spot_imgspot_img
spot_img

ಉದ್ಘೋಷಣೆಯ ಮೊದಲ ಪಾಠಗಳು

SRInnerLogoಕೆ.ಆರ್.ರೈಗಳು ತುಂಬ ಹೃದ್ಯವಾಗಿ ಕೆಲಸವನ್ನು ಕಲಿಸಿಕೊಟ್ಟರು.ಆದರೂ ಅದರಲ್ಲಿ ನಯಗಾರಿಕೆಯನ್ನು ತುಂಬಿದವರು ಹಲವರು.ನಾನು ಕೆಲಸಕ್ಕೆ ಸೇರಿದ ದಿನಗಳಲ್ಲಿ ನಮ್ಮ ಉದ್ಘೋಷಕರಲ್ಲಿ ಹಿರಿಯರಾದ ಶಂಕರ್ ಭಟ್,ಕೆ.ಟಿ.ಕೃಷ್ಣಕಾಂತ್ ಮುಂತಾದವರು ಕೆಲವು ದಿನ ರಜೆಯಲ್ಲಿದ್ದ ಕಾರಣ ,ಕರ್ತವ್ಯಾಧಿಕಾರಿಗಳಾಗಿದ್ದ ಎಚ್.ಸಿ.ವೆಂಕಟೇಶ್ ಎಂಬವರು ಅನೌನ್ಸರ್ ಕೆಲಸವನ್ನು ಮಾಡುತ್ತಿದ್ದರು.ಅವರು ಪ್ರಸಾರದ ಹಲವು ಸೂಕ್ಷ್ಮಗಳನ್ನು,ಉದ್ಘೋಷಣೆಯಲ್ಲಿ ಮಾಡಬೇಕಾದ ಸ್ವರದ  ಏರಿಳಿತಗಳ ಬಗ್ಗೆ ಹೇಳಿಕೊಟ್ಟರು.ಅಷ್ಟೇ ಅಲ್ಲದೆ ಹಳ್ಳಿಯಿಂದ ಬಂದ  ಮೊದ್ದುಮಣಿಯಂತಿದ್ದ ನನಗೆ ಪಟ್ಟಣದ ಕೆಲವು ಶಿಷ್ಟಾಚಾರಗಳನ್ನು,ಡ್ಯೂಟಿರೂಮಿನ ದೂರವಾಣಿ ಕರೆಗಳನ್ನು ಸ್ವೀಕರಿಸುವುದು,ನಯವಾಗಿ ಉತ್ತರಿಸುವುದು ಇತ್ಯಾದಿಗಳನ್ನು ಕಿರಿಯ ತಂಗಿಗೆ ಕಲಿಸುವಂತೆ ಹೇಳಿಕೊಟ್ಟರು.ಆಕಾಶವಾಣಿ ಒಂದು ಸಾಂಸ್ಕೃತಿಕ ಸಂಸ್ಥೆಯಾದುದರಿಂದ ಹೊರಗಿನವರ ಜೊತೆ ನಮ್ಮ ನಡೆನುಡಿ ಹೇಗೆ ನಯನಾಜೂಕಿನಿಂದ ಕೂಡಿರಬೇಕೆಂದು ಅವರು ಬಹಳ ಪ್ರೀತಿಯಿಂದ ಮನನ ಮಾಡಿದರು.ನನ್ನ ವೃತ್ತಿಜೀವನದ ರೂವಾರಿಗಳಲ್ಲಿ ಒಬ್ಬರಾದ ಎಚ್.ಸಿ.ವೆಂಕಟೇಶರನ್ನು ನಾನು ಮರೆಯುವಂತೆಯೇ ಇಲ್ಲ.ಈ ಕಾರಣದಿಂದಲೇ ಮುಂದೆ  ಮೈಸೂರಿನಲ್ಲಿ ನಡೆದ ಅವರ ಮದುವೆಗೆ  ಆರು ತಿಂಗಳ ನನ್ನ ಮಗನನ್ನು ನನ್ನ ತಾಯಿಯ ಸುಪರ್ದಿಗೆ ಒಪ್ಪಿಸಿ ನನ್ನವರೊಡನೆ ನಾನು ಹೋಗಿದ್ದೆ.ಮುಂದೆ ಅವರ ಮಗಳ ಮದುವೆ ಮೈಸೂರಿನಲ್ಲಿ ನಡೆದಾಗ ಅದಕ್ಕೂ ಹೋಗಿಬಂದಿದ್ದೆ.

ವಾರಿಯರ್ ಎಂಬ ಮಲೆಯಾಳಿ ಮನೆಮಾತಿನ ಕರ್ತವ್ಯಾಧಿಕಾರಿಗಳು ತನಗೆ ಕನ್ನಡ ಬಾರದಿದ್ದರೂ ತನ್ನ ಮಲೆಯಾಳ ಮಿಶ್ರಿತ ಕನ್ನಡದಲ್ಲಿ ನನಗೆ ಬಹಳಷ್ಟು ಮಾಹಿತಿಗಳನ್ನು ನೀಡುತ್ತಿದ್ದರು.ರಜೆ ಮುಗಿಸಿ ಬಂದ ಕೃಷ್ಣಕಾಂತರು ಫೇಡರ್ ಗಳನ್ನು ಅರ್ಧಕ್ಕೆ ಇಟ್ಟುಕೊಂಡು ಮಾತಿನ ಹಿನ್ನೆಲೆಯಲ್ಲಿ ಹಾಡುಗಳನ್ನು ಸೂಪರ್ ಇಂಪೋಸ್ ಮಾಡುವುದು,ಒಂದು ಹಾಡು ಮುಗಿಯುತ್ತಿದ್ದಂತೆ ನಿರೂಪಣೆ ಇಲ್ಲದೆ ಇನ್ನೊಂದು ಹಾಡನ್ನು ಚಾಕಚಕ್ಯತೆಯಿಂದ ಗಾಳಿಯಲ್ಲಿ ತೇಲಿಬಿಡುತ್ತಾ ಹಾಡಿನ ನಡುವೆ ಸಂಗೀತದ ದೊಡ್ಡ ಬ್ರಿಜ್ ಬಂದಾಗ ನಿರೂಪಣೆಯನ್ನು ಮಾಡುವುದು-ಹೀಗೆ ಪ್ರಸಾರ ಚಮತ್ಕಾರಗಳನ್ನು ಹೇಳಿಕೊಟ್ಟರು.ಆದರೆ ನಾನು ಅವುಗಳನ್ನು ನನ್ನ ಪ್ರಸಾರದ ವೇಳೆಯಲ್ಲಿ ಅಳವಡಿಸಲಿಲ್ಲ.ಕೊನೆಯವರೆಗೂ ಸಾಂಪ್ರದಾಯಿಕ ಶೈಲಿಯಲ್ಲೇ ನಾನು ಮುಂದುವರಿದೆ.ತೀರಾ ಅವಶ್ಯವೆನಿಸಿದಲ್ಲಿ ಮಾತ್ರ ಅದನ್ನು ಬಳಸಿದೆ.ಆದರೂ ಕೃಷ್ಣಕಾಂತರದು ಪ್ರಸಾರ ವ್ಯವಸ್ಥೆಯಲ್ಲೇ ಹೃದ್ಯವಾದ,ನಾವೀನ್ಯತೆಯನ್ನು ಶೋಧಿಸುವ ಶೈಲಿ.ಪ್ರಸಾರದಲ್ಲಿ ಎಳ್ಳಷ್ಟೂ ಅಂಜಿಕೆಯಿಲ್ಲದ ಅವರ ಮಾತುಗಾರಿಕೆ,ತೆಳು ಹಾಸ್ಯ,ಬುದ್ಧಿವಂತಿಕೆ,ಬರವಣಿಗೆಯ ಗಟ್ಟಿತನ,ಧ್ವನಿಯಲ್ಲಿನ ನವಿರು ಎಲ್ಲವೂ ಪ್ರಶಂಸನೀಯ.

ಹಿರಿಯ ಉದ್ಘೋಷಕರಾದ ಶಂಕರ್ ಭಟ್ ಅವರು ರಜೆ ಮುಗಿಸಿ ಬರುವಾಗಲೇ ಕೆಂಗಣ್ಣು ರೋಗದೊಡನೆ ಬಂದ ಕಾರಣ ಅದು ಹಬ್ಬುವ ಅಪಾಯವಿದ್ದುದರಿಂದ ನಾನು ಅವರೊಡನೆ ಕೆಲಸ ಕಲಿಯುವ ಗೋಜಿಗೆ ಹೋಗಲಿಲ್ಲ.ಅಲ್ಲದೆ ಅವರು ಕೆಲಸ ಮಾಡುವ ಶರವೇಗಕ್ಕೆ ನಾನು ತತ್ತರಿಸಿ ಹೋಗುತ್ತಿದ್ದೆ.ಅವರು ಟರ್ನ್ ಟೇಬಲ್ ಗಳನ್ನು ತಿರುಗಿಸುವ ವೇಗ,ಭೆಲ್ ಮೆಶೀನ್ ಗಳಲ್ಲಿ ಟೇಪ್ ಸುತ್ತುವ ಪರಿ,ಫೇಡರ್ ಗಳು ಕಿತ್ತು ಬರುತ್ತವೆಯೋ ಎಂಬಂತೆ ಅವುಗಳನ್ನು ಆಪರೇಟ್ ಮಾಡುವ ಶರವೇಗ ನೋಡಿದರೆ ಕೆಲಸ ಕಲಿಯುವುದಕ್ಕಿಂತ ನಾನು ಹೆದರಿ ಕಂಗಾಲಾಗುತ್ತಿದ್ದದೇ ಹೆಚ್ಚು.ಅವರು ಹೆಚ್ಚು  ವರ್ಷಗಳ ಅನುಭವ ಹೊಂದಿದವರಾಗಿದ್ದ ಕಾರಣ ನಿಧಾನವಾಗಿ ಕೆಲಸ ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.ಈ ಸತ್ಯ ಮುಂದೆ ನಾನೇ ನನ್ನ ಕಿರಿಯ ಮಿತ್ರರಿಗೆ ಕಲಿಸಿಕೊಡುವ ಸಂದರ್ಭದಲ್ಲಿ ಅರಿವಿಗೆ ಬಂತು.ಆದರೂ ಶಂಕರ್ ಭಟ್ ಅವರು ನಿವೃತ್ತರಾಗುವ ವರೆಗೂ ನನಗೆ ಹಿರಿಯಣ್ಣನಂತೆ ಎಲ್ಲಾ ವಿಷಯಗಳಲ್ಲೂ ಮಾರ್ಗದರ್ಶಕರಾಗಿದ್ದರು ಅನ್ನುವುದನ್ನು ಮರೆಯುವಂತೆಯೇ ಇಲ್ಲ.ಪತ್ರಗಳ ಡ್ರಾಫ್ಟಿಂಗ್ ನಲ್ಲಿ ಅವರು ಎತ್ತಿದ ಕೈ,ಅಲ್ಲದೆ ಯಾವುದೇ ಸಮಸ್ಯೆಯನ್ನು ಅವರ ಬಳಿ ಒಯ್ದರೂ ಅವರ ಬಳಿ  ಸರ್ವ ಸಮ್ಮತವಾದ ಸೂಕ್ತವಾದ ಪರಿಹಾರವೊಂದು ದೊರಕುತ್ತಿತ್ತು.

ಪ್ರಸಾರದ ಬಹು ಮುಖ್ಯಪಾಠಗಳನ್ನು ನನಗೆ ಹೇಳಿಕೊಟ್ಟವರಲ್ಲಿ ಪ್ರಮುಖರು ಕಾರ್ಯಕ್ರಮ ನಿರ್ವಾಹಕರಾದ ಅಬ್ದುಲ್ ರೆಹಮಾನ್ ಪಾಶಾ ಹಾಗೂ ಜಯಶ್ರೀ ಶಾನುಭಾಗ್  ಅವರು.ಪಾಶಾ ಅವರು ಕೇಳುಗನ ದೃಷ್ಟಿಕೋನವನ್ನು ಇರಿಸಿಕೊಂಡು ನಾನು ಬೆಳೆಯಬೇಕಾದ ಆಯಾಮಗಳ ಕುರಿತು ನನ್ನ ಗಮನ ಸೆಳೆದರು.ಜಯಶ್ರೀ ಅವರಂತೂ   ತಾನು  ಉದ್ಘೋಷಕಿಯಾಗಿದ್ದಾಗಿನ ಅನುಭವದ ಸಮೇತ ಹಲವಾರು ಉಪಯುಕ್ತ ಕಿವಿಮಾತುಗಳನ್ನು ಹೇಳಿದರು.ಫಿಲ್ಲರ್ ಗಳನ್ನು ಬಳಸುವ ಬದಲು ಆ ಸಮಯದ ಸದುಪಯೋಗ ಹೇಗೆ ಮಾಡಬಹುದು,ಮೆಷೀನ್ ಗಳ ಬಳಕೆಯಲ್ಲಿ ತೋರಬೇಕಾದ ಕಾಳಜಿ,ನೆನಪಿನ ಶಕ್ತಿಯನ್ನೇ ಬಳಸಿ ನಡೆಸಬೇಕಾದ ಪ್ರಸಾರದ ನಡುವೆ ಯಾವುದೇ ಅಡ್ಡ ಮಾರ್ಗ ಬಳಸದಿರುವುದು,ಅಂದರೆ ಫೇಡರ್ ಗಳ ನೆನಪಿಗಾಗಿ ನಾನು ಬಳಸುತ್ತಿದ್ದ ನನ್ನದೇ ಆದ ವಿಧಾನಗಳ ಬದಲು ನೆನಪಿನ ಶಕ್ತಿಯನ್ನೇ ನೆಚ್ಚಿಕೊಳ್ಳುವ ಬಗ್ಗೆ ಅವರು ಹೇಳಿಕೊಟ್ಟ ಪಾಠಗಳು ಚಿರಸ್ಮರಣೀಯ.ವನಿತಾವಾಣಿಯನ್ನು ಲೈವ್ ಆಗಿ ಪ್ರಸಾರಿಸುವ ಧೈರ್ಯ,ತಾಕತ್ತನ್ನು ಅವರೇ ನನಗೆ ನೀಡಿದರು.ಉದ್ಘೋಷಣೆಯಲ್ಲಿನ ಪುನರುಕ್ತಿಯನ್ನು ನಿವಾರಿಸಿಕೊಳ್ಳುವ ಬಗ್ಗೆ,ವಿಶೇಷ ಶ್ರೋತೃಗಳ ಜೊತೆ ಆತ್ಮೀಯವಾಗಿ ಮಾತನಾಡುವ ರೀತಿ ಇವೆಲ್ಲವನ್ನೂ ಒಂದು ವ್ರತದಂತೆ ಅವರು ಹೇಳಿಕೊಟ್ಟರು ಮತ್ತು ನಾನದನ್ನು ಅಷ್ಟೇ ಭಕ್ತಿ,ಶ್ರದ್ಧೆಯಿಂದ ನನ್ನದಾಗಿಸಿಕೊಂಡೆ.ಅವರ ಕೆಲಸದಲ್ಲಿನ ಅಚ್ಚುಕಟ್ಟುತನ,ಶಿಸ್ತು, ದಿಟ್ಟ ಮನೋಭಾವ,ಅಸ್ಖಲಿತ ಮಾತುಗಾರಿಕೆ,ಸತ್ಯವನ್ನು ಮುಖಕ್ಕೇ ಹೊಡೆದಂತೆ ಹೇಳುವ ಛಾತಿ ಎಲ್ಲವನ್ನೂ ನಾನು ಗಮನಿಸುತ್ತಾ ಹೋದೆ.ಪ್ರಸಾರದ ಬಗ್ಗೆ ಎಷ್ಟೋ ಅಲಿಖಿತ ಪಾಠಗಳನ್ನು ನಾನು ಅವರಿಂದ ಪಡೆದೆ.

ಶಿವಾನಂದ ಬೇಕಲ್ ಅವರು ಆಗ ಬಾಲವೃಂದ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.ಶ್ಯಾಮಣ್ಣನಾಗಿ ಮಕ್ಕಳೊಡನೆ ಮಾತನಾಡುತ್ತಿದ್ದ ಅವರು ನನ್ನನ್ನು ಅವರ ಸಹ ನಿರೂಪಕಿಯಾಗಿ ಸೇರಿಸಿಕೊಂಡು ನನಗೆ ಸುನೀತಕ್ಕ ಎಂಬ ಹೆಸರನ್ನು ಕೊಟ್ಟರು.ಆಗ ನಾವು ನಮ್ಮ ನಿಜ ನಾಮಧೇಯಗಳನ್ನು ಪ್ರಕಟಪಡಿಸುತ್ತಿರಲಿಲ್ಲ.ಈ ಮುಚ್ಚುಮರೆ ಯಾಕಾಗಿ ಅಂತ ನನಗೆ ಅರ್ಥವಾಗಿಲ್ಲ.ಶಂಕರ್ ಭಟ್ ವಸಂತನಾಗಿ,ಕೃಷ್ಣಕಾಂತ್ ಹೇಮಂತನಾಗಿ,ಜಯಶ್ರೀ ಸಂಗೀತಾ ಆಗಿ,ನಾರಾಯಣಿ ದಾಮೋದರ್ ಕವಿತಾ ಆಗಿ ಪತ್ರೋತ್ತರದಲ್ಲಿ ಭಾಗವಹಿಸುತ್ತಿದ್ದರು.ನಾನು ಮತ್ತು ಶಂಕರ್ ಭಟ್ ಯುವಪತ್ರೋತ್ತರ ನಡೆಸಿಕೊಡಲು ಆರಂಭವಾಯಿತು.ಕೆಲವು ಶ್ರೋತೃಗಳ ಕೈಬರಹ ನನಗೆ ಅರ್ಥವೇ ಆಗುತ್ತಿರಲಿಲ್ಲ,ಆದುದರಿಂದ ಹೊಸಬಳಾದ ನನಗಾಗಿ ಶಂಕರ್ ಭಟ್ ಅವರು ಸ್ಕ್ರಿಪ್ಟ್ ಬರೆಯತೊಡಗಿದರು.ಆದರೆ ಅವರ ಬ್ರಹ್ಮಲಿಪಿ ಅವರಿಗೇ ಓದಲು ಕಷ್ಟವಾಗಿ ರೆಕಾರ್ಡಿಂಗ್ ಸಮಯದಲ್ಲೇ ನೇರವಾಗಿ ಪತ್ರಗಳನ್ನೇ ಓದುವುದು ನನಗೆ ಅನಿವಾರ್ಯವಾಯಿತು.ಆದರೂ ಇದರಿಂದ ಸ್ಕ್ರಿಪ್ಟ್ ಇಲ್ಲದೇ ಓದುವ ಕಲೆ ಬಹು ಬೇಗ ಸಿದ್ಧಿಸಿತು.

ನಾನು ಅರೆಕಾಲಿಕ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಗ ನಾನು ಯಾವೊಂದೂ ಸಂಸ್ಥೆಗೆ ಸೇರಿದವಳಲ್ಲ ಎಂಬ ಭಾವ ನನ್ನನ್ನು ಬಹಳವಾಗಿ ನೋಯಿಸುತ್ತಿತ್ತುಆದರೆ ಆಕಾಶವಾಣಿಗೆ  ಸೇರಿದೊಡನೆ ಅದು ನನ್ನನ್ನು ಬಹು ಬೇಗ ತನ್ನ ಆತ್ಮೀಯ ತೆಕ್ಕೆಗೆ ಸೇರಿಸಿಕೊಂಡಿತು. ಮಾತ್ರವಲ್ಲದೆ ನಾನು ಪ್ರತಿಯೊಂದು ವಿಭಾಗಕ್ಕೂ ಬೇಕಾದವಳು ಎಂಬ ಭಾವವನ್ನು ಬಿತ್ತಿ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿತು.ಸೇರಿದ ಮರುದಿನವೇ ಘಟಂ ಕಲಾವಿದರಾದ ಟಿ.ವಿ.ವಾಸನ್ ಅವರು ಸಂಗೀತ ಕಲಾವಿದರ ಕುರಿತ ಇಂಗ್ಲೀಷ್ ಲೇಖನವೊಂದನ್ನು ಕನ್ನಡಕ್ಕೆ ಅನುವಾದಿಸಲು ಕೊಟ್ಟರು.ನಾನದನ್ನು ಚೆನ್ನಾಗಿಯೇ ಅನುವಾದಿಸಿ ಕೊಟ್ಟೆ.

ಆಕಾಶವಾಣಿ ಎಂದರೆ ಕೇವಲ ಹಾಡುಗಳು ಅನ್ನುವ ನನ್ನ ಹಳೆಯ ನಂಬಿಕೆಯ ಬೇರುಗಳು ಸಡಿಲವಾಗತೊಡಗಿದುವು. ದಿನನಿತ್ಯ ಏನಾದರೊಂದು ಹೊಸತನ್ನು ಕಲಿಯುವ ಪ್ರಸಂಗ ಎದುರಾಗುತ್ತಿತ್ತು. ಎಲ್ಲವೂ ತೀರಾ ಹೊಸದು. ಆದರೆ ಗಮನವಿಟ್ಟು ಕೇಳಿದರೆ,ನೋಡಿದರೆ ಕಲಿಯಲು ಕಷ್ಟವಾದುದೇನಲ್ಲ.ಈ ಹೊಸತನ್ನು ಕಲಿಯುವ ಭರಾಟೆಯಲ್ಲಿ ನನ್ನ ಕೈ ಎಟುಕಿಗೇ ಸಿಗುತ್ತಿದ್ದ ನನ್ನ ಪ್ರೀತಿಯ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳನ್ನು ಮೊದಲಿನಂತೆ ಮನಸಾರೆ ಆನಂದಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ,ಮಾತ್ರವಲ್ಲ ಆಕಾಶವಾಣಿಗೆ ಸೇರುವ ಮೊದಲು ಅವುಗಳನ್ನು ಕೇಳಿ ಆನಂದಿಸುತ್ತಿದ್ದ ಮಾನಸಿಕ ಸ್ಥಿತಿಯನ್ನು ನಾನು ಶಾಶ್ವತವಾಗಿ ಮುಂದಿನ ದಿನಗಳಲ್ಲಿ ಕಳೆದುಕೊಂಡೆ ಅಂತ ಈಗ ಅನಿಸುತ್ತಿದೆ.ಯಾಕೆಂದರೆ ಪ್ರತಿ ಬಾರಿ ನನ್ನ ಮೆಚ್ಚಿನ ಹಾಡನ್ನು ಪ್ರಸಾರಿಸುವ ಸಮಯದಲ್ಲಿ ಸಮಯದ ಮಿತಿಗಾಗಿ ಅದನ್ನು ಪೂರ್ತಿ ಪ್ರಸಾರ ಮಾಡಲಾಗದ ಅಥವಾ ಕಮರ್ಷಿಯಲ್ ಸ್ಪೋಟ್ ಗಳ ನಡುವೆ ಅವನ್ನು ತುರುಕಿಸಬೇಕಾದ ಅನಿವಾರ್ಯತೆಗೆ ಕಟ್ಟುಬಿದ್ದು ಆ ಹಾಡುಗಳ  ಮಾಧುರ್ಯವನ್ನು ಸವಿಯುವ ಪುರುಸೊತ್ತೇ ಇರುತ್ತಿರಲಿಲ್ಲ.

ನಾನು ಸೇರಿ ಇನ್ನೂ ಎರಡು ದಿನಗಳಾಗಿದ್ದುವು.ಆಗ ತಿಂಗಳ ಕೊನೆಯ ಭಾನುವಾರ “ಧ್ವನಿ-ಪ್ರತಿಧ್ವನಿ” ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದರು.ಯಾವುದಾದರೊಂದು ಪ್ರಚಲಿತ ವಿಷಯದ ಬಗ್ಗೆ ಮೊದಲೇ ಮೈಕ್ ಮೂಲಕ ಪ್ರಚಾರ ಕೊಟ್ಟು ಆ ಬಗ್ಗೆ ಬರೆಯುವಂತೆ ಕೇಳುಗರಲ್ಲಿ ಕೇಳಿಕೊಳ್ಳಲಾಗುತ್ತದೆ. ಜನರ ಪತ್ರಗಳನ್ನು ಕ್ರೋಢೀಕರಿಸಿ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿತ್ತು.ಮೇ ತಿಂಗಳ ಕೊನೆಯ ಭಾನುವಾರ.ಕಾರ್ಯಕ್ರಮದ ಹೊಣೆಹೊತ್ತ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಎನ್.ಜಿ.ಶ್ರೀನಿವಾಸ್   ಅವರು ಕಾಲುಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು.ಬಂದ ಪತ್ರಗಳನ್ನು ಆಯ್ದು ಅದರಿಂದ ಓದಬೇಕಾದ ಸಾಲುಗಳನ್ನು ಗುರುತಿಸಿ ಗಂಡು ಹಾಗೂ ಹೆಣ್ಣು ಧ್ವನಿ ಎಂದು ವಿಂಗಡಿಸಿ ಧ್ವನಿ ಮುದ್ರಿಸಲು ಅವರು  ಕಾದಿದ್ದರು. ಹೆಣ್ಣುಧ್ವನಿ ಕೊಡುವವರು ಅಂದು ಇನ್ನೂ ಬಂದಿರಲಿಲ್ಲ. ಧ್ವನಿಮುದ್ರಿಸಿದ ಬಳಿಕ ಬಳಿಕ ಕಾರ್ಯಕ್ರಮವನ್ನು ಎಡಿಟ್ ಮಾಡಿ ಅರ್ಧ ಗಂಟೆಯ ಪ್ರಸಾರಕ್ಕೆ ಅಣಿಗೊಳಿಸಬೇಕಾಗಿತ್ತು,ಈ ಎಲ್ಲ ಕೆಲಸವನ್ನು ಅಂದೇ ಮಾಡಬೇಕಿದ್ದುದರಿಂದ ಅವರು ಸ್ವಲ್ಪ ಒತ್ತಡವನ್ನು ಅನುಭವಿಸುತ್ತಾ ಓಡಾಡುತ್ತಿದ್ದವರು ಕೊನೆಗೆ ಅಲ್ಲೇ ಬೆಳಗ್ಗಿನಿಂದಲೂ ಬಂದು ಕೆಲಸ ಕಲಿಯಲೆಂದು ಕುಳಿತಿದ್ದ ನನ್ನನ್ನು ಸ್ವಲ್ಪ ಅನುಮಾನದೊಡನೇ ಸ್ಟುಡಿಯೋದೊಳಕ್ಕೆ ಕರೆದೊಯ್ದರು.ದೀರ್ಘವಾದ ಪತ್ರಗಳು,ಕೆಲವು ಪತ್ರಗಳಲ್ಲಿ ಅಲ್ಲಲ್ಲಿ ಗುರುತಿಸಿಕೊಂಡ ಆಯ್ದ ಸಾಲುಗಳು-ಎಲ್ಲವನ್ನೂ ಒಂದೂ ತಪ್ಪಿಲ್ಲದಂತೆ,ಅವರಿಗೆ ಎಡಿಟಿಂಗ್ ನ ತೊಂದರೆಯೇ ಇಲ್ಲದಂತೆ ಪಟಪಟನೇ ಓದುತ್ತಾ ಹೋದೆ. ಸಹನಿರೂಪಕರಾದ ಎನ್ ಜಿ.ಶ್ರೀನಿವಾಸ್ ಅವರೇ ಕೆಲವೆಡೆ ತಪ್ಪಿದರೂ ನಾನು ತಪ್ಪಲಿಲ್ಲ.ಒಂದೇ ಟೇಕಿಗೆ ಪತ್ರಗಳ ರಾಶಿಯನ್ನು ಓದಿ ಮುಗಿಸಿದ ನನ್ನನ್ನು ಅವರು “ವೆರಿಗುಡ್” ಅಂತ ಪ್ರಶಂಸಿಸಿದರು.ಅಂದೇ ರಾತ್ರಿ ಅದು ಪ್ರಸಾರವಾಯಿತು.

ಮರುದಿನ ಪ್ರೋಗ್ರಾಂ ಮೀಟಿಂಗ್ ನಲ್ಲಿಅದರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.ನಾನು ನನ್ನ ವಿಜಯೋತ್ಸವದ ಗೆಲುವಿನಲ್ಲಿರುವಾಗಲೇ ನಿಲಯನಿರ್ದೇಶಕರು ನನ್ನನ್ನು ತಮ್ಮೊಡನೆ ಬರುವಂತೆ ಹೇಳಿ,ನಿನ್ನೆ ಪ್ರಸಾರವಾದ ಕಾರ್ಯಕ್ರಮದ ಟೇಪಿನೊಡನೆ ಸ್ಟುಡಿಯೋಗೆ  ತೆರಳಿದರು.ಅದನ್ನು ಮತ್ತೆ ರೀ ಪ್ಲೇ  ಮಾಡಿದರು.ನನ್ನ ಉಚ್ಚಾರದಲ್ಲಿನ ದೋಷಗಳನ್ನು ನನಗೆ ತೋರಿಸಿಕೊಟ್ಟರು.ಪ್ರದೇಶಸಮಾಚಾರದ ಶ್ರೀಮತಿ ನಾಗಮಣಿ.ಎಸ್ ರಾವ್ ಅವರ ವಾಚನ ಶೈಲಿಯನ್ನೇ ಅಪ್ರಜ್ನಾಪೂರ್ವಕ  ಅನುಕರಿಸುತ್ತಿದ್ದ ನನ್ನನ್ನು ಆ ಬಗ್ಗೆ ಎಚ್ಚರಿಸಿ,ಆಕೆಯ ಪ್ರಭಾವದಿಂದ ಮುಕ್ತಳಾಗಿ ನನ್ನ ಸ್ವಂತ,ಸ್ವತಂತ್ರ ನಿರೂಪಣಾ ಶೈಲಿಯನ್ನು ರೂಪಿಸಿಕೊಳ್ಳಬೇಕಾದ ಕುರಿತು ಸಾವಕಾಶವಾಗಿ ಮನಸ್ಸಿನೊಳಗೆ ಹೋಗುವಂತೆ ಮನವರಿಕೆ ಮಾಡಿದರು.ನಿಲಯನಿರ್ದೇಶಕ ಸ್ಥಾನದಲ್ಲಿದ್ದೂ  ಶ್ರೀ ಎಚ್.ವಿ.ಆರ್ ಅವರು ನನ್ನಂಥ ಕಿರಿಯಳನ್ನು ಅನುನಯದಿಂದ ಅಂದು ತಿದ್ದದೇ ಹೋಗಿದ್ದರೆ,ನಾನು ಎಂದೂ ಬೆಳೆಯುತ್ತಿರಲಿಲ್ಲ.ನಿಜವಾದ ಕಾಳಜಿ,ಪ್ರೀತಿ,ವಿಶ್ವಾಸ,ಪ್ರಸಾರದ ಒಳಹೊರಗನ್ನು ತಿಳಿದ ಇಂಥ ಇನ್ನೋರ್ವರನ್ನು ನಾನು ನನ್ನ ವೃತ್ತಿಜೀವನದಲ್ಲಿ ಎಂದೂ ಕಾಣಲಿಲ್ಲ.

ಮುಂದಿನ ವಾರಕ್ಕೆ ►

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.