ಇನ್ನೂ ನಾನು ನನ್ನ ಉದ್ಘೋಷಣೆಯ ಹಾಗೂ ಪಾಳಿಯ ಕೆಲಸಗಳನ್ನು ಕಲಿಯುತ್ತಿದ್ದಂತೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡುವ ಅವಕಾಶಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದುವು.ಬೇಸರ,ಬಿಗುಮಾನವಿಲ್ಲದೆ ಅವುಗಳನ್ನು ನಾನು ಸ್ವೀಕರಿಸುತ್ತಾ ಹೋದೆ. ಆಗ ತುಂಬಾ ನಾಟಕಗಳು ನಿರ್ಮಾಣವಾಗುತ್ತಿದ್ದುವು. ಕೆ.ಆರ್.ರೈಗಳು ಆರೋಗ್ಯಜಾಗೃತಿಯನ್ನು ಕುರಿತು ತುಳುವಿನಲ್ಲಿ ಬರೆದ “ಗಿಲೀಟಿನ ಮಾಲು” ಎಂಬ ನಾಟಕದಲ್ಲಿ ಮಗುವಿನ ಪ್ರಾಣಾಂತಿಕ ಸ್ಥಿತಿಯಲ್ಲಿ ಅಳುವ ತಾಯಿಯಾಗಿ ನನ್ನನ್ನು ಅಭಿನಯಿಸುವಂತೆ ಕೇಳಿಕೊಂಡರು.ಸುಮ್ಮನೆ ಅಳುವುದು ಎಷ್ಟು ಕಷ್ಟವೆಂದು ಅವತ್ತೇ ಗೊತ್ತಾದದ್ದು.ಬಾಯಿಗೆ ಸೆರಗು ಅಡ್ಡ ಹಿಡಿದು ನಕ್ಕಿದ್ದೇ ಹೆಚ್ಚು.ಆದರೂ ನಾಟಕ ಅದ್ಭುತವಾಗಿ ಬಂತು ಎಂದು ಪತ್ರೋತ್ತರಕ್ಕೆ ಜನ ಬರೆದರು.ಅದೇ ನಾನು ಮೊದಲು ಅಭಿನಯಿಸಿದ ನಾಟಕ.
ಅಲ್ಲಿಂದ ನಾಟಕಗಳ ಸರಮಾಲೆಯೇ ನನ್ನ ಪಾಲಿಗೆ ಬಂತು.ಬುದ್ಧಪೂರ್ಣಿಮೆಗಾಗಿಯೋ ಏನೋ ನೆನಪಿಲ್ಲ.ಸಾಮ್ರಾಟ್ ಅಶೋಕನು ಕಳಿಂಗ ಯುದ್ಧದಲ್ಲಿ ಗೆದ್ದ ಬಳಿಕ ಅಲ್ಲಿ ನಡೆದ ಸಾವುನೋವುಗಳಿಂದ ನೊಂದು ಭೌದ್ಧ ಮತವನ್ನು ಸ್ವೀಕರಿಸುವ ಕಥೆಯುಳ್ಳ ನಾಟಕ.ಬಹುಶ: ಅದರ ರಚನೆ ನಿಲಯನಿರ್ದೇಶಕರಾದ ಎಚ್.ವಿ.ರಾಮಚಂದ್ರರಾಯರದ್ದು,ಈಗ ಸರಿಯಾಗಿ ನೆನಪಿಲ್ಲ.ಅವರು ಬುದ್ಧನ ಪಾತ್ರವನ್ನು ನಿರ್ವಹಿಸಿದ್ದರು.ಕೃಷ್ಣಕಾಂತ್ ಹಾಗೂ ವಿ.ಬಸವರಾಜ್ ಪ್ರಮುಖ ಪಾತ್ರಗಳಲ್ಲಿದ್ದರು.ವಿ.ಬಸವರಾಜ್ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದರು.ಯುದ್ಧದಲ್ಲಿ ಗೆದ್ದ ಸಿಪಾಯಿಗಳು ಹೆಂಗಸೊಬ್ಬಳ ಮಾನಭಂಗ ಮಾಡುವ ಸಂದರ್ಭ.ಗೆದ್ದ ಸಿಪಾಯಿಯಾಗಿ ಎಚ್.ಡುಂಡಿರಾಜ್ ಮತ್ತು ಮಾನಭಂಗಕ್ಕೊಳಗಾಗುವ ಸ್ತ್ರೀಯಾಗಿ ನಾನು,ನಾನು ಆ ಸಂದರ್ಭದಲ್ಲಿ ಗಟ್ಟಿಯಾಗಿ ಕೂಗಿಕೊಳ್ಳಬೇಕು.ನನ್ನಿಂದ ಕೂಗಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.”ಹಾಸ್ಟೆಲ್ ನಲ್ಲಿ ಜಿರಳೆ ಕಂಡರೆ ಕಿರುಚಿಕೊಳ್ಳುದಿಲ್ವ,ಹಾಗೆ ಕಿಟಾರನೆ ಕಿರುಚಿ”ಅಂತ ಬಸವರಾಜ್ ಅನುನಯಿಸಿ ಹೇಳುತ್ತಿದ್ದರೂ ಮನೆಯಲ್ಲಿ ಜಿರಳೆಗಳ ಸೈನ್ಯವನ್ನೇ ನೋಡಿ ಅಭ್ಯಾಸವಾಗಿದ್ದ ನನಗೆ ಅದನ್ನು ಕಲ್ಪಿಸಿ ಕಿರುಚಲು ಸಾಧ್ಯವಾಗುತ್ತಿಲ್ಲ.ಕೊನೆಗೆ ಆ ಪಾತ್ರವನ್ನು ಬೇರೆ ಯಾರೋ ಮಾಡಿರಬೇಕು.ಮುಂದಿನ ಮೂವತ್ತೈದು ವರ್ಷಗಳಲ್ಲಿ ಮಗನನ್ನು ಕಳೆದುಕೊಂಡ ತಾಯಿಯಾಗಿ,ದುಶ್ಶ್ಯಾಸನನಿಂದ ಸೀರೆ ಸೆಳೆದುಕೊಂಡ ದ್ರೌಪದಿಯಾಗಿ,ವೇಶ್ಯಾವಾಟಿಕೆಯ ಘರ್ ವಾಲಿಯಾಗಿ ಅತ್ಯಂತ ಛಾಲೆಂಜಿಂಗ್ ಎನ್ನಬಹುದಾದ ಪಾತ್ರಗಳನ್ನು,ಅವುಗಳ ಒಳಹೊಕ್ಕು,ಅವುಗಳಲ್ಲಿ ಲೀನಳಾಗಿ ನಿರ್ವಹಿಸಿದ್ದೇನೆ.ಆದರೆ ಅಂದು ಕಿರುಚಿಕೊಳ್ಳಲು ಪಟ್ಟ ಕಷ್ಟವನ್ನು ನೆನೆದಾಗ ಈಗ ನಗು ಬರುತ್ತದೆ.
ತುಳು,ಕನ್ನಡ ನಾಟಕಗಳ ಬಳಿಕ ಬಂತು ಕೊಂಕಣಿ ನಾಟಕದ ಅವಕಾಶ.ಕೊಂಕಣಿ ನಾಟಕಕಾರ ಎಂ.ದೇವದಾಸ ಪೈ ಅವರು ಬರೆದ ನಾಟಕವದು.”ನಾಂವ್ ಕಸ್ಸಲೆ?”ಎಂಬುದಾಗಿ.ಅದರಲ್ಲಿ ನಟಭಯಂಕರ ಬಾಲ್ಕೊ ಸ್ಟುಡಿಯೋದ ಶ್ರೀ ಎಸ್.ಆರ್.ಬಾಲಗೋಪಾಲ್ ಹಾಗೂ ಸಾಹಿತಿ,ಕವಿ,ಪಂಚ್ಕಾದಾಯಿ ಪತ್ರಿಕೆಯ ಸ್ಥಾಪಕ ಸಂಪಾದಕ ಶ್ರೀ ಬಿ.ವಿ.ಬಾಳಿಗಾ ಇವರೀರ್ವರ ಜೊತೆ ನಾನು ನಟಿಸಬೇಕಾಗಿತ್ತು.ಶ್ರೀ ಚೇತನ್ ಕುಮಾರ್ ನಾಯಕರ ನಿರ್ಮಾಣ.ತುಂಬಾ ತಮಾಷೆಯ ನಾಟಕ.ನನಗಿಂತ ವಯಸ್ಸಿನಲ್ಲಿ ಬಹಳ ಹಿರಿಯರಾದ ಬಿ.ವಿ.ಬಾಳಿಗರ ಹೆಂಡತಿಯಾಗಿ ನಟಿಸಬೇಕಿತ್ತು.ಹಿರಿಯ ಕಲಾವಿದರು ನನ್ನೊಡನೆ ಚೆನ್ನಾಗಿ ಸಹಕರಿಸಿದ ನೆನಪು ಇನ್ನೂ ಹಸಿರಾಗಿದೆ.
ಜಯಶ್ರೀಯವರು ವನಿತಾವಾಣಿಗಾಗಿ ಪತ್ರಗಳನ್ನು ಆಧರಿಸಿದ ಕಾರ್ಯಕ್ರಮವೊಂದನ್ನು ಮಾಡಲು ಹೇಳಿ ನನಗೆ ಕಾರ್ಯಕ್ರಮ ನಿರ್ಮಾಣದ ಮೊದಲ ಪಾಠಗಳನ್ನು ಹೇಳಿಕೊಟ್ಟರು.ಆದರೆ ಎಫೆಕ್ಟ್ ಗಳನ್ನು ಬಳಸಿ ರೂಪಕದ ನಿರ್ಮಾಣ ಮಾಡಲು ಕಲಿಸಿಕೊಟ್ಟವರು ಅಬ್ದುಲ್ ರೆಹಮಾನ್ ಪಾಶ.ಆಗ ನಾನು ಹಾಸ್ಟೆಲ್ ನಲ್ಲಿ ವಾಸ್ತವ್ಯ ಮಾಡುತ್ತಿದ್ದೆ.ಅಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ಶಾಲಾಬೆಲ್ ಮಾದರಿಯಲ್ಲಿ ವಿವಿಧ ಸಮಯದಲ್ಲಿ ಬೆಲ್ ಬಾರಿಸಲ್ಪಡುತ್ತಿತ್ತು.ಬೆಳಗ್ಗಿನ ಮೊದಲ ಬೆಲ್ ತಿಂಡಿಗೆ,ಮಧ್ಯಾನ್ಹ ಊಟದ ಬೆಲ್,ಸಂಜೆ ಪ್ರಾರ್ಥನೆಯ ಬೆಲ್,ರಾತ್ರಿ ಊಟದ ಬೆಲ್,ಕೊನೆಗೆ ದೀಪ ಆರಿಸಲು ಬೆಲ್ ಹೀಗೆ ಒಂದೇ ಬೆಲ್ ವಿವಿಧ ಅರ್ಥಗಳಲ್ಲಿ ಬಾರಿಸಲ್ಪಡುವ ಬಗ್ಗೆ ನಾನು ಕ್ಯಾಂಟೀನ್ ನಲ್ಲಿ ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದಾಗ ಅದನ್ನು ಕೇಳಿಸಿಕೊಂಡ ಪಾಶಾ ಅವರು” ಈ ಬೆಲ್ ಎಫೆಕ್ಟ್ ಬಳಸಿ ಹಾಸ್ಟೆಲ್ ನಲ್ಲೊಂದು ದಿನ ಅಂತ ಯಾಕೆ ಒಂದು ಶಬ್ದಚಿತ್ರವನ್ನು ನಿರ್ಮಿಸಬಾರದು?”ಎಂಬ ಸಲಹೆಯನ್ನು ನನಗೆ ಕೊಟ್ಟರು.ಕಾರ್ಯಕ್ರಮಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನವನ್ನು ನೀಡಿದ್ದು ಮಾತ್ರವಲ್ಲ,ಅದರ ನಿರ್ಮಾಣದಲ್ಲೂ ಬಹಳಷ್ಟು ಸಹಾಯ ಮಾಡಿದರು.ಹೊರ ರೆಕಾರ್ಡಿಂಗ್ ಬಳಸಿ ನಾನು ಮಾಡಿದ ಮೊದಲ ಕಾರ್ಯಕ್ರಮ,ಟೇಪ್ ರೆಕಾರ್ಡರ್ ನಲ್ಲಿ ಹಾಸ್ಟೆಲ್ ವಾಸಿಗಳನ್ನು ಧ್ವನಿಮುದ್ರಿಸುವ ಸಂಭ್ರಮ ನನಗೆ,ನನ್ನ ಹಾಸ್ಟೆಲ್ ವಾಸಿಗಳು,ವಾರ್ಡನ್,ಅಡುಗೆಯವರು,ಬಹಳ ಜೋರಿನ ಗಂಟಲಿನ ಘಟವಾಣಿ ಹೆಡ್ ಕುಕ್ ಶಾಂಭಕ್ಕ ಎಲ್ಲರ ಧ್ವನಿಯನ್ನೂ ಸೆರೆಹಿಡಿದ ನನ್ನ ಅಂದಿನ ಗತ್ತೇ ಬೇರೆ.ಆ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು ಮಾತ್ರವಲ್ಲ ನನ್ನ ಆತ್ಮವಿಶ್ವಾಸವನ್ನು ಬಹಳಷ್ಟು ಬೆಳೆಸಿತು.ಆ ಕಾರ್ಯಕ್ರಮದ ಬಳಿಕ ಶಾಂಭಕ್ಕನಿಂದ ಬಿಸಿಯಾದ ದೋಸೆಗಳೇ ನನಗೆ ಸಿಗುವಂತಾದುದೇ ಅಲ್ಲದೆ ತಣಿದ ದೋಸೆಗಳಿಗೆ ಬೇರೆಯವರು ವಾರಸುದಾರರಾದರು.
ಈ ನಡುವೆ ಕೃಷ್ಣಕಾಂತರು ಹಲಸಿನ ಬಗ್ಗೆ ಮಾಡಿದ ರೂಪಕ,ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಮಾಡಿದ ನುಡಿಚಿತ್ರ,ದ.ಕ.ಜಿಲ್ಲೆಯ ವಿವಿಧ ತಾಲೂಕುಗಳನ್ನು ಪರಿಚಯಿಸುವ “ತಾಲೂಕು ದರ್ಶನ’- ಶಬ್ದ ಚಿತ್ರಗಳ ಸರಣಿಗಳು,ಪಾಶಾ ಅವರು ನಿರ್ಮಿಸಿದ ವಿವಿಧ ನಾಟಕ,ರೂಪಕಗಳು ಇವುಗಳನ್ನು ನೋಡಿ,ಅವುಗಳಲ್ಲಿ ಭಾಗವಹಿಸಿ ನಾನು ಬಹಳಷ್ಟನ್ನು ಕಲಿತೆ.ಸಂದರ್ಶನಗಳನ್ನು ಟೇಪ್ ರೆಕಾರ್ಡರಿನಲ್ಲಿ ಹೊರಗಡೆ ಧ್ವನಿಮುದ್ರಿಸಿ ತಂದು ಅದನ್ನು ಟೇಪಿಗೆ ವರ್ಗಾಯಿಸಿ ತಯಾರಿಸುವ ತಾಂತ್ರಿಕತೆಯನ್ನು ಅದ್ಭುತವೆಂಬಂತೆ ನೋಡುನೋಡುತ್ತಿದ್ದಂತೇ ನಾನೂ ಅವುಗಳನ್ನು ಬಳಸಿ ಕಾರ್ಯಕ್ರಮಗಳನ್ನು ಮಾಡುವ ಅಭ್ಯಾಸವಾಯಿತು.
ಮುದ್ದಣಕವಿಯ ’ಶ್ರೀ ರಾಮಾಶ್ವಮೇಧಂ”ಕಾವ್ಯದಿಂದ ಆಯ್ದ ಮುದ್ದಣ ಮನೋರಮೆಯರ ಸರಸ ಸಲ್ಲಾಪದ ಭಾಗವೊಂದನ್ನು ಆಧರಿಸಿ ಬಸವರಾಜ್ ಅವರು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದ್ದರು.ನನ್ನನ್ನು ಮನೋರಮೆಯಾಗಿ ನಟಿಸುವಂತೆ ಅವರು ಕೇಳಿಕೊಂಡರು.ಹಳೆಗನ್ನಡದ ಮಾತುಗಳು ನನಗೇನೂ ಕಷ್ಟವೆನಿಸದ ಕಾರಣ ಆರಾಮವಾಗಿ ನಾನದನ್ನು ನಿರ್ವಹಿಸಿದೆ.ನನ್ನ ಓದು,ಅಭಿರುಚಿಗಳಿಗೆ ಅನುಗುಣವಾದ ಅನೇಕ ಈ ರೀತಿಯ ಕಾರ್ಯಕ್ರಮಗಳಿಂದಾಗಿ ನನ್ನ ಹೊಸ ಉದ್ಯೋಗ ಹಿತವಾಗತೊಡಗಿತು
ಈ ವಿವಿಧ ಕಾರ್ಯಕ್ರಮಗಳಲ್ಲಿ ನಾನು ಉತ್ಸಾಹದಿಂದ ಪಾಲುಗೊಳ್ಳುತ್ತಿರುವಾಗ ನನ್ನ ಹಿರಿಯರಾದ ಶಂಕರ್ ಭಟ್ ಅವರು ನನಗೊಂದು ಕಿವಿಮಾತು ಹೇಳಿದರು.ಉಳಿದೆಲ್ಲ ಕಾರ್ಯಕ್ರಮಗಳು,ಅವುಗಳಲ್ಲಿ ಭಾಗವಹಿಸುವುದು,ನಿರ್ಮಾಣ ಮಾಡುವುದು ಇವೆಲ್ಲ ನಮಗೆ ಉದ್ಘೋಷಕರಿಗೆ ದ್ವಿತೀಯ ಆಯ್ಕೆ.ಆದರೆ ನಾವು ಮುಖ್ಯವಾಗಿ ನಮ್ಮ ಪಾಳಿಯ ಪ್ರಸಾರ ಕಾರ್ಯದಲ್ಲಿ ನುರಿತವರಾಗಬೇಕು,ಅದೇ ನಮ್ಮ ಮೊದಲ ಆದ್ಯತೆಯಾಗಬೇಕು,ಅಕಸ್ಮಾತ್ ಆ ಕೆಲಸದಲ್ಲಿ ತಪ್ಪಾದರೆ ಆಗ ನಾವೇ ಅದಕ್ಕೆ ಹೊಣೆಗಾರರಾಗುತ್ತೇವೆಯೇ ಹೊರತು ಬೇರೆಯವರಲ್ಲ ಎಂಬುದಾಗಿ.ಕಾರ್ಯಕ್ರಮ ನಿರ್ಮಾಣ ಮಾಡುವವರು ಕರೆದರೆಂದು ನಾನು ಕರ್ತವ್ಯದ ವೇಳೆಯಲ್ಲಿ ಪ್ರಸಾರಕೊಠಡಿಯನ್ನು ಬಿಟ್ಟು ಓಡಿಹೋಗಿ ಪಾಲ್ಗೊಳ್ಳುವುದು,ಮುಂದಿನ ಉದ್ಘೋಷಣೆಗಾಗಿ ಅಲ್ಲಿಂದ ಮತ್ತೆ ಓಡಿ ಏದುಸಿರು ಬಿಡುತ್ತಾ ಬರುವುದು ಹೀಗೆ ನಡೆಯುತ್ತಾ ಇದ್ದ ಸಂದರ್ಭದಲ್ಲಿ ಅವರು ನನ್ನನ್ನು ಉದ್ದೇಶಿಸಿ ಹೇಳಿದ ಮಾತುಗಳವು.ಅಲ್ಲದೇ ಹೀಗೆ ಕಣ್ಣುಮುಚ್ಚಾಲೆ ಆಡಿದಂತೆ ಓಡಿ ಆಡುವ ವೇಳೆ ಪ್ರಸಾರದಲ್ಲಿ ಏನಾದರೂ ಪ್ರಮಾದವಾದರೆ ಅದು ಆಯಾ ಟ್ರಾನ್ಸ್ಮಿಷನ್ ರಿಪೋರ್ಟ್ ನಲ್ಲಿ ವರದಿಯಾಗುತ್ತಿತ್ತು.ಆ ವರದಿಗೆ ತಪ್ಪಿತಸ್ಥರು ಉತ್ತರಿಸಬೇಕಾಗಿತ್ತು.ಪ್ರೊಬೇಷನರಿ ಸಮಯದಲ್ಲಿ ತುಂಬ ತಪ್ಪುಗಳು ಆಗದಂತೆ ನೋಡಿಕೋ ಎಂಬುದಾಗಿ ಗಿರಿಜಾ ಕೆಲಸಕ್ಕೆ ಸೇರುವಾಗಲೇ ಎಚ್ಚರಿಸಿದ್ದರು.ಆದರೆ ಯಾರೇ ಬಂದು ಈ ರೂಪಕಕ್ಕೊಂದಿಷ್ಟು ಧ್ವನಿಕೊಡು,ಈ ನಾಟಕದಲ್ಲೊಂದು ಪಾತ್ರ ಮಾಡು,ಈ ಇವರನ್ನು ಒಂದು ಚೂರು ಸಂದರ್ಶಿಸು,ಇವರನ್ನೊಂದು ರೆಕಾರ್ಡ್ ಮಾಡು ಅಂತ ಕೇಳಿದರೆ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಈ ನನ್ನ ದೌರ್ಬಲ್ಯ ನನಗೆ ಒಳಿತನ್ನು ಮಾಡಿತೋ ಕೆಡುಕನ್ನು ಮಾಡಿತೋ ತಿಳಿಯದು,ಆದರೆ ನಿವೃತ್ತಳಾಗುವವರೆಗೂ ನಾನು ಈ ದೌರ್ಬಲ್ಯದ ಜೊತೆಗೇ ಪಾಳಿಯ ಪ್ರಸಾರಕಾರ್ಯದ ಕರ್ತವ್ಯವನ್ನು ನಿಭಾಯಿಸಿದೆ.ಅದರಿಂದ ಕೊನೆಕೊನೆಯ ದಿನಗಳಲ್ಲಿ,ಗಂಟುನೋವಿನ ಕಾಲನ್ನೆಳೆದುಕೊಂಡು ಸ್ಟುಡಿಯೋದ ದಪ್ಪದಪ್ಪ ಬಾಗಿಲುಗಳನ್ನು ತೆರೆಯುತ್ತಾ ಮುಚ್ಚುತ್ತಾ ಸ್ಟುಡಿಯೋದಿಂದ ಸ್ಟುಡಿಯೋಗೆ ತಿರುಗುತ್ತಾ ನನ್ನ ಪ್ರಸಾರಕಾರ್ಯದ ಕೊನೆಯ ಪಾಳಿಯ ವರೆಗೂ ನಿರ್ವಹಿಸಿದೆ.
ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ ಪ್ರಸಾರಕಾರ್ಯದಲ್ಲಿ ತಪ್ಪುಗಳು ಆಗೇ ಅಗುತ್ತಿದ್ದುವು. ಪ್ರಸಾರಿಸುವ ಪ್ರತಿಯೊಂದು ಕಾರ್ಯಕ್ರಮಗಳ ವಿವರಗಳನ್ನೂ ಕರ್ತವ್ಯಾಧಿಕಾರಿ ಮುಂದೆ ಓದಿ ಒಪ್ಪಿಸಿ ಸಹಿ ಪಡೆದೇ ಒಳಗೆ ಹೋದರೂ ಅನಿವಾರ್ಯ ಕಾರಣಗಳಿಂದ,ಅಜ್ನಾನದಿಂದ,ಅವಜ್ನೆಯಿಂದ,ಸಣ್ಣ ಮುಂಜಾಗ್ರತೆಯ ಕೊರತೆಯಿಂದ-ಹೀಗೆ ಯಾವುದೋ ಒಂದು ಕಾರಣದಿಂದ ಏನಾದರೂ ತಪ್ಪುಗಳು ಘಟಿಸುತ್ತಿದ್ದುವು.ಈ ತೆರನಾದ ತಪ್ಪುಗಳನ್ನು ವರದಿ ಮಾಡಲೆಂದೇ ಕಿವಿಗೆ ಎಣ್ಣೆ ಹಾಕಿ ಕುಳಿತ ಕರ್ತವ್ಯಾಧಿಕಾರಿಗಳು ಇಂದೆನಗೆ ಆಹಾರ ಸಿಕ್ಕಿತು ಎಂಬಂಥ ಉತ್ಸಾಹದಿಂದ ಅದನ್ನು ವರದಿ ಮಾಡುತ್ತಿದ್ದುದೂ ಇತ್ತು.ಇನ್ನು ಕೆಲವರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ವರದಿ ಮಾಡಿ ನಮ್ಮನ್ನು ಬಚಾವ್ ಮಾಡುತ್ತಿದ್ದರು.ಇನ್ನು ಕೆಲವೊಮ್ಮೆ ಊರಿಗೇ ಗೊತ್ತಾಗುವಂಥ ಘನಘೋರ ತಪ್ಪು ಸಂಭವಿಸಿದರೆ ನಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.ಈ ತಪ್ಪುಗಳು ಇನ್ನು ಮುಂದೆ ಅಂಥ ತಪ್ಪುಗಳು ಸಂಭವಿಸದಂತೆ ನನ್ನನ್ನು ಎಚ್ಚರಿಸುವ ಕೈದೀವಿಗೆಗಳಾಗಿ ನನ್ನ ವೃತ್ತಿ ಜೀವನದುದ್ದಕ್ಕೂ ಬೆಳಕನ್ನು ನೀಡಿವೆ.ಗಡಿಯಾರದ ಸೆಕೆಂಡಿನ ಮುಳ್ಳಿನ ಜೊತೆ ಕಣ್ಣನ್ನು ಕೀಲಿಸಿ ಬದುಕುವ ಎಚ್ಚರವನ್ನು ನನ್ನ ಉದ್ಯೋಗ ನನಗೆ ಆರಂಭದಿಂದಲೇ ನೀಡಿತು,ಮಾತ್ರವಲ್ಲ ಎಲ್ಲಿ,ಯಾವಾಗ,ಎಷ್ಟು ಮಾತಾಡಬೇಕು,ಹೇಗೆ ಮಾತಾಡಬೇಕು,ಎಲ್ಲಿ ಧ್ವನಿ ಎತ್ತರಿಸಬೇಕು,ತಗ್ಗಿಸಬೇಕು,ಮೌನ ಎಲ್ಲಿ ಸೂಕ್ತ ಅನ್ನುವ ಸಮಗ್ರ ಸೂತ್ರವನ್ನು ಕಾರ್ಯಕ್ರಮಗಳಿಗೆಂತೋ ಅಂತೆಯೇ ನನ್ನ ಉಳಿದ ದೈನಂದಿನ ವ್ಯವಹಾರಗಳಿಗೂ ಅನ್ವಯಿಸಿಕೊಂಡೆ.
ಆಯಾ ಪಾಳಿಯಲ್ಲಿ ನಮ್ಮ ಜೊತೆಯಲ್ಲಿ ಪಾಳಿಯನ್ನು ಹಂಚಿಕೊಂಡು ಕೆಲಸ ಮಾಡುವ ಕರ್ತವ್ಯಾಧಿಕಾರಿಯ ವ್ಯಕ್ತಿತ್ವ ,ಮೂಡ್ ನಮ್ಮ ಪ್ರಸಾರ ನಿರ್ವಹಣೆಯ ಮೇಲೆ ಪ್ರಭಾವ ಬೀರುವುದನ್ನು ತಿಳಿದುಕೊಂಡ ನಾನು, ಯಾರೇ ನನ್ನ ಪಾಳಿಯ ಜೊತೆಗಾರರಾಗಿರಲಿ,ಅವರೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಇಟ್ಟುಕೊಳ್ಳುವ ಬಗ್ಗೆ ನನ್ನ ಮನಸ್ಸಿನಲ್ಲಿಯೇ ನಿರ್ಧಾರವನ್ನು ಕೈಗೊಂಡೆ.ಇಲ್ಲವಾದರೆ ಮುಂಜಾನೆಯ ಪ್ರಶಾಂತ ಸಮಯವೇ ಇರಬಹುದು,ರಾತ್ರಿಯ ಸುದೀರ್ಘ ಪಾಳಿಯ ನೀರಸ ಕ್ಷಣಗಳೇ ಇರಬಹುದು ಮನಸ್ಸು ಹಿತವಿಲ್ಲದವರೊಡನೆ ಅದನ್ನು ಹಂಚಿಕೊಂಡು ನಿಭಾಯಿಸುವುದು ಬಹಳ ಕಷ್ಟವಾಗಿ ಬಿಡುತ್ತಿತ್ತು.ಇದೇ ರೀತಿಯ ಉತ್ತಮ ಬಾಂಧವ್ಯವನ್ನು ತಾಂತ್ರಿಕ ವಿಭಾಗದ ಮಿತ್ರರೊಡನೆಯೂ,ಪಾಳಿಯ ಕರ್ತವ್ಯಕ್ಕೆ ಕರೆದೊಯ್ಯುವ ಹಾಗೂ ರಾತ್ರಿ ತಂದು ಬಿಡುವ ನಮ್ಮ ವಾಹನದ ಚಾಲಕರೊಡನೆಯೂ ಇಟ್ಟುಕೊಂಡೆ.ಒಬ್ಬರನ್ನೊಬ್ಬರು ಅವಲಂಬಿಸಿಯೇ ಮಾಡುವ ಸ್ವರೂಪದ ಕೆಲಸ ನನ್ನದಾದುದರಿಂದ ಎಲ್ಲರೊಡನೆಯೂ ಹೊಂದಿ ನಡೆಯುವ ವ್ರತವನ್ನು ನಾನು ಕೈಗೊಂಡೆ. ನನ್ನ ಈ ವ್ರತದಿಂದ ವೃತ್ತಿಜೀವನದುದ್ದಕ್ಕೂ ಯಾರೊಡನೆಯೂ ವೈರತ್ವವಿಲ್ಲದ ಸಹಬಾಳ್ವೆ ನನಗೆ ಲಭಿಸಿತು.ಹೊಂದಾಣಿಕೆಯ ಬದುಕು ನನಗೆ ಬಾನುಲಿ ನೀಡಿದ ದೊಡ್ಡ ಸಂಪತ್ತು,ಪಾಠ,ನನ್ನ ತಂದೆ,ತಾಯಿ,ಒಡಹುಟ್ಟಿದವರು ನೀಡಿದ ಸಂಸ್ಕಾರವೂ ಇದಕ್ಕೆ ಕಾರಣವೆಂದೇ ಹೇಳಬೇಕು.ಅಲ್ಪತೃಪ್ತಿ,ಮಹತ್ವಾಕಾಂಕ್ಷೆಗಳಿಲ್ಲದ ಸರಳ ಬದುಕು ಎಲ್ಲ ಸುಖಸೌಭಾಗ್ಯಗಳನ್ನೂ ನನ್ನ ಮಡಿಲ ತುಂಬ ತುಂಬಿತು ಎಂದೇ ಈ ನಿವೃತ್ತಜೀವನದ ಆರಾಮದ ಕ್ಷಣಗಳಲ್ಲಿ ನನಗನಿಸುತ್ತಿರುವುದು.
ಮುಂದಿನ ವಾರಕ್ಕೆ ►




