spot_imgspot_img
spot_img

ಎಲ್ಲಿಗೆ ಪಯಣ ಯಾವುದೋ ದಾರಿ

BanuliPayana 5ಕಳೆದ ಕಂತಿನಲ್ಲಿ ವಸುಂಧರಾ ಎಂಬವರು ನನ್ನ ಮೇಲೆ ಬೀರಿದ ಪ್ರಭಾವದ ಬಗ್ಗೆ ಬರೆದಿದ್ದೆ. ಯುವವಾಣಿ ಕಾರ್ಯಕ್ರಮ ನೀಡಿ ಬಂದ ಮೇಲೆ ಕಾರ್ಯಕ್ರಮ ಪ್ರಸಾರ ಆಗುವ ವರೆಗೆ ಮಾತ್ರ ಆ ಗುಂಗು ಎಂದು ಭಾವಿಸಿದ್ದೆ. ಆದರೆ ಅದು ಅಲ್ಲಿಗೇ ನಿಲ್ಲಲಿಲ್ಲ. ಸ್ನಾತಕೋತ್ತರ ಪದವಿ ಮುಗಿದ ಕೂಡಲೇ ನಾನು ಮಾಡಿದ ಮೊದಲ ಕೆಲಸವೆಂದರೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿದ್ದು. ಆ ಕೆಲಸ ನನಗೆ ಸೂಕ್ತವಾದದ್ದೆ, ಇಲ್ಲವೇ ಎಂದು ಕೂಡಾ ನೋಡಲಿಲ್ಲ. ಒಟ್ಟಿನಲ್ಲಿ ಆರ್ಥಿಕ ಸ್ವಾತಂತ್ರ್ಯ ತಂದು ಕೊಡಬಲ್ಲ, ತನ್ಮೂಲಕ ಆತ್ಮವಿಶ್ವಾಸದಿಂದ ಬದುಕಬಲ್ಲ ಜೀವನಕ್ಕಾಗಿ ನನ್ನ ಹಂಬಲ ತೀವ್ರವಾಗಿತ್ತು. ಈ ನಡುವೆ ೨-೩ ಬ್ಯಾಂಕ್ ಟೆಸ್ಟ್ ಗಳಿಗೆ ಬರೆದೆ. ಒಂದು ಬ್ಯಾಂಕಿನ ಟೆಸ್ಟ್‌ಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜನ್ನು ಕೇಂದ್ರವಾಗಿರಿಸಿದ್ದರು. ಅಲ್ಲಿನ ಒಂದು ಕೊಠಡಿಯಲ್ಲಿ ನಾನು ನನ್ನ ಸೀಟ್ ನಂಬರನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾಗ ಆ ಕೊಠಡಿಗೆ ಕೊಣಾಜೆಯಲ್ಲಿ ನನ್ನ ಸೀನಿಯರ್ ಆಗಿದ್ದ ಬೆನೆಟ್ ಪಿಂಟೊ(ಎಂ.ಕಾಂ) ಅವರೂ ಬಂದರು. ನಾನು ತುಂಬಾ ಸಂತೋಷದಿಂದ ಕಣ್ಣರಳಿಸಿ, “ಓಹ್, ನೀವೂ ಪರೀಕ್ಷೆ ಬರೆಯಲು ಬಂದವರಾ?” ಅಂತ ಕೇಳಿದೆ. ಆಗ ಅವರು, “ಇಲ್ಲ, ನಾನು ಈ ಕಾಲೇಜಿನಲ್ಲಿ ಲೆಕ್ಚರರ್, ನಿಮಗೆ ಪ್ರಶ್ನೆಪತ್ರಿಕೆ ಕೊಡಲು ಬಂದಿದ್ದೇನೆ” ಅಂತ ನಗುತ್ತಾ ಹೇಳಿದ್ರು. ಆದರೆ ನಾನು ನಗಲಿಲ್ಲ. ಅವರನ್ನು ಅಭಿನಂದಿಸುವುದನ್ನೂ ಮರೆತು, ಬಿಟ್ಟ ಕಣ್ಣುಗಳಿಂದ ಅವರ ಆತ್ಮವಿಶ್ವಾಸದ ನಡೆಯನ್ನೇ ನೋಡುತ್ತಾ ಆ ಪರೀಕ್ಷೆಯಲ್ಲಿ ಅದೇನು ಬರೆದೆನೋ, ಬಿಟ್ಟೆನೋ ಒಂದೂ ನೆನಪಿಲ್ಲ.

ಅಲ್ಲಿಂದ ನನ್ನ ಕೆಲಸದ ಬೇಟೆ ಮತ್ತಷ್ಟು ತೀವ್ರವಾಯಿತು. ಹಲವಾರು ಕಾಲೇಜುಗಳಲ್ಲಿ ಸಂದರ್ಶನದ ನಾಟಕ ಮುಗಿಯಿತು. ಪ್ರತಿ ಕಾಲೇಜಿನಲ್ಲೂ ಆಯಾ ಹುದ್ದೆಗೆ ಅವರದೇ ನಿಗದಿಯಾದ ಅಭ್ಯರ್ಥಿಗಳು ಇರುತ್ತಿದ್ದರು. ದೂರದ ಧಾರವಾಡ, ಹರಿಹರಪುರ, ಬೆಂಗಳೂರು, ಮೂಡಿಗೆರೆ, ಗೋಣಿಕೊಪ್ಪ, ಸುಳ್ಯ, ಬ್ರಹ್ಮಾವರ, ಉಡುಪಿ-ಹೀಗೆ ಅಪ್ಪಯ್ಯನೊಡನೆ ಅಲೆಯದ ಊರಿಲ್ಲ. ಸಂದರ್ಶನ ಚೆನ್ನಾಗಿಯೇ ಆಗುತ್ತಿತ್ತು. ಆದರೆ ಅಲ್ಲಿ ಪೂರ್ವನಿಗದಿತ ಅಭ್ಯರ್ಥಿ ನಮ್ಮನ್ನೆಲ್ಲಾ ತನ್ನ ಅನ್ನ ಕಸಿಯಲು ಬಂದವರೇನೋ ಎಂಬಂತೆ ದಯನೀಯ ದೃಷ್ಟಿಯಲ್ಲಿ ನೋಡುವುದೇ ನನಗೆ ಹಿಂಸೆಯೆನಿಸುತ್ತಿತ್ತು. ಒಂದು ಕಡೆ ನನ್ನದೇ ಪರಿಚಯದ ವ್ಯಕ್ತಿ ಇದ್ದು, ಅವರಿಗೆ ಆ ಉದ್ಯೋಗದ ಅವಶ್ಯಕತೆ ನನಗಿಂತಲೂ ಹೆಚ್ಚು ಎಂಬುದನ್ನು ಅರಿತು ನಾನೇ ಅಪ್ಪಯ್ಯನ ಬಳಿ “ಅವರ ಜಾಗವನ್ನು ಕಸಿದು ಕುಳಿತುಕೊಳ್ಳಲಾರೆ” ಎಂದು ಸಂದರ್ಶನವನ್ನೇ ಕೊಡದೆ ಬಂದದ್ದಿದೆ. ಆದರೆ ಒಂದೊಂದು ಊರಿನಲ್ಲೂ ಒಂದೊಂದು ಅನುಭವದ ಪಾಠವನ್ನು ನಾನು ಕಲಿತೆ. ಈ ಉದ್ಯೋಗವೆನ್ನುವುದು ಮರೀಚಿಕೆಯಂತೆ ನನ್ನನ್ನು ಕಾಡತೊಡಗಿತು.

ಎಂ.ಎ ಪರೀಕ್ಷೆಯ ಫಲಿತಾಂಶ ಬಂದು ಘಟಿಕೋತ್ಸವದಲ್ಲಿ ಎಂಟು ಚಿನ್ನದ ಪದಕಗಳನ್ನೂ, ಎರಡು ನಗದು ಬಹುಮಾನಗಳನ್ನೂ ಪಡೆದು ಹೆಮ್ಮೆಯಿಂದ ಮೈಸೂರಿನ ಕ್ರಾಫರ್ಡ್ ಹಾಲಿನ ಮೆಟ್ಟಿಲುಗಳನ್ನು ಇಳಿದು ಬರುವಾಗ ನನ್ನನ್ನು ಹಿಡಿಯುವವರೇ ಇರಲಿಲ್ಲ. ಪ್ರಪಂಚವನ್ನೇ ಗೆದ್ದ ಹುಮ್ಮಸ್ಸಿನಲ್ಲಿ ನಾನಿದ್ದೆ, ಆದರೆ ನಾನು ಸಂದರ್ಶನಕ್ಕೆ ಹೋದ ಕಡೆಯೆಲ್ಲಾ ನನಗಿಂತ ಸೀನಿಯರ್ಸ್, ಡೊಕ್ಟೊರೇಟ್ ಕೂಡಾ ಮಾಡಿದ್ದು ಕೆಲಸವಿಲ್ಲದೇ ಅಲೆಯುತ್ತಿದ್ದುದನ್ನು ನಾನು ನೋಡಿದೆ. ಅವರ ಕಣ್ಣುಗಳಲ್ಲಿದ್ದ ಹತಾಶೆ, ನಿರ್ಲಿಪ್ತತೆ ನೋಡಿ ನನ್ನ ಉತ್ಸಾಹ ನಿಧಾನವಾಗಿ ಕರಗತೊಡಗಿತು. ಸಾಲದ್ದಕ್ಕೆ ನನ್ನ ವಯಸ್ಸು ಕಾಲು ಶತಮಾನವನ್ನು ಸಮೀಪಿಸುತ್ತಿತ್ತು. ನನ್ನ ಓರಗೆಯವರೆಲ್ಲಾ ಮದುವೆಯಾಗಿ ಗಂಡಂದಿರೊಡನೆ ಕಣ್ಣು ಕುಕ್ಕುವಂತೆ ಓಡಾಡತೊಡಗಿದ್ದರು. ಮನೆಯಲ್ಲಿ ಅಮ್ಮ ಮದುವೆಯಾಗುವಂತೆ ವರಾತ ಹಚ್ಚಿದ್ದರು. ಅಪ್ಪಯ್ಯನೂ ಜಾತಕದ ಪ್ರತಿ ಹಿಡಿದು ಅಲ್ಲಿ ಇಲ್ಲಿ ಅಡ್ಡಾಡತೊಡಗಿದ್ದರು. ಆದರೆ ನಾನು ಮಾತ್ರ ಕೆಲಸ ಸಿಗುವವರೆಗೆ ಇರಲಿ ಎಂದು ಪುತ್ತೂರಿನ ವಿಜಯ್ ಟ್ಯುಟೋರಿಯಲ್‌ನಲ್ಲಿ ಕರೆಸ್ಪೋಂಡೆನ್ಸ್ ಎಂ.ಎ. ತರಗತಿಗಳಿಗೆ ನೋಟ್ಸ್ ತಯಾರಿಸಿ ಕೊಡುವ ಕೆಲಸಕ್ಕೆ ಸೇರಿಕೊಂಡೆ. ಅವರು ತಿಂಗಳಿಗೆ ಮುನ್ನೂರು ರೂಪಾಯಿ ಕೊಡುತ್ತಿದ್ದರು. ಪುತ್ತೂರಿನಲ್ಲಿ ಕಾಲೇಜು ಓದಲೆಂದು ಬಾಡಿಗೆಮನೆ ಮಾಡಿಕೊಂಡಿದ್ದ ಸೋದರಮಾವನ ಮಕ್ಕಳ ಜೊತೆ ನಾನೂ ಸೇರಿಕೊಂಡೆ. ಅವರೆಲ್ಲಾ ಕಾಲೇಜಿಗೆ ಹೋಗುವವರಾದುದರಿಂದ ಅವರಿಗೆ ಊಟ, ತಿಂಡಿ ಬೇಯಿಸಿಹಾಕುವ ಕೆಲಸವನ್ನು ನಾನು ವಹಿಸಿಕೊಂಡೆ. ನನ್ನ ಊಟ, ವಸತಿಯ ಖರ್ಚಿಗಾಗಿ ಅವರು ನನ್ನಿಂದ ಬಹಳ ಕಡಿಮೆ ಹಣ ಪಡೆದು ಕೊಳ್ಳುತ್ತಿದ್ದರು. ಮಿತವಾಗಿ ದೀಪ, ಫ್ಯಾನ್ ಬಳಸುವುದನ್ನು ನನಗಿಂತ ಕಿರಿಯರಾದ ಆ ಮಕ್ಕಳಿಂದ ನಾನು ಕಲಿತೆ. ಅವರು ನನಗಿಂತಲೂ ತೀರಾ ಹಿಂದುಳಿದ ಪ್ರದೇಶದಿಂದ ಬಂದವರಾದುದರಿಂದ ಅವರಿಗೆ ವಿದ್ಯುತ್, ಫ್ಯಾನ್ ಇಂಥವುಗಳ ಬಳಕೆಯಿಲ್ಲದೆಯೂ ಬದುಕುವ ಕಲೆ ಗೊತ್ತಿತ್ತು. ನಾನೂ ಹಳ್ಳಿಯಿಂದಲೇ ಬಂದವಳಾದರೂ ಬ್ಯಾಂಕ್ ಆಫೀಸರ್ ಅಣ್ಣನ ಮನೆಯಲ್ಲಿ ಐದು ವರ್ಷ ಕಳೆದು ಬಂದವಳಾದ ಕಾರಣ ಮತ್ತು ಹಾಸ್ಟೆಲ್‌ನಲ್ಲಿ ವಿದ್ಯುತ್ ದೀಪ, ಫ್ಯಾನ್‌ಗಳ ಬಳಕೆ ಮಾಡಿದ ಕಾರಣ ಸ್ವಲ್ಪ ಸುಧಾರಿತ ಬದುಕನ್ನು ರೂಢಿಸಿಕೊಂಡಿದ್ದೆ. ಆದರೆ ಪುತ್ತೂರಿನ ಈ ಕಿರಿಯರ ಜೊತೆ ನಾನು ಜೀವನ ನಿರ್ವಹಣೆಯ ಬಹುಮೂಲ್ಯ ಪಾಠಗಳನ್ನು ಕಲಿತೆ.

ಈ ನಡುವೆ ಮಂಗಳೂರಿನ ಎಸ್.ಡಿ.ಎಂ. ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜಿನವರು ಅಂಶ ಕಾಲಿಕ ಉಪನ್ಯಾಸ ಹುದ್ದೆಗೆ ಕರೆದಿದ್ದರು. ಸಂದರ್ಶನಕ್ಕೂ ಹೋಗಿಬಂದೆ. ಎರಡು ವಾರದ ಒಳಗೆ ಇನ್ನೂರು ರೂಪಾಯಿಗಳ ಅಂಶಕಾಲಿಕ ಕೆಲಸಕ್ಕೆ ಕರೆಪತ್ರ ಬಂತು. ನನಗೆ ಬಂದ ಉದ್ಯೋಗಕ್ಕೆ ಆಯ್ಕೆಯಾದ ಮೊದಲ ಕರೆಪತ್ರ. ಅದನ್ನು ಸಾವಿರ ಸಲ ಓದಿರಬಹುದು. ಮರೆಯುವಂತೆಯೆ ಇಲ್ಲ. ಆದರೆ ಆ ಇನ್ನೂರು ರೂಪಾಯಿಗಳಲ್ಲಿ ಹಾಸ್ಟೆಲ್ ಫೀಸ್ ಕಟ್ಟುವುದು ಹೇಗೆ? ಮಂಗಳೂರಿನಲ್ಲಿದ್ದ ನನ್ನ ಸೋದರತ್ತೆ ಮಗಳು ವಾರಿಜಕ್ಕನ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಆಯಿತು. ನನ್ನನ್ನು ಬಹಳ ಪ್ರೀತಿಯಿಂದ ಕಂಡ ವಾರಿಜಕ್ಕನ ಆತಿಥ್ಯವನ್ನು ಮರೆಯುವಂತೆಯೆ ಇಲ್ಲ. ಆದರೆ ಅವರ ಮನೆಯಿದ್ದ ಬಿಕರ್ನಕಟ್ಟೆಯ ಅಶ್ವತ್ಥಮರದ ಕಟ್ಟೆಯ ಸ್ಟಾಪಿನಿಂದ ರೂಟ್ ನಂ ಇಪ್ಪತ್ತೊಂದರಲ್ಲಿ ಬಂಟ್ಸ್ ಹಾಸ್ಟೆಲ್ ಸ್ಟಾಪ್ ವರೆಗೂ ಪಯಣಿಸಿ ಅಲ್ಲಿಂದ ಕರಂಗಲಪಾಡಿಯ ಒಳದಾರಿಯಲ್ಲಿ ನಡೆದು ಜೈಲ್ ರಸ್ತೆಯಲ್ಲಿ ಉದ್ದಕ್ಕೆ ಸಾಗಿ ಕೆನರಾ ಕಾಲೇಜನ್ನು ದಾಟಿ ಎಸ್.ಡಿ.ಎಂ. ಕಾಲೇಜನ್ನು ಸೇರಬೇಕಾದರೆ ಸಾಕೋಸಾಕಾಗುತ್ತಿತ್ತು. ಬಿಕರ್ನಕಟ್ಟೆಯ ನಿಗದಿತ ಸ್ಟಾಪಿಗೆ ಬರಬೇಕಾದರೇ ಆ ಬಸ್ ತುಂಬಿ ತುಳುಕುತ್ತಿತ್ತು. ಅಲ್ಲಿಂದ ಕೇವಲ ಮೆಟ್ಟಿಲಿನಲ್ಲಿ ನೇತಾಡಿದಂತೆ ಪಯಣಿಸುವಾಗ ತಿರುವುಗಳಲ್ಲಿ ಆಗಿನ ನನ್ನ ಕೃಶಕಾಯ ಎಲ್ಲಿ ಉದುರಿ ಹೋಗುವುದೋ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ನಡೆದು ಬೆವರಿ ಮುದ್ದೆಯಾಗಿ ಕಾಲೇಜಿನ ಗೇಟನ್ನು ಪ್ರವೇಶಿಸುವಾಗ ಅಲ್ಲಿ ಓದುತ್ತಿದ್ದ ಶ್ರೀಮಂತ ವಿದ್ಯಾರ್ಥಿಗಳು ತಮ್ಮ ಕಾರುಗಳಲ್ಲಿ ರೊಯ್ಯನೆ ಒಳಗೆ ಪ್ರವೇಶಿಸುತ್ತಿದ್ದರು. ಕ್ಲಾಸಿನಲ್ಲೂ ವಿಪರೀತ ಚೇಷ್ಟೆಯ ಒಬ್ಬಿಬ್ಬರು ವಿದ್ಯಾರ್ಥಿಗಳಿದ್ದರು. ಆದರೂ ಉತ್ತಮ ಅಧ್ಯಾಪನ ಶೈಲಿಯಿಂದ ನಾನು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರಳಾದೆ. ಆಗಿನ ಪ್ರಾಂಶುಪಾಲರಾದ ಕೃಷ್ಣರಾವ್ ಅವರು ಕಾರಿಡಾರಿನಲ್ಲಿ ಅಡ್ಡಾಡುತ್ತಾ ನನ್ನ ಪಾಠವನ್ನು ಕೇಳಿಸಿಕೊಳ್ಳುತ್ತಿದ್ದರು. ಅವರು ವಿದ್ಯಾರ್ಥಿಗಳನ್ನು ಹತೋಟಿಯಲ್ಲಿಡಬಲ್ಲ ನನ್ನ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದರೋ ಇಲ್ಲಾ ನನ್ನ ಪಾಠದ ಶೈಲಿಯ ಮೌಲ್ಯಮಾಪನ ಮಾಡುತ್ತಿದ್ದರೋ ತಿಳಿಯದು. ಆದರೂ ಅಧ್ಯಾಪನದ ಮೊದಲ ಅನುಭವವನ್ನು ನನಗೆ ನೀಡಿದ ಕಾಲೇಜದು. ಕಾಸರಗೋಡಿನ ನರಸಿಂಹ ಪೈ, ಗುರುಪುರದ ಮೋಹನ ಪ್ರಭು ಮುಂತಾದ ಒಳ್ಳೆಯ ವಿದ್ಯಾರ್ಥಿಗಳು ನನಗಲ್ಲಿ ದೊರೆತರು. ಹಿಂದಿಯನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡ ಗೌತಮ್ ಘಾಟೆ, ಮೆಲ್ವಿನ್ ರೋಡ್ರಿಗಸ್, ದೀಪಕ್ ಮುಂತಾದ ಸ್ನೇಹಪರ ವಿದ್ಯಾರ್ಥಿಗಳೂ ನನಗಲ್ಲಿ ಪರಿಚಯವಾದರು. ಈ ನಡುವೆ ಬದ್ರಿಯಾ ಜೂನಿಯರ್ ಕಾಲೇಜು ಆರಂಭವಾಗಿ ಅಲ್ಲಿಯೂ ನನಗೆ ಅಂಶಕಾಲಿಕ ಕೆಲಸ ದೊರೆತು ನೂರ ಐವತ್ತು ರೂಪಾಯಿ ಸಂಬಳ ಸಿಕ್ಕುತ್ತಿತ್ತು. ಈಗ ಹಾಸ್ಟೆಲ್‌ಗೆ ಸೇರಬಹುದೆಂಬ ಧೈರ್ಯ ಬಂತು. ಕಾಲೇಜುಗಳಿಗೆ ಹತ್ತಿರವಿದ್ದ ರಾಮಕೃಷ್ಣ ವಿದ್ಯಾರ್ಥಿನಿ ಭವನವನ್ನು ಸೇರಿದೆ. ಹಾಸ್ಟೆಲ್‌ನ ಕೆಟ್ಟ ಅಡಿಗೆಯನ್ನು ಊಟಮಾಡುವಾಗ ಮಾತ್ರ ವಾರಿಜಕ್ಕನ ಮನೆಯ ಊಟದ ರುಚಿ ನೆನಪಾಗುತ್ತಿತ್ತು.

ಬದ್ರಿಯಾ ಜೂನಿಯರ್ ಕಾಲೇಜು ಆ ವರ್ಷ ಆಗಷ್ಟೇ ಹೈಸ್ಕೂಲ್‌ನಿಂದ ಪದವಿಪೂರ್ವ ಕಾಲೇಜಿಗೆ ಅನುಮತಿ ಪಡೆದಿತ್ತೇ ಹೊರತು ಸುಸಜ್ಜಿತ ಕಟ್ಟಡ ಪೂರ್ತಿ ಆಗಿರಲಿಲ್ಲ. ಕಿಟಿಕಿಗಳಿಗೆ ಬಾಗಿಲಿರದ ಕಾರಣ ರಸ್ತೆಯಲ್ಲಿ ತುಂಬಿದ ಲಾರಿಗಳು ಏರುದಾರಿಯಲ್ಲಿ ಏರಲಾರದೇ ಏರುವ ಸದ್ದು, ಮೀನನ್ನು ಬಾಯಲ್ಲಿ ಹಿಡಿದು ತಿನ್ನುತ್ತಾ ಅರ್ಧ ಕ್ಲಾಸಿನ ಒಳಗೆ ಚೆಲ್ಲುತ್ತ ಕಾಕಾ ಎನ್ನುವ ಕಾಗೆಗಳು, ಅಕ್ಕಪಕ್ಕದ ಪುಟ್ಟಕ್ಲಾಸಿನ ಮಕ್ಕಳು ಜೋರಾಗಿ ಹೇಳುವ ಮಗ್ಗಿ, ಹಾಡುಗಳು- ಹೀಗೆ ಬದ್ರಿಯಾ ಕಾಲೇಜು ಸದ್ದುಗಳ ಆಗರವಾಗಿತ್ತು. ಆ ಸದ್ದುಗಳನ್ನು ಮೀರಿ ನಾನು ಮಾತನಾಡಬೇಕಿದ್ದುದರಿಂದ ನನಗೆ ಕೆಮ್ಮು ಬರುತ್ತಿತ್ತು. ಪ್ರತ್ಯೇಕ ಸ್ಟಾಫ್ ರೂಮ್ ಆಗಿನ್ನೂ ಇರದ ಕಾರಣ ಆಫೀಸಿನ ಟೈಪ್ ರೈಟರ್ ಸದ್ದುಗಳ ನಡುವೆ ಕುಳಿತು ಮುಂದಿನ ಕ್ಲಾಸಿಗೆ ಸಜ್ಜಾಗಬೇಕಾದ ನಿಮಿತ್ತ ಅಲ್ಲಿ ನನಗೆ ಅಷ್ಟು ಹಿತವೆನಿಸುತ್ತಿರಲಿಲ್ಲ.

ಈ ನಡುವೆ ಸರಕಾರೀ ಕಾಲೇಜಿನಲ್ಲೂ (ಈಗಿನ ವಿಶ್ವವಿದ್ಯಾನಿಲಯ ಕಾಲೇಜು) ಇನ್ನೂರು ರೂಪಾಯಿಗಳ ಅಂಶಕಾಲಿಕ ಕೆಲಸ ಸಿಕ್ಕಿತು. ಒಂದೊಂದೂ ಕ್ಲಾಸಿನಲ್ಲಿ ನೂರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು, ಹಾಜರಿ ಕರೆಯುವಾಗ ಯಾರು ಯಾರ ಹೆಸರಿಗೋ ಓಗೊಡುವ ಬೇರೆ ಯಾರೊ ಕಿಲಾಡಿಗಳು, ಆದರೆ ನೂರಾರು ಮಂದಿಯಲ್ಲಿ ಆ ಹೆಸರಿನ ನಿಜ ವಾರಸುದಾರರು ಯಾರೆಂದು ಪತ್ತೆ ಹಚ್ಚಲಾಗದ ಸ್ಥಿತಿ, ಕಾಸರಗೋಡು, ಕುಂಬಳೆ, ಮಂಜೇಶ್ವರದಿಂದ ರೈಲಿನಿಂದ ಇಳಿದು ಬರುತ್ತಿದ್ದ ಹಿಂಡು ಹಿಂಡು ಮಕ್ಕಳು, ಯಾರು, ಏನು ಎಂದು ತಿಳಿಯದ ಅತಂತ್ರ ಸ್ಥಿತಿ. ಆದರೂ ಕೆಲವು ಒಳ್ಳೆಯ ವಿದ್ಯಾರ್ಥಿಗಳು ನನಗಲ್ಲಿ ಸಿಕ್ಕರು. ಇಲ್ಲಿ ಕನ್ನಡ ಮೇಜರ್‌ಗೆ ಕೂಡಾ ಪಾಠ ಮಾಡುವ ಅವಕಾಶ ನನಗೆ ಸಿಕ್ಕಿತು. ನಾನು ಉಳಿದುಕೊಳ್ಳುತ್ತಿದ್ದ ಹಾಸ್ಟೆಲ್ ವಾಸಿಗಳು ಕೆಲವರು ಇಲ್ಲಿ ನನ್ನ ವಿದ್ಯಾರ್ಥಿಗಳಾಗಿದ್ದರು. ಗಣರಾಜ ಕುಂಬಳೆ, ರತ್ನಾವತಿ ಬೈಕಾಡಿ ಮುಂತಾದ ನನ್ನ ಕನ್ನಡ ಮೇಜರ್ ವಿದ್ಯಾರ್ಥಿಗಳು ಮುಂದೆ ಅಧ್ಯಾಪಕರಾಗಿ ಯಶಸ್ವಿಗಳಾದರು. ಈ ನಡುವೆ ನನಗೆ ಬೆಸೆಂಟ್ ಸಂಜೆ ಕಾಲೇಜಿನಲ್ಲಿ ಕೂಡಾ ನೂರ ಎಂಬತ್ತು ರೂಪಾಯಿಗಳ ಕೆಲಸ ಸಿಕ್ಕಿತು. ಅಲ್ಲಿ ನನಗಿಂತ ವಯಸ್ಸಿನಲ್ಲಿ ಹಿರಿಯರಾದ, ದಿನದ ಹೊತ್ತು ಬೇರೆಡೆ ದುಡಿದು ಸಂಜೆಕ್ಲಾಸಿಗೆ ಬರುವ ವಿದ್ಯಾರ್ಥಿಗಳು ನನಗೆ ಸಿಕ್ಕರು. ನನಗಿಂತ ವಯಸ್ಸಿನಲ್ಲಿ ಹಿರಿಯರಾದವರಿಗೆ ಪಾಠ ಹೇಳುವಾಗ ಸ್ವಲ್ಪ ಮುಜುಗರವಾಗುತ್ತಿತ್ತಾದರೂ ಅವರು ಎಂದೂ ನನಗೆ ತೊಂದರೆ ಕೊಡಲಿಲ್ಲ. ಯಾಕೆಂದರೆ ಅವರೂ ದಿನದ ದುಡಿಮೆಯಿಂದ ದಣಿದು ಬರುತ್ತಿದ್ದರಲ್ಲ. ಆದರೆ ದಿನವಿಡೀ ಉಳಿದ ಎರಡು-ಮೂರು ಕಾಲೇಜುಗಳಿಗೆ ಓಡಾಡಿ, ಸಂಜೆ ಕಾಲೇಜಿಗೆ ಬರುವಾಗ ನಾನು ಮಾತ್ರ ಸೋತು ಹೋಗಿಬಿಡುತ್ತಿದ್ದೆ. ಒಂದು ದಿನ ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಂತೆ ತಲೆ ಸುತ್ತಿ ಬಂದು ಕುಳಿತ ನನ್ನನ್ನು ಓಡಿಹೋಗಿ ನಿಂಬೆಹಣ್ಣು ತಂದು ಶರಬತ್ತು ಮಾಡಿ ಉಪಚರಿಸಿದ ಆ ವಿದ್ಯಾರ್ಥಿಗಳ ಹೃದಯವಂತಿಕೆಯನ್ನು ಎಂದೂ ಮರೆಯಲಾರೆ.

ನಾನಿದ್ದ ಹಾಸ್ಟೆಲ್‌ನಲ್ಲಿ ಈಗ ಸಾಕಷ್ಟು ಸಂಖ್ಯೆಯ ನನ್ನ ವಿದ್ಯಾರ್ಥಿನಿಯರೇ ತುಂಬಿದ ಕಾರಣ, ಕಾಲೇಜು ಮುಗಿಸಿ ಹಾಸ್ಟೆಲ್‌ಗೆ ಬಂದರೂ, ಮುಖದಲ್ಲಿ ಒಣಗಾಂಭಿರ್ಯದ ಮುಖವಾಡ ಹೊರಬೇಕಾದ ಅನಿವಾರ್ಯತೆ ನನಗಾಯಿತು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕಾಲೇಜಿನಿಂದ ಕಾಲೇಜಿಗೆ ತಿರುಗುತ್ತಿದ್ದ ನನ್ನನ್ನು ಮಂಗಳೂರು ಆಕಾಶವಾಣಿಯಲ್ಲಿ ಉದ್ಯೋಗಿಯೂ, ಬೆಸೆಂಟ್ ಸಂಜೆ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿನಿಯೂ ಆಗಿದ್ದ ಗಿರಿಜಾ ಎಂಬವರು ಒಂದು ದಿನ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕರ ಹುದ್ದೆಯೊಂದು ಖಾಲಿಯಿದ್ದು, ಅದಕ್ಕೆ ಅರ್ಜಿ ಕರೆದಿದ್ದಾರೆಂಬ ಹೊಸ ಸುದ್ದಿಯನ್ನು ನನಗೆ ನೀಡಿದರು.

ಮುಂದಿನ ವಾರಕ್ಕೆ ►

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.