‘ವಿವಿಧತೆಯಲ್ಲಿ ಏಕತೆ’ ನಾಡಿನ ವೈಶಿಷ್ಟ್ಯವಾಗಿದ್ದು, ಕಳೆದ ವಿದಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವ ಭರವಸೆ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಜನ ಸಂಪೂರ್ಣ ಬಹುಮತದ ಬೆಂಬಲ ನೀಡಿದ್ದಾರೆ. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿದ್ದು, ಕ್ರೈಸ್ತ ಧರ್ಮೀಯರಿಗೂ ಕ್ರಿಸ್ಮಸ್ ಹಬ್ಬವನ್ನು ಈ ಹಿಂದಿನಂತೆಯೇ ಸಡಗರೋಲ್ಲಾಸಗಳಿಂದ ಮಧ್ಯರಾತ್ರಿಯ ದಿವ್ಯ ಬಲಿಪೂಜೆಯೊಂದಿಗೆ ಆಚರಿಸಲು ಅನುವು ಮಾಡಿಕೊಡಬೆಕೆಂದು ಕರಾವಳಿ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ಪತ್ರಕರ್ತ ಶ್ರೀ ಆಲ್ವಿನ್ ಮೆಂಡೋನ್ಸಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಏನಿದು ಕ್ರಿಸ್ಮಸ್ ವಿಚಾರ ?
‘ಕ್ರಿಸ್ಮಸ್’ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ಹಬ್ಬ. ಜಗತ್ತಿಗೆ ಶಾಂತಿಯನ್ನು ಬೋಧಿಸಿ ಪರಮಾತ್ಮನಾಗಿರುವ ಪ್ರಭು ಏಸು ಕ್ರಿಸ್ತನ ಜನ್ಮ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಶಾಂತಿಯ ಸಂದೇಶವನ್ನು ಸಾರುವುದೇ ಕ್ರಿಸ್ಮಸ್ ಹಬ್ಬದ ಸಾರ. ಹಾಗಾಗಿ ದೇಶದೆಲ್ಲೆಡೆ, ಹಾಗೂ ರಾಜ್ಯಾದ್ಯಂತ ಡಿಸೆಂಬರ್ 24ರ ಮಧ್ಯರಾತ್ರಿವರೆಗೂ ಚರ್ಚ್ಗಳಲ್ಲಿ ಪ್ರಾರ್ಥನೆ ಕಾರ್ಯಕ್ರಮಗಳು ನೆರವೇರುತ್ತವೆ.

ಏಸು ಕ್ರಿಸ್ತನ ಜನ್ಮದಿನವಾದ ಡಿಸೆಂಬರ್ 25ರ ಆರಂಭದ ಗಳಿಗೆಯಲ್ಲೇ ಡಿಸೆಂಬರ್ 24ರ ಮಧ್ಯರಾತ್ರಿ ಕ್ರಮಿಸುವ ಸಂದರ್ಭದಲ್ಲೇ ವಿಶೇಷ ಪ್ರಾರ್ಥನೆ ನೆರವೇರುವುದು ಶತಮಾನಗಳಿಂದಲೇ ಇರುವ ಸಂಪ್ರದಾಯ. ಈ ಸಾಂಪ್ರದಾಯಿಕ ಆಚರಣೆಯು ಕೆಲವು ವರ್ಷಗಳ ಹಿಂದಿನವರೆಗೂ ದಕ್ಷಿಣಕನ್ನಡ ಸಹಿತ ರಾಜ್ಯದೆಲ್ಲೆಡೆ ಚರ್ಚ್ಗಳಲ್ಲೂ ತಡರಾತ್ರಿವರೆಗೂ ಆಚರಣೆಯಲ್ಲಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭದ್ರತೆಯ ನೆಪವೊಡ್ಡಿ ಕ್ರಿಸ್ಮಸ್ ಹಬ್ಬದ ರಾತ್ರಿ ಪ್ರಾರ್ಥನೆಗೆ ಜಿಲ್ಲಾಡಳಿತ ಅವಕಾಶ ನೀಡದಿರುವುದರಿಂದಾಗಿ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆಲ್ವಿನ್ ಮೆಂಡೋನ್ಸಾ ಅವರು ರಾಜ್ಯ ಸರ್ಕಾರದ ಗಮನಸೆಳೆದಿದ್ದಾರೆ. ಎಲ್ಲಾ ಧರ್ಮಗಳ ಆಚರಣೆಗೆ ಅವಕಾಶ ಕಲ್ಪಿಸುತ್ತಿರುವ ಕರ್ನಾಟಕ ಸರ್ಕಾರ ಕ್ರೈಸ್ತ ಸಮುದಾಯದ ವಿಚಾರದಲ್ಲಿ ತಾರತಮ್ಯ ನಡೆಸುತ್ತಿರುವುದು ಸರಿಯಲ್ಲ ಎಂದವರು ಸರ್ಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ದೇಗುಲಗಳ ಜಾತ್ರಾ ಮಹೋತ್ಸವಗಳಿಗೆ, ವಿವಿಧ ಪ್ರಾರ್ಥನಾ ಮಂದಿರಗಳ ಕಾರ್ಯಕ್ರಮಗಳಿಗೆ ರಾತ್ರಿಯಿಡೀ ದಕ್ಷಿಣ ಕನ್ನಡ ಜಿಲ್ಲಾಡಳಿತ ಅವಕಾಶ ನೀಡುತ್ತದೆ. ಆದರೆ, ಕ್ರೈಸ್ತ ಧರ್ಮೀಯರ ಪವಿತ್ರ ಹಬ್ಬವಾಗಿರುವ ‘ಕ್ರಿಸ್ಮಸ್’ ಪ್ರಾರ್ಥನಾ ಕಾರ್ಯಕ್ರಮವನ್ನು ರಾತ್ರಿ ವೇಳೆ ಆಚರಿಸಲು ಅವಕಾಶ ನೀಡದಿರುವ ಕ್ರಮವು ತಾರತಮ್ಯದ ನಡೆಯಲ್ಲದೆ ಬೇರೇನೂ ಅಲ್ಲ ಎಂದು ಆಲ್ವಿನ್ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಡಿಜಿಟಲ್, ತಂತ್ರಜ್ಞಾನ ಯುಗದಲ್ಲಿ ಭದ್ರತೆಗೆ ಸವಾಲಾಗುವ ಪರಿಸ್ಥಿತಿ ಇಲ್ಲ. ಎಲ್ಲೆಲ್ಲೂ ಸಿಸಿಟಿವಿ ಹಾಗೂ ಇನ್ನಿತರ ಸುಸಜ್ಜಿತ ವ್ಯವಸ್ಥೆ ಇರುವಾಗ ಧಾರ್ಮಿಕ ಕೈಂಕರ್ಯದ ಆಚರಣೆ ಯಾವುದೇ ಆತಂಕವಿಲ್ಲದೆಯೇ ನಡೆಸಬಹುದು ಎಂದು ಸಲಹೆ ಮುಂದಿಟ್ಟಿರುವ ಆಲ್ವಿನ್ ಮೆಂಡೋನ್ಸಾ, ‘ಸರ್ವ ಸಮುದಾಯದ ಶಾಂತಿಯ ತೋಟ’ ಎಂಬ ಸೂತ್ರವನ್ನು ಪುನರುಚ್ಚರಿಸುತ್ತಾ ಆಡಳಿತ ನಡೆಸುತ್ತಿರುವ ಕರ್ನಾಟಕ ಸರ್ಕಾರವು ಎಲ್ಲಾ ಧರ್ಮಗಳಿಗೆ ಅವಕಾಶವಿರುವಂತೆಯೇ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆಯೇ ಕರಾವಳಿಯ ಜಿಲ್ಲೆಗಳಲ್ಲೂ ಕ್ರಿಸ್ಮಸ್ ಹಬ್ಬದ ಪ್ರಾರ್ಥನಾ ಕಾರ್ಯಕ್ರಮಗಳನ್ನು ಸಾಂಪ್ರದಾಯದಂತೆ ಮಧ್ಯರಾತ್ರಿಯೂ ಆಚರಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.




