ಜೆಪ್ಪು ಸಂತ ಅಂತೋನಿ ಆಶ್ರಮದ ಪಾಲಕರಾದ ಪಾದುವಾ ಸಂತ ಅಂತೋನಿಯವರ ಪವಿತ್ರ ಅವಶೇಷದ ವಾರ್ಷಿಕ ಮಹೋತ್ಸವು ಫೆಬ್ರವರಿ 8 ರಂದು ಮಂಗಳೂರು ಮಿಲಾಗ್ರಿಸ್ ದೇವಾಲಯದ ಆವರಣದಲ್ಲಿ ಸಾಯಂಕಾಲ 6.00 ಘಂಟೆಗೆ ಸಂಭ್ರಮದ ಬಲಿಪೂಜೆಯೊಂದಿಗೆ ಆಚರಿಸಲಾಯಿತು. ಸಾವಿರಾರು ಭಕ್ತರನ್ನು ಸೆಳೆದ ಈ ಮಹೋತ್ಸವದಲ್ಲಿ ಜಾಗತಿಕ ಶಾಂತಿ ಸೌಹಾರ್ದತೆಗಾಗಿ ವಿಶೇಷ ಪ್ರಾರ್ಥನೆಯು ಶ್ರದ್ಧಾಪೂರ್ವಕವಾಗಿ ನಡೆಸಲಾಯಿತು.


ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಎಲೊಸಿಯಸ್ ಪಾವ್ಲ್ ಡಿಸೋಜರವರು ಸಂಭ್ರಮದ ಬಲಿಪೂಜೆಯನ್ನು ಆರ್ಪಿಸಿದರು. ತಮ್ಮ ಪ್ರವಚನದಲ್ಲಿ ಕುಲಶೇಖರ ಚರ್ಚ್ನ ಧರ್ಮಗುರು ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ರವರು ’ದೇವರು ಕೊಟ್ಟ ಉದಾರ ಕೊಡುಗೆಯನ್ನು ಪ್ರಕಟಿಸು’ ವಿಷಯದ ಕುರಿತು ಸ್ಪೂರ್ತಿದಾಯಕ ಸಂದೇಶ ನೀಡಿದರು.




ಫಾ| ಕ್ಲಿಫರ್ಡ್ ತಮ್ಮ ಪ್ರವಚನದಲ್ಲಿ, ಪವಾಡ ಪುರುಷ ಸಂತ ಆಂತೋಣಿಯವರ ಪವಿತ್ರ ಆವಶೇಶವಾದ ನಾಲಿಗೆಯ ಮಹತ್ವವನ್ನು ಒತ್ತಿಹೇಳುತ್ತಾ, ದೇವರು ದಯಪಾಲಿಸಿದ ವರಗಳನ್ನು ಎಲ್ಲರೂ ಆತನ ಮಹಿಮೆಗಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಶಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ರೋಗಿಗಳು ಮತ್ತು ಬಳಲುತ್ತಿರುವವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾ ಸಂತ ಅಂತೋಣಿ ರೊಟ್ಟಿಯನ್ನು ಆಶೀರ್ವದಿಸಿದರು. ಸಂತ ಅಂತೋಣಿಯವರ ಅವರ ಪುಣ್ಯ ಮಧ್ಯಸ್ಥಿಕೆಯ ಸಂಕೇತವಾಗಿ ಆಶೀರ್ವದಿಸಿದ ರೊಟ್ಟಿಯನ್ನು ಹಾಜರಿದ್ದವರಿಗೆ ವಿತರಿಸಲಾಯಿತು.




ಬಲಿಪೂಜೆಯ ನಂತರ ಜಾಗತಿಕ ಶಾಂತಿಗಾಗಿ ಸಾಮೂಹಿಕ ಮೊಂಬತ್ತಿ ಪ್ರಾರ್ಥನೆಯು ನಡೆಯಿತು. ಆಶ್ರಮದ ನಿರ್ದೇಶಕರಾದ ವಂದನೀಯ ಜೆ. ಬಿ. ಕ್ರಾಸ್ತ ಅವರು ಶಾಂತಿಯ ಅಗತ್ಯತೆಯ ಕುರಿತು ಮಾತಾನಾಡುತ್ತಾ, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್, ರಷ್ಯ ಮತ್ತು ಉಕ್ರೇನ್ ಸೇರಿದಂತೆ 32 ದೇಶಗಳಲ್ಲಿ ನಡೆಯುತ್ತಿರುವ ಘರ್ಷಣೆಗಳು ಮತ್ತು ಅಫ್ಘಾನಿಸ್ತಾನ, ಇಥಿಯೋಪಿಯಾ ಮತ್ತು ಸಿರಿಯಾದಂತಹ ರಾಷ್ಟ್ರಗಳಾದ್ಯಂತ ವಿವಿಧ ಆಂತರಿಕ ಯುದ್ಧಗಳನ್ನು ಉಲ್ಲೇಖಿಸಿದರು. ಬಿಷಪ್ ಅಲೋಶಿಯಸ್ ಪಾವ್ಲ್ ಆವರು ಶಾಂತಿಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಸೇರಿದ ಸಮಸ್ತ ಭಕ್ತಾಧಿಗಳು ಮೊಂಬತ್ತಿ ಉರಿಸಿ ಶಾಂತಿಗಾಗಿ ಪ್ರಾರ್ಥಿಸಿದರು.





ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿಯೂ ಬೆಳಿಗ್ಗೆ 6 ಗಂಟೆಗೆ ಕೊಂಕಣಿ ಭಾಷೆಯಲ್ಲಿ ಬಿಷಪ್ ಕಾರ್ಯದರ್ಶಿ ವಂದನೀಯ ತ್ರಿಶನ್ ಡಿಸೋಜಾ ಅವರ ಬಲಿಪೂಜೆಯನ್ನು ಆರ್ಪಿಸಿದರು. ಪೆರ್ಮನ್ನೂರು ಚರ್ಚ್ನ ಧರ್ಮಗುರು ವಂದನೀಯ ಸಿಪ್ರಿಯನ್ ಪಿಂಟೋ ಅವರು ಬೆಳಗ್ಗೆ 9.30 ಕ್ಕೆ ಎರಡನೇ ಮಹಾಪೂಜೆಯೊಂದಿಗೆ ಆಚರಣೆಯನ್ನು ಮುಂದುವರೆಸಿದರು. ಸಂಜೆ 4.30 ಕ್ಕೆ ಮಿಲಾಗ್ರ್ರಿಸ್ ಚರ್ಚ್ನಲ್ಲಿ ಫಾ. ಎಬಿನ್ ಆವರು ಮಲಯಾಳಂ ಭಾಷೆಯಲ್ಲಿ ವಿಶೇಷ ಬಲಿಪೂಜೆಯನ್ನು ಆರ್ಪಿಸಿದರು.







ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಜೊತೆಗೆ, ಮಿಲಾಗ್ರಿಸ್ ಚರ್ಚ್ನ ಧರ್ಮಗುರು ವಂದನೀಯ ಬೊನಾವೆಂಚರ್ ನಜರೆತ್, ಜೆಪ್ಪುವಿನ ಸಂತ ಆಂತೋಣಿ ಸೆವಾ ಸಂಸ್ಥೆಗಳ ನಿರ್ದೇಶಕ ವಂದನೀಯ ಜೆ.ಬಿ ಕ್ರಾಸ್ತಾ, ಆತ್ಮಿಕ ನಿರ್ದೇಶಕರಾದ ವಂದನೀಯ ಗಿಲ್ಬರ್ಟ್ ಡಿಸೋಜಾ ಮತ್ತು ಸಹಾಯಕ ನಿರ್ದೇಶಕರಾದ ವಂದನೀಯ ಅವಿನಾಶ್ ಪಾಯ್ಸ್, ವಂದನೀಯ ನೆಲ್ಸನ್ ಪೇರಿಸ್ ಮತ್ತು ಇತರ ಧರ್ಮಗುರುಗಳು, ಧರ್ಮಭಗಿನಿಯರು, ಸಾವಿರಾರು ಭಕ್ತಾದಿಗಳು ಹಾಜರಿದ್ದರು.
■ ವರದಿ / ಚಿತ್ರಗಳು: ಕೆನರಾ ಕಮ್ಯುನಿಕೇಶನ್ ಸೆಂಟರ್




