spot_imgspot_img
spot_img

ಬಾನುಲಿ ಪಯಣವನ್ನು ಸಹ್ಯವಾಗಿಸಿದ ಬಾಳ ಪಯಣಿಗರು

BanuliPayanaನನ್ನ ನಿವೃತ್ತಿಯ ದಿನ ಆಕಾಶವಾಣಿಯ ಮನೋರಂಜನಾ ಸಂಘದವರು ಏರ್ಪಡಿಸಿದ ವಿದಾಯ ಸಮಾರಂಭದಲ್ಲಿ ಅದರ ಅಧ್ಯಕ್ಷರೂ ನಿಲಯದ ಅಭಿಯಂತರರೂ ಆದ ಶ್ರೀ ಜಿ. ರಮೇಶ್ಚಂದ್ರನ್ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಒಂದು ಮಾತು ಹೇಳಿದರು. ’ಇವತ್ತು ಶ್ರೀಮತಿ ಕಿಣಿಯವರೊಡನೆ ಇನ್ನೊಬ್ಬರು ಕೂಡಾ ನಿವೃತ್ತರಾಗುತ್ತಿದ್ದಾರೆ, ಅವರು ಶ್ರೀಮಾನ್ ರಾಘವೇಂದ್ರ ಕಿಣಿಯವರು. ಇಷ್ಟು ದಿನವೂ ತಮ್ಮ ಸಂಗಾತಿಯನ್ನು ಡ್ಯೂಟಿಗೆ ತಂದು ಬಿಡುವ ಮತ್ತು ಕರೆದೊಯ್ಯುವ ಕೆಲಸವನ್ನು ಅವರು ಚಾಚೂ ತಪ್ಪದೇ ನಿರ್ವಹಿಸಿದ್ದಾರೆ. ಅವರೂ ಈ ಕೆಲಸದಿಂದ ಇನ್ನು ಮುಂದೆ ನಿವೃತ್ತರಾಗಲಿದ್ದಾರೆ” ಎಂಬುದಾಗಿ. ಮರುದಿನ ತನ್ನ ಹುಟ್ಟುಹಬ್ಬವನ್ನು ಆಚರಿಸಲಿರುವ ನನ್ನ ಯಜಮಾನರನ್ನು ಕೆಂಪುಗುಲಾಬಿ ಹೂಗಳ ಗುಚ್ಛವನ್ನಿತ್ತು ಸನ್ಮಾನಿಸಿದ್ದರು ಕೂಡಾ.

Banuli01

Banuli02

ಹೌದು,ನನ್ನ ಮೂರೂವರೆ ದಶಕಗಳ ಬಾನುಲಿ ಪಯಣವನ್ನು ನಿವೃತ್ತಿಯ ದಿನದವರೆಗೂ ಸಾಥ್ ಕೊಟ್ಟು ಸಹ್ಯವಾಗಿಸಿದವರು, ನನ್ನಲ್ಲಿ ಆತ್ಮವಿಶ್ವಾಸ ತುಂಬಿದವರು, ನನ್ನ ವೃತ್ತಿಜೀವನದ ನೋವುನಲಿವುಗಳಲ್ಲಿ ನಿರಂತರ ನನ್ನ ಜೊತೆಗೂಡಿದವರು ನನ್ನವರಾದ ಶ್ರೀ ಉಳ್ಳಾಲ ರಾಘವೇಂದ್ರ ಕಿಣಿಯವರು. ನನ್ನ ವಿವಾಹಕ್ಕೂ ಮುನ್ನ ಕೆಲವು ತಿಂಗಳ ಕಾಲ ಪಾಳಿಯ ಉದ್ಯೋಗಕ್ಕೆ ಸಹಕರಿಸಿದ ಸಹೋದ್ಯೋಗಿ ಶ್ರೀಮತಿ ಗಿರಿಜಾ, ನನ್ನವರ ಟೂರ್ ಸಂದರ್ಭದಲ್ಲಿ ಹಾಗೂ ಮಗ ಚಿಕ್ಕವನಿದ್ದಾಗ ಆಗಾಗ ನನ್ನೊಡನಿದ್ದು ಎಲ್ಲ ವಿಧದಲ್ಲಿ ಸಹಕರಿಸಿದ ನನ್ನ ಹೆತ್ತವರು, ನನ್ನ ಚಿಕ್ಕಪ್ಪನ ಮಗಳು ವೃಂದಾ, ಅಣ್ಣನ ಮಗಳು ಆಶಾಲತಾ, ಕಾಲಕಾಲಕ್ಕೆ ಮನೆವಾರ್ತೆಯಲ್ಲಿ ನೆರವಾದ ಆಪ್ತಸಹಾಯಕಿಯರಾದ ಪ್ರೇಮಾ, ಸುಮತಿ, ಮಂಗಳಾ, ಸುಷ್ಮಾ ಹಾಗೂ ಕಲಾವತಿ – ಇವರೆಲ್ಲರ ನೆರವನ್ನೂ ಸದಾ, ಸರ್ವದಾ ನಾನು ಸ್ಮರಿಸುತ್ತೇನೆ. ಇವರಿಲ್ಲದೇ ಹೋಗಿದ್ದರೆ ನಾನು ನನ್ನ ಈ ಅತಿಕಠಿನ ಪಾಳಿಯ ಉದ್ಯೋಗವನ್ನು ನಿಶ್ಚಿಂತೆಯಿಂದ ಹಾಗೂ ಪೂರ್ಣ ಮನಸ್ಸಿನಿಂದ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಕ್ತಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ.

ನನ್ನ ಯಜಮಾನರನ್ನು ನಾನು ಮುಖ್ಯವಾಗಿ ಸ್ಮರಿಸುವುದು ಅವರ ಶಿಸ್ತುಬದ್ಧ ಜೀವನಕ್ಕಾಗಿ. ಮನೆಸಾಮಾನು, ತರಕಾರಿ, ಬ್ಯಾಂಕ್ ವ್ಯವಹಾರ, ಕರೆಂಟ್ ಬಿಲ್, ಫೋನ್ ಬಿಲ್, ಆದಾಯ ತೆರಿಗೆ ಫೈಲಿಂಗ್, ಜೀವವಿಮೆ, ತಿಂಗಳ ಔಷಧ ಖರೀದಿ – ಹೀಗೆ ಯಾವುದೇ ವ್ಯಾವಹಾರಿಕ ವಿಷಯಗಳಿಗಾಗಿ ನಾನು ತಲೆಕೆಡಿಸಿಕೊಳ್ಳದಂತೆ ತಾವೇ ಎಲ್ಲವನ್ನೂ ಚಾಚೂ ತಪ್ಪದೇ ನಿರ್ವಹಿಸಿದವರು ಅವರು. ನಾನು ಆಫೀಸಿನಿಂದ ಆಗಾಗ ತರುತ್ತಿದ್ದ ಆಫೀಸ್ ಆರ್ಡರ್, ಪೇ ಸ್ಲಿಪ್, ಸರ್ಕ್ಯುಲರ್ – ಹೀಗೆ ನನ್ನ ಉದ್ಯೋಗಕ್ಕೆ ಸಂಬಂಧಿಸಿದ ಸಣ್ಣ ಸಣ್ಣ ಕಾಗದದ ಚೂರುಗಳನ್ನೂ ಕಳೆಯದಂತೆ ಚೊಕ್ಕವಾಗಿ ಫೈಲ್ ಮಾಡುವುದು, ಬೇಕೆಂದಾಗ ಅದರ ಝೆರಾಕ್ಸ್ ಪ್ರತಿ ಒದಗಿಸುವುದು – ಇಂಥ ಎಲ್ಲ ಕೆಲಸಗಳನ್ನೂ ಸ್ವಸಂತೋಷದಿಂದ ಮಾಡುತ್ತಿದ್ದುದೇ ಅಲ್ಲದೆ, ಆಯಾ ಫೈಲ್ ಗಳಿಗೆ ಒಂದೊಂದು ಶಿರೋನಾಮೆ ಕೊಟ್ಟು, ನಾನು ಆಫೀಸಿನಿಂದ ಫೋನಿನಲ್ಲಿ ವಿಚಾರಿಸಿದರೂ ನನ್ನ ಉದ್ಯೋಗಕ್ಕೆ ಸಂಬಂಧ ಪಟ್ಟ ಎಲ್ಲ ವಿವರಗಳನ್ನೂ ಅವರು ನನಗೆ ಹೇಳಬಲ್ಲವರಾಗಿದ್ದರು.

ಆಕಾಶವಾಣಿಯಲ್ಲಿ ಸಂತೆ ಹೊತ್ತಿಗೆ ಮೂರುಮೊಳ ನೆಯ್ದು ಪ್ರಸಾರದ ಬಳಿಕ ಬೇಕಾಬಿಟ್ಟಿ ಬಿಸಾಡುತ್ತಿದ್ದ, ಎಲ್ಲೆಂದರಲ್ಲಿ ಇಡುತ್ತಿದ್ದ ನನ್ನ ಬರವಣಿಗೆಗಳನ್ನು ಕೂಡಾ(ಪುಣ್ಯಕ್ಕೆ ಅವು ಮನೆವರೆಗೆ ಬಂದಿದ್ದರೆ) ತಮ್ಮ ಚೊಕ್ಕ ಫೈಲಿಂಗ್ ಗೆ ಅವರು ಒಳಪಡಿಸುತ್ತಿದ್ದ ಕಾರಣ ಕೆಲವಾದರೂ ಉತ್ತಮ ಬರಹಗಳು ಕಳೆದುಹೋಗದೇ ಉಳಿದಿವೆ.

Banuli03

ಮನೆಯಲ್ಲೇ ಖಾಯಂ ಆಗಿ ಇರುತ್ತಿದ್ದ ಆಪ್ತ ಸಹಾಯಕಿಯರು ತಮ್ಮ ಮದುವೆಯಾಗಿ ತೆರಳಿ ಮುಂದೆ ಮತ್ತೋರ್ವಳು ಸಿಗುವವರೆಗಿನ ಕಾಲಾವಧಿಯಲ್ಲಿ ವಾಷಿಂಗ್ ಮೆಶೀನ್ ಮೂಲಕ ಬಟ್ಟೆ ಒಗೆತ, ಒಣಗಿದ ಬಟ್ಟೆಗಳನ್ನು ಇಸ್ತ್ರಿಯವನಲ್ಲಿ ಕೊಡುವುದು, ತರುವುದು ಇವೆಲ್ಲವೂ ಎಂದೂ ನನ್ನ ತಲೆನೋವಿನ ವಿಷಯಗಳಾಗಿರಲಿಲ್ಲ.

ಬೆಳಗ್ಗಿನ ಪಾಳಿಯಲ್ಲಿ ಎಷ್ಟೋ ಬಾರಿ ಕಚೇರಿಯ ವಾಹನ ಹೊತ್ತು ಮೀರಿದರೂ ಬಾರದಿದ್ದಾಗ ಅವರ ಸವಿನಿದ್ದೆಯನ್ನು ತೊರೆದು ನನ್ನನ್ನು ಆಕಾಶವಾಣಿಗೆ ತಲುಪಿಸಿದ್ದಾರೆ. ರಾಜ್ಯ ಸರಕಾರದ ಸ್ವಾಮ್ಯದ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಅವರನ್ನು ಬಿಜಾಪುರಕ್ಕೆ ವರ್ಗ ಮಾಡಿದಾಗ ಇನ್ನೂ ಏಳು ವರ್ಷಗಳ ಸೇವಾವಧಿ ಇದ್ದರೂ (ಮಗ ಆಗ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ್ದ) ಮನೆಯಲ್ಲಿ ನಾನೊಬ್ಬಳೇ ಆಗುತ್ತೇನೆಂದು ಸ್ವಯಂ ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡ ಅವರ ದೊಡ್ಡತನವನ್ನು ಎಂದೂ ಮರೆಯಲಾಗದು.

ಅವರ ಸ್ವಯಂ ನಿವೃತ್ತಿಯ ಬಳಿಕ ಆ ಹೊತ್ತಿಗಾಗಲೇ ನನ್ನ ಕಾಲುಗಂಟಿನ ನೋವು ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿದಿನ ನನ್ನನ್ನು ಆಕಾಶವಾಣಿಗೆ ಒಯ್ಯುವ ಹಾಗೂ ಮರಳಿ ಕರೆತರುವ ಕೆಲಸವನ್ನು ಅವರು ಎಂಟು ವರ್ಷಗಳ ಕಾಲ ತಪ್ಪದೇ ಮಾಡಿದ್ದಾರೆ. ಈ ವಿಷಯದಲ್ಲಿ ಅವರೆಂದೂ ಅಸಡ್ಡೆ ಮಾಡಿದ್ದಾಗಲೀ ನೆವನಗಳನ್ನು ಹೇಳಿದ್ದಾಗಲೀ ಇಲ್ಲ.

ಮುಖ್ಯವಾಗಿ ಅವರನ್ನು ನಾನು ನೆನೆಸಬೇಕಾದುದು ಊಟ ತಿಂಡಿಯ ಬಗ್ಗೆ ಹೆಚ್ಚಿನ ಕೊಸರಾಟಗಳಿಲ್ಲದ ಅವರ ಸ್ವಭಾವಕ್ಕಾಗಿ. ಬೆಳಗ್ಗೆ ನಾಲ್ಕು ಗಂಟೆಗೇ ಮಾಡಿಟ್ಟ ತಣಿದ ಉಪ್ಪಿಟ್ಟು, ಒಣಪಲ್ಯ, ತಿಳಿಸಾರು ಇವು ಯಾವುದನ್ನೂ ಕೊಂಕು ತೆಗೆಯದೆ, ಮುಖ ಸಿಂಡರಿಸದೇ ತಿನ್ನುತ್ತಿದ್ದ ಅವರ ಹೊಂದಾಣಿಕೆಯ ಗುಣವನ್ನು ಎಂದೂ ಮರೆಯಲಾಗದು. ಅದಕ್ಕಾಗಿಯೆ ಮಗ ತಾನು ಉದ್ಯೋಗಿಯಾದ ಬಳಿಕ ಅಪ್ಪ ಹಾಗಾದರೂ ಬಿಸಿಮಾಡಿ ತಿನ್ನಲೆಂದು “ಓವೆನ್”ತಂದುಕೊಟ್ಟರೂ ಅದನ್ನವರು ಬಳಸುತ್ತಿದ್ದುದು ಕಮ್ಮಿ. ಮೊದಲು ಒಂಬತ್ತೂವರೆಗೆ ಕೊನೆಗೊಳ್ಳುತ್ತಿದ್ದ ಬೆಳಗ್ಗಿನ ಪ್ರಸಾರ ಕೊನೆಗೆ ಬೆಳೆಬೆಳೆದು ಮಧ್ಯಾಹ್ನದ ಪ್ರಸಾರದ ಜೊತೆಗೇ ಕೂಡಿಕೊಂಡಾಗ, ಬೆಳಗ್ಗಿನ ಪಾಳಿ ಮುಗಿಸಿ ಬಂದು ಅನ್ನ ಮಾಡುವುದು ಕಷ್ಟವೆಂದು ತನ್ನ ಕರ್ತವ್ಯಕ್ಕೆ ತೆರಳುವ ಮೊದಲೇ ಅನ್ನದ ಕುಕ್ಕರಿಟ್ಟು ವಿಶಲ್ ಕೂಗಿಸಿ ಹೋಗುತ್ತಿದ್ದರು.

ಮಗ ಪ್ರಾಥಮಿಕ ತರಗತಿಗಳಲ್ಲಿದ್ದಾಗ ಕೆಲವುಕಾಲ ನಮಗೆ ಮನೆಯಲ್ಲಿ ಖಾಯಂ ಸಹಾಯಕಿಯರಿರಲಿಲ್ಲ. ಈ ಸಮಯದಲ್ಲಿ ನನ್ನ ಮುಂಜಾವಿನ ಮತ್ತು ರಾತ್ರಿಯ ಪಾಳಿಗಳಲ್ಲಿ ಮಗನಿಗೆ ಸ್ನಾನಕ್ಕೆ ಬಿಸಿನೀರು ಕಾಯಿಸಿ ಮೀಯಿಸುವ, ತಿಂಡಿ ತಿನ್ನಿಸಿ ಯೂನಿಫಾರಂ ಹಾಕಿ ಕಳಿಸುವ ಜವಾಬ್ದಾರಿ ಅವರದೇ. ಅವನ ಕ್ಲಾಸ್ ಟೆಸ್ಟ್ ಗಳ ಸಮಯದಲ್ಲಿ ನಾವು ಮಾಡಿಕೊಳ್ಳುತ್ತಿದ್ದ ಹೊಂದಾಣಿಕೆಯನ್ನು ನೆನೆದರೆ ಕಣ್ಣಂಚು ಒದ್ದೆಯಾಗುತ್ತದೆ. ತಿಂಗಳ ಕೊನೆಯ ವಾರ ಮಗನಿಗೆ ಕ್ಲಾಸ್ ಟೆಸ್ಟ್ ಗಳ ಸಮಯ ಹಾಗೂ ಇವರಿಗೆ ಉತ್ತರಕನ್ನಡ ಜಿಲ್ಲೆಗೆ ಪ್ರವಾಸ ಹೋಗುವ ಸಮಯ. ಈ ಸಮಯದಲ್ಲಿ ನನಗೆ ವಾರವಿಡೀ ಮಧ್ಯಾಹ್ನದ ಪಾಳಿ ಸಿಗುವುದು ಕಷ್ಟ. ಒಂದಾದರೂ ಬೆಳಗ್ಗಿನ ಹಾಗೂ ರಾತ್ರಿಯ ಪಾಳಿಯನ್ನು ಮಾಡಲೇ ಬೇಕಾಗುತ್ತಿತ್ತು. ಅಂಥ ಸಮಯದಲ್ಲಿ ನಾನು ಸೋಮವಾರ ಬೆಳಗ್ಗಿನ ಪಾಳಿ ಮಾಡುತ್ತಿದ್ದೆ. ನಾನು ಡ್ಯೂಟಿ ಮುಗಿಸಿ ಬಂದ ಮೇಲೆ ಇವರು ಟೂರ್ ಹೊರಡುತ್ತಿದ್ದರು. ಮರುದಿನ ನನಗೆ ವಾರದ ರಜೆ, ಬುಧವಾರ ವಿಭಾಗದ ಧ್ವನಿಮುದ್ರಣದ ಕೆಲಸ, ಗುರುವಾರ ಮಧ್ಯಾಹ್ನದ ಪಾಳಿ, ಶುಕ್ರವಾರ ಕಂಪಸೇಟರೀ ಆಫ್, ಶನಿವಾರ ಇವರು ಟೂರ್ ಮುಗಿಸಿ ಬರುವ ದಿನ ನಾನು ರಾತ್ರಿ ಪಾಳಿಯಲ್ಲಿರುತ್ತಿದ್ದೆ. ಇದು ಸಹಾಯಕರಿಲ್ಲದ ಸಮಯದಲ್ಲಿ ಇವರ ಟೂರನ್ನು ನಿಭಾಯಿಸುತ್ತಿದ್ದ ವಿಧಾನ. ವಾರವಿಡೀ ಟೂರಿನಲ್ಲಿ ಮನೆ ಊಟವಿಲ್ಲದೆ ಪರಿತಪಿಸುವ ಇವರು ಊರಿಗೆ ಬಂದ ದಿನವಾದರೂ ನಾನು ಮನೆಯಲ್ಲೇ ಇದ್ದು ಅವರನ್ನು ಉಪಚರಿಸಲಾಗದ ನನ್ನ ಅವಸ್ಥೆಗೆ ನನಗೇ ರೋಸಿ ಹೋಗುತ್ತಿತ್ತು. ಮರುದಿನ ಜಗತ್ತಿಗೇ ಭಾನುವಾರ ರಜಾದಿನವಾದರೂ ನನಗೆ ರಜೆ ಇಲ್ಲ. ಭಾನುವಾರದ ರಜೆ ಪಡೆಯಬೇಕಾದರೆ ಸಾಕಷ್ಟು ಹೋರಾಟ ಮಾಡಬೇಕಿತ್ತು. ಎಷ್ಟೋ ಬಾರಿ ಸಾಕಪ್ಪಾ ಈ ಉದ್ಯೋಗ ಎಂದುಕೊಂಡರೂ, ನಿವೃತ್ತಿಯವರೆಗೆ ನನ್ನನ್ನು ಮುನ್ನಡೆಸಿದ್ದು ನನ್ನವರ ಸಹಾಯಹಸ್ತ, ಸಹನೆ, ಪ್ರೋತ್ಸಾಹ ಹಾಗೂ ಔದಾರ್ಯ.

ಎರಡು ಸಾವಿರದ ಹನ್ನೆರಡನೆಯ ಇಸವಿ ಅಕ್ಟೋಬರ ಮೂವತ್ತೊಂದರಂದು ನನ್ನವರಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಯಾಯಿತು. ಅದರ ಬಳಿಕ ಅವರು ಸುಮಾರು ಎರಡು – ಮೂರು ತಿಂಗಳು ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆದರು. ಭಾರ ಎತ್ತುವಂತಿಲ್ಲ, ಬಗ್ಗುವಂತಿಲ್ಲ, ತುಂಬಾ ಆಯಾಸ ಪಟ್ಟುಕೊಳ್ಳುವಂತಿಲ್ಲ. ಅವರೆಷ್ಟು ದುಡಿಯುತ್ತಿದ್ದರು ಎಂದು ನಿಜವಾಗಿ ನನಗೆ ಅರಿವಾದದ್ದು ಈ ಸಮಯದಲ್ಲಿ. ಮನೆಗೆ ಬೇಕಾದ ಸಾಮಾನು ತರುವುದಿರಲಿ, ನನಗೆ ಗೊತ್ತೇ ಇರದ ಬ್ಯಾಂಕ್ ವ್ಯವಹಾರ – ಎಲ್ಲವೂ ನನ್ನ ಮೇಲೆ ಬಿದ್ದಾಗ ನಾನು ತತ್ತರಿಸಿ ಹೋಗಿದ್ದೆ. ಎರಡು ತಿಂಗಳ ಕಾಲ ನಾನೂ ರಜೆ ಹಾಕಿ ಅವರ ಆರೈಕೆ ಮಾಡಿ ಮತ್ತೆ ಡ್ಯೂಟಿಗೆ ಹೊರಟಾಗ ಬಸ್ಸಿನಲ್ಲಿ ಓಡಾಟ, ಇತರ ಹೆಚ್ಚುವರಿ ಕೆಲಸಗಳಿಂದ ಜರ್ಜರಿತಳಾಗಿದ್ದ ನನಗೆ ಇಷ್ಟು ದಿನಗಳ ಕಾಲ ಇಷ್ಟು ನಿಶ್ಚಿಂತಳಾಗಿ ಕೆಲಸ ನಿರ್ವಹಿಸುವಲ್ಲಿ ನನ್ನವರ ಪಾತ್ರ ಏನು ಎಂಬುದರ ನಿಜ ದರ್ಶನವಾಯಿತು. ಬಿಲ್ ಪೇಮೆಂಟ್ ಗಳನ್ನು ಮಗ ಆನ್ ಲೈನ್ ನಲ್ಲಿ ನಿರ್ವಹಿಸಿದ ಕಾರಣ ಅಷ್ಟು ತಲೆನೋವು ತಪ್ಪಿತು.

ಎರಡು ಸಾವಿರದ ಹದಿಮೂರರ ಜನವರಿಯಲ್ಲಿ ನನ್ನ ಬಾಲ್ಯಕಾಲದ ನೆನಪುಗಳ ಗುಚ್ಛ “ಬಳ್ಳಂಬೆಟ್ಟಿನ ಬಾಲ್ಯಕಾಲ” ಪುಸ್ತಕ ಬಿಡುಗಡೆ ನನ್ನ ತವರೂರಿನಲ್ಲಿ ಆದಾಗ ಅವರು ಪ್ರಥಮ ಬಾರಿಗೆ ಊರಿನಿಂದ ಹೊರಗೆ ಪ್ರಯಾಣ ಮಾಡಿದರು, ತಮ್ಮ ದೈಹಿಕ ನಿಶ್ಶಕ್ತಿಯ ನಡುವೆಯೂ ಅವರು ನನ್ನ ಪುಸ್ತಕವನ್ನು ಬೆಂಗಳೂರಿನ ಪ್ರಕಾಶಕರಿಂದ ತರಿಸುವ, ಬ್ಯಾನರ್ ಸಿದ್ಧ ಪಡಿಸುವ, ಊರಿನಲ್ಲಿ ಆ ಸಮಾರಂಭ ಏರ್ಪಡಿಸುವ ಎಲ್ಲ ಜವಾಬ್ದಾರಿಗಳನ್ನೂ ಹೊತ್ತರು. ಮಗ ರಾಹುಲ ಹಾಗೂ ಸೊಸೆ ಶ್ಯಾಮಲಾ ಪ್ರೀತಿಯಿಂದ ಪುಸ್ತಕ ಬಿಡುಗಡೆಯ ಕೆಲಸವನ್ನು ನಿಭಾಯಿಸಿದರು.

ಈ ನಡುವೆ ಎರಡು ಸಾವಿರದ ಹದಿಮೂರರ ಮೇ ತಿಂಗಳಿನಲ್ಲಿ ನನಗೆ ಹೈದರಾಬಾದಿನ ಪ್ರಾದೇಶಿಕ ತರಬೇತಿ ಕೇಂದ್ರದಿಂದ ತರಬೇತಿಗೆ ಹಾಜರಾಗುವಂತೆ ಕರೆ ಬಂದಾಗ, ಮಂಗಳೂರಿನಿಂದ ಹೈದರಾಬಾದ್ ವರೆಗೆ ಸಂಜೆ ಮೂರೂವರೆಯಿಂದ ಮರುದಿನ ಎಂಟೂವರೆ ವರೆಗೆ ಸುದೀರ್ಘ ಹದಿನೇಳು ಗಂಟೆಗಳ ಬಸ್ ಪ್ರಯಾಣವನ್ನು ನನ್ನೊಡನೆ ಮಾಡಿ ಅಲ್ಲಿಯ ಉರಿ ಸೆಖೆಯಲ್ಲಿ ಒಂದು ವಾರ ಕಳೆದು ಮರಳಿ ಮತ್ತೆ ಹದಿನೇಳು ಗಂಟೆಗಳ ಬಸ್ ಪ್ರಯಾಣ – ಇದನ್ನು ಹೇಗೆ ತಾನೇ ಮರೆಯಲಿ? ಹೈದರಾಬಾದಿನಲ್ಲಿ ಸೆಖೆ ತಡೆಯಲಾರದೇ ಮಾವಿನ ಹಣ್ಣಿನ ಜ್ಯೂಸ್ ಕುಡಿದೋ ಏನೋ ಅವರ ಹೊಟ್ಟೆ ಕೆಟ್ಟಿದ್ದು, ಬರೀ ಮೊಸರು, ಇಡ್ಲಿ ಮಾತ್ರ ತಿಂದು ದಿನ ದೂಡಿದ್ದು ನೆನೆದರೆ ಸಂಕಟವಾಗುತ್ತದೆ.

ಅದೇ ವರ್ಷ ಜುಲೈ ತಿಂಗಳಿನಲ್ಲಿ ಪುನ: ತಿರುವನಂತಪುರದ ಪ್ರಾದೇಶಿಕ ತರಬೇತಿ ಕೇಂದ್ರದಿಂದ ತರಬೇತಿಗೆ ಕರೆ. ಈ ಬಾರಿ ರೈಲು ಪ್ರಯಾಣ. ನಿರಂತರ ಸುರಿವ ಮಳೆ. ಸಾಲದುದಕ್ಕೆ ಎರಡು ದಿನ ತಿರುವನಂತಪುರದಲ್ಲಿ ಯಾವುದೋ ಕಾರಣಕ್ಕೆ ಬಂದ್. ಆಟೋ ಕೂಡಾ ಸಿಗದ ಪರಿಸ್ಥಿಯಲ್ಲಿ ನಡೆದೇ ಆಕಾಶವಾಣಿ ಕೇಂದ್ರಕ್ಕೆ ಹೋಗಿ, ಬಂದ ಗೊಂದಲಗಳ ನಡುವೆ ಅಂತೂ ತರಬೇತಿ ಮುಗಿಸಿ ಬಂದದ್ದಾಯ್ತು.

ಮುಂಜಾನೆಯ ಪಾಳಿ ಮುಗಿಸಿ ಬಂದು ಊಟದ ಶಾಸ್ತ್ರ ಮುಗಿಸಿ ನೆಪಕ್ಕೊಂದು ಪುಸ್ತಕವೋ ಪತ್ರಿಕೆಯೋ ಹಿಡಿದು ಹಾಸಿಗೆಯಲ್ಲಿ ಉರುಳಿದರೆ ನಿದ್ರೆ ಯಾವಾಗಲೋ ನನ್ನನ್ನು ಆವರಿಸಿರುತ್ತಿತ್ತು. ಸ್ವಯಂ ನಿವೃತ್ತಿಗೆ ಮುನ್ನ ಮಧ್ಯಾಹ್ನದ ಊಟಕ್ಕೆಂದು ಬಂದ ಇವರು ಮರಳಿ ಹೋಗುವ ಮುನ್ನ ನನ್ನ ಮುಖದ ಮೇಲೆ ಬಿದ್ದಿರುತ್ತಿದ್ದ ಪುಸ್ತಕವನ್ನೂ ಕನ್ನಡಕವನ್ನೂ ಸದ್ದಿಲ್ಲದೇ ಎತ್ತಿಟ್ಟು, ಬಾಗಿಲಿಗೆ ಹೊರಗಿನಿಂದ ಡೋರ್ ಲಾಕ್ ಹಾಕಿ ಹೋಗುತ್ತಿದ್ದುದು ನನ್ನ ಅರಿವಿಗೇ ಬರುತ್ತಿರಲಿಲ್ಲ. ಇಂಥ ಬಲವಾದ ಒಂದು ಹಸ್ತ ನನ್ನ ಬೆನ್ನಿಗಿದ್ದ ಕಾರಣ ಮಾತ್ರ ನಾನು ಈ ಮೂವತ್ತೈದು ವರ್ಷಗಳ ಕಾಲ ತುಂಬು ಆತ್ಮವಿಶ್ವಾಸದ ಧ್ವನಿಯಲ್ಲಿ ಮೈಕ್ರೋಫೋನಿನಲ್ಲಿ ಮಾತನಾಡಲು ಸಾಧ್ಯವಾಯಿತು ಎಂದು ನಾನು ಭಾವಿಸುತ್ತೇನೆ.

Banuli04

ಅಪ್ಪನಂತೆ ಮಗ ರಾಹುಲನೂ ನನಗೆ ಪೂರ್ಣ ಪ್ರಮಾಣದ ಸಹಕಾರ ಇತ್ತಿದ್ದಾನೆ. ಅವನು ಚಿಕ್ಕವನಿರುವಾಗ ನಾನು ಆಕಾಶವಾಣಿಯ ಪಕ್ಕದ ಕದ್ರಿ ಪಾರ್ಕಿನಲ್ಲಿರುವ ಜಿಂಕೆ ಪಾರ್ಕಿಗೆ ಹೋಗಿ ಅಲ್ಲಿರುವ ಮಂಗಗಳನ್ನು ನೋಡಲು ಹೋಗುತ್ತೇನೆ ಎಂದು ಅವನಿಗೆ ಗುಮಾನಿ ಇತ್ತು. ಮತ್ತೆ ಕ್ರಮೇಣ ಅವನಿಗೆ ತಾನೇ ತಾನಾಗಿ ಎಲ್ಲವೂ ಅರ್ಥವಾಯಿತು. ಚಿಕ್ಕ ವಯಸ್ಸಿನಿಂದಲೇ ಬಹು ಹೊಂದಾಣಿಕೆಯ ಮನೋಭಾವದ ಹುಡುಗ ಆತ. ಅಮ್ಮನ ಪಾಳಿಯ ಬದುಕಿನ ಎಲ್ಲ ಸಂಕಷ್ಟಗಳೂ ಅವನಿಗೆ ಮನವರಿಕೆಯಾಗುತ್ತಿತ್ತು. ಅವನ ಕಥೆ ಕೇಳುವ ಆಸೆಗಾಗಿ ತಡ ರಾತ್ರಿಯಾದರೂ ಎಚ್ಚತ್ತು ನಾನು ಬಂದ ಮೇಲೆ ಒಂದು ಕಥೆ ಕೇಳಿಯೇ ಅವನು ಮಲಗುತ್ತಿದ್ದುದು ರೂಢಿ. ಒಬ್ಬ ಕುಡುಕನಿಂದ ಅವನ ಸಂಸಾರ ಹಾಳಾದ ಕಥೆಯನ್ನು ನೂರಾರು ಬಾರಿ ನನ್ನಿಂದ ಹೇಳಿಸಿಕೊಂಡಿದ್ದಾನೆ. ಬೀದಿಪಾಲಾದ ಕುಡುಕನ ಕುಟುಂಬಕ್ಕಾಗಿ ಆತ ತುಂಬ ನೊಂದುಕೊಳ್ಳುತ್ತಿದ್ದ. ಅನುಪಮಾ ನಿರಂಜನರ ದಿನಕ್ಕೊಂದು ಕಥೆಯ ಎಲ್ಲ ಸಂಪುಟಗಳೂ ಮುಗಿದು ನಾನೇ ಅವನಿಗಾಗಿ ದಿನಕ್ಕೊಂದು ಕಥೆ ಹೆಣೆದು ಹೇಳುತ್ತಿದ್ದೆ. ಹೀಗೆ ಸಣ್ಣ ವಯಸ್ಸಿನಿಂದಲೇ ಸಂವೇದನಾಶೀಲ ವ್ಯಕ್ತಿತ್ವದ ಆತ ಮುಂದೆ ಬೆಳೆಯುತ್ತಾ ನಾನು ಅಚ್ಚರಿ ಪಡುವಷ್ಟು ಆಳವಾದ ಸಂವೇದನೆಗಳನ್ನು ಬೆಳೆಸಿಕೊಳ್ಳುತ್ತಾ ಸ್ವತಂತ್ರ ಮನೋಭಾವದ ಯುವಕನಾದ. ಚಿಕ್ಕವನಿದ್ದಾಗ ಪಕ್ಕದ ಮನೆಯಲ್ಲಿ ಕೊಟ್ಟ ಕೀಲಿಯಿಂದ ತಾನೇ ಬೀಗ ತೆರೆದು ಊಟ ಬಿಸಿ ಮಾಡಿ ಉಣ್ಣುವ, ಒಣಹಾಕಿದ ಬಟ್ಟೆಬರೆಯನ್ನು ಒಳಗೆ ತಂದು ಹಾಕುವ ಕೆಲಸ ಇತ್ಯಾದಿ ಮಾಡುತ್ತಿದ್ದ. ಮನೆಯಲ್ಲಿ ಅಮ್ಮನಿಲ್ಲವೆಂದು ಕೆಟ್ಟ ಹುಡುಗರ ಸಹವಾಸ ಮಾಡಲಿಲ್ಲ, ಅವನ ಪ್ರತಿ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಮಾತ್ರ ನಾನು ಒಂದು ತಿಂಗಳ ರಜೆ ಹಾಕಿ ಅವನನ್ನು ತಯಾರು ಮಾಡುತ್ತಿದ್ದೆ. ತನ್ನ ಜೊತೆಗೊಬ್ಬ ತಮ್ಮನೋ ತಂಗಿಯೋ ಬೇಕೆಂಬ ಅವನ ಬಾಲ್ಯದ ಕೋರಿಕೆಯನ್ನು ಈಡೇರಿಸದ, ತಾನು ಹಂಬಲಿಸಿದ ಕ್ಷಣಗಳಲ್ಲಿ ಸಿಗದಂಥ ಅಮ್ಮ ನಾನಾಗಿಯೂ ನನ್ನ ಔದ್ಯೋಗಿಕ ಕಷ್ಟಗಳನ್ನು ಅರಿತು ನನ್ನನ್ನು ಕ್ಷಮಿಸುವ ಉದಾರತೆ ಹೊಂದಿದ್ದ. ಬೆಳೆಯುತ್ತಾ ಹೋದಂತೆ ಆತ ನನ್ನ ಗೆಳೆಯನಾದ, ನನ್ನೆಲ್ಲ ಸಮಸ್ಯೆ, ದ್ವಂದ್ವಗಳಿಗೆ ಸೂಕ್ತ ಪರಿಹಾರ, ಸಮಾಧಾನ, ಸಾಂತ್ವನ ಹೇಳಬಲ್ಲ ಆಪ್ತ ಸಮಾಲೋಚಕನಾದ, ಕಂಪ್ಯೂಟರ್, ಮೊಬೈಲ್ ಬಳಸುವಲ್ಲಿ ಆಗಲೀ, ಇನ್ನಿತರ ಯಾವುದೇ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಅದನ್ನು ನಿಭಾಯಿಸಲು ಕಲಿಸುವ ಗುರುವಾದ. ನನ್ನ ನಿವೃತ್ತಿಯ ದಿನದ ವಿದಾಯಕೂಟದಲ್ಲಿ ತಾನೂ ಮಾತನಾಡಿ ತನ್ನ ಅಮ್ಮ ತನಗೆ ಪೂರ್ಣಕಾಲಿಕವಾಗಿ ಮತ್ತೆ ದೊರಕುತ್ತಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದ, ಅಮ್ಮನಿಗೆ ಇಷ್ಟು ಜನಪ್ರಿಯತೆ ಹಾಗೂ ಹೆಸರನ್ನು ತಂದಿತ್ತ ಆಕಾಶವಾಣಿಗೆ ಧನ್ಯವಾದ ಹೇಳಿದ, ಅಪ್ಪ ಹಾಗೂ ಅಮ್ಮನ ಅನಾರೋಗ್ಯದ ಸಂದರ್ಭದಲ್ಲಾಗಲೀ ಅಮ್ಮನ ಔದ್ಯೋಗಿಕ ಬದುಕಿನಲ್ಲಾಗಲೀ ತುಂಬು ಕಾಳಜಿಯಿಂದ ಸಹಕಾರ ನೀಡಿದ ನನ್ನೆಲ್ಲ ಸಹೋದ್ಯೋಗಿಗಳಿಗೆ ಕೈ ಜೋಡಿಸಿ ವಂದನೆ ಸಲ್ಲಿಸಿದ.

ನನ್ನ ಯಜಮಾನರು ಹಾಗೂ ಮಗ ನನ್ನ ಎರಡು ಕಣ್ಣುಗಳಿದ್ದಂತೆ. ಇವರೀರ್ವರು ನೀಡಿದ ಮನೋಬಲ, ಸ್ಥೈರ್ಯ, ಧೈರ್ಯ, ಪ್ರೋತ್ಸಾಹಗಳನ್ನು ನಾನು ಇದಕ್ಕಿಂತ ಕಡಿಮೆ ಮಾತುಗಳಲ್ಲಿ ನಾನು ಹೇಳಲಾರೆ. ಕುಟುಂಬದ ಸಹಕಾರವಿಲ್ಲದೇ ಯಾವ ಸ್ತ್ರೀ ಕೂಡಾ ಸಾರ್ವಜನಿಕ ರಂಗದಲ್ಲಿ ಸಾಧಿಸಲಾರಳು ಎಂದಷ್ಟೇ ಹೇಳಬಲ್ಲೆ.

ಮುಂದಿನ ವಾರಕ್ಕೆ ►

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.