರದ ನಿರ್ದೇಶಕರಾಗಿದ್ದವರು ಮೊದಲು ಮಂಗಳೂರಿನಲ್ಲಿದ್ದ ಎನ್. ಜಿ. ಶ್ರೀನಿವಾಸ್ ಅವರು. ಧಾರವಾಡ ಕೇಂದ್ರದಲ್ಲಿ ಆಗ ಈ ಮೊದಲು ಮಂಗಳೂರು ಕೇಂದ್ರದಲ್ಲಿದ್ದ ಚೇತನಕುಮಾರ್ ನಾಯಕ್, ಅನಿಲ್ ಗಾಯಕವಾಡ್, ಅಶೋಕ ಪವಾರ್ ಇವರೆಲ್ಲ ಇದ್ದು ಆ ತರಬೇತಿ ಹೃದ್ಯವಾಯಿತು. ಈ ಬಾರಿಯೂ ವಿಜಯವಾಡದ ಶಾರದಾ, ಧಾರವಾಡದ ಕುಂಬಾರ್, ಮೈಸೂರಿನ ಶಂಕರಪ್ಪ, ಹೈದರಾಬಾದಿನ ಕೈಲಾಶ್ ಶಿಂದೆ, ವಾರಂಗಲ್ ನ ವಿಜಯಕುಮಾರಿ, ಕೊತ್ತಗುಡಂ ನ ಈಮನಿ ಕೃಷ್ಣಶಾಸ್ತ್ರಿ (ಖ್ಯಾತ ವೀಣಾ ವಾದಕರಾದ ಈಮನಿ ಶಂಕರ ಶಾಸ್ತ್ರಿಯವರ ಮೊಮ್ಮಗ), ಬೆಂಗಳೂರು ಸಿಬಿಎಸ್ ನ ಮೈತ್ರೇಯಿ ಜಾಗಿರ್ದಾರ್ ಇವರೆಲ್ಲಾ ಭಾಗವಹಿಸಿದ್ದರು. ಆಗ ಧಾರವಾಡ ಕೇಂದ್ರದ ನಿಲಯ ನಿರ್ದೇಶಕರಾಗಿದ್ದ ಸಿ.ರಾಜಗೋಪಾಲ್, ಬೆಂಗಳೂರಿನ ನಿ. ನಿರ್ದೇಶಕರಾದ ಶ್ರೀಮತಿ ಜ್ಯೋತ್ಸ್ನಾ ಕಾಮತ್, ನಿವೃತ್ತ ನಿ. ನಿರ್ದೇಶಕರಾದ ಜಿ. ಜಿ. ಸಿದ್ಧಾಪುರ್, ಎಚ್.ವಿ.ರಾಮಚಂದ್ರ ರಾವ್, ಸಹಾಯಕ ನಿ. ನಿರ್ದೇಶಕರುಗಳಾದ ಜಿ. ಬಿ. ಆಲದಕಟ್ಟಿ, ನಿವೃತ್ತ ಕಾರ್ಯಕ್ರಮ ನಿರ್ವಾಹಕರಾದ ಯು. ಬಿ. ಬೆಳ್ಳಕ್ಕಿ, ಎನ್ಕೆ, ಖ್ಯಾತ ಸಂಗೀತ ವಿದ್ವಾಂಸರಾದ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್, ಶ್ರೀಮತಿ ಗಂಗೂ ಬಾಯಿ ಹಾನಗಲ್, ಕರ್ನಾಟಕ ವಿಶ್ವ ವಿದ್ಯಾನಿಲಯದ ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಲಿಯಂ ಮಾಡ್ತಾ, ಶ್ರೋತೃ ಸಂಶೋಧನಾ ಅಧಿಕಾರಿ ಎ. ಎಸ್. ಚಂದ್ರಮೌಳಿ ಅಲ್ಲದೆ ಹಲವಾರು ತಾಂತ್ರಿಕ ಪರಿಣತರು ಈ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗಂಗೂಬಾಯಿಯವರಂಥ ಮೇರು ಕಲಾವಿದರ ಸರಳ ಸಜ್ಜನಿಕೆ ಕಂಡು ನಾವೆಲ್ಲಾ ಬೆರಗಾದೆವು. ಒಟ್ಟಿನಲ್ಲಿ ಅಲ್ಲಿ ನಮಗೆ ಹೇಳಿಕೊಡಲಾಗುತ್ತಿದ್ದ ವಿಷಯಗಳೆಲ್ಲಾ ನಾವು ಕಲಿತಿರುವಂಥದ್ದೇ ಆದರೂ ದಿನನಿತ್ಯದ ಪಡಿಪಾಟಲಿನಿಂದ ಕೊಂಚ ಬದಲಾವಣೆಯನ್ನು ಈ ತರಬೇತಿಯ ಸಮಯದಲ್ಲಿ ಸಿಕ್ಕಿದ ಸಮಾನ ಆಸಕ್ತರ ಒಡನಾಟ ನಮಗೆ ದೊರೆತು ಮನ ಹಗುರಾಯಿತು ಅಂತ ಹೇಳಬಹುದು.

 ಧಾರವಾಡದಲ್ಲಿ ಕವಿ ಬೇಂದ್ರೆಯವರ ಮನೆ, ಕರ್ನಾಟಕ ವಿಶ್ವವಿದ್ಯಾನಿಲಯ ಕ್ಯಾಂಪಸ್, ಅನಿಲ್ ಗಾಯಕವಾಡರ ಮನೆಯ ಸೊಗಸಾದ ಆತಿಥ್ಯ ಸವಿದದ್ದೇ ಅಲ್ಲದೆ ಅಲ್ಲಿನ ಬಸಪ್ಪ ಖಾನಾವಳಿಯಲ್ಲಿ ತಿಂದ ಧಾರವಾಡದ ಜೋಳದ ರೊಟ್ಟಿ, ಪುಂಡಿಪಲ್ಲೆ, ಲೈನ್ ಬಜಾರ್ ಪೇಡಾ ಇವನ್ನು ಮರೆಯುವಂತಿಲ್ಲ. ಹೋಟೆಲ್ ಧಾರವಾಡದಿಂದ ಆಕಾಶವಾಣಿ ಕೇಂದ್ರದ ವರೆಗೂ ನಡೆಯುತ್ತಾ ಹೋಗಿ ಬರುತ್ತಿದ್ದುದನ್ನು ಈಗ ನೆನೆದರೆ ಅಷ್ಟು ದೂರವನ್ನು ನಡೆದವಳು ನಾನೇನಾ ಅಂತ ಆಶ್ಚರ್ಯವಾಗುತ್ತದೆ.

 ಧಾರವಾಡದ ತರಬೇತಿಯ ಬಳಿಕ ಸುಮಾರು ವರ್ಷಗಳ ಕಾಲ ತರಬೇತಿ ಕೇಂದ್ರದವರು ನನ್ನ ಗೊಡವೆಗೆ ಬಂದಿರಲಿಲ್ಲ. ನನ್ನ ಮಗ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಸೇರಿ ಒಂದೆರಡು ವರ್ಷಗಳಾದ ಬಳಿಕ ನನಗೆ ಮೈಸೂರು ಕೇಂದ್ರದಲ್ಲಿ ತರಬೇತಿಗೆ ಕರೆ ಬಂತು. ಈ ಬಾರಿ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ತರಬೇತಿ ಇದ್ದು, ನಮಗೆಲ್ಲಾ ಉಳಿದುಕೊಳ್ಳಲು ಮೈಸೂರಿನ ಪ್ರಸಿದ್ಧ ಧ್ವನ್ಯಾಲೋಕದಲ್ಲಿ ಬಾಡಿಗೆ ಕೊಠಡಿಯ ವ್ಯವಸ್ಥೆ ಮಾಡಿದ್ದರು. ಈ ಬಾರಿ ರಾತ್ರಿ ಬಸ್ಸಿನಲ್ಲಿ ನಾನೊಬ್ಬಳೇ ಮೈಸೂರಿಗೆ ಹೊರಟು ಬಂದು ಬೆಳ್ಳಂಬೆಳಗ್ಗೆ ಧ್ವನ್ಯಾಲೋಕಕ್ಕೆ ನಡೆದೇ ಹೋಗುವ ದಾರಿಯಾದರೂ ಗೊತ್ತಾಗದೇ ಆಟೋದವನ ಕೈಯ್ಯಲ್ಲಿ ಮೋಸ ಹೋಗಿ ಅಂತೂ ನಿಗದಿತ ಸ್ಥಳವನ್ನು ತಲುಪಿದೆ.

 ವಾಕ್ ಶ್ರವಣ ಸಂಸ್ಥೆಯಲ್ಲಿ ನಮ್ಮ ವಾಕ್ ಅಂಗಗಳು, ಉಸಿರಾಟದ ವ್ಯವಸ್ಥೆ – ಇತ್ಯಾದಿ ದೇಹವಿಜ್ಞಾನದ ಭಾಗಗಳ ಕುರಿತೇ ಹೆಚ್ಚಿನ ತರಗತಿಗಳಿದ್ದು, ಆಗಾಗ ಅವರ ಪ್ರಯೋಗಾಲಯಗಳಲ್ಲಿ ನಮ್ಮ ಧ್ವನಿಪರೀಕ್ಷೆ ನಡೆಸಿ ಅದರ ಶಾರ್ಪ್ ನೆಸ್, ಉದ್ದ, ಅಗಲ, ಅದು, ಇದು ಎಂದು ತಪಾಸಣೆ ಮಾಡಿ ನಮಗೆ ಅವರು ಕೊಟ್ಟ ಸರ್ಟಿಫಿಕೇಟ್, ಕೊನೆಗೂ ಅದರಿಂದ ಏನು ಪ್ರಯೋಜನ ನಮಗಾಯಿತೆಂದೇ ತಿಳಿಯಲಿಲ್ಲ. ಆದರೆ ಈ ತರಬೇತಿ ಸಮಯದಲ್ಲಿ ವಾಕ್ ಶ್ರವಣ ಸಂಸ್ಥೆಯವರು ನಮಗೆ ಉಚಿತವಾಗಿ ಹಾಗೂ ಪ್ರೀತಿ ಮತ್ತು ಕಾಳಜಿಯಿಂದ ನೀಡುತ್ತಿದ್ದ ಪೊಗದಸ್ತಾದ ಊಟ ಮಾತ್ರ ಮರೆಯುವಂತಿಲ್ಲ. ಪುಳಿಯೋಗರೆ, ಬಿಸಿಬೇಳೇ ಬಾತ್, ವಾಂಗೀಬಾತ್, ಸಂಜೆ ಕೊಡುತ್ತಿದ್ದ ಸ್ನ್ಯಾಕ್ಸ್, ರುಚಿಯಾದ ಕಾಫಿ ಇವನ್ನೆಲ್ಲ ನೆನೆದೇ ಮೆಡಿಕಲ್ ವಿದ್ಯಾರ್ಥಿಗಳಿಗೆ ಹೇಳಬೇಕಾದ ಅಂಗಶಾಸ್ತ್ರದ ಶುಷ್ಕ ತರಗತಿಗಳಲ್ಲಿ ತೂಕಡಿಕೆ ಬಂದರೂ ಮಧ್ಯಾನ್ಹದ ಊಟಕ್ಕೇನಿರಬಹುದು ಎಂಬ ಕಲ್ಪನಾಲಹರಿಯಲ್ಲೇ ತೇಲುತ್ತ ನಾನು ತರಗತಿಗಳನ್ನು ಸಹ್ಯವಾಗಿಸಿಕೊಳ್ಳುತ್ತಿದ್ದೆ. ವಾಕ್ ಶ್ರವಣ ಸಂಸ್ಥೆಯ ವಿಶಾಲವಾದ ಹಾಗೂ ಭವ್ಯವಾದ ಆವರಣ, ಕಟ್ಟಡ ಸಮುಚ್ಚಯಗಳು, ಧ್ವನ್ಯಾಲೋಕದ ಹಸಿರು, ಶಾಂತ ಪರಿಸರ, ಇಡೀ ಬ್ಲಾಕ್ ನಲ್ಲಿ ನಾನು ಮತ್ತು ಚಿತ್ರದುರ್ಗಾ ಕೇಂದ್ರದ ಮಂಜುಳಾ ಮಾತ್ರ ಇದ್ದು, ರಾತ್ರಿ ಆ ಮರಗಳ ಸಮೂಹದಿಂದ ಗೂಗೆ ಹಾಗೂ ಇನ್ನಿತರ ಪಕ್ಷಿಗಳ ಕೂಗು ಹೆದರಿಕೆ ಹುಟ್ಟಿಸುತ್ತಿತ್ತು. ಒಂದು ರಾತ್ರಿ ಬಂದ ಮಳೆಗೆ ಕರೆಂಟ್ ಹೋಗಿ ಮರುದಿನ ನೀರಿಗೂ ಗತಿ ಇಲ್ಲದೆ ಪಟ್ಟ ಪಾಡು ಹೇಳುವಂಥದಲ್ಲ. ಮೈಸೂರು ಕೇಂದ್ರದ ರಾಧಾ, ಬೆಂಗಳೂರಿನ ಎಚ್.ಎಸ್. ಅನುಪಮ, ಲಲಿತಾ, ಗುಲ್ಬರ್ಗಾದ ಶಾರದಾ ಜಂಬಲದಿನ್ನಿ, ಭದ್ರಾವತಿಯ ರಾಣೀ ರತ್ನಾರಾವ್, ಹಾಸನದಿಂದ ಪುಟ್ಟಸ್ವಾಮಿ – ಹೀಗೆ ಬೇರೆ ಬೇರೆ ಕೇಂದ್ರಗಳಿಂದ ಬಂದ ಉದ್ಘೋಷಕರ ಪರಿಚಯವಾಯಿತು. ಈ ಬಾರಿ ತಿರುವನಂತಪುರದ ತರಬೇತಿ ಕೇಂದ್ರದವರು ಆಯೋಜಿಸಿದ್ದ ಈ ತರಬೇತಿಯ ಉಸ್ತುವಾರಿ ಹೊತ್ತವರು ನಿರ್ದೇಶಕರಾದ ಶ್ರೀ ಮುರಲೀಧರನ್ ಅವರು. ಮೈಸೂರು ಕೇಂದ್ರದಲ್ಲಿದ್ದ ಅಬ್ದುಲ್ ರಶೀದ್ ತಮ್ಮ ಹೆಂಡತಿ ಮಕ್ಕಳೊಡನೆ ನಾನು ಉಳಿದುಕೊಂಡಿದ್ದಲ್ಲಿಗೆ ಬಂದು ಮಾತನಾಡಿ ಹೋದರು. ಉಳಿದವರೆಲ್ಲಾ ತಮ್ಮ ಪರಿಚಯಸ್ಥರ ಮನೆಯಲ್ಲೋ ಇನ್ನೆಲ್ಲೋ ಉಳಿದ ಕಾರಣ ನನಗೆ ಚಿತ್ರದುರ್ಗದ ಮಂಜುಳಾ ಏಕೈಕ ಸಂಗಾತಿಯಾದರು. ಮಂಜುಳಾ ಅವರಿಗೆ ಮೈಸೂರಿನಲ್ಲಿ ಪರಿಚಯಸ್ಥರು ಬಹಳ. ಅವರ ಬೆನ್ನಿಗೆ ಬಿದ್ದ ಬೇತಾಳದಂತಿದ್ದ ನಾನು ಸಂಜೆ ಧ್ವನ್ಯಾಲೋಕದ ಏಕಾಕಿತನಕ್ಕೆ ಹೆದರಿ ಅವರು ಹೋದ ಕಡೆಯೆಲ್ಲಾ ನಾನೂ ಅನಿವಾರ್ಯವಾಗಿ ಹೋಗಿ ಒಬ್ಬಟ್ಟಿನ ಊಟ ಸವಿದೆ. ಕೊನೆಗೆ ನನ್ನನ್ನು ರಾತ್ರಿ ಬಸ್ಸಿಗೆ ಕೂರಿಸುವ ವರೆಗೂ ನಾನು ಮಂಜುಳಾರವರನ್ನು ಬಿಡಲಿಲ್ಲ. ಈ ನಡುವೆ ನನ್ನ ಪೊಟ್ಟು ಮೊಬೈಲ್ ಗೆ ಆಗಲೇ ಕಾಯಿಲೆ ಬಡಿದು ಪ್ರತಿ ಬಾರಿ ಮನೆಯನ್ನು ಹಾಗೂ ಮಗನನ್ನು ಸಂಪರ್ಕಿಸುವ ಸಮಯದಲ್ಲಿ ಮಂಜುಳಾರ ಮೊಬೈಲ್ ನಿಂದ ಮಿಸ್ ಕಾಲ್ ಕೊಟ್ಟು ಅವರೇ ನನ್ನನ್ನು ಸಂಪರ್ಕಿಸುವಂತೆ ನೋಡಿಕೊಳ್ಳುತ್ತಿದ್ದೆ. ಹೀಗೆ ಮೈಸೂರಿನ ಈ ತರಬೇತಿಯಲ್ಲಿ ಜ್ಞಾನ ಬೆಳೆಯದಿದ್ದರೂ ದೇಹದ ತೂಕ ಒಂದೆರಡು ಕಿಲೋ ಖಂಡಿತ ಹೆಚ್ಚಿರಬಹುದು, ಜೊತೆಗೆ ಮಂಜುಳಾ ಅವರ ಋಣದ ಭಾರ ಕೂಡಾ ಹೊತ್ತು ಮಂಗಳೂರಿಗೆ ಮರಳಿದೆ.

 ಮತ್ತೆ ಮುಂದೆ ನನ್ನ ಮಗನ ಮದುವೆ ಸಮಯದಲ್ಲಿ ಕೂದಲು ನರೆತ ಕಾಲಕ್ಕೆ ದೂರದ ಭುವನೇಶ್ವರದಲ್ಲಿ ತರಬೇತಿಯಲ್ಲಿ ಭಾಗವಹಿಸಲು ನನಗೆ ಕರೆ ಬಂತು. ಅದನ್ನು ನಾನು ಅನಿವಾರ್ಯ ಕಾರಣಗಳ ನೆಪ ಒಡ್ಡಿ ತಪ್ಪಿಸಿಕೊಂಡೆ. ಮುಂದಿನ ತರಬೇತಿ ನಾನು ನಿವೃತ್ತಳಾಗುವ ಎರಡು ವರ್ಷಗಳ ಮುನ್ನ 2013ರಲ್ಲಿ ಮೇ ತಿಂಗಳಲ್ಲಿ ಹೈದರಾಬಾದಿನಲ್ಲಿ ನಡೆಯಿತು. ಆಗ ನನ್ನ ಯಜಮಾನರಿಗೆ ತೆರೆದ ಹೃದಯದ ಶಸ್ತ್ರಕ್ರಿಯೆಯಾಗಿ ಐದು ತಿಂಗಳಷ್ಟೇ ಆಗಿತ್ತು, ಅಲ್ಲದೆ ಪ್ರತಿ ಬಾರಿ ಸಬೂಬು ಹೇಳುವುದು ಸರಿಯಲ್ಲವೆಂದು ಸಂಜೆ ಮೂರು ಗಂಟೆಗೆ ಹೊರಡುವ ಬಸ್ ನಲ್ಲಿ ಹೈದರಾಬಾದಿಗೆ ಹೊರಟು ಮರುದಿನ ಬೆಳಗ್ಗೆ ಹೈದರಾಬಾದನ್ನು ತಲುಪಿದೆವು. ಜೀವ ವೈವಿಧ್ಯ, ಪರಿಸರ ಸಂರಕ್ಷಣೆಯ ಬಗ್ಗೆ ಬಹಳ ಉತ್ತಮವಾದ ಒಂದು ವಾರದ ತರಗತಿ ಸೊಗಸಾಗಿತ್ತು. ಮಾಡಿದನ್ನೇ ಮಾಡುವ ಸಾಂಪ್ರದಾಯಿಕ ಕಾರ್ಯಕ್ರಮಗಳ ಬದಲು ಪರಿಸರ ಹಾಗೂ ಜೀವವೈವಿಧ್ಯಗಳ ರಕ್ಷಣೆಯನ್ನು ಕುರಿತು ಆಕಾಶವಾಣಿ ನಿರ್ಮಾಣ ಮಾಡಬಹುದಾದ ಕಾರ್ಯಕ್ರಮಗಳ ಕುರಿತು ವಿಶ್ವವಿದ್ಯಾಲಯ ಮಟ್ಟದ ಪರಿಣತರು ಬಂದು ಮಾಹಿತಿ ನೀಡಿದರು. ತರಬೇತಿ ಸಂಯೋಜಕಿ ಶ್ರೀಮತಿ ಪ್ರಸನ್ನಾ ಮೇಡಂ, ಕೊರ್ಡಿನೇಟರ್ ಶ್ರೀ ಪ್ರಸನ್ನಕುಮಾರ್ ತುಂಬ ಮುತುವರ್ಜಿ ವಹಿಸಿ ನಡೆಸಿಕೊಟ್ಟರು. ಹೈದರಾಬಾದಿನ ರಾಷ್ಟ್ರೀಯ ಪ್ರಾಣಿಸಂಗ್ರಹಾಲಯದಲ್ಲಿ ಒಂದು ದಿನದ ಪವರ್ ಪಾಯಿಂಟ್ ಪ್ರಸ್ತುತಿ ತುಂಬಾ ಚೆನ್ನಾಗಿತ್ತು. ಅಲ್ಲದೆ ಸಂಚಾರೀ ವಾಹನದಲ್ಲಿ ಕುಳಿತು ಪ್ರಾಣಿಗಳನ್ನು ವೀಕ್ಷಿಸುವ ಅವಕಾಶವೂ ನಮಗೆ ಲಭಿಸಿತು. ಅಲ್ಲಿನ ಸೆಖೆ ಸಹಿಸಲಾರದೆ ಮಾವಿನ ಹಣ್ಣಿನ ರಸ ಕುಡಿದೋ ಏನೋ ನನ್ನ ಯಜಮಾನರಿಗೆ ಹೊಟ್ಟೆ ಕೆಟ್ಟಿತು. ಆದುದರಿಂದ ಮರು ದಿನ ಹೈದರಾಬಾದಿನಿಂದ ಅರುವತ್ತು ಕಿಲೋಮೀಟರ್ ದೂರದಲ್ಲಿ ಸಾವಯವ ಕೃಷಿಯ ಪ್ರಾತ್ಯಕ್ಷಿಕೆಯನ್ನು ನೋಡಲು ನಾನು ಹೋಗಲಿಲ್ಲ. ಅಲ್ಲಿಗೆ ಹೋದ ನಮ್ಮ ಮಿತ್ರರೆಲ್ಲ ತುಂಬಾ ಚೆನ್ನಾಗಿತ್ತೆಂದೂ ಬಂದು ತಲಪುವಾಗ ತುಂಬಾ ತಡವಾಯಿತೆಂದೂ ಹೇಳಿದರು.

Banuli22 ಬೆಂಕಿಯುಗುಳುವಂಥಾ ಬೇಸಿಗೆಯ ಧಗೆ, ಟೋಪಿ ಹಾಕಲು ಹೊಂಚಿ ಕಾಯುವ ಮುತ್ತಿನ ವ್ಯಾಪಾರಿಗಳ ನಡುವೆಯೂ ಹೈದರಾಬಾದಿನ ಲುಂಬಿನಿ ಪಾರ್ಕ್, ಬಿರ್ಲಾ ಮಂದಿರ, ಚಾರ್ಮಿನಾರ್ ಇತ್ಯಾದಿಗಳನ್ನು ಆನಂದಿಸಿದೆವು. ನಮ್ಮ ಲಾಡ್ಜಿನ ಪಕ್ಕದಲ್ಲೇ ಇದ್ದ ಕಾಮತ್ ಹೋಟೆಲ್ ನ ಹೂವಿನಂಥ ಇಡ್ಲಿಗೆ ಮೂಗಿಗಿಂಥ ಮೂಗುತಿ ಭಾರವೆಂಬಂತೆ ನಾಲ್ಕು ವಿಧದ ಚಟ್ನಿ ಕೊಡುತ್ತಿದ್ದರು. ತನ್ನ ಹಾಸ್ಯ ಚಟಾಕಿಗಳಿಂದ ರಂಜಿಸಿದ ಕಾರವಾರದ ಜಂಪಣ್ಣ, ಮೈಸೂರಿನ ಕೇಶವಮೂರ್ತಿ, ಗುಲ್ಬರ್ಗಾದ ಸೋಮಶೇಖರ ರುಳಿ, ಧಾರವಾಡದ ರಾಮಡಗಿ, ತಿರುವನಂತಪುರದ ವಿಜಯನ್, ವಿಜಯವಾಡಾ, ಕೊತ್ತಗುಡಂ, ವಿಶಾಖಪಟ್ಟಣದ ಆಕಾಶವಾಣಿ ಬಂಧುಗಳು ಸೇರಿ ಒಂದು ಸೊಗಸಾದ ಸ್ನೇಹಿತರ ಕೂಟ ಅಲ್ಲಿ ನಡೆಯಿತು.

 ಅದೇ ವರ್ಷ ಜುಲೈ ತಿಂಗಳಲ್ಲಿ ತಿರುವನಂತಪುರದಲ್ಲಿ ವಾಯ್ಸ್ ಕಲ್ಚರ್ ಬಗ್ಗೆ ನಡೆದ ತರಬೇತಿ ಈ ವರೆಗೆ ಭಾಗವಹಿಸಿದ ತರಬೇತಿಗಳಲ್ಲೇ ಅದ್ವಿತೀಯವಾಗಿತ್ತು. ಇಂಥ ತರಬೇತಿ ನನ್ನ ವೃತ್ತಿ ಜೀವನದ ಆರಂಭದಲ್ಲೇ ಸಿಗಬೇಕಿತ್ತು. ಎಸ್.ರಾಧಾಕೃಷ್ಣನ್ ಅವರ ಉಸ್ತುವಾರಿಯಲ್ಲಿ ನಡೆದ ಈ ತರಬೇತಿಯಲ್ಲಿ ಧ್ವನಿಬಳಕೆಯ ಪ್ರಾತ್ಯಕ್ಷಿಕೆ, ಮೌಲಿಕ ಸಲಹೆಗಳು ದೊರೆತುವು. ಈ ತರಬೇತಿಯ ಉದ್ಘಾಟಕರಾಗಿ ಬಂದ ಪದ್ಮಭೂಷಣ ಕೆ. ನಾರಾಯಣ ಪಣಿಕ್ಕರ್ ಅವರು ನಮಗೆ ಎರಡು ಗಂಟೆಗಳ ಕಾಲ ತರಗತಿ ನಡೆಸಿಕೊಟ್ಟದ್ದನ್ನು ಮರೆಯುವಂತೆಯೆ ಇಲ್ಲ. ಶ್ರೀ ಜಿ. ಎಂ. ಶಿರಹಟ್ಟಿ, ಪ್ರೊಫೆಸರ್ ಡಾ. ಎ. ಎಂ. ವಾಸುದೇವನ್ ಪಿಳ್ಳೈ, ಪ್ರೊ.ಅಲಿಯಾರ್ ಮುಂತಾದವರು ಧ್ವನಿ ಸಂಸ್ಕಾರಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟರು. ನಾಲ್ಕು ವಿಭಿನ್ನ ರಾಜ್ಯಗಳಿಂದ ಬಂದ ನಾವು ಭಾಷಾವಾರು ಪಂಗಡ ಮಾಡಿ ಆಡಿದ ನಾಟಕ”ಭೋ ಪುರುಷ” ತುಂಬಾ ಚೆನ್ನಾಗಿತ್ತು. ರಚನೆ ಮತ್ತು ನಿರ್ದೇಶನ ಧಾರವಾಡ ಕೇಂದ್ರದ ಶಶಿಧರ ನರೇಂದ್ರ ಅವರದು. ಅವರೊಡನೆ ನಾನು, ಗುಲ್ಬರ್ಗದ ರೇಖಾರಾಣಿ, ಬೆಂಗಳೂರಿನ ಕಿರಿಯ ಉದ್ಘೋಷಕಿ (ಹೆಸರು ನೆನಪಾಗ್ತಾ ಇಲ್ಲ) ಸೇರಿ ಆಡಿದ್ದು ತುಂಬಾ ಚೆನ್ನಾಗಿತ್ತು. ಆದರೆ ಪುದುಚೇರಿ, ತಮಿಳುನಾಡು, ಕೇರಳದವರ ಪ್ರಸ್ತುತಿ ಇನ್ನೂ ಚೆನ್ನಾಗಿತ್ತು. ಕಣ್ಣಾನೂರಿನ ವಾಸಂತಿ, ಕೊಚ್ಚಿಯ ತೆನ್ನಲ್, ಪುದುಚೇರಿಯ ವಸಂತಕೋಕಿಲಾ, ಚೆನ್ನೈಯ ಮಿತ್ರರ ಹೆಸರು ನೆನಪಾಗ್ತಾ ಇಲ್ಲ. ನಾವೆಲ್ಲಾ ಸೇರಿ ಅನಂತಪದ್ಮನಾಭ ದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿಯ ವಿಶಾಲ ಆವರಣದಲ್ಲಿ ಬೆಳದಿಂಗಳಿಗೆ ವಿವಿಧ ಹಾಡುಗಳನ್ನು ಹೇಳ್ತಾ ಸಮಯ ಕಳೆದದ್ದು ಎಲ್ಲವೂ ಚಿರಸ್ಮರಣೀಯ. ತಿರುವನಂತಪುರದಲ್ಲಿ ನಾವಿದ್ದ ಸಂದರ್ಭದಲ್ಲೇ ಎರಡು ದಿನಗಳ ಬಂದ್ ಇದ್ದು ಮಳೆಗಾಲದ ಆ ದಿನಗಳಲ್ಲಿ ನಡೆದೇ ಹೋದ ಅನುಭವ ಬಿಟ್ಟರೆ ಆರ್ಯ ಭವನದ ಪರೋಟಾ ಗಸಿ ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಎಸ್. ರಾಧಾಕೃಷ್ಣನ್ ಸ್ವತಹ ನಾಟಕ ಕಲಾವಿದರಾಗಿದ್ದಕ್ಕೋ ಏನೋ, ಅವರು ಸಂಯೋಜಿಸಿದ ಈ ತರಬೇತಿ ನಿಜಕ್ಕೂ ಉನ್ನತ ಮಟ್ಟದ್ದಾಗಿತ್ತು. ಆದರೆ ನಿವೃತ್ತಿಯ ಅಂಚಿಗೆ ಬಂದ ನಾನು ಅಲ್ಲಿ ಪಡೆದು ಬಂದುದನ್ನು ಎಷ್ಟರ ಮಟ್ಟಿಗೆ ನನ್ನ ಕಾರ್ಯಕ್ರಮಗಳಲ್ಲಿ ಅಳವಡಿಸಲು ಸಾಧ್ಯವಾಯಿತು ಎಂದು ಹೇಳಲಾರೆ. ಮಂಗಳೂರಿನಲ್ಲಿ ಮೊದಲು ವೃತ್ತಿ ನಿರ್ವಹಿಸಿದ್ದ ಶ್ರೀರಾಂ ಗೋಪಾಲನ್ ನಾಯರ್, ಮಹಾದೇವ ಶರ್ಮ, ನಮ್ಮ ಊರಿನ ಹುಡುಗಿ ಮಂಜುಳಾ ಮೃಣಾಲಿನಿ ಇವರೆಲ್ಲಾ ಅಲ್ಲಿ ಈಗ ಉದ್ಯೋಗಿಗಳಾಗಿದ್ದು ನಮ್ಮ ಮಾತುಕತೆಗೆ ಸಿಕ್ಕರು.

 ಐವತ್ತರ ಅಂಚಿಗೆ ಸಲ್ಲುತ್ತಿರುವಾಗ ಕಂಪ್ಯೂಟರ್ ಬಳಸಬೇಕಾಗಿ ಬಂದ ನನಗೆ ಆ ಬಗ್ಗೆ ಕಛೇರಿಯಲ್ಲೇ ತಾಂತ್ರಿಕ ವಿಭಾಗದವರಿಂದ ಸಿಕ್ಕಿದ ತರಬೇತಿ ಬಿಟ್ಟರೆ ಹೆಚ್ಚುವರಿ ತರಬೇತಿ ಸಿಕ್ಕಿರಲಿಲ್ಲ. ಅಲ್ಲದೇ ಮೈಸೂರು, ಧಾರವಾಡ ಕೇಂದ್ರಗಳಲ್ಲಿ ಸಿಕ್ಕಂಥ ತರಬೇತಿ ಉದ್ಯೋಗದ ಆರಂಭದ ವರ್ಷಗಳಲ್ಲೇ ಸಿಗಬೇಕಿತ್ತು. ಹೈದರಾಬಾದ್, ತಿರುವನಂತಪುರದ ತರಬೇತಿಗಳು ನಾನು ಕಾರ್ಯಕ್ರಮ ನಿರ್ಮಾಣ ಮಾಡುತ್ತಿದ್ದ ಕಾಲದಲ್ಲಿ ಸಿಕ್ಕರೆ ಚೆನ್ನಾಗಿತ್ತು. ಆದರೆ ಆ ತರಬೇತಿಯನ್ನು ನಾನು ಪಡೆಯುವ ಕಾಲಕ್ಕೆ ಕಾರ್ಯಕ್ರಮ ನಿರ್ಮಾಣದ ಕೆಲಸದಿಂದ ನನಗೆ ಮೋಕ್ಷ ದೊರಕಿತ್ತು. ಅಲ್ಲದೆ ಉಳಿದ ಕೇವಲ ಎರಡು ವರ್ಷಗಳ ಸೇವಾವಧಿಯಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರುವ ವಯಸ್ಸು, ಅವಕಾಶ ಎರಡೂ ಇರಲಿಲ್ಲ. ಆದುದರಿಂದ ಬೇಕೆಂದಾಗ ಸಿಗದ, ಸಮಯಕ್ಕೊದಗದ ಈ ತರಬೇತಿಗಳ ನುಣುಪು ಹಲ್ಲಿಲ್ಲದವರಿಗೆ ಸಿಕ್ಕ ಕಡಲೆಯಂತಾದರೂ ಈ ತರಬೇತಿಯ ಸಮಯದಲ್ಲಿ ದೊರಕಿದ ಹಲವಾರು ಅನುಭವಗಳು, ಸಮಾನ ದು:ಖಿತರ ಜೊತೆಗಿನ ಒಡನಾಟ ನನ್ನ ಮನಸ್ಸನ್ನು ಹಗುರಗೊಳಿಸಿದ್ದಂತೂ ನಿಜ.

ಮುಂದಿನ ವಾರಕ್ಕೆ

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.