ಆದಿತ್ಯವಾರ, ಡಿಸೆಂಬರ್ 10 ರಂದು ದುಬಾಯಿಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಯುಎಇ ಘಟಕ ಆಯೋಜಿಸಿದ ದುಬಾಯ್ ಗಡಿನಾಡ ಉತ್ಸವ ದ್ವಿತೀಯ ವರ್ಷದ ಆವೃತ್ತಿಯಲ್ಲಿ ಅನಿವಾಸಿ ಉದ್ಯಮಿ, ಸಮಾಜ ಸೇವಕ, ಸಾಂಸ್ಕೃತಿಕ ಕಾರ್ಯಕರ್ತ, ಗಾಯಕ – ನಟ ಹಿಗೆ ಬಹುಮುಖ ಪ್ರತಿಭೆಯ ಶ್ರೀ ಜೋಸೆಪ್ ಮಥಾಯಸ್ ಇವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರಾದ ಬಸವರಾಜ ಹೊರಟ್ಟಿಯವರು ‘ಗಡಿನಾಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು.

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ರಾಜ್ಯ ಸಭಾ ಸದಸ್ಯರಾದ ಡಾ| ಎಲ್. ಹನುಮಂತಯ್ಯ ಮತ್ತು ಮಂಜೇಶ್ವರ ಲೋಕಸಭಾ ಸದಸ್ಯರಾದ ಎ.ಕೆ.ಎಮ್. ಅಶ್ರಫ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವುಡ್‌ಲೆಮ್ ಪಾರ್ಕ್ ಶಾಲೆಯ ಸಭಾಗೃಹದಲ್ಲಿ ಸರ್ವೋತ್ತಮ ಶೆಟ್ಟಿ ಅಬುದಾಬಿ ಇವರ ಅಧ್ಯಕ್ಷತೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಶ್ರೀ ಜೋಸೆಫ್ ಮಥಾಯಸ್ ಇವರಿಗೆ ಸಮಾಜ ಸೇವೆ ಮತ್ತು ಸಮುದಾಯ ನೇತೃತ್ವ ಕ್ಷೇತ್ರದಲ್ಲಿ ಗಡಿನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೂಲತಃ ಮಂಗಳೂರಿನ ಕುಪ್ಪೆಪದವು ನಿವಾಸಿಯಾಗಿರುವ ಶ್ರೀ ಜೋಸೆಫ್ ಮಥಾಯಸ್ ಅವರು ಮೆರಿಟ್ ಫ್ರೈಟ್ ಸಿಸ್ಟಮ್ಸ್ ಹೆಸರಿನಲ್ಲಿ ಗಲ್ಫ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಉದ್ಯಮಶಾಖೆಗಳನ್ನು ಹೊಂದಿದ್ದು, ಸಾಕಷ್ಟು ಜನರಿಗೆ ಉದ್ಯೋಗ ದಾತರರಾಗಿದ್ದಾರೆ. ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ದಿನದಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕನಗರ ಯುವಕ ಸಂಘದ ಮೂಲಕ ಶಾಲಾ ಮಕ್ಕಳಿಗೆ ಸಮವಸ್ತ್ರ, ಹಿರಿಯ ನಾಗರಿಕರಿಗೆ ಸೀರೆ, ಧೋತಿ, ಸ್ವ ಉದ್ಯೋಗಿಗಳಿಗೆ ಸೈಕಲ್, ಹೊಲಿಗೆ ಯಂತ್ರ ಹಾಗೂ ಅಶಕ್ತ ವರ್ಗದವರಿಗೆ ವೈದ್ಯಕೀಯ ನೆರವನ್ನು ತಮ್ಮ ಮಾತಾ ಪಿತರ ಸ್ಮರಣಾರ್ಥ ಕಳೆದ ಒಂದೂವರೆ ದಶಕದಿಂದ ನೀಡುತ್ತಲೇ ಬಂದಿರುತ್ತಾರೆ.

ಸ್ವತಃ ಉತ್ತಮ ಗಾಯಕರೂ, ನಟರೂ ಆಗಿರುವ ಶ್ರೀಯುತ ಜೋಸೆಫ್ ಮಥಾಯಸ್ ದೇಶ ವಿದೇಶಗಳಲ್ಲಿ ನಡೆಯುವ ಕೊಂಕಣಿ, ಕನ್ನಡ, ತುಳು ಹೀಗೆ ಎಲ್ಲಾ ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೋಷಕರಾಗಿ ನೆರವಿನ ಹಸ್ತ ನೀಡುತ್ತಲೇ ಬಂದಿದ್ದಾರೆ. ತಮ್ಮ ಪ್ರತಿಭೆ ಮತ್ತು ಸಮಾಜ ಸೇವೆಗಾಗಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಶ್ರೀ ಜೋಸೆಫ್ ಮಥಾಯಸ್ ಅವರಿಗೆ ಶಾರ್ಜಾ ಕರ್ನಾಟಕ ಸಂಘ – ಮಯೂರ ಪ್ರಶಸ್ತಿ ಹಾಗೂ ಗಲ್ಫ್ ಕನ್ನಡಿಗರ ಸಂಘ – ವಿಶ್ವ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಸ್ತುತ ಜೋಸೆಫ್ ಮಥಾಯಸ್ ಕುಟುಂಬ ಸಮೇತ ದುಬಾಯ್‌ಯಲ್ಲಿ ವಾಸವಾಗಿದ್ದಾರೆ.




