ಆಕಾಶವಾಣಿಯ ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗಲೇ, ಕೊಂಕಣಿ ಭಾಷಾಜ್ಞಾನ ಅಪೇಕ್ಷಣೀಯ ಎಂಬ ಒಂದು ಉಪವಾಕ್ಯ ಅದರಲ್ಲಿತ್ತು. ಅದಕ್ಕೆ ತಕ್ಕಂತೆ ನನ್ನನ್ನು ಕೊಂಕಣಿ ವಿಭಾಗಕ್ಕೆ ಸಹಾಯಕಿಯಾಗಿ ವಾರದಲ್ಲೆರಡು ದಿನ ಕೆಲಸ ಮಾಡುವಂತೆ ಡ್ಯೂಟಿಚಾರ್ಟಿನಲ್ಲಿ ತೋರಿಸಲಾಗುತ್ತಿತ್ತು. ಆಗ ಕೊಂಕಣಿ ವಿಭಾಗದ ಮುಖ್ಯಸ್ಥರಾಗಿದ್ದವರು ಶ್ರೀ ಚೇತನ್ ಕುಮಾರ್ ನಾಯ್ಕ್ ಅವರು. ಕಾರವಾರ ಕಡೆಯವರು. ಅವರ ಕೊಂಕಣಿಗೂ ನನ್ನ ಕೊಂಕಣಿಗೂ ಸ್ವಲ್ಪ ವ್ಯತ್ಯಾಸವಿತ್ತು. ತುಂಬಾ ಹಾಸ್ಯ ಪ್ರವೃತ್ತಿಯವರು. ಎಂಥ ಗಂಭೀರ ಸನ್ನಿವೇಶದಲ್ಲೂ ನಗಿಸಿ ಹಗುರಾಗಿಸುವ ಕಲೆಗಾರಿಕೆ ಅವರದು. ಒಳ್ಳೆಯ ನಾಟಕ ಕಲಾವಿದರೂ ಕೂಡಾ. ಧ್ವನಿಮುದ್ರಣಕ್ಕೆ ಬಂದವರ ಸ್ಕ್ರಿಪ್ಟ್ ಪರಿಶೀಲಿಸುವುದು, ತಿದ್ದುಪಡಿ ಸೂಚಿಸುವುದು, ಧ್ವನಿಮುದ್ರಿಸಿ ನನ್ನ ನಿರೂಪಣೆ ಹಾಗೂ ಕೊಂಕಣಿ ಕಾರ್ಯಕ್ರಮದ ಅಂಕಿತಸಂಗೀತದೊಡನೆ ಅದನ್ನು ಇಪ್ಪತ್ತನಾಲ್ಕು ನಿಮಿಷಗಳ ಕಾಲಾವಧಿಗೆ ಸಿದ್ಧಪಡಿಸುವುದು ನನ್ನ ಕೆಲಸ. ಕೊಂಕಣಿಕಾರ್ಯಕ್ರಮದ ಅಂಕಿತ ಸಂಗೀತ ಈಗಲೂ ನನ್ನ ಭಾವಕೋಶದಲ್ಲಿ ಒಂದು ಸ್ಥಿರ ಆಪ್ತ ನೆನಪಾಗಿ ಅಚ್ಚೊತ್ತಿದೆ. ಚೇತನ್ ಕುಮಾರ್ ನಾಯ್ಕ್ ಅವರಿಂದ ಕೊಂಕಣಿಕಾರ್ಯಕ್ರಮಗಳ ಮೊದಲ ದೀಕ್ಷೆ ನನಗೆ ಲಭಿಸಿತು. ಸ್ವಲ್ಪವೂ ಮುಜುಗರವಾಗದಂತೆ ಕೆಲಸ ಕಲಿಸುವ ಅವರು ನನ್ನ ಬಳಿ ಎಂದೂ ಅಧಿಕಾರಿಯಂತೆ ವರ್ತಿಸಲಿಲ್ಲ. ಅವರ ಜೊತೆ ಕುಂದಾಪುರದ ಖಾರ್ವಿ ಜನಾಂಗವನ್ನು ಕುರಿತು ಮಾಡಿದ ಸಾಕ್ಷ್ಯರೂಪಕ ’ ದರ್ಯಾಚೆ ಲ್ಹಾರಾರಿ ಖೆಳ್ಚೆ ವೀರ್ ಖಾರ್ವಿ, ಏಕ್ ಮಿನಿಟ್, ಪೋಸ್ಟ್ ಮನ್ನಾಲೆ ಫಜೀತಿ, ಸಿರಿಲಾಲೆ ಸಿಸಿಲ್, ಚೆರ್ಡು’ ಮುಂತಾದ ಅಸಂಖ್ಯ ನಾಟಕಗಳು ಮರೆಯದ ಅನುಭವಗಳನ್ನು ನೀಡಿದುವು. ಏಕ್ ಮಿನಿಟ್ ಎಂಬ ನಾಟಕದಲ್ಲಿ ಖ್ಯಾತ ಕಲಾವಿದರಾದ ಕಾಸರಗೋಡು ಚಿನ್ನ ಮೊದಲ ಬಾರಿ ಭಾಗವಹಿಸಿದ್ದರು. ಅದಕ್ಕೂ ಮುನ್ನ ಚಿನ್ನಾ ಅವರನ್ನು ನಾನು ಕೊಂಕಣಿ ಕಾರ್ಯಕ್ರಮಕ್ಕಾಗಿ ಸಂದರ್ಶಿಸಿದ್ದೆ.
ಚೇತನ್ ನಾಯ್ಕರ ಬಳಿಕ ಕೊಂಕಣಿಯ ಉಸ್ತುವಾರಿಯನ್ನು ನೋಡಿಕೊಂಡವರು ಜಯಶ್ರೀ ಶ್ಯಾನುಭಾಗ್ ಅವರು. ಕೊಂಕಣಿ ಕಾರ್ಯಕ್ರಮಗಳಿಗೊಂದು ಸ್ಥಿರ ಶೀರ್ಷಿಕೆಗಳ ಚೌಕಟ್ಟನ್ನು ಹಾಕಿ ಕೊಟ್ಟವರು ಅವರು. ಯುವಜನರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಹಾಡುಗಳಿಗೆ ಎಂದು ನಿಗದಿತ ದಿನ ಹಾಗೂ ಹೆಸರು ನಿಗದಿಪಡಿಸಿ ಚಂದದ ಲೇ ಔಟ್ ನ್ನು ಸಿದ್ಧ ಪಡಿಸಲು ನನಗವರು ಕಲಿಸಿದರು. ಜಯಶ್ರೀ ಅವರ ಜೊತೆ ಸೇರಿ ನಾನು “ಸಂತ ತುಕಾರಾಂ” ಎಂಬ ಸಂಗೀತ ರೂಪಕ, ಗಾದ್ಯೇ ಸರಪಳಿ ಎಂಬ ಗಾದೆ ಮಾತುಗಳ ಮಂಟಪ, ಪುಡ್ಡಿಸಗ್ಳೆ ಎಂಬ ಕೌಟುಂಬಿಕ ಸರಣಿ, ಶೆಂವ್ತ್ಯಾ ಫಾಂತಿ ಎಂಬ ಹಾಡುಗಳ ಸಂಯೋಜಿತ ಕಾರ್ಯಕ್ರಮ, ಸುಕ್ಕಿಲ್ ವೊವ್ಳ ಎಂಬ ಹಳೆಯ ಜಾನಪದ, ಸಂಪ್ರದಾಯದ ಹಾಡುಗಳ ಕಾರ್ಯಕ್ರಮ, ಘರಾ ಉಜ್ವಾಡು ಎಂಬ ಮಹಿಳಾ ಕಾರ್ಯಕ್ರಮ, ಖಿಳ್ ಖಿಳೋ ಎಂಬ ಮಕ್ಕಳ ಕಾರ್ಯಕ್ರಮ ಇವೆಲ್ಲವನ್ನೂ ಅವರ ಮಾರ್ಗದರ್ಶನದಲ್ಲಿ ಮಾಡಿದೆ. ಜಯಶ್ರೀ ಅವರು ಆರಂಭಿಸಿದ ಈ ಕಾರ್ಯಕ್ರಮಗಳಲ್ಲಿ ಹಲವಾರು ಸ್ಥಿರ ಶೀರ್ಷಿಕೆಗಳು ಇಂದಿಗೂ ಉಳಿದು ಅವರ ನೆನಪನ್ನು ತರುತ್ತಿವೆ.
ಆ ಬಳಿಕ ಕೊಂಕಣಿ ಕಾರ್ಯಕ್ರಮಗಳನ್ನು ನೋಡಿಕೊಂಡವರು ಗೋವಾದಿಂದ ವರ್ಗವಾಗಿ ಬಂದ ಕೊಂಕಣಿಯ ಖ್ಯಾತ ಕವಿ ಶ್ರೀ ಯೂಸುಫ್ ಅಬ್ದುಲ್ಲ ಶೇಖ್ ಅವರು. ಅವರು ಗೋವಾದ ಬಹಳಷ್ಟು ಕಲಾವಿದರನ್ನು, ಕವಿ, ನಾಟಕಕಾರರನ್ನು, ಕಾದಂಬರಿಕಾರರನ್ನು ಇಲ್ಲಿಗೆ ಬರಮಾಡಿ ಪರಿಚಯಿಸಿದರು. ಅವರನ್ನೆಲ್ಲ ಸಂದರ್ಶಿಸಲು ನನ್ನ ಬಳಿಯೇ ಹೇಳುತ್ತಿದ್ದುದರಿಂದ ಅನಿವಾರ್ಯವಾಗಿ ಗೋವಾ ಕೊಂಕಣಿಯನ್ನು ನಾನು ಕಲಿಯುವಂತಾಯಿತು. ಯೂಸುಫ್ ಅವರು ಕೂಡಾ ಕನ್ನಡ ಅಕ್ಷರಗಳನ್ನು ಬಹು ಬೇಗ ಕಲಿತರು. ಮತ್ತೆ ವರ್ಗವಾಗಿ ಅವರು ಇಲ್ಲಿಂದ ತೆರಳಿದರೂ ಈಗಲೂ ಫೇಸ್ ಬುಕ್ ಮೂಲಕ ಒಡನಾಟವನ್ನು ಅವರು ಇಟ್ಟುಕೊಂಡಿದ್ದಾರೆ. ಪುಂಡಲೀಕ ನಾರಾಯಣ ನಾಯ್ಕ್, ದಾಮೋದರ ಮೌಜೋ, ನಾಗೇಶ್ ಕರ್ಮಲಿ, ಶಾಂತಾರಾಮ ನಾಯ್ಕ್ ಮುಂತಾದ ಹಲವರನ್ನು ನಾನು ಅವರ ಅವಧಿಯಲ್ಲಿ ಸಂದರ್ಶಿಸಿದೆ.
ಮುಂದಿನ ದಿನಗಳಲ್ಲಿ ಅನಿಲ್ ಕೌಶಿಕ್, ರಮಾ ಹಿರೇಮಠ್, ಎಸ್.ಎಸ್.ಹಿರೇಮಠ್, ನಿರ್ಮಲಾ ಅನಾಡ್, ಮಾಧವ ಬೋರ್ಕರ್, ಸಿ.ಯು.ಬೆಳ್ಳಕ್ಕಿ ಮುಂತಾದವರ ಉಸ್ತುವಾರಿಯಲ್ಲಿ ನಾನು ಕೊಂಕಣಿ ಕಾರ್ಯಕ್ರಮಗಳನ್ನು ಮಾಡಿದೆ. ಕನ್ಸೆಪ್ಟಾ ಫೆರ್ನಾಂಡಿಸ್ ಅವರು ಸೇವೆಗೆ ನಿಯುಕ್ತರಾದ ಮೇಲೆ ನಾವಿಬ್ಬರೂ ಸೇರಿ ಜಂಟಿಯಾಗಿ ಕೆಲಸ ಮಾಡಿದ್ದೂ ಇದೆ. ಕೊಂಕಣಿ ಮನೆಮಾತಲ್ಲದಿದ್ದರೂ ರಮಾ ಹಿರೇಮಠ್, ಎಸ್.ಎಸ್.ಹಿರೇಮಠ್, ನಿರ್ಮಲಾ ಅನಾಡ್, ಸಿ.ಯು.ಬೆಳ್ಳಕ್ಕಿ ಮುಂತಾದವರು ನನ್ನ ಮೇಲೆ ಪೂರ್ತಿ ಭರವಸೆಯಿಟ್ಟು ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರಿಸಲು ಸಹಕರಿಸಿದರು. ಅದರಲ್ಲೂ ರಮಾ ಅವರಂತೂ ಕಾರ್ಯಕ್ರಮಗಳ ಯೋಜನೆಯಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಿದವರು. ಅವರೊಡನೆ ಸೇರಿ ಹಲವಾರು ರೂಪಕ, ನಾಟಕಗಳನ್ನು ನಾನು ಮಾಡುವಂತಾಯಿತು. ಅತ್ಯಂತ ಕಡಿಮೆ ಮಾತಿನ ಅನಿಲ್ ಕೌಶಿಕ್ ಅವರೊಡನೆ ಕಡಿಮೆ ಮಾತುಗಳನ್ನು ಬಳಸಿ ಕೆಲಸ ಮಾಡುವುದನ್ನು ಕಲಿತೆ. ಮಾಧವ ಬೋರ್ಕರ್ ಅವರು ಉತ್ತಮ ಕವಿಯಾಗಿದ್ದು ಅವರು ಉಳಿದುಕೊಳ್ಳುತ್ತಿದ್ದ ಶಕ್ತಿನಗರದ ರಮಾ ಶಕ್ತಿ ಮಿಷನ್ ನಿಂದ ಆಕಾಶವಾಣಿಗೆ ನಡೆದುಬರುತ್ತಿದ್ದ ದಾರಿಯುದ್ದಕ್ಕೂ ಹೊಸ ಕವಿತೆಯೊಂದನ್ನು ಧೇನಿಸುತ್ತ, ತನ್ನ ಕೆಲಸದ ಕೋಣೆಗೆ ಬಂದೊಡನೆ ಆ ಕವಿತೆಯ ಸಾಲುಗಳನ್ನು ಹಾಳೆಗೆ ಇಳಿಸಿ ಅದರ ರಸಾಸ್ವಾದನೆಗೆ ನನ್ನನ್ನು ಕರೆಯುತ್ತಿದ್ದರು. ಹೀಗೆ ಕೊಂಕಣಿ ಕವಿತೆಗಳ ಅನೂಹ್ಯ ಲೋಕಕ್ಕೆಕರೆದೊಯ್ಯುವ ಮಾಧವ ಬೋರ್ಕರ್ ಅವರದು ಧ್ಯಾನಸ್ಥ ಬದುಕು. ನಾನು ಆಕಾಶವಾಣಿಯಲ್ಲಿ ಕಂಡ ಅಧಿಕಾರಿಗಳಲ್ಲೇ ವಿಶಿಷ್ಟ ವ್ಯಕ್ತಿತ್ವ ಅವರದು. ಮಂಗಳೂರಿನಲ್ಲಿದ್ದಾಗ ಅವರು ಬರೆದ ಕವಿತೆಗಳ ಗುಚ್ಚ “ಯಮನ್” ಎಂಬ ಹೆಸರಿನಲ್ಲಿ ಮುಂದೆ ಪ್ರಕಟವಾಯಿತು. ಸಿ.ಯು.ಬೆಳ್ಳಕ್ಕಿಯವರ ಕಾಲದಲ್ಲಿ ನನ್ನನ್ನು ಉದ್ಘೋಷಣೆಯ ಪಾಳಿಯಿಂದ ಒಂದು ವರ್ಷದ ಮಟ್ಟಿಗೆ ಮುಕ್ತಗೊಳಿಸಿ ಕೇವಲ ಕೊಂಕಣಿ ಹಾಗೂ ಜೊತೆಗೆ ಇನ್ನಿತರ ಕೆಲವು ವಿಭಾಗಗಳನ್ನೂ ನೀಡಿದ ಅವರ ಔದಾರ್ಯವನ್ನು ಎಂದೂ ಮರೆಯುವಂತಿಲ್ಲ.
ಕೊಂಕಣಿಯ ಮಹಾನ್ ಚೇತನರನ್ನು ನಾನು ಕಂಡು, ಮಾತಾಡಿ, ಧ್ವನಿ ಮುದ್ರಿಸುವಂತಾದುದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ. ಶ್ರೀ ಬಿ.ವಿ.ಬಾಳಿಗಾ ಅವರ ಕವಿತೆಗಳು, ಭಾಷಣಗಳು, ಚರ್ಚೆಗಳ ನಿರ್ವಹಣೆ ಎಲ್ಲವೂ ಚೊಕ್ಕ, ಸಮಯದ ಮಿತಿಯನ್ನರಿತು ಸಿದ್ಧ ಪಡಿಸಿದವು. ಅಂತೆಯೇ ಸರ್ವ ಶ್ರೀ ವಿ.ಜೆ.ಪಿ.ಸಲ್ದಾನಾ, ಎ.ಟಿ ಲೋಬೋ, ಚಾ..ಫ್ರಾ.ದೆಕೋಸ್ತಾ, ಲ್ಯಾನ್ಸಿ ಪಿಂಟೋ ನಾಯಕ್, ಸಿರಿಲ್ ಸಿಕ್ವೇರಾ, ಡೊಲ್ಫಿ ಕಾಸ್ಸಿಯಾ, ಫಾದರ್ ವೈಟಸ್ ಪ್ರಭುದಾಸ್, ಫಾದರ್ ಮಾರ್ಕ್ ವಾಲ್ದರ್, ಫಾದರ್ ಹೆನ್ರಿ ಡಿಸೋಜಾ, ಫಾದರ್ ವಿ.ವಿ.ಮೆನೆಜಸ್, ಫಾದರ್ ಸಾಮ್ಯುವೆಲ್ ಸಿಕ್ವೇರಾ, ಎಡ್ವಿನ್ ಜೆ.ಎಫ್.ಡಿಸೋಜ, ಫಿಲಿಪ್ ನಜರೆತ್ – ಹೀಗೆ ಲೆಕ್ಕವಿಲ್ಲದಷ್ಟು ಹಿರಿಯ ಸಾಹಿತಿಗಳನ್ನು, ಚಿಂತಕರನ್ನು ನಾನು ಕಂಡು, ಮಾತನಾಡಿ, ಧ್ವನಿ ಮುದ್ರಿಸುವ ಭಾಗ್ಯ ನನಗೆ ದೊರೆಯಿತು. ಎಸ್.ಪದ್ಮನಾಭ ನಾಯಕ್, ಕ್ಯಾಥರೀನ್ ರೊಡ್ರಿಗಸ್, ಸ್ಟೆನ್ ಅಗೇರಾ, ವಲ್ಲಿ ವಗ್ಗ, ಎನ್.ಶಾಂತಾದೇವಿ, ಪದ್ಮಾ ಶೆಣೈ, ಬಸ್ತಿ ಶೋಭಾ ಶೆಣೈ, ಜೆಸಿಂತಾ ಪಿಂಟೊ ನಾಯಕ್, ಎಚ್.ಆರ್.ಆಳ್ವಾ, ತಾರಾ.ವಿ.ಕಿಣಿ, ಊರ್ಮಿಳ ಶಿವರಾವ್, ಬಸ್ತಿ ವಿಮಲಾ ಶೆಣೈ, ಎಂ.ಮೋಹನ ಭಂಡಾರಿ, ದೀಪಾಲಿ ಕಂಬದ ಕೋಣೆ, ಅನಿತಾ ಪಿಂಟೋ, ದೇವರಾಯ ಪ್ರಭು, ರಿಚರ್ಡ್ ಪಿರೇರ, ಫ್ರೆಡ್ ಕುಮಾರ್ ಕುಚ್ಚಿಕಾಡ್, ಆಂಡ್ರೂ.ಎಲ್.ಡಿಕುನ್ಹಾ, ವಿಲ್ಫ್ರೆಡ್ ಲೋಬೋ -ಹೆಸರು ಹೇಳಿದಷ್ಟೂ ಮುಗಿಯದು. ಹಲವಾರು ಯುವ ಬರಹಗಾರರು ಆಕಾಶವಾಣಿಯ ಮೂಲಕ ಬೆಳಕಿಗೆ ಬಂದು ಮತ್ತೆ ಪ್ರಸಿದ್ಧ ಕವಿ,ಸಾಹಿತಿಗಳಾದರು. ಮೆಲ್ವಿನ್ ರೊಡ್ರಿಗಸ್, ಎಚ್.ಎಂ.ಪೆರ್ನಾಳ್, ಆನ್ಸಿ ಪಾಲಡ್ಕ, ಮಾವ್ರಿಸ್ ಶಾಂತಿಪುರ, ಟೈಟಸ್ ನೊರೋನ್ಹಾ, ಜೋಸ್ಸಿ ಪಿಂಟೊ – ಹೀಗೆ ಯುವ ಬರಹಗಾರರ ದಂಡೇ ಕೊಂಕಣಿ ಕಾರ್ಯಕ್ರಮಗಳಲ್ಲಿ ರಾರಾಜಿಸುತ್ತಿತ್ತು. ವಸಂತಿ.ಆರ್.ನಾಯಕ್, ಪ್ರಮೀಳಾ ಕುಂದಾಪುರ್, ಶೇಟ್ ಕಮಲಾಕರ್ ಗಂಗೊಳ್ಳಿ, ಬಿ.ಎಸ್ ರಾವ್, ವಿಲ್ಫಿ ರೆಬಿಂಬಸ್, ಮೀನಾ ರೆಬಿಂಬಸ್, ಬಬಿತಾ ಡೇಸಾ, ಪ್ರೇಮ್ ಲೋಬೋ, ಕ್ಲಾಡ್ ದಿಸೋಜ, ಇಡಿತ್ ಡಿಸೋಜ, ಎರಿಕ್ ಓಜೇರಿಯೋ, ಲಿಜ್ಜಿ ಡಿಸೋಜ, ಮೆಲ್ವಿನ್ ಪೆರಿಸ್, ಅನ್ನಪೂರ್ಣಾ ಕಾಮತ್, ವಸುಧಾ ಕಿಣಿ, ಶ್ರೀನಾಥ್ ಕಾಸರಗೋಡ್ ಮುಂತಾದ ಗಾಯಕರು, ಕಾರ್ನಾಡ್ ಗುರುದತ್, ಶ್ರೀ ದಾಂತಿ, ಕೊಚ್ಚಿಕಾರ್ ಪದ್ಮಾ ಪೈ, ಎಸ್.ಆರ್.ಮಲ್ಯ, ಡಾ.ಮೋಹನ್ ಪೈ, ವಸಂತ್ ನಾಯಕ್ ಫಲಿಮಾರ್ಕರ್, ಲೀನಾ ಕ್ರಾಸ್ತಾ, ಆರ್.ಡಿ.ಕಾಮತ್, ಕೆ.ವಿಶ್ವನಾಥ್ ಕಾಮತ್, ಅವಿತ್ ಬಾರ್ಬೋಜಾ, ಲೀನಾ ಫೆರ್ನಾಂಡಿಸ್, ಎಂ.ಆರ್.ಪ್ರಭು, ಬಿ.ಅನಂತ್ ಬಾಳಿಗ, ಮೊನ್ಸಿಂಜೋರ್ ಅಲೆಕ್ಸಾಂಡರ್ ಡಿಸೋಜಾ, ವೆಂಕಟೇಶ ಪ್ರಭು ಮುಂತಾದ ಭಾಷಣಕಾರರು, ಎಡ್ಡಿ ಸಿಕ್ವೇರಾ, ಆಗ್ನೆಸ್ ವಾಸ್, ಜೀವನ್ ವಾಸ್, ಅಲೋಷಿಯಸ್ ಡಿಸೋಜಾ,. ಜೆ.ಬಿ.ಡಿಸೋಜಾ, ಕಾರ್ಮೆಲಿಟಾ ಗೋವಿಯಸ್, ರಾಜಗೋಪಾಲ್ ಶೇಟ್, ದಿನಕರ ಶೇಟ್, ವರ್ಜೀನಿಯಾ ರೊಡ್ರಿಗಸ್, ಕಾಸರಗೋಡು ಚಿನ್ನಾ , ಎಸ್.ಆರ್.ಬಾಲಗೋಪಾಲ್, ಬಿ.ವಿ.ಬಾಳಿಗ, ಶಾಲಿನಿ ಪಂಡಿತ್, ಶರದ್ ಪಂಡಿತ್, ಜ್ಯೋತಿಪ್ರಭಾ ಶ್ರೀಪಾದ್ ರಾವ್ ಮುಂತಾದ ನಾಟಕ ಕಲಾವಿದರು – ಹೀಗೆ ಇವರ ಒಡನಾಟ ನನಗೆ ಲಭಿಸುತ್ತಿತ್ತು.
ಘರಾ ಉಜ್ವಾಡು ಕಾರ್ಯಕ್ರಮದ ಮಾತೃಶ್ರೀ ಮಹಿಳಾ ಮಂಡಳಿಯ ಮಾಲತಿ ಕಾಮತ್ ಮತ್ತು ಬಳಗ, ಮಂಗಳಾ ಮಹಿಳಾ ವೃಂದದ ಜಯಶ್ರೀ ಬಾಳಿಗಾ ಮತ್ತು ಬಳಗ, ಕಾಸರಗೋಡಿನ ಗೀತಾವಿಹಾರ ಬಳಗ, ಯುವ ಕಾರ್ಯಕ್ರಮಕ್ಕಾಗಿ ಉಡುಪಿಯಿಂದ ಆಗಮಿಸುತ್ತಿದ್ದ ಪಂಡಿತ್ ಮಾಧವ ಭಟ್, ಶಾಂತಾರಾಮ ಬಾಳಿಗಾ, ಕುಂದಾಪುರದ ಹಾಲಾಡಿ ಲಕ್ಷ್ಮೀ ವಾಸುದೇವ ಕಾಮತ್ ಬಳಗ ಇವರೆಲ್ಲರ ಪ್ರೀತಿ ವಿಶ್ವಾಸದ ಭಾರಕ್ಕೆ ಶಿರಬಾಗುತ್ತೇನೆ. ಖ್ಯಾತ ಕವಿ ಜೆ.ಬಿ.ಸಿಕ್ವೇರಾ ಅವರನ್ನು ಮಂಗಳೂರು ಆಕಾಶವಾಣಿಯಲ್ಲಿ ಮೊದಲ ಬಾರಿ ನಾನೇ ಪರಿಚಯಿಸಿದೆ. ಅವರನ್ನು ಎಚ್.ಆರ್.ಆಳ್ವಾ ಅವರು ಕರೆದುಕೊಂಡು ಬಂದಿದ್ದರು.ಅನ್ವೇಷಕ ಕಣ್ಣುಗಳ, ಕ್ರಾಂತಿಯ ಕಿಡಿಗಳ ಕವಿತೆಗಳೊಡನೆ ಬಂದ ಎಚ್.ಎಂ.ಪೆರ್ನಾಲ್ ಅವರ ಕವಿತೆಗಳ ವಜನಿಗೆ ಮೊದಲು ಅಂಜಿಕೆಯಾಯಿತಾದರೂ ಮುಂದೆ ಅವರ ಸ್ನೇಹಶೀಲ ವ್ಯಕ್ತಿತ್ವವನ್ನು ಕಂಡುಕೊಂಡ ಬಳಿಕ ನಿರಾಳವಾಯಿತು. ವ್ಯವಸ್ಥೆಯ ಬಗ್ಗೆ ಭಯಂಕರ ಆಕ್ರೋಶಗಳೊಡನೆ ಕವಿತೆಯನ್ನು ಪ್ರಸ್ತುತ ಪಡಿಸುತ್ತಿದ್ದ ಫ್ರೆಡ್ ಕುಮಾರ್ ಕುಚ್ಚಿಕಾಡ್ ಅವರ ಆಕ್ರೋಶ ತಣಿಸಲು ಕಲಿತ ಬುದ್ಧಿಯನ್ನೆಲ್ಲ ವ್ಯಯಿಸಬೇಕಾಯಿತು.
ಗಂಟೆಗಟ್ಟಲೆ ಸಂಗೀತದ ರಿಹರ್ಸಲ್ ನಡೆಸಿ ಧ್ವನಿಮುದ್ರಿಸುತ್ತಿದ್ದ ಆ ದಿನಗಳು, ಮಕ್ಕಳ ಕಾರ್ಯಕ್ರಮಗಳು, ಯುವಜನರ ಕಾರ್ಯಕ್ರಮಗಳು ದಿನಾಂತ್ಯದಲ್ಲಿ ತರುತ್ತಿದ್ದ ಅಸಾಧ್ಯ ತಲೆಸಿಡಿತ ಎಲ್ಲವನ್ನೂ ಈಗ ನೆನಪಿಸಿಕೊಳ್ಳುವಾಗ ಕನಸಿನಲ್ಲಿ ಹಾದುಹೋದಂತೆ ಭಾಸವಾಗುತ್ತದೆ. ಆಗ ತಿಂಗಳಿಗೊಂದು ಕೊಂಕಣಿ ನಾಟಕ, ರೂಪಕ, ಶಬ್ದಚಿತ್ರ, ಸಂಗೀತರೂಪಕಗಳು, ವಾರಕ್ಕೊಮ್ಮೆ ಹೊಸಹಾಡುಗಳ ಶೆಂವ್ತ್ಯಾ ಫಾಂತಿ, ಮಹಿಳಾಕಾರ್ಯಕ್ರಮಗಳು, ಮಕ್ಕಳ, ಯುವಜನರ ಕಾರ್ಯಕ್ರಮಗಳು -ಹೀಗೆ ಬಿಡುವಿಲ್ಲದ ಧ್ವನಿಮುದ್ರಣ, ಎಡಿಟಿಂಗ್, ಡಬ್ಬಿಂಗ್ ಕೆಲಸಗಳು, ಈಗಿನಂತೆ ಸಹಾಯಕರಿಲ್ಲದ ದಿನಗಳು, ಸ್ಟುಡಿಯೋಗಳಿಗಾಗಿ ಪರದಾಟ, ಅಲೆದಾಟ, ಮುನಿಸು – ಹೀಗೆ ಸಂಜೆಯಾಗುತ್ತಲೇ ಕೈಕಾಲುಗಳು ಸೋತುಬಿಡುತ್ತಿದ್ದುವು. ನನ್ನ ಅಪ್ಪಯ್ಯ ತೀರಿಹೋದ ಮರುದಿನ ಎರಡು ಗಂಟೆಗೆ ವಿಲ್ಫಿ ರೆಬಿಂಬಸ್ ಬಳಗದ ಧ್ವನಿಮುದ್ರಣಕ್ಕಾಗಿ ಊರಿನಿಂದ ಓಡೋಡಿ ಬಂದ ಕ್ಷಣಗಳು, ಆ ಬದ್ಧತೆ, ಕಾರ್ಯತತ್ಪರತೆ – ಇವೆಲ್ಲವನ್ನೂ ಈಗ ನೆನೆದಾಗ ಈಗಿನ ದಿನಗಳಲ್ಲಿ ಮಾಯವಾಗುತ್ತಿರುವ ಆ ನಿಯತ್ತು ಎಲ್ಲವೂ ಕನಸೆಂಬಂತೆ ತೋರುತ್ತಿದೆ.
ಸುಮಾರು ಇಪ್ಪತ್ತಕ್ಕೂ ಮಿಕ್ಕಿದ ವರ್ಷಗಳ ಕೊಂಕಣಿಯ ಕೈಂಕರ್ಯದ ಬಳಿಕ ಕ್ರಮೇಣ ಉದ್ಘೋಷಣೆಯ ಪಾಳಿಯಷ್ಟೇ ನಮ್ಮ ಕರ್ತವ್ಯ ಎಂದು ನಿಗದಿಪಡಿಸಿ ಉಳಿದೆಲ್ಲ ಕಾರ್ಯಕ್ರಮಗಳ ಜೊತೆಗೆ ಕೊಂಕಣಿಯಿಂದಲೂ ನಮ್ಮನ್ನು ಮುಕ್ತಗೊಳಿಸಿದರೂ ಮುಂದೆ ಆ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಕನ್ಸೆಪ್ಟಾ ಫೆರ್ನಾಂಡಿಸ್ ಆಗಲೀ, ಈಗ ಅದರ ಉಸ್ತುವಾರಿಯನ್ನು ಹೊತ್ತಿರುವ ಫ್ಲೋರಿನ್ ರೋಚ್ ಆಗಲೀ ನನ್ನ ಅನುಭವದ ಹಿರಿತನವನ್ನು ಲಕ್ಷಿಸಿ ಆ ಬಳಿಕವೂ ನಾನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೇಳಿಕೊಂಡಿಕೊಂಡಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಾನು ಭಾಗವಹಿಸಿದ್ದೇನೆ ಕೂಡಾ. ಹೊರಗಿನವರಿಗೆ ಈ ಬದಲಾವಣೆಗಳ ಅರಿವಿಲ್ಲದೆ, ಹೇಳಿದರೂ ಅರ್ಥವಾಗದೆ ನನ್ನ ನಿವೃತ್ತಿಯ ವರೆಗೂ ಕೆಲವರು ಕೊಂಕಣಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನನಗೆ ಪತ್ರ ಬರೆದೋ, ಕರೆ ಮಾಡಿಯೋ ತಮ್ಮ ಮಟ್ಟಿಗೆ ಆ ವಿಭಾಗದಿಂದ ನನಗೆ ಮುಕ್ತಿ ಕೊಡಿಸಲೇ ಇಲ್ಲ. ಇದು ಕೆಲವೊಮ್ಮೆ ತೀರಾ ಮುಜುಗರವನ್ನು ಉಂಟುಮಾಡುತ್ತಿತ್ತು. ಧ್ವನಿಮುದ್ರಣದ ದಿನಾಂಕದಲ್ಲಿ ಬದಲಾವಣೆ ಬೇಕಾದರೂ ನನಗೇ ಕರೆಮಾಡಿ ಕಿರಿಕಿರಿ ಮಾಡುವುದು ಇತ್ಯಾದಿ ಅನಿವಾರ್ಯ ಪೀಡೆಗಳು ಕೊನೆಯವರೆಗೂ ಮುಂದುವರಿದೇ ಇತ್ತು. ಆದರೂ ಕರೆ ಮಾಡಿದವರೊಡನೆ ನಯವಾಗಿ ಮಾತನಾಡಿ ಮಾತನಾಡಿ ಮನೆಯವರ ಆಕ್ಷೇಪಕ್ಕೆ ಒಳಗಾಗಿರುವುದು ಎಷ್ಟೋಬಾರಿ. ಕೊಂಕಣಿಯ ಕಂಕಣವನ್ನು ತೊಟ್ಟು ನನ್ನ ಸೇವಾವಧಿಯ ಮೂರನೆಯ ಎರಡು ಭಾಗವನ್ನು ನಾನು ಕಳೆದಿದ್ದೇನೆ. ಪ್ರತಿ ಕಾರ್ಯಕ್ರಮವನ್ನು ನಿರೂಪಣೆ ಅಂಕಿತಸಂಗೀತದೊಡನೆ ಸೇರಿಸಿ ನಿರ್ಮಿಸಿ ಎರಡು ರಿಲೇಗಳ ನಡುವಣ ನಿಗದಿತ ಅವಧಿಗಾಗಿ ಕರಾರುವಾಕ್ ಸಮಯದ ಮಿತಿಯಲ್ಲಿ ತಯಾರಿಸುವ ಅತಿ ಪ್ರಯಾಸದ ಹಾಗೂ ಕೆಲವೊಮ್ಮೆ ರೇಜಿಗೆ ಹಿಡಿಸುವ ಕೆಲಸವನ್ನು ಯಾವೊಬ್ಬ ಸಹಾಯಕರೂ ಇಲ್ಲದ್ದೇ ನಿರ್ವಹಿಸಿದ್ದೇನೆ. ಸುಮಾರು ಇಪ್ಪತ್ತಕ್ಕೂ ಮೀರಿದ ವರ್ಷಗಳ ಈ ಸುದೀರ್ಘಕಾಯಕದಿಂದ ದೊಡ್ಡ ಅನುಭವದ ಭಂಡಾರವನ್ನೇ ಪಡೆದಿದ್ದೇನೆ. ಈಗಲೂ ಹೆಚ್ಚಿನ ಕಲಾವಿದರು, ಕವಿ, ಸಾಹಿತಿಗಳು ನನ್ನನ್ನು ನೆನಪಿಸಿಕೊಳ್ಳುವಾಗ ಧನ್ಯತೆಯ ಅನುಭೂತಿಯನ್ನು ಪಡೆದಿದ್ದೇನೆ.”ರಾಕ್ಣೊ’ ಕೊಂಕಣಿ ಪತ್ರಿಕೆಯ ಚಿನ್ನದ ಹಬ್ಬದ ಸಮಾರಂಭವನ್ನು ಧ್ವನಿಮುದ್ರಿಸಲು ಕರ್ತವ್ಯದ ಮೇಲೆ ತೆರಳಿ, ವೇದಿಕೆಯ ಕೆಳಗಡೆ ಕುಳಿತು ಗಂಟೆಗಟ್ಟಲೆ ಕಾರ್ಯಕಲಾಪಗಳನ್ನು ಧ್ವನಿಮುದ್ರಿಸಿದ ನಾನು, ಅದರ ಅಮೃತ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ವೇದಿಕೆಯ ಮೇಲೆ ಭಾಗವಹಿಸಿದ್ದು, ಹಲವಾರು ಪ್ರತಿಷ್ಠಿತರ ನಡುವೆ ವೇದಿಕೆ ಹಂಚಿಕೊಂಡದ್ದು, ಉನ್ನತ ಕೊಂಕಣಿ ಸಾಹಿತಿಗಳ ಪುಸ್ತಕವನ್ನು ನನ್ನ ಕೈಯಿಂದ ಬಿಡುಗಡೆ ಮಾಡಿದ್ದು ಆಕಾಶವಾಣಿಯ ಕೊಂಕಣಿ ವಿಭಾಗ ನನಗೆ ನೀಡಿದ ಪರೋಕ್ಷ ಸಮ್ಮಾನವೆಂದೇ ಭಾವಿಸಿದ್ದೇನೆ.
ಮುಂದಿನ ವಾರಕ್ಕೆ ►►




