spot_imgspot_img
spot_img

ಪಾಳಿಯ ಬದುಕಿನ ನೋವು ನಲಿವು

SRInnerLogoನನ್ನ ಸಂದರ್ಶನದ ಸಮಯದಲ್ಲಿ ನನ್ನಲ್ಲಿ ಕೇಳಲಾದ ಪ್ರಶ್ನೆಗಳಲ್ಲೊಂದು -“ಇಲ್ಲಿಯ ಶಿಫ್ಟ್ ಗಳಿಗೆ ಹೊಂದಿಕೊಂಡು ಕೆಲಸ ಮಾಡಬಹುದೇ?” ಎಂಬುದಾಗಿ. ನಾನೋ ಕೆಲಸ ಸಿಗುವುದಾದರೆ ಶಿಫ್ಟೇ ಏಕೆ, ಇಪ್ಪತ್ತನಾಲ್ಕುಗಂಟೆಯೂ ಕೆಲಸ ಮಾಡಲು ಸಿದ್ಧ ಎಂಬಷ್ಟು ಉತ್ಸಾಹದಲ್ಲಿದ್ದೆ. ಆದರೆ ಶಿಫ್ಟಿನ ನಿಜವಾದ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಕೆಲಸಕ್ಕೆ ಸೇರಿದ ಮೇಲೆಯೇ ಅರಿವಾದದ್ದು. ಎಲ್ಲಕ್ಕೂ ಮೊದಲು ಒಂದು ಅಲರಾಂ ಗಡಿಯಾರವನ್ನು ಸಂಪಾದಿಸಿಕೊಂಡೆ. ಕರ್ಣಕಠೋರವಾದ ಸದ್ದನ್ನು ಹೊರಡಿಸುತ್ತಿದ್ದ ಆ ಗಡಿಯಾರ ನನ್ನನ್ನು ಮಾತ್ರವಲ್ಲ, ಹಾಸ್ಟೆಲಿನ ನನ್ನ ಸಹರೂಮಿಣಿಯರನ್ನೂ ಬೆಚ್ಚಿ ಬೀಳುವಂತೆ ಕೂಗಿಕೊಳ್ಳುತ್ತಿತ್ತು. ಆದುದರಿಂದ ಅದು ಎಷ್ಟು ಹೊತ್ತಿಗೆ ಕೂಗಿಕೊಳ್ಳುವುದೋ ಎಂಬ ಆತಂಕದಿಂದ ರಾತ್ರಿ ಇಡೀ ನಿದ್ರೆ ಮಾಡದೆ ಆಗಾಗ ನನ್ನಲ್ಲಿರುವ ಸಣ್ಣ ಟಾರ್ಚಿನಿಂದ ಅದರ ಮೂತಿಗೆ ಬೆಳಕು ಹಾಯಿಸಿ ನೋಡಿಕೊಳ್ಳುವುದೇ ಧ್ಯಾಸವಾಯಿತು. ಅಲ್ಲಿಂದ ಆರಂಭವಾದ ನನ್ನ ನಿದ್ದೆಗೆಡುವ ಪರಿಪಾಟಲು ನಿವೃತ್ತಿಯವರೆಗೂ ಮುಂದುವರಿಯಿತು. ಕೆಲವೊಮ್ಮೆ ಬೇರೆಯವರು ಎಚ್ಚರವಾದಾರು ಎಂಬ ಕಾಳಜಿಯಿಂದ ಅದರ ಮೂತಿಯನ್ನು ಮೊದಲೇ ಮೊಟಕಿ ಸುಮ್ಮನಾಗಿಸಿ, ಇನ್ನು ಐದೇ ನಿಮಿಷದಲ್ಲಿ ಏಳುವೆ ಎಂದುಕೊಂಡವಳಿಗೆ ಗಾಢ ನಿದ್ರೆ ಆವರಿಸಿ ಕಾರಿನ ಚಾಲಕರು ಕಾಲಿಂಗ್ ಬೆಲ್ ಒತ್ತಿದ ಮೇಲೆಯೇ ಎಚ್ಚರವಾದುದೂ ಇದೆ. ಡ್ಯೂಟಿರೂಮಿನ ಹಿರಿಯ ಅನುಭವಿಗಳು ಹೇಳುತ್ತಿದ್ದರು, ಯಾವಾಗಲೂ ಅಲರಾಂನ್ನು ದೂರ ಇಟ್ಟು ಮಲಗಬೇಕು, ಇಲ್ಲವಾದರೆ ಅದರ ಬಾಯಿಯನ್ನು ಸುಮ್ಮನಾಗಿಸಿ ಐದು ನಿಮಿಷಗಳ ನಿದ್ರೆಯ ಆಮಿಷಕ್ಕೆ ಬಲಿಯಾಗುವ ಅಪಾಯವಿದೆ, ದೂರವಿಟ್ಟರೆ ಅದನ್ನು ಸುಮ್ಮನಾಗಿಸಲು ಎದ್ದು ಬರಲೇ ಬೇಕಾಗುತ್ತದೆ, ಆಗ ನಿದ್ರೆ ತನ್ನಿಂದತಾನೇ ದೂರವಾಗುತ್ತದೆ ಎಂಬುದಾಗಿ. ಬೆಳಗ್ಗಿನ ಸವಿನಿದ್ದೆಯ ನಿಜವಾದ ಸುಖ ಗೊತ್ತಾದದ್ದೂ ಈ ಕೆಲಸಕ್ಕೆ ಸೇರಿದ ಮೇಲೆಯೇ. ಕರ್ಣಕಠೋರ ಸದ್ದುಗಳ ಬದಲಿಗೆ ಬೇರೆ ಬೇರೆ ಸದ್ದುಗಳ ಅಲಾರಂ ಆರಿಸಿ ತಂದದ್ದಾಯಿತು. ಎಷ್ಟೇ ಆಪ್ಯಾಯಮಾನವಾಗಿ ಅದು ಕೂಗಿ ಕೊಂಡರೂ ನಾನು ಅತ್ಯಂತ ದ್ವೇಷಿಸುವ ಸದ್ದುಗಳಲ್ಲಿ ಅಲರಾಂ ನ ಸದ್ದೇ ಈಗಲೂ ಇನ್ನೂ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.

Alarm01ಹಾಸ್ಟೆಲ್ ನಲ್ಲಿದ್ದಾಗ ಬೆಳಗ್ಗಿನ ಪಾಳಿಗೆ ತಯಾರಾಗುವ ಕಷ್ಟ ಇನ್ನೊಂದು ಬಗೆಯದು. ಆಗ ತಾನೆ ರಾತ್ರಿಯ ಪಾಳಿ ಮುಗಿಸಿ ಬಂದು ಮಲಗಿರುವ ಟೆಲಿಫೋನ್ಸ್ ನ ಭಾಗೀರಥಿಗೆ ಎಚ್ಚರವಾಗದಂತೆ ಬಾತ್ ರೂಮಿನ ದೀಪ ಉರಿಸಿ ಅದರ ಬಾಗಿಲನ್ನು ತೆರೆದಿಟ್ಟು ಅದರ ಮಬ್ಬು ಬೆಳಕಿನಲ್ಲಿ ಸಿದ್ಧಳಾಗಬೇಕು. ಹಿಂದಿನ ರಾತ್ರಿಯೇ ಎಲ್ಲವನ್ನೂ ಜೋಡಿಸಿಟ್ಟುಕೊಳ್ಳದೇ ಹೋದರೆ ಕೊನೆ ಘಳಿಗೆಯಲ್ಲಿ ಸಿಗಬೇಕಾದ ವಸ್ತು ಕೈಗೆ ಸಿಗದೆ ಚಾಲಕರು ಬಾರಿಸುವ ಹಾರ್ನಿನ ಸದ್ದಿಗೆ ಬೆಚ್ಚಿ ಸಿಕ್ಕಿದ್ದನ್ನು ತೆಗೆದುಕೊಂದು ಓಡಿಬರಬೇಕಾಗುತ್ತಿತ್ತು. ಅದರಲ್ಲೂ ಕನ್ನಡಕ ಮರೆತು ಬಂದರೆ ಆಗುವ ಫಜೀತಿ ಬಿಟ್ಟು ಬಂದವರಿಗಷ್ಟೇ ಅರಿವಾದೀತು. ಶ್ರೀಮಾನ್ ರೈಗಳು ಕನ್ನಡಕ ಮರೆತು ಬಂದು ಯಾರ್ಯಾರದೋ, ಯಾವುದೋ ಪವರಿನ ಕನ್ನಡಕ ಏರಿಸಿ ಪಡುವ ಕಷ್ಟ ಯಾವಾಗಲೂ ಇದ್ದದ್ದೇ, ಶಾರದಾ ಅವರು ಒಂದು ಕಾಲಿಗೆ ಒಂದುತರಹದ, ಇನ್ನೊಂದು ಕಾಲಿಗೆ ಇನ್ನೊಂದು ತರಹದ ಚಪ್ಪಲಿ ಹಾಕಿ ಬಂದ ಉದಾಹರಣೆಗಳಿವೆ. ಬಿರುಗಾಳಿ ಮಳೆಯ ಸಂದರ್ಭದಲ್ಲಿ, ಕರೆಂಟ್ ಹೋದ ಸಂದರ್ಭದಲ್ಲಿ ಬೆಳಗ್ಗಿನ ಪಾಳಿಗೆ ಸಜ್ಜಾಗಿ ನಿಲ್ಲುವ ಬಗೆಯಂತೂ ಹೇಳತೀರದು. ಸಂಸಾರದ ನೊಗ ಹೊತ್ತ ಮೇಲಂತೂ ಬೆಳಗ್ಗಿನ ತಿಂಡಿ, ಮಧ್ಯಾನ್ಹದ ಅಡುಗೆ ಅರ್ಧಂಬರ್ಧ ಗಡಿಬಿಡಿಯಲ್ಲಿ ಮಾಡಿ, ತಿಂಡಿಯನ್ನು ಡಬ್ಬಿಗೆ ತುಂಬಿಸಿ ತರುವ ಹೆಚ್ಚುವರಿ ಕೆಲಸವೂ ಸೇರ್ಪಡೆಯಾಗಿತ್ತು. ಸಾಮಾನ್ಯವಾಗಿ ಮರುದಿನ ಮುಂಜಾನೆಯ ಪಾಳಿ ಇದ್ದರೆ ಬಟ್ಟೆಬರೆ, ಕೊಡೆ, ನೀರು, ಪರ್ಸ್, ಕನ್ನಡಕ, ಪೆನ್ನು, ಚಪ್ಪಲಿ, ಬ್ಯಾಗ್, ವಾಚ್ – ಹೀಗೆ ಎಲ್ಲವನ್ನೂ ಹಿಂದಿನ ದಿನವೇ ಜೋಡಿಸಿಟ್ಟುಕೊಂಡರೆ ಮರುದಿನ ಬೆಳಗ್ಗೆ ಗಡಿಬಿಡಿ ಇಲ್ಲದೇ ಹೊರಡಬಹುದು.

ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಬಿಗಿಯಾದ ಸೆಕ್ಯೂರಿಟಿ ನಿಯಮಗಳಿದ್ದುವು. ಗೇಟ್, ಮುಖ್ಯದ್ವಾರ, ಡ್ಯೂಟಿರೂಂ, ಅಲಮಾರುಗಳ ಬೀಗಗಳನ್ನು ನಿಯೋಜಿತ ಅಧಿಕಾರಿಗಳು ಕ್ರಮಪ್ರಕಾರ ತೆರೆದ ಬಳಿಕ ಆಯಾ ಪಾಳಿಯ ಪ್ರಸಾರ ಸಾಮಗ್ರಿಗಳನ್ನು ನಾವು ಅಲಮಾರಿನಿಂದ ತೆಗೆದು ಜೋಡಿಸಿ, ಯಾವುದಾದರೂ ಇಲ್ಲದಿದ್ದರೆ ಅದನ್ನು ಕೂಡಲೇ ಕರ್ತವ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಅಂದಿನ ಕಾರ್ಯಕ್ರಮಗಳ ವಿವರವನ್ನು ಅವರ ಮುಂದೆ ಗಿಳಿಪಾಠ ಒಪ್ಪಿಸಿ, ಉದ್ಘೋಷಣೆಯ ಹಾಳೆಯ ಮೇಲೆ ಅವರ ಸಹಿ ಪಡೆದು ಮತ್ತೆ ಸ್ಟುಡಿಯೋಗೆ ಪ್ರವೇಶ. ಅಕಸ್ಮಾತ್ ಪ್ರತಿ ಪಾಳಿಯಲ್ಲಿರಲೇ ಬೇಕಾದ ಆರು ಮಂದಿಗಳಲ್ಲಿ ಯಾರಾದರೂ ತಡ ಮಾಡಿದರೆ ಗಾಡಿ ನಿಲಯವನ್ನು ತಡವಾಗಿ ತಲುಪಿ ಅಂದಿನ ಗಡಿಬಿಡಿ ಹೇಳತೀರದು. ಅಂದೇ ಸಿಗ್ನೇಚರ್ ಟ್ಯೂನ್ ಅಥವಾ ಮಂಗಳಧ್ವನಿ ಟೇಪ್ ಸಿಗದೇ ಹೋಗುವುದೂ ಉಂಟು. ಒಟ್ಟಿನಲ್ಲಿ ಯಾರೇ ತಡ ಮಾಡಿರಲಿ, ಏನೇ ಸಿಗದೇ ಹೋಗಿರಲಿ, ಗಡಿಬಿಡಿಯಲ್ಲಿ ಎಲ್ಲವನ್ನೂ ಹೇಗೋ ಹೊಂದಿಸಿಕೊಂಡು ಪ್ರಸಾರವನ್ನು ಮಾತ್ರ ಕರಾರುವಾಕ್ ನಿಗದಿತ ಸಮಯಕ್ಕೇ ಆರಂಭಿಸುವ ಹೊಣೆ. ಟೇಪು ಸಿಗದ ಆತಂಕ ಎದೆಯೊಳಗಿನಿಂದ ಗುದ್ದಿಕೊಂಡು ಬರುತ್ತಿದ್ದರೂ ಸುಪ್ರಸನ್ನ ಧ್ವನಿಯಲ್ಲಿ ಉದ್ಘೋಷಣೆಯನ್ನು ನೀಡುವ ಕಲೆ ಸಾಮಾನ್ಯವಾದುದಲ್ಲ. ಒಮ್ಮೆ ಆರಂಭಿಸಿದರೆ ಮತ್ತೆ ಮಿಸುಕಾಡಲೂ ಸಿಗದಷ್ಟು ಒತ್ತೊತ್ತನೆಯ ಕಾರ್ಯಕ್ರಮಗಳು. ಎಂಟು ಗಂಟೆಗೆ ವಾರ್ತಾಸಮಯದಲ್ಲಿ ತಿಂಡಿತಿನ್ನಲು ಬಿಡುವು. ಮನೆಯಿಂದ ತಂದಿದ್ದರೆ ಡ್ಯೂಟಿರೂಮಿನಲ್ಲಿಯೇ ಅದನ್ನು ಬಿಡಿಸಿ ತಿನ್ನುವ , ತರದಿದ್ದರೆ ಜಯಂತಭಟ್ಟರ ಕ್ಯಾಂಟೀನಿಗೆ ಓಡಿಹೋಗಿ ಇಡ್ಲಿ, ಪಲಾವ್ ತಿಂದು ಬರುವ ತರಾತುರಿ. ತಿಂಡಿತಿನ್ನುವಾಗಲೂ ಒಂದು ಕಿವಿ ಸದಾ ಪ್ರಸಾರದತ್ತ, ಏನಾದರೂ ಪ್ರಸಾರದಲ್ಲಿ ಹೆಚ್ಚುಕಮ್ಮಿ ಆದರೆ ಎದ್ದೆನೋ ಬಿದ್ದೆನೋ ಎಂದೋಡಿ ಬರುವ ಆತಂಕ. ಹೀಗೆ ಪಾಳಿಯ ಬದುಕಿನಲ್ಲಿ ಒಂದೊಂದೂ ತುತ್ತನ್ನೂ ಯಾರೋ ಅಟ್ಟಿಸಿಕೊಂಡು ಬರುತ್ತಿದ್ದಾರೋ ಎಂಬಂತೆ ತಿನ್ನುವುದು ರೂಢಿಯಾಗಿ ಈಗ ಯಾರಾದರೂ ತುಂಬಾ ನಿಧಾನವಾಗಿ ನೋಡಿದರೆ ರೇಗುವಂತಾಗುತ್ತದೆ.

ಮುಂಜಾವದ ಕಥೆ ಇದಾದರೆ, ರಾತ್ರಿಯದು ಮಗದೊಂದು ಕಥೆ. ಸುದೀರ್ಘ ಪ್ರಸಾರದ ಪಾಳಿ. ಸಂಜೆ ನಾಲ್ಕರಿಂದ ತೊಡಗಿ ರಾತ್ರಿ ಹನ್ನೊಂದು ಘಂಟೆ ಐದು ನಿಮಿಷಗಳ ವರೆಗೆ. ಮನೆಗೆ ನೆಂಟರು ಬಂದು ಉಳಿಯುವ ಸೂಚನೆಗಳಿದ್ದರೆ ರಾತ್ರಿಯ ಹಾಗೂ ಮರುದಿನದ ಮುಂಜಾವದ ಪಾಳಿಯನ್ನು ತಪ್ಪಿಸಿಕೊಳ್ಳಲು ಡ್ಯೂಟಿಚಾರ್ಟ್ ನಲ್ಲಿ ಮಾಡುವ ಕಸರತ್ತುಗಳು, ಹೊಂದಾಣಿಕೆಯ ಕಷ್ಟಗಳು, ಮುನಿಸು, ಬೇಸರಗಳು ’ಸಾಕಪ್ಪಾ ಈ ಕೆಲಸ’ ಅನ್ನುವ ಮಟ್ಟಿಗೆ ಅನುಭವವಾಗಿವೆ.

ಆದರೂ ನಮ್ಮಷ್ಟಕ್ಕೇ ನಾವೊಬ್ಬರೇ ಸ್ಟುಡಿಯೋದ ಏಕಾಂತದಲ್ಲಿದ್ದು ಮಾಡುವ ಈ ಕೆಲಸ ನಡುನಡುವೆ ಬಂದು ಚೊರೆ ಮಾಡುವವರಿಲ್ಲದೇ ಹೋದರೆ ಅತ್ಯಂತ ಸುಖದಾಯಕವೂ ಹೌದು. ಪ್ರಸಾರ ನಿರ್ವಹಣೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಮೇಲೆ, ಮೆಶೀನುಗಳೊಡನೆ ಸಖ್ಯ ಸಾಧಿಸಿದ ಮೇಲೆ ಪ್ರಸಾರದ ನಡುನಡುವೆ ಸಿಗುವ ಉದ್ದನೆಯ ಬಿಡುವುಗಳಲ್ಲಿ ಲಘುವಾದ ಓದು, ಬರಹ ನಡೆಸಲು ಬಹಳ ಹಿತವಾಗುತ್ತಿತ್ತು. ಎಷ್ಟೋ ಉತ್ತಮ ಪುಸ್ತಕಗಳನ್ನು ನಾನು ಪ್ರಸಾರದ ನಡುವೆ ಓದಿ ಮುಗಿಸಿದ್ದೇನೆ. ಎಷ್ಟೋ ಬರಹಗಳು ಪಾಳಿಯ ನಡುವೆಯೇ ಮೂಡಿಬಂದಿವೆ. ಬರೆಯಲು ಹಳೆಯ ಕ್ಯೂ ಶೀಟ್ ಗಳ ಹಾಳೆಗಳು ಬೇಕಾದಷ್ಟು ಇದ್ದುವಾದುದರಿಂದ ಬರೆಯುವವರಿಗೆ ಒಳ್ಳೆಯ ಅವಕಾಶ. ಮೊಬೈಲ್ ಎಂಬ ಅನಿವಾರ್ಯಪೀಡೆ ಕಾಲಿಟ್ಟ ಮೇಲೆ ಓದುವ, ಬರೆಯುವ ಎಲ್ಲ ಸುಖಗಳೂ ತಪ್ಪಿಹೋದವು.

SRK 2ಆಗ ಫೋನ್ ಗಳಿಲ್ಲದ ಕಾಲದಲ್ಲಿ ತೀರಾ ಅನಿವಾರ್ಯವಾದ ಪರಿಸ್ಥಿತಿಯಲ್ಲೂ ಡ್ಯೂಟಿಗೆ ಬರುವುದನ್ನು ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ರಾತ್ರಿಯಿಡೀ ಕೆಂಡಾಮಂಡಲ ಜ್ವರ ಬಂದರೂ ಬೆಳಗೆದ್ದು ಡ್ಯೂಟಿಗೆ ಬರಲೇಬೇಕಾದ ಅನಿವಾರ್ಯತೆ, ಮಗು ಚಿಕ್ಕವನಿದ್ದಾಗಲಂತೂ ಎಷ್ಟೋ ಬಾರಿ ಇಂಥ ಆತಂಕಗಳ ನಡುವೆ ಡ್ಯೂಟಿಗೆ ಬರಲೇಬೇಕಾಗಿದೆ. ಇನ್ನು ಕೆಲವೊಮ್ಮೆ ರಾತ್ರಿಯ ಡ್ಯೂಟಿಯಲ್ಲಿದ್ದಾಗ ಯಾರೇ ತೀರಿಕೊಂಡರೂ ಬಿಟ್ಟು ಹೋಗಲಾಗದ ಪರಿಸ್ಥಿತಿ. ಇಂಥ ಸಂದಿಗ್ಧತೆ, ಅಗ್ನಿದಿವ್ಯಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಕಂಡು ಅನುಭವಿಸಿ ಆಗಿದೆ. ಬೆಳಗ್ಗೆ ಕರೆಯಲು ಬರಬೇಕಿದ್ದ ಗಾಡಿ ಹೊತ್ತು ಮೀರಿದರೂ ಬಾರದಿದ್ದಾಗ , ಮನೆಯಿಂದ ಮುಖ್ಯರಸ್ತೆವರೆಗೂ ನಡೆದು ಬಂದು ದಾರಿಯಲ್ಲಿ ಎದುರಿಗೆ ಸಿಕ್ಕ ವಾಹನಕ್ಕೆ ಕೈ ತೋರಿಸಿ ಹತ್ತಿ, ಇಳಿದು, ಓಡಿ ಪ್ರಸಾರವನ್ನು ಆರಂಭಿಸಿದ್ದಿದೆ. ಬರಬೇಕಾದವರು ಬಂದಿಲ್ಲ, ತಕ್ಷಣ ಹೊರಡು ಎಂದಾಗ ಉಟ್ಟಬಟ್ಟೆಯಲ್ಲೇ ಹೊರಟು ಮುಂಜಾವದ ಪ್ರಸಾರ ನಿರ್ವಹಿಸಿದ್ದಿದೆ. ಮುಂಜಾವದ ಪಾಳಿ ಮುಗಿದು ಎರಡನೆಯ ಪಾಳಿಯವರು ಕೊನೆಯ ಘಳಿಗೆಯಲ್ಲಿ ಕೈ ಕೊಟ್ಟಾಗ, ಅಥವಾ ಎರಡನೆಯ ಪಾಳಿ ಮುಗಿಸಿ ಸಂಜೆ ಹೊರಡುವ ಆತುರದಲ್ಲಿದ್ದಾಗ ಸಂಜೆಯ ಪಾಳಿಯವರು ಬರುವುದಿಲ್ಲವಂತೆ ಎಂಬ ಸುವಾರ್ತೆ ಬಂದು ರಾತ್ರಿಯವರೆಗೂ ಪಾಳಿ ಮುಂದುವರಿದು ಮನೆಯಲ್ಲಿ ಅಮ್ಮನಿಗಾಗಿ ಅಳುವ ಹಾಲು ಕುಡಿವ ಕಂದನೊಡನೆ ನಾನೂ ಸ್ಟುಡಿಯೋದಲ್ಲಿ ಕಣ್ಣೀರು ಸುರಿಸಿದ್ದಿದೆ. ಆಗೆಲ್ಲ ಈಗಿನಂತೆ ದಂಡಿಯಾಗಿ ಕ್ಯಾಶ್ಯುವಲ್ ಉದ್ಘೋಷಕರು ಇರಲಿಲ್ಲ. ಇದ್ದರೂ ಅವರನ್ನು ಮುಂಚಿತವಾಗಿ ಸಂಪರ್ಕಿಸದೇ ಇದ್ದಲ್ಲಿ ಅವರು ತಕ್ಷಣಕ್ಕೆ ಒದಗುತ್ತಿರಲಿಲ್ಲ.
ವಾರದ ಏಳು ದಿನಗಳಲ್ಲಿ ಯಾವುದಾದರೂ ಒಂದು ದಿನ ಆಫ್ ತೆಗೆದುಕೊಂಡರೆ, ಉಳಿದ ಆರು ದಿನಗಳಲ್ಲಿ ತಲಾ ಎರಡು ಮುಂಜಾನೆಯ, ಹಾಗೂ ಎರಡು ರಾತ್ರಿಯ ಪಾಳಿಗಳು ನಿಗದಿತವಾಗಿ ದೊರೆಯುತ್ತಿದ್ದುವು. ಕೆಲವೊಮ್ಮೆ ಹೆಚ್ಚುವರಿ ಆದದ್ದೂ ಇದೆ. ಮಧ್ಯಾನ್ಹದ ಪಾಳಿಗಳಲ್ಲಿ ನನಗೆ ನಿಗದಿಪಡಿಸಿದ ಬೇರೆ ವಿಭಾಗದ ಕೆಲಸಗಳನ್ನು ಮಾಡಬೇಕಾಗುತ್ತಿತ್ತು. ಆದರೆ ಅದರ ಡಬ್ಬಿಂಗ್, ಎಡಿಟಿಂಗ್ ಇತ್ಯಾದಿಗಳಿಗೆ ಹಗಲು ಹೊತ್ತಿನಲ್ಲಿ ಮಶೀನ್ ಗಳು ಸಿಗುವುದು ದುರ್ಲಭವಾದುದರಿಂದ ರಾತ್ರಿಯ ಅಥವಾ ಮುಂಜಾನೆಯ ಪಾಳಿಗಳ ಜನದಟ್ಟಣೆಯಿಲ್ಲದ ಹೊತ್ತಲ್ಲಿ ಸ್ಟುಡಿಯೋದಿಂದ ಸ್ಟುಡಿಯೋ ಗೆ ಓಡಾಡುತ್ತಾ ಅದನ್ನು ನಿರ್ವಹಿಸುವುದು, ನಿಭಾಯಿಸುವುದು ಮಾಡುತ್ತಿದ್ದೆ.

ಡ್ಯೂಟಿಚಾರ್ಟಿಗೆ ಅನುಗುಣವಾಗಿ ಮನೆಯಲ್ಲಿ ತಿಂಡಿತೀರ್ಥಗಳ ತಯಾರಿಯ ಯಾದಿಯೂ ಸಿದ್ಧವಾಗುತ್ತಿತ್ತು. ಅರೆಯುವ, ಹೊಯ್ಯುವ, ಬೇಯಿಸುವ ಇತ್ಯಾದಿ ತಿಂಡಿಗಳು ಮಧ್ಯಾನ್ಹದ ಪಾಳಿಯಿದ್ದ ದಿನ. ಉಪ್ಪಿಟ್ಟು, ಹಿಂದಿನದಿನವೇ ತಯಾರಿಸಿ ಬೆಳಗ್ಗೆ ಬೇಯಿಸಲು ಸಾಧ್ಯವಾಗುವ ಪುಂಡಿ ಇತ್ಯಾದಿ ಬೆಳಗ್ಗಿನ ಪಾಳಿಗೆ, ಘನವಾದ ಅಡುಗೆ ತಯಾರಿಗಳು ಆಫ್ ದಿನ ಇಲ್ಲವೇ ಸಂಜೆಯ ಡ್ಯೂಟಿಯನ್ನು ಕಾದುಕೊಂಡಿರುತ್ತಿದ್ದುವು. ಮಗನ ಪರೀಕ್ಷಾ ಸಮಯದಲ್ಲಿ ಅವನನ್ನು ಓದಿಸಲು ಅನುಕೂಲವಾಗುವಂತೆ ರಾತ್ರಿ ಮತ್ತು ಬೆಳಗ್ಗಿನ ಶಿಫ್ಟ್ ತಪ್ಪಿಸಲು ಮಾಡುತ್ತಿದ್ದ ಸರ್ಕಸ್ ಗಳು ಯಾವ ಜಂಬೋ ಸರ್ಕಸ್ ಗೂ ಕಡಿಮೆಯದ್ದಲ್ಲ. ಮನೆಗೆ ಬರುವವರಲ್ಲಿ ಕೆಲವರಾದರೂ ನಿನಗೆ ಯಾವ ಶಿಫ್ಟ್? ಯಾವಾಗ ಬರಬಹುದು? ಅಥವಾ ಇಂಥಾ ದಿನ ಬರುತ್ತೇವೆ ಎಂದು ಮುಂಚಿತವಾಗಿಯೇ ತಿಳಿಸಿಯೋ ಕೇಳಿಯೋ ಬರುವವರಿದ್ದರು. ಇನ್ನು ಕೆಲವರು ಬಂದ ಮೇಲೆಯೇ ಗೊತ್ತಾಗುತ್ತಿತ್ತು. ಆಗ ಶಿಫ್ಟ್ ಬದಲಾಯಿಸಲು ಕಲಿತ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗುತ್ತಿತ್ತು. ಹಬ್ಬಹರಿದಿನದ ಸಂದರ್ಭದಲ್ಲಿ ಊರಿಗೆಲ್ಲಾ ರಜೆಯಾದ್ರೂ ಆಕಾಶವಾಣಿಗೆ ಮಾತ್ರ ರಜೆಯಿಲ್ಲ. ಚೌತಿ, ನವರಾತ್ರಿ, ಅಷ್ಟಮಿ, ದೀಪಾವಳಿಯ ಸಂದರ್ಭದಲ್ಲಿ ಎಲ್ಲರಿಗೂ ರಜೆ ಬೇಕು. ಹಾಗಾದರೆ ಡ್ಯೂಟಿ ಮಾಡುವವರು ಯಾರು? ಪ್ರತಿಬಾರಿ ಈ ಪ್ರಶ್ನೆಗಳಿಗೆ ಉತ್ತರಿಸಿಯೇ ಒಂದೋ ರಜೆ ಇಲ್ಲವಾದರೆ ಡ್ಯೂಟಿಯ ಸಜೆಯನ್ನು ಅನುಭವಿಸಲೇ ಬೇಕಿತ್ತು. ವಾರಕ್ಕೊಮ್ಮೆ ಪಡೆಯುವ ಆಫ್ ಆದರೂ ಯಾರದೋ ಮದುವೆ, ಮುಂಜಿಗಾಗಿ, ಯಾರದೋ ಬರವಿಗಾಗಿ, ಇನ್ನಾವುದೋ ಕಾರಣಕ್ಕಾಗಿ ವ್ಯಯವಾಗುತ್ತಿದ್ದ ಕಾರಣ, ಈ ಮೂರೂವರೆ ದಶಕಗಳುದ್ದಕ್ಕೂ ನನಗಾಗಿ ಎಂದು ಒಂದೇ ಒಂದು ದಿನವನ್ನು ಅನುಭವಿಸುವ ಯೋಗ ಬರಲೇ ಇಲ್ಲ.

ಬೆಳ್ಳಂಬೆಳಗ್ಗೆ ಸೂರ್ಯ ಉದಯಿಸುವ ಮುನ್ನವೇ ಮುಂಜಾನೆಯ ಪ್ರಸಾರಕ್ಕಾಗಿ ಸ್ಟುಡಿಯೋದ ಒಳಗೆ ಸೇರುವ ನಾವು ಮತ್ತೆ ಮನೆಗೆ ಮರಳುವಾಗ ಸೂರ್ಯ ನಡುನೆತ್ತಿಯ ಮೇಲೆ ಉರಿಯತೊಡಗುತ್ತಿದ್ದ. ಆಗ ಹಸಿವಿಗೋ ಬಿಸಿಲಿಗೋ ಹುಟ್ಟಿಕೊಳ್ಳುತ್ತಿದ್ದ ಸಣ್ಣ ತಲೆನೋವಿನೊಡನೆ ಮನೆಯ ಬೀಗ ತೆರೆದು ಬೆಳಗ್ಗೆ ಅರ್ಧಂಬರ್ಧ ಬೇಯಿಸಿಟ್ಟು ಹೋದ ಅನ್ನ, ಸಾರು, ಪಲ್ಯಾದಿಗಳಿಗೆ ಒಗ್ಗರಣೆಯ ಭಾಗ್ಯವನ್ನು ಕರುಣಿಸಿ ಮೋಕ್ಷ ಕೊಟ್ಟು ಒಂದಷ್ಟು ತಿಂದ ಶಾಸ್ತ್ರ ಮಾಡಿ ಮೊಬೈಲ್, ಕಾಲಿಂಗ್ ಬೆಲ್ ಗಳು ತೊಂದರೆ ಕೊಡದೇ ಹೋದರೆ ಒಂದಷ್ಟು ಮಲಗಬಹುದಿತ್ತು. ರಾತ್ರಿಯ ಪಾಳಿಯಾದರೆ ಮಧ್ಯಾನ್ಹದ ಊಟದ ಬಳಿಕ ಸಣ್ಣ ಕೋಳಿನಿದ್ರೆಯು ಕಣ್ಣನ್ನು ಆವರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಎದ್ದು ಹೊರಟು, ಊಟದ ಬುತ್ತಿಚೀಲವನ್ನು ಕಟ್ಟಿ ಸಂಜೆ ನಾಲ್ಕರ ಒಳಗೆ ಸ್ಟುಡಿಯೋ ಸೇರಿದರೆ ಡ್ಯೂಟಿಮುಗಿಸಿ, ರಾತ್ರಿ ಪಾಳಿಯ ಸಹಚರಿಗಳನ್ನು ಅವರವರ ಮನೆಗೆ ಆಯಾ ರೂಟಿಗೆ ಅನುಗುಣವಾಗಿ ತಲುಪಿಸುವ ಕಚೇರಿಯ ವಾಹನ ನಮ್ಮ ಮನೆ ಮುಂದೆ ತಲಪುವಾಗ ಮನೆಮಂದಿಯೆಲ್ಲಾ ಆಗಲೇ ನಿದ್ರೆಯ ಅರೆಮಂಪರು ಸ್ಥಿತಿಯಲ್ಲಿರುತ್ತಿದ್ದರು. ಸಂಜೆ ಐದರಿಂದಲೇ ಪಂಚೇಂದ್ರಿಯಗಳನ್ನು ಸದಾ ಜಾಗೃತಸ್ಥಿತಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಿದ ಪರಿಣಾಮ, ಮಲಗಿದ ಕೂಡಲೇ ನಿದ್ರೆ ಹತ್ತಿರವೂ ಸುಳಿಯುತ್ತಿರಲಿಲ್ಲ. ಎಷ್ಟೋ ಬಾರಿ ಮತ್ತೆ ಎದ್ದು ದೀಪ ಉರಿಸಿ ನಿದ್ರೆ ಬರುವವರೆಗೂ ಏನನ್ನಾದರೂ ಓದುತ್ತಾ, ಬೇಕೆಂದಾಗ ಬಾರದ ಹಠಮಾರಿ ನಿದ್ರೆಗಾಗಿ ಕಾಯುವುದು ಮಾಮೂಲಿ ದಿನಚರಿಯಾಗಿತ್ತು. ಸುಮಾರು ಮೂವತ್ತೈದು ವರ್ಷಗಳ ಕಾಲ ನಿರ್ವಹಿಸಿದ ಈ ಪಾಳಿಯ ಜೋಳಿಗೆಯಿಂದ ಆಯ್ದ ಕೆಲವೇ ಕೆಲವು ವಿಚಾರಗಳನ್ನಷ್ಟೆ ನಿಮ್ಮ ಮುಂದೆ ಇಟ್ಟಿರುವೆ. ಮುಂದಿನ ಕಂತಿನಲ್ಲಿ ಪಾಳಿಯ ಬದುಕಿನ ಕೆಲ ಸಹಚರಿಗಳ ಪರಿಚಯ ಮಾಡಿಸುವೆ, ಆಗದೇ?

ಮುಂದಿನ ವಾರಕ್ಕೆ   

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.