ನನ್ನ ಸೇವಾ ಅವಧಿಯ ಉದ್ದಕ್ಕೂ ಹಾಡಿದ್ದೇ ಹಾಡು ಕಿಸಬಾಯಿ ದಾಸ ಎಂಬಂಥ ಅನುದಿನದ ಅದೇ ಹಾಡು ಅದೇ ಪಾಡು ಎಂಬ ಸ್ಥಿತಿ ಇದ್ದರೂ ನಡು ನಡುವೆ ಘಟಿಸಿದ ಕೆಲವು ಘಟನೆಗಳು ಇಂದಿಗೂ, ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವಂಥವು. ಅಂಥವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ದಾಖಲಿಸುವ ಪ್ರಯತ್ನ ಮಾಡುತ್ತೇನೆ.
ಅದು ಸಾವಿರದ ಒಂಬೈನೂರ ಎಂಬತ್ತನಾಲ್ಕರ ಅಕ್ಟೋಬರ ಮೂವತ್ತೊಂದರ ಮಧ್ಯಾನ್ಹ. ನಾನು ಮಧ್ಯಾನ್ಹದ ಪಾಳಿಯಲ್ಲಿದ್ದೆ. ವಾರ್ತೆಯಲ್ಲಿ ಆಗಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಅವರ ಅಂಗರಕ್ಷಕರು ಗುಂಡಿಟ್ಟ ಸುದ್ದಿ ಪ್ರಸಾರವಾಯಿತು. ಶ್ರೀಮತಿ ಗಾಂಧಿಯವರನ್ನು ಆಸ್ಪತ್ರೆಗೆ ಒಯ್ಯಲಾಗಿದೆ ಎಂದಷ್ಟೇ ಸುದ್ದಿ ಬಿತ್ತರವಾಗಿತ್ತಲ್ಲದೆ ಅವರ ನಿಧನದ ಸುದ್ದಿ ಇನ್ನೂ ಪ್ರಸಾರವಾಗಿರಲಿಲ್ಲ. ಇಡೀ ಆಕಾಶವಾಣಿ ಜಾಗೃತವಾಯಿತು. ಮಾಮೂಲಿಯಾಗಿ ಎರಡುಗಂಟೆ ಮೂವತ್ತು ನಿಮಿಷಕ್ಕೆ ಕೊನೆಯಾಗುತ್ತಿದ್ದ ನಮ್ಮ ನಿಲಯದ ಎರಡನೆಯ ಪ್ರಸಾರ ಅಂದು ಕೊನೆಯಾಗದೆ ದೆಹಲಿಕೇಂದ್ರದಿಂದ ವಾರ್ತಾ ಬುಲೆಟಿನ್ ಗಳನ್ನು ನಿರಂತರ ಪ್ರಸಾರ ಮಾಡತೊಡಗಿತು. ಸಂಜೆಯ ಪ್ರಸಾರಕರು ಬಾರದೆ ನಾನು ಮನೆಗೆ ಹೊರಡುವಂತಿರಲಿಲ್ಲ. ಸಿಟಿಬಸ್, ಆಟೋಗಳ ಓಡಾಟ ನಿಂತೇ ಹೋಗಿದ್ದ ಕಾರಣ ಸಂಜೆಯ ಪಾಳಿಯವರಿಗೆ ಕರ್ತವ್ಯಕ್ಕೆ ಬರಲು ಕಷ್ಟವಾಗಿತ್ತು. ಆದರೆ ನನ್ನ ಪುಣ್ಯಕ್ಕೆ ಸಂಜೆಯ ಪ್ರಸಾರದಲ್ಲಿದ್ದ ಶಂಕರ್ ಭಟ್ ಅವರ ಮನೆ ತುಸು ಸಮೀಪ ಇದ್ದ ಕಾರಣ ಅವರು ನಡೆದೇ ಆಕಾಶವಾಣಿಯನ್ನು ತಲುಪಿದ್ದರು. ಸಿಬ್ಬಂದಿಗಳನ್ನು ಕಛೇರಿಯ ವಾಹನದಲ್ಲಿ ಅವರವರ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಯಿತಾದರೂ ರಸ್ತೆಯುದ್ದಕ್ಕೂ ಒಡ್ಡಿದ ತಡೆ, ಟಯರ್ ಸುಡುವಿಕೆ, ಕಲ್ಲು ತೂರಾಟ ಮುಂತಾದ ಅಪಾಯಕಾರೀ ಸನ್ನಿವೇಶದಿಂದ ನಾವು ಮತ್ತೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕಛೇರಿಗೇ ಮರಳಿದೆವು. ಕೊನೆಗೆ ಪೋಲಿಸ್ ವಾಹನದ ಬೆಂಗಾವಲಿನಲ್ಲಿ ನಾವು ನಮ್ಮ ಮನೆ ಸೇರುವಾಗ ರಾತ್ರಿ ಒಂಬತ್ತು ಗಂಟೆ ಕಳೆದಿತ್ತು. ಈ ನಡುವೆ ಮೂಡಬಿದಿರೆಗೆ ಕರ್ತವ್ಯದ ಮೇಲೆ ಹೋಗಿದ್ದ ನನ್ನ ಯಜಮಾನರು ಮಧ್ಯಾನ್ಹದ ಊಟವೂ ಇಲ್ಲದೆ, ಎದುರಿಗೆ ಸಿಕ್ಕ ವಾಹನಗಳಿಗೆಲ್ಲಾ ಕೈ ತೋರಿಸಿ ಹತ್ತುತ್ತಾ ಇಳಿಯುತ್ತಾ ಹೆಚ್ಚು ಕಡಿಮೆ ನಡೆದೇ ಮನೆ ಸೇರುವಾಗ ರಾತ್ರಿ ಎಂಟು ಗಂಟೆ. ನನ್ನ ಮಗ ಆಗಿನ್ನೂ ಒಂದೂವರೆ ವರ್ಷಗಳ ಕಂದಮ್ಮ. ಮನೆಯಲ್ಲಿ ದೂರವಾಣೀ ವ್ಯವಸ್ಥೆಯೂ ಇಲ್ಲ. ಇಂದಿರಾಗಾಂಧಿಯವರ ಹತ್ಯೆಯ ವಿಚಾರ ತಿಳಿಯದ, ಕನ್ನಡ ಭಾಷೆ ಅರಿಯದ ಮಗುವನ್ನು ನೋಡಿಕೊಳ್ಳುವಾಕೆಯ ಆತಂಕದ ಕ್ಷಣಗಳು, ಏನನ್ನೂ ಆಕೆಗೆ ತಿಳಿಸಲಾಗದ ನಮ್ಮ ಆತಂಕ, ಮೂಡಬಿದಿರೆಗೆ ಹೋದವರ ಸ್ಥಿತಿಯೇನೋ ಎಂಬ ನನ್ನ ಗಾಬರಿ ಎಲ್ಲವೂ ಸೇರಿ ನನ್ನನ್ನು ಹಣ್ಣು ಮಾಡಿತ್ತು.

ಇದೇ ರೀತಿಯ ಇನ್ನೊಂದು ಪ್ರಸಂಗ ಶ್ರೀ ಪೆರಂಬುದೂರಿನಲ್ಲಿ ನಡೆದ ಶ್ರೀ ರಾಜೀವಗಾಂಧಿಯವರ ಹತ್ಯೆ. ಹತ್ಯೆ ನಡೆದ ದಿನ ನಾನು ರಾತ್ರಿಯ ಪಾಳಿಯಲ್ಲಿದ್ದೆ. ಆದರೆ ರಾತ್ರಿಯ ಪ್ರಸಾರದ ಕೊನೆಯ ವಾರ್ತೆಯಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇರಲಿಲ್ಲ. ಆದರೆ ಮರುದಿನ ಬೆಳಗ್ಗೆಯೇ ದಾರುಣವಾರ್ತೆ ಬಂದು ಅಪ್ಪಳಿಸಿತು. ಅಂದು ನಡೆದೇ ಆಕಾಶವಾಣಿಗೆ ಹೋಗಿದ್ದೆ. ಈಗಿನಂತೆ ಆಗ ಕಛೇರಿಯ ವಾಹನವನ್ನು ಬಂದ್ ಸಮಯದಲ್ಲಿ ಹಗಲು ಪಾಳಿಯವರಿಗೆ ನೀಡುತ್ತಿರಲಿಲ್ಲ. ಪಿ.ಜಿ.ಯಲ್ಲಿದ್ದು ಕರ್ತವ್ಯಕ್ಕೆ ಬರುತ್ತಿದ್ದ ಕನ್ಸೆಪ್ಟಾ ಫೆರ್ನಾಂಡಿಸ್ ಉಳಿದುಕೊಳ್ಳುತ್ತಿದ್ದ ಪಿ.ಜಿ.ಕೂಡಾ ಬಂದ್ ಆದ ಕಾರಣ ಸಂಜೆ ನಾವಿಬ್ಬರೂ ನಡೆದೇ ನಮ್ಮ ಮನೆಯನ್ನು ಸೇರಿದ್ದೆವು. ಆಕೆ ಅಂದಿನ ರಾತ್ರಿ ನಮ್ಮ ಮನೆಯಲ್ಲೇ ಉಳಿದ ನೆನಪು. ಆದರೆ ನಾನೀಗ ಹೇಳಹೊರಟಿರುವುದು ನಡೆದುಬಂದು ಆದ ಆಯಾಸದ ಕುರಿತಲ್ಲ. “ರಾಜೀವ ಗಾಂಧಿಯವರ ಹತ್ಯೆಯ ವಿಚಾರವನ್ನು ಹಿಂದಿನ ದಿನದ ರಾತ್ರಿಯ ವಾರ್ತೆಯಲ್ಲಿಯೇ ಹೇಳಿರಬಹುದು, ಆದರೆ ಕರ್ತವ್ಯದಲ್ಲಿರುವ ನೀವು ಅದನ್ನು ಕೇಳಿಸಿಕೊಳ್ಳದೆ ಘೋರ ಅಪರಾಧ ಎಸಗಿದ್ದೀರಿ ” ಎಂದು ನನಗೂ, ನನ್ನ ಜೊತೆ ಅಂದು ಪಾಳಿಯಲ್ಲಿದ್ದ ಶಾರದಾ ಅವರಿಗೂ ನಿಲಯ ನಿರ್ದೇಶಕರು ಗರಂ ಮಾಡಿದ್ದರು. ಯಾಕೆಂದರೆ ಹಿಂದಿನ ದಿನವೇ ಈ ವಿಚಾರ ತಿಳಿದಿದ್ದರೆ ಮರುದಿನದ ಪ್ರಸಾರದಲ್ಲಿ ಮಾಡಬೇಕಿದ್ದ ಬದಲಾವಣೆಗಳನ್ನು ಹಿಂದಿನ ರಾತ್ರಿಯೇ ಮಾಡಬಹುದಾಗಿತ್ತು ಎನ್ನುವುದು ಅವರ ವಾದ. ಹೌದು, ರಾಷ್ಟ್ರ ನಾಯಕರು ನಿಧನ ಹೊಂದಿದಾಗ ಗತಿಸಿದ ವ್ಯಕ್ತಿಯ ಗ್ರೇಡ್ ಗೆ ಅನುಗುಣವಾಗಿ ನಮ್ಮ ಪ್ರಸಾರದಲ್ಲಿ ಮೂರು, ಐದು, ಏಳುದಿನಗಳ – ಹೀಗೆ ಶೋಕಾಚರಣೆಯನ್ನು ಆಚರಿಸುವುದು ಪದ್ಧತಿ. ಆಗ ಸಂತೋಷಸೂಚಕ ಯಾವುದೇ ಕಾರ್ಯಕ್ರಮಗಳನ್ನು, ಅಂಕಿತ ಸಂಗೀತವನ್ನು, ಚಿತ್ರಗೀತೆಗಳನ್ನು ಪ್ರಸಾರಿಸುವಂತಿಲ್ಲ. ಶೋಕದ ತೀವ್ರತೆ ಕಡಿಮೆಯಾಗುತ್ತಾ ಬರುತ್ತಿದ್ದಂತೆ ಭಕ್ತಿ ಪ್ರಧಾನ ಗೀತೆಗಳನ್ನು ಪ್ರಸಾರಿಸಬಹುದು. ಅದುವರೆಗೆ ಅದಕ್ಕೆಂದೇ ಧ್ವನಿಮುದ್ರಿಸಿ ಇಟ್ಟಿರುವ ಶೋಕ ಸಂಗೀತ (ವೀಣೆ, ಸಾರಂಗಿ) ವನ್ನು ನುಡಿಸಬೇಕಾಗಿತ್ತು. ನಮ್ಮ ಕರ್ತವ್ಯ ಲೋಪದ ಕುರಿತ ಆಪಾದನೆಯ ಬಿರುನುಡಿಗಳನ್ನು ಆಗಾಗ ಅವರಿಂದ ಕೇಳಬೇಕಾಗಿ ಬಂದ ನಮಗೆ ಅದರಿಂದ ಬಿಡುಗಡೆ ಸಿಕ್ಕಿದ್ದು ದೆಹಲಿ ಕೇಂದ್ರದ ವಾರ್ತಾ ವಿಭಾಗ ಆಗ ಹದಿನೈದು ದಿನಗಳಿಗೊಮ್ಮೆ ಮಾಡುತ್ತಿದ್ದ ನ್ಯೂಸ್ ರಿವ್ಯೂ ಎಂಬ ಕಾರ್ಯಕ್ರಮದಲ್ಲಿ ಅದು ರಾಜೀವಗಾಂಧಿಯವರು ಹತ್ಯೆಯಾದ ದಿನದ ರಾತ್ರಿಯ ವಾರ್ತೆಯಲ್ಲಿ ಈ ವಿಚಾರ ಬಿತ್ತರಿಸಿರಲಿಲ್ಲ ಎಂಬ ಸ್ಪಷ್ಟೀಕರಣವನ್ನು ಶ್ರೋತೃವೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ನೀಡಿದಾಗಲೇ. ಆದರೆ ವಾರ್ತೆಗಳನ್ನು ಸೂಕ್ಷ್ಮವಾಗಿ ಕೇಳಿಸಿಕೊಂಡು ಪ್ರಸಾರದಲ್ಲಿ ಎಷ್ಟೋ ಮಹತ್ವದ ಬದಲಾವಣೆಗಳನ್ನು ಅಳವಡಿಸಲು ನಾನು ನೆರವಾದ ಸಂದರ್ಭದಲ್ಲಿ ಆ ಬಗ್ಗೆ ಒಳ್ಳೆಯ ಮಾತುಗಳಾಗಲೀ, ಪ್ರಶಂಸಾ ಪತ್ರವಾಗಲಿ ಎಂದೂ ದೊರಕಿದ್ದಿಲ್ಲ. ಆದರೆ ಯಾರೂ ಪ್ರಶಂಸೆ ಮಾಡಲೆಂದೋ, ಇನ್ಯಾವುದೋ ಲಾಭದ ದೃಷ್ಟಿಯಿಂದಲೋ ನಾನು ಎಂದೂ ಕೆಲಸ ಮಾಡಲಿಲ್ಲ. ಪ್ರಾಮಾಣಿಕವಾಗಿ ದುಡಿ, ಇನ್ನೊಬ್ಬರ ಮನಸ್ಸನ್ನು ನೋಯಿಸದಿರು, ಹಿರಿಯರಿಗೆ ಗೌರವ ಕೊಡು – ಇದು ನನ್ನ ಹೆತ್ತವರು ನನಗೆ ಹೇಳಿಕೊಟ್ಟ ಪಾಠ. ಹಿರಿಯರಿಂದ ದೊರೆತ ಈ ಸಂಸ್ಕಾರದಿಂದ ನಾನು ಎಷ್ಟೋ ಬಾರಿ ನನ್ನದಲ್ಲದ ಕೆಲಸವನ್ನು ಮಾಡಿದ್ದೇನೆ.
ಮೊದಲು ಮಂಗಳೂರು ಆಕಾಶವಾಣಿಯ ಬೆಳಗ್ಗಿನ ಪ್ರಸಾರ ಆರು ಗಂಟೆ ಮೂವತ್ತು ನಿಮಿಷಕ್ಕೆ ತೊಡಗುತ್ತಿತ್ತು. ಕ್ರಮೇಣ ಅದು ಆರು ಗಂಟೆ ಹದಿನೈದು ನಿಮಿಷಕ್ಕೆ ಆರಂಭವಾಗತೊಡಗಿತು. ಅಂಥ ಒಂದುದಿನ ಬೆಳಗ್ಗೆ ಕಛೇರಿ ವಾಹನಕ್ಕೆ ಕಾದು ಕಾದು ನಾನು ಮೆಲ್ಲನೆ ಮನೆಯಿಂದ ಹೊರಗೆ ಬಂದು ನಡೆಯತೊಡಗಿ ಬಸ್ ಸ್ಟಾಪ್ ವರೆಗೆ ಬಂದಿದ್ದೆ. ಸಮಯ ಆರು ಗಂಟೆ ಮೀರಿದೆ. ವಾಹನದ ಸುಳಿವಿಲ್ಲ.(ವಾಹನ ಚಾಲಕರ ಅಲರಾಂ ಕೈ ಕೊಟ್ಟಿತ್ತಂತೆ.) ಆರು ಗಂಟೆ ಐದು ನಿಮಿಷಕ್ಕೆಪದವಿನಂಗಡಿಯಿಂದ ಹೊರಡುವ ಹತ್ತೊಂಬತ್ತು ನಂಬರ್ ಸಿಟಿ ಬಸ್ ಏರಿ ಆರು ಗಂಟೆ ಹನ್ನೆರಡು ನಿಮಿಷಕ್ಕೆ ಆಕಾಶವಾಣಿ ಸರ್ಕಲ್ ನಲ್ಲಿ ಇಳಿದು ಉಸಿರು ಕಟ್ಟಿ ಓಡುತ್ತಲೇ ಸ್ಟುಡಿಯೋ ಪ್ರವೇಶಿಸಿ, ಅಂಕಿತಸಂಗೀತವನ್ನು ನಿಗದಿತ ಸಮಯವಾದ ಆರು ಗಂಟೆ ಹದಿಮೂರು ನಿಮಿಷಕ್ಕೆ ಪ್ಲೇ ಮಾಡಿ, ಆರು ಗಂಟೆ ಹದಿನೈದು ನಿಮಿಷಕ್ಕೆ “ವಂದೇ ಮಾತರಂ” ಎಂದು ಏದುಸಿರಲ್ಲಿ ಉದ್ಘೋಷಿಸಿದಾಗ, ಅದುವರೆಗೆ ಈ ಸುದ್ದಿಯೇ ತಿಳಿಯದ ಕಂಟ್ರೋಲ್ ರೂಂ ಸಹಪಾಳಿಗರು ನನ್ನ ಏದುಸಿರು ಕೇಳಿಸಿಕೊಂಡು ಓಡಿ ಬಂದು ನಿಜ ಸಂಗತಿ ತಿಳಿದುಕೊಂಡರು. ಇನ್ನೊಮ್ಮೆ ಬೆಳಗ್ಗಿನ ಪಾಳಿಯಲ್ಲಿದ್ದ ನನ್ನನ್ನು ಒಯ್ಯಲು ಬಂದ ಗಾಡಿ ನಮ್ಮ ಮನೆಯ ಮುಂದೆಯೇ ಕೆಟ್ಟು ನಿಂತಿತು. ಚಾಲಕರು ಅದನ್ನು ರಿಪೇರಿ ಮಾಡಿ ಹೊರಡುವಷ್ಟು ಸಮಯ ಇಲ್ಲದ ಕಾರಣ ನಮ್ಮ ಮನೆಯ ಕೈನೆಟಿಕ್ ನಲ್ಲಿ ಇಂಜಿನಿಯರಿಂಗ್ ವಿಭಾಗದ ಸ್ಟೀವನ್ ಆಳ್ವಾರ ಜೊತೆ ನಾನು ನಿಗದಿತ ಸಮಯದ ಒಳಗೆ ಆಕಾಶವಾಣಿ ತಲುಪಿ, ಪ್ರಸಾರವನ್ನು ಆರಂಭಿಸಿದ್ದೆ. ಇನ್ನೊಮ್ಮೆ ಮತ್ತೆ ಮುಂಜಾನೆಯ ಪಾಳಿ, ಹೊತ್ತು ಮೀರಿದರೂ ಕಾಣದ ವಾಹನ, ಯಥಾ ಪ್ರಕಾರ ನಡೆದೇ ಬಸ್ ಸ್ಟಾಪ್ ತಲುಪಿದ್ದ ನಾನು ಯಾರದೋ ಬೈಕ್ ನಲ್ಲಿ ತ್ರಿಬ್ಬಲ್ ರೈಡ್ ನಲ್ಲಿ ಆಕಾಶವಾಣಿ ತಲುಪಿ ಪ್ರಸಾರ ಆರಂಭಿಸಿದ್ದೆ. ತ್ರಿಬ್ಬಲ್ ರೈಡ್ ನ ಘಟನೆ ನೆನೆದರೆ ಈಗಲೂ ಉಸಿರು ಕಟ್ಟುತ್ತದೆ, ಪರದೆಯ ಹಿಂದಿನ ಈ ಸರ್ಕಸ್ ಗಳು ಇನ್ನೆಷ್ಟೋ ಇವೆ. ಆದರೆ ನಮ್ಮದೇ ಕೈನೆಟಿಕ್ ಕೈ ಕೊಟ್ಟು ನಾನು ಪ್ರಸಾರಕ್ಕೆ ತಡವಾಗಿ ತಲುಪಿ ಮೆಮೋ ಪಡೆದ ಒಂದು ಘಟನೆಯೂ ನನ್ನ ಈ ಪಯಣದ ನೆನಪಿನ ಖಜಾನೆಯಲ್ಲಿದೆ. ಆಕಾಶವಾಣಿಯ ಪ್ರಸಾರಕ್ಕೆ ಯಾರು ತಡವಾಗಿ ಬಂದರೂ ಅದು ಅಂಥ ದೊಡ್ಡ ಸಂಗತಿಯಾಗುವುದಿಲ್ಲ, ಆದರೆ ಉದ್ಘೋಷಕರು ತಡವಾದರೆ ಮಾತ್ರ ಮೆಮೋ ಸಿಗುತ್ತದೆ.
ನನ್ನ ನಿವೃತ್ತಿಯ ಅಂಚಿನಲ್ಲಿದ್ದಾಗ ನಾನು ಮೊಣಕಾಲಗಂಟಿನ ಶಸ್ತ್ರಕ್ರಿಯೆಗೆ ಒಳಪಡಬೇಕಾಯಿತು. ಬಳಿಕ ನಾನು ಎರಡು ತಿಂಗಳ ಕಾಲ ವೈದ್ಯಕೀಯ ರಜೆಯಲ್ಲಿದ್ದೆ. ಮೇ ಇಪ್ಪತ್ತ ಮೂರಕ್ಕೆ ನನ್ನ ಶಸ್ತ್ರಕ್ರಿಯೆಯಾಗಿತ್ತು. ನಾನು ಪೂರ್ತಿ ಚೇತರಿಸಿಕೊಂಡಿರಲಿಲ್ಲ. ಜುಲೈ ಮೊದಲ ವಾರದಲ್ಲಿ ಶರಭೇಂದ್ರ ಸ್ವಾಮಿಯವರು ನಮ್ಮ ಮನೆಗೆ ಬಂದು ಹತ್ತೊಂಬತ್ತನೆಯ ತಾರೀಕು ಕರ್ನಾಟಕದ ಎಲ್ಲಾ ಬಾನುಲಿ ಕೇಂದ್ರಗಳು ಸಹಭಾಗಿತ್ವದಲ್ಲಿ “ಭಾವಯಾನ’ವೆಂಬ ಭಾವಗೀತೆಗಳ ವಿಶಿಷ್ಟ ಕಾರ್ಯಕ್ರಮವನ್ನು ಪ್ರಸಾರಿಸಲಿದ್ದು, ನೇರ ಪ್ರಸಾರದ ಈ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ನನ್ನ ಉಪಸ್ಥಿತಿ ಅನಿವಾರ್ಯ ಎಂದು ಕೇಳಿಕೊಂಡರು. ಬೆಂಗಳೂರು, ಮಂಗಳೂರು, ಭದ್ರಾವತಿ, ಮೈಸೂರು, ಧಾರವಾಡ, ಗುಲ್ಬರ್ಗಾ ಕೇಂದ್ರಗಳಲ್ಲಿ ರಾಗ ಸಂಯೋಜನೆ ಮಾಡಿದ ಆಯಾ ಭಾಗದ ಕವಿಗಳ ಭಾವಗೀತೆಗಳನ್ನು ಮೊದಲು ಕವಿವಾಣಿ, ಅನಂತರ ಹಾಡು – ಹೀಗೆ ಲೈವ್ ಆಗಿ ಒಂದು ನಿಲಯದ ಬಳಿಕ ಇನ್ನೊಂದು ನಿಲಯವು ಸರದಿಯಂತೆ ಪ್ರಸಾರ ಮಾಡಲಿದ್ದು, ಎರಡು ಸುತ್ತುಗಳಲ್ಲಿ ಪ್ರತಿ ನಿಲಯವೂ ತನ್ನ ಭಾವಗೀತೆಗಳನ್ನು ಪ್ರಸ್ತುತ ಪಡಿಸಬೇಕಾಗಿತ್ತು. ಕವಿಯ ವಿವರ, ಗೀತೆಯ ಭಾವಾರ್ಥ, ಹಾಡುವವರ, ಸಂಗೀತಸಂಯೋಜಕರ, ಪಕ್ಕವಾದ್ಯದವರ ವಿವರಗಳೊಂದಿಗೆ ನಿರೂಪಿಸಬೇಕಾದ ಸೇತುವಿನಂಥಾ ಈ ವಿಶಿಷ್ಟ ಕಾರ್ಯಕ್ರಮ ಆಯೋಜಕರಿಗೆ, ತಾಂತ್ರಿಕ ವಿಭಾಗದವರಿಗೆ ಬಹಳ ಛಾಲೆಂಜಿಂಗ್ ಅನ್ನುವಂಥದ್ದು. ಒಂದು ನಿಲಯದ ನಿರೂಪಣೆಯ ಕೊನೆಯ ಕ್ಯೂ ಸಿಕ್ಕ ಕೂಡಲೇ ಆ ನಿಲಯದ ಸಂಪರ್ಕ ಕಡಿತಗೊಂಡು ಮತ್ತೊಂದು ನಿಲಯಕ್ಕೆ ಸಂಪರ್ಕ ಜೋಡಣೆಯಾಗುವ ಈ ರಿಲೇ ಓಟದಲ್ಲಿ ನುರಿತ ಉದ್ಘೋಷಕರೇ ಬೇಕಾಗಿರುವುದರಿಂದ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನಿವಾರ್ಯವೆಂದು ಮೇಲಧಿಕಾರಿಗಳ ಅಭಿಪ್ರಾಯವಾಗಿತ್ತು.
ಶಸ್ತ್ರ ಚಿಕಿತ್ಸೆಯ ನೋವು, ಸರಿಯಾಗಿ ನಡೆಯಲಾಗದ, ಗಂಟೆಗಟ್ಟಲೆ ಕೂರಲಾಗದ ದೈಹಿಕ ತೊಂದರೆಗಳಿಂದ ಬಳಲುತ್ತಿದ್ದರೂ ನಾನದನ್ನು ಒಪ್ಪಿಕೊಂಡೆ. ಕಾರ್ಯಕ್ರಮ ಪ್ರಸಾರಕ್ಕೂ ಮುನ್ನ ಸತತ ಮೂರು ದಿನಗಳ ಕಾಲ ಆರೂ ನಿಲಯಗಳು ಸೇರಿ ನಡೆಸಿದ ರಿಹರ್ಸಲ್ ನಲ್ಲಿ ಭಾಗವಹಿಸಿದ್ದೇ ಅಲ್ಲದೆ, ಕಾರ್ಯಕ್ರಮ ಪ್ರಸಾರ ಬೆಳಗ್ಗೆ ಒಂಬತ್ತೂವರೆಗೆಂದು ನಿಗದಿಯಾಗಿದ್ದರೂ, ಬೆಳಗ್ಗೆ ಎಂಟು ಗಂಟೆಗೆಲ್ಲಾ ಸ್ಟುಡಿಯೋ ರಿಹರ್ಸಲ್ ಗೆಂದು ಹಾಜರಿದ್ದು, ಮಧ್ಯಾನ್ಹ ಒಂದು ಗಂಟೆ ಹತ್ತು ನಿಮಿಷದ ವರೆಗೂ ನಿರಂತರ ನಡೆದ ಲೈವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮಂಜೇಶ್ವರ ಗೋವಿಂದ ಪೈ, ಸುಬ್ರಾಯ ಚೊಕ್ಕಾಡಿ, ಅ.ನಾ.ಪೂರ್ಣಿಮಾ ಹಾಗೂ ಬಾಲಕೃಷ್ಣ ಹೊಸಂಗಡಿ ಇವರ ಪರಿಚಯ, ಕವಿತೆಯ ಸಾರ ಇವನ್ನು ನಿರೂಪಿಸುತ್ತಾ, ಕವಿಗಳಿಗೆ ಕವಿತೆ ಓದುವಂತೆ, ಗಾಯಕರಿಗೆ ಹಾಡುವಂತೆ ಕೇಳಿಕೊಳ್ಳುತ್ತಾ, ಭಾಗವಹಿಸಿದ ಹತ್ತಾರು ಸಂಗೀತಕಲಾವಿದರು, ತಾಂತ್ರಿಕ ಮಿತ್ರರು, ಕಾರ್ಯಕ್ರಮ ಮಿತ್ರರೇ ಅಲ್ಲದೆ ಕೆಲವು ಪ್ರಮುಖ ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ ಈ “ಭಾವಯಾನ”ವೆಂಬ ಅಪೂರ್ವ ಕಾರ್ಯಕ್ರಮ ಸೊಗಸಾಗಿ, ಯಾವುದೇ ತಾಂತ್ರಿಕ ಅಡಚಣೆ ಇಲ್ಲದೇ ಪ್ರಸಾರವಾಯಿತು. ನನ್ನ ದೈಹಿಕ ಅನಾರೋಗ್ಯದ ನಡುವೆಯೂ ಈ ಕೆಲಸವನ್ನು ಸಂತೋಷದಿಂದ ಮಾಡಿದ್ದೆ. ಈ ಕೆಲಸಕ್ಕಾಗಿ ನನಗೆ ಯಾವ ಕಂಪಸೇಟರೀ ರಜೆಗಳು ಸಿಗುವಂತೆಯೂ ಇರಲಿಲ್ಲ. ಆದರೆ ಅತ್ಯಂತ ಸೂಕ್ಷ್ಮ ಪ್ರಸಾರವೊಂದರ ನಿರ್ವಹಣೆಗೆ ನನ್ನ ಅನಿವಾರ್ಯತೆಯನ್ನು ನನ್ನ ಮೇಲಧಿಕಾರಿಗಳು ಮನಗಂಡು, ನನ್ನನ್ನು ವೈದ್ಯಕೀಯ ರಜೆಯಲ್ಲಿದ್ದರೂ ಕರೆಸಿಕೊಂಡದ್ದೇ ನನ್ನ ಕಾರ್ಯನಿಷ್ಠೆಗೆ, ಕರ್ತೃತ್ವಶಕ್ತಿಗೆ ಸಂದ ಪುರಸ್ಕಾರ ಎಂದೇ ನಾನು ತಿಳಿದಿದ್ದೇನೆ.
ಮುಂದಿನ ವಾರಕ್ಕೆ ►




