spot_imgspot_img
spot_img

ಕರ್ತವ್ಯ ಕೊಠಡಿಯ ನೆನಪುಗಳು

SRInnerLogoಕರ್ತವ್ಯ ಕೊಠಡಿ ಆಕಾಶವಾಣಿಯ ಪ್ರಮುಖ ಅಂಗಗಳಲ್ಲಿ ಒಂದು. ಇಲ್ಲಿ ಬೆಳಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷದವರೆಗೂ ಕರ್ತವ್ಯದಲ್ಲಿರುವವರು ಪಾಳಿಯ ಪ್ರಕಾರ ಕೆಲಸ ಮಾಡುತ್ತಿರುತ್ತಾರೆ. ಕರ್ತವ್ಯ ಕೊಠಡಿ ಅನ್ನುವುದು ಆಕಾಶವಾಣಿಯ ಹೃದಯವಿದ್ದಂತೆ. ಹೇಗೆ ದೇಹದ ಎಲ್ಲ ನರನಾಡಿಗಳೂ ರಕ್ತ ಸರಬರಾಜಿನ ವ್ಯವಸ್ಥೆಯಲ್ಲಿ ಹೃದಯದ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತವೆಯೋ ಹಾಗೆ ಆಕಾಶವಾಣಿಯ ಎಲ್ಲ ವಿಭಾಗದವರೂ ಕರ್ತವ್ಯಕೊಠಡಿಯ ಜೊತೆ ಅನಿವಾರ್ಯವಾಗಿ ಸಂಪರ್ಕ ಇಟ್ಟುಕೊಂಡಿರುತ್ತಾರೆ.

ಆಡಳಿತ ವಿಭಾಗದವರು ಆಯಾದಿನದ ಬಟವಾಡೆಯಾಗುವ ಚೆಕ್ ಗಳನ್ನು ಕರ್ತವ್ಯಕೊಠಡಿಯ ಅಧಿಕಾರಿಗೆ ಹಸ್ತಾಂತರಿಸುತ್ತಾರೆ. ಧ್ವನಿಮುದ್ರಣ ಮುಗಿಸಿ ಬಂದವರು ತಮ್ಮ ಚೆಕ್ ಗಳನ್ನು ಇಲ್ಲಿಯೇ ಪಡೆಯುತ್ತಾರೆ. ಧ್ವನಿಮುದ್ರಣದ ವಿವರಗಳು ಇಲ್ಲಿಯೇ ದಾಖಲಾಗುತ್ತವೆ. ಲೈಬ್ರೆರಿಯಿಂದ ಆಯಾದಿನದ ಹಾಗೂ ಮರುದಿನದ ಪ್ರಸಾರದ ಟೇಪ್, ಡಿಸ್ಕ್, ಸಿ.ಡಿ ಇತ್ಯಾದಿಗಳು ಪ್ರಸಾರದ ಕ್ಯೂ ಶೀಟ್ ಗಳಿಗೆ ಅನುಗುಣವಾಗಿ ಕರ್ತವ್ಯಕೊಠಡಿಗೆ ಹಸ್ತಾಂತರಿಸಲ್ಪಡುತ್ತವೆ. ಯಾವ ಪ್ರಸಾರ ಸಾಮಾಗ್ರಿ ಬಂದಿಲ್ಲವೆಂಬುದನ್ನು ಪರಿಶೀಲಿಸಿ ಆಯಾ ವಿಭಾಗದವರಿಗೋ ಲೈಬ್ರೆರಿಗೋ ತಿಳಿಸಿ ಅದನ್ನು ಪಡೆದುಕೊಳ್ಳುವ ಜವಾಬ್ದಾರಿ ಕರ್ತವ್ಯಾಧಿಕಾರಿಯದು. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿಯೂ ಕಣ್ತಪ್ಪಿನಿಂದ ಆ ನಿಗದಿತ ಕಾರ್ಯಕ್ರಮದ ಟೇಪ್ ಅಥವಾ ಸಿ.ಡಿ ಇಲ್ಲವೇ ಡಿಸ್ಕ್ ಸಿಗದೇ ಹೋದರೆ ಬದಲಿ ಕಾರ್ಯಕ್ರಮದ ವ್ಯವಸ್ಥೆಯನ್ನೂ ಕರ್ತವ್ಯಾಧಿಕಾರಿಯೇ ಮಾಡಿ ಆ ಬಗ್ಗೆ ಪ್ರಸಾರದ ವರದಿಯಲ್ಲಿ ನಮೂದಿಸಬೇಕು.

ನಿಯಂತ್ರಣಕೊಠಡಿಗೆ ಪ್ರಸಾರದಲ್ಲಿನ ಬದಲಾವಣೆಗಳ ಬಗ್ಗೆ, ಆಕಸ್ಮಿಕವಾಗಿ ಏರ್ಪಡುವ ಸಹಪ್ರಸಾರಗಳ(ರಿಲೇ) ಬಗ್ಗೆ ಮಾತ್ರವಲ್ಲ ದೈನಂದಿನ ಪ್ರಸಾರಕಾರ್ಯಗಳ ಬಗ್ಗೆ ಕ್ಯೂ ಶೀಟನ್ನು ತಲುಪಿಸುವ ಜವಾಬ್ದಾರಿಯೂ ಕರ್ತವ್ಯಾಧಿಕಾರಿಯದೆ. ಕರ್ತವ್ಯಾಧಿಕಾರಿಗಳು ಇಡಿ ಪ್ರಸಾರವನ್ನು ಸಿಗ್ನೇಚರ್ ಟ್ಯೂನ್ ನಿಂದ ತೊಡಗಿ ಪ್ರಸಾರದ ಕೊನೆಯ ನಮಸ್ಕಾರ, ಜೈಹಿಂದ್ ವರೆಗೂ ಆಲಿಸಿ ಲಾಗ್ ಬುಕ್ ನಲ್ಲಿ ದಾಖಲಿಸಬೇಕು. ಪ್ರತಿ ಪ್ರಸಾರದ ವರದಿ ಬರೆಯಬೇಕು. ಆಯಾ ಕಾರ್ಯಕ್ರಮಗಳಿಗೆ ಅವುಗಳ ಗುಣಮಟ್ಟಕ್ಕೆ ತಕ್ಕ ಗ್ರೇಡ್ ಕೊಡಬೇಕು. ಕಾರ್ಯಕ್ರಮ ನೀಡಿದ ಅತಿಥಿಗಳಿಗೆ ನೀಡಿದ ಶುಲ್ಕದ ವಿವರ, ಧ್ವನಿಮುದ್ರಣದ ದಿನಾಂಕ, ಕಾರ್ಯಕ್ರಮದ ಅವಧಿ ಎಲ್ಲವನ್ನೂ ಲಾಗ್ ಮಾಡಬೇಕು. ನಿಗದಿತ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಯಿದ್ದರೆ ನಿಲಯನಿರ್ದೇಶಕರ ಗಮನಕ್ಕೆ ತರುವ, ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ತಾನೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವೂ ಸೇರಿದಂತೆ ಹಲವಾರು ಹೊಣೆಗಾರಿಕೆ ಕರ್ತವ್ಯಾಧಿಕಾರಿಯದು. ದೆಹಲಿ, ಬೆಂಗಳೂರು ಕೇಂದ್ರದ ಆ ಸಂಜೆ ಹಾಗೂ ಮರುದಿನ ಪ್ರಸಾರವಾಗುವ ಕಾರ್ಯಕ್ರಮಗಳ ವಿವರಗಳನ್ನು ದಾಖಲಿಸಿ ಅದರಲ್ಲಿ ನಮ್ಮ ನಿಲಯವೂ ಸಹಪ್ರಸಾರಿಸತಕ್ಕ ಕಾರ್ಯಕ್ರಮಗಳಿದ್ದರೆ ಅದನ್ನು ಕೂಡಲೇ ನಿರ್ದೇಶಕರ ಅವಗಾಹನೆಗೆ ತಂದು ಮುಖ್ಯ ಕ್ಯೂಶೀಟ್ ಗಳಲ್ಲಿ ಬದಲಾವಣೆಯ ವಿವರಗಳನ್ನು ಬರೆದು, ಉದ್ಘೋಷಕರ ಹಾಗೂ ನಿಯಂತ್ರಣಕೊಠಡಿಯ ಕ್ಯೂ ಶೀಟ್ ಗಳಲ್ಲಿ ಬದಲಾವಣೆಯ ವಿವರ ಬರೆದು ಅಳವಡಿಸುವ ಜವಾಬ್ದಾರಿ ಅವರದು.

ಒಂದು ಪ್ರಸಾರದಲ್ಲಿ ಓರ್ವ ಉದ್ಘೋ,ಷಕರು, ಓರ್ವ ಕರ್ತವ್ಯಾಧಿಕಾರಿ, ನಾಲ್ವರು ತಾಂತ್ರಿಕ ವರ್ಗದವರು, ಓರ್ವ ಸ್ಟುಡಿಯೋ ಗಾರ್ಡ್, ಓರ್ವ ಸೆಕ್ಯೂರಿಟಿ ಗಾರ್ಡ್ ಹಾಗೂ ಓರ್ವ ಚಾಲಕರು ಇರಬೇಕು. ಪ್ರತಿ ಪ್ರಸಾರದಲ್ಲಿ ಉದ್ಘೋಷಕರ ಕೊಠಡಿಯಿಂದ ಹೊರಡುವ ಎಲ್ಲ ಧ್ವನಿತರಂಗಗಳನ್ನು ನಿಯಂತ್ರಣ ಕೊಠಡಿ ಹಾಗೂ ಟ್ರಾನ್ಸ್ ಮಿಟರ್ ಕೊಠಡಿಗಳಲ್ಲಿ ಕುಳಿತು ಅದನ್ನು ಟ್ರಾನ್ಸ್ ಮಿಟರ್ ಗೆ ಕಳುಹಿಸುವ, ಬೇರೆ ಕೇಂದ್ರಗಳಿಂದ ವಾರ್ತೆ ಹಾಗೂ ಇತರ ಸಹಪ್ರಸಾರಿಸಬೇಕಾದ ಕಾರ್ಯಕ್ರಮಗಳನ್ನು ಕನೆಕ್ಟ್ ಮಾಡುವ, ಮೆಶೀನ್ ಗಳಲ್ಲಿ ಕಂಡುಬರುವ ಲೋಪದೋಷಗಳನ್ನು ಆಗಿಂದಾಗಲೇ ಸರಿಪಡಿಸುವ, ಪ್ರತಿಪ್ರಸಾರಕ್ಕೆ ಮುನ್ನ ಸ್ಟುಡಿಯೋಗಳನ್ನು ಟೆಸ್ಟ್ ಮಾಡಿ ಎಲ್ಲಾ ಮೆಶೀನ್ ಗಳಿಗೂ ಬೇಕಾದ ಅಗತ್ಯ ಉಪಚಾರಗಳನ್ನು ಮಾಡುವ ಜವಾಬ್ದಾರಿ ತಾಂತ್ರಿಕವರ್ಗದವರದು. ಉದ್ಘೋಷಕರು, ಕರ್ತವ್ಯಾಧಿಕಾರಿ, ತಾಂತ್ರಿಕ ವರ್ಗದವರು, ಆಯಾ ಶಿಫ್ಟ್ ನ ಚಾಲಕರು – ಈ ಎಲ್ಲರೂ ಪರಸ್ಪರ ಹೊಂದಿಕೊಂಡು ಒಂದು ಸುಂದರ ಪ್ರಸಾರಕ್ಕೆ ಕಾರಣೀಭೂತರಾಗುತ್ತಾರೆ. ಹೊಂದಾಣಿಕೆಯ ಮಂತ್ರದಂಡವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬ ಸತ್ಯ ನನಗೆ ಈ ಮೂರೂವರೆ ದಶಕಗಳ ವೃತ್ತಿ ಜೀವನದಲ್ಲಿ ಸಾಕಷ್ಟು ಬಾರಿ ಮನವರಿಕೆಯಾಗಿದೆ.

AIRFAMILY

ಪ್ರಸಾರಕ್ಕೆ ಮುನ್ನ ಸಜ್ಜಾಗಲು, ಪ್ರಸಾರ ಮುಗಿದ ಬಳಿಕ ವಿರಮಿಸಲು, ನಮ್ಮನ್ನು ಯಾರಾದರೂ ದೂರವಾಣಿ ಮೂಲಕ ಸಂಪರ್ಕಿಸಲು, ನಮ್ಮ ಬ್ಯಾಗ್, ಊಟದ ಚೀಲ, ಕೊಡೆ ಇತ್ಯಾದಿಗಳನ್ನು ಇಡಲು, ನಮಗೆ ಬಂದ ಅಂಚೆಪತ್ರಗಳನ್ನು ಪಡೆಯಲು ಎಲ್ಲದಕ್ಕೂ ಪಾಳಿಯ ಕೆಲಸದವರಿಗೆ ಕರ್ತವ್ಯಕೊಠಡಿಯೇ ಅಧಿಕೃತ ಜಾಗ. ರಜಾದಿನಗಳನ್ನು ಹೊರತು ಪಡಿಸಿದಂತೆ, ಈ ಮೂರೂವರೆ ದಶಕಗಳುದ್ದಕ್ಕೂ ಪ್ರತಿನಿತ್ಯ ಕರ್ತವ್ಯಕೊಠಡಿಯನ್ನು ಪ್ರವೇಶಿಸಿ ಪ್ರಸಾರಕ್ಕೆ ಸಜ್ಜಾಗುತ್ತಿದ್ದ ನನಗೆ ಈ ಕೊಠಡಿಯಲ್ಲಿ ಕಳೆದ ಒಂದೊಂದು ನೆನಪೂ ಅಮೂಲ್ಯವಾದುದು.

ಪ್ರಸಾರದ ಸಮಯದಲ್ಲಿ ಪ್ಲೇ ಬ್ಯಾಕ್ ಸ್ಟುಡಿಯೋದಲ್ಲಿಯೇ ಕುರ್ಚಿಗಂಟಿಕೊಂಡು ಇರುವ ನಾವು, ಸ್ವಲ್ಪ ದೀರ್ಘ ಅವಧಿಯ ಕಾರ್ಯಕ್ರಮಗಳಿದ್ದರೆ ವಾತಾನುಕೂಲ ವ್ಯವಸ್ಥೆಯಿಂದ ಹೊರಗೆ ಬಂದು ಸ್ವಚ್ಛಗಾಳಿಯ ಸೇವನೆಗಾಗಿ ಬರುತ್ತಿದ್ದುದು ಕರ್ತವ್ಯ ಕೊಠಡಿಗೇ. ಈ ಕರ್ತವ್ಯ ಕೊಠಡಿಯಲ್ಲಿ ಆಯಾ ಪಾಳಿಯ ಕರ್ತವ್ಯಾಧಿಕಾರಿಗಳು ಮಾತ್ರವಲ್ಲದೆ ಪುರುಸೊತ್ತು ಇದ್ದರೆ ತಮ್ಮ ಪಾಳಿ ಮುಗಿದ ಬಳಿಕವೂ ಮನೆಗೆ ಹೋಗುವ ಅವಸರವಿಲ್ಲದ, ಮನೆಯಲ್ಲಿ ಕಾಯುವವರಿಲ್ಲದ ಪರಊರಿನಿಂದ ವರ್ಗವಾಗಿ ಬಂದವರು, ಒಂಟಿಬಡಕ ಜೀವಿಗಳು, ಕೆಲವೊಮ್ಮೆ ಚಾಲಕರು, ಸ್ಟುಡಿಯೋ ಗಾರ್ಡ್ ಗಳು, ಉದ್ಘೋಷಕರು, ತಾಂತ್ರಿಕ ವಿಭಾಗದ ಮಿತ್ರರು – ಹೇಗೆ ಒಂದು ಜಮಾತ್ ಜಮಾಯಿಸಿ ಸುಖ, ದು:ಖ, ನಗು, ಹರಟೆಗಳ ಸೊಗಸಾದ ಕೂಟ ಏರ್ಪಡುತ್ತಿತ್ತು. ಅದರಲ್ಲೂ ಶ್ರೀಮಾನ್ ಕೆ.ಆರ್.ರೈಗಳಿದ್ದರಂತೂ ಆ ಕೂಟ ರಂಗೇರಿಬಿಡುತ್ತಿತ್ತು. ಸದಾ ಕಿವಿಯೊಂದನ್ನು ಕರ್ತವ್ಯ ಕೊಠಡಿಯಲ್ಲಿಟ್ಟಿರುವ ಟ್ರಾನ್ಸಿಸ್ಟರ್ ನತ್ತಲೇ ಕೊಡುತ್ತಾ ಮಾತುಕತೆಯಲ್ಲಿ ತೊಡಗುವ ನಾವು ನಿಗದಿತ ಕಾರ್ಯಕ್ರಮ ಮುಗಿಯುತ್ತಿರುವ ಸೂಚನೆ ದೊರಕುತ್ತಿದ್ದಂತೆ ವಾಯುವೇಗದಲ್ಲಿ ಪ್ಲೇ ಬ್ಯಾಕ್ ಸ್ಟುಡಿಯೋ ಗೆ ಧಾವಿಸುತ್ತಿದ್ದೆವು. ತಂದ ತಿಂಡಿಗಳನ್ನು ಹಂಚಿ ತಿನ್ನುವ, ಭಟ್ಟರ ಅಂಗಡಿಯಿಂದ ಚಾ ತರಿಸಿ ಕುಡಿಯುವ ಸಣ್ಣಪುಟ್ಟ ಖುಷಿಗಳಿಂದಾಗಿ ನೀರಸವಾದ ರಾತ್ರಿಯ ಪಾಳಿಗಳಲ್ಲಿ ಜೀವತುಂಬುತ್ತಿದ್ದೆವು. ಡ್ಯೂಟಿರೂಮಿನಲ್ಲಿ ನಾವು ಎಬ್ಬಿಸುತ್ತಿದ್ದ ನಗೆತರಂಗಗಳು ಕೆಲವೊಮ್ಮೆ ಕಾರಿಡಾರಿನಲ್ಲಿ ಹಾದು ಹೋಗುವ ಹಿರಿಯ ಅಧಿಕಾರಿಗಳ ಕಿವಿಗೂ ಬಿದ್ದು, ಕೆಲವರು ತಾವೂ ನಕ್ಕು ತಮ್ಮಷ್ಟಕ್ಕೇ ಮುಂದಕ್ಕೆ ಸಾಗುತ್ತಿದ್ದರು, ಇನ್ನು ಕೆಲವರು ಕರ್ತವ್ಯ ಕೊಠಡಿಯ ಡೆಕೋರಂ ಬಗ್ಗೆ ಭಾಷಣ ಬಿಗಿದು ಅಲ್ಲಿದ್ದ ಹೆಚ್ಚುವರಿ ಕುರ್ಚಿಗಳನ್ನು ತೆಗೆಸಿ ಕೇವಲ ಪಾಳಿಯಲ್ಲಿರುವವರಿಗಷ್ಟೆ ಸೀಮಿತ ಸಂಖ್ಯೆಯ ಆಸನ ವ್ಯವಸ್ಥೆ ಮಾಡುವ ಪ್ರಯತ್ನ ಮಾಡಿದರೂ, ಎಲ್ಲ ಕರ್ತವ್ಯಾಧಿಕಾರಿಗಳೂ ಪದೋನ್ನತಿ ಪಡೆದು ಕಾರ್ಯಕ್ರಮ ನಿರ್ವಾಹಕರಾಗಿ ಭಡ್ತಿ ಪಡೆದು ಕರ್ತವ್ಯಕೊಠಡಿಯಿಂದ ನಿರ್ಗಮಿಸಿ ಅದು ನಿರ್ಜನವಾಗುವವರೆಗೂ ನಮ್ಮ ಹರಟೆಗೋಷ್ಟಿಗಳಿಗೆ ಯಾವುದೇ ಅಡ್ಡಿಯಾಗಿರಲಿಲ್ಲ. ಈಗಲೂ ನನಗೆ ಕರ್ತವ್ಯ ಕೊಠಡಿಯನ್ನು ನೆನೆದಾಗಲೆಲ್ಲಾ ಈ ಎಲ್ಲ ನೆನಪುಗಳೂ ಮತ್ತೆ ಜೀವಂತವಾಗುತ್ತವೆ. ಅಲ್ಲಿ ಎಚ್.ಸಿ.ವೆಂಕಟೇಶ್, ವಾರಿಯರ್, ವಿಜಯಕುಮಾರ್ ದ್ವಯರು, ಸುಧಾರಾವ್, ಮಹಾಬಲೇಶ್ವರ ರಾವ್, ಅಶೋಕ ಪವಾರ್, ಅನಿಲ್ ಗಾಯಕ್ ವಾಡ್, ಉದಯಾದ್ರಿ, ಕೆ.ವೆಂಕಟೇಶ್, ಕೆ.ಶ್ಯಾಮ್ ಭಟ್, ಸಿ.ಎನ್.ರಾಮಚಂದ್ರ, ಸುರೇಂದ್ರನಾಥ್ ಸಾತ್ವಿಕ್, ಕೆ.ಶಾರದಾ, ಅಬ್ದುಲ್ ರಶೀದ್, ರವಿಶಂಕರ್, ಹನುಮಂತ ರಾಯಪ್ಪ, ದೇವು ಹನೆಹಳ್ಳಿ, ಸೂರ್ಯನಾರಾಯಣ ಭಟ್, ಕನ್ಸೆಪ್ಟಾ ಫೆರ್ನಾಂಡಿಸ್, ಅನಂತಪದ್ಮನಾಭ, ರಮಾ ಹಿರೇಮಠ್, ಫ್ಲೋರಿನ್ ರೋಶ್, ನವೀನ್ ಕುಮಾರ್ ಕದ್ರಿ, ಮೋಹನ್ ಕುಮಾರ್, ಬಿ.ಎಮ್.ಶರಭೇಂದ್ರಸ್ವಾಮಿ, ಸದಾನಂದ ಪೆರ್ಲ, ಕೆ.ಅಶೋಕ್, ಸುಧಾಕರ್ – ಮುಂತಾದವರ ಜೊತೆ ಪಾಳಿಯನ್ನು ಹಂಚಿಕೊಳ್ಳುತ್ತಾ ಆಡಿದ ಮಾತುಕತೆಗಳು, ಜಗಳಗಳು – ಎಲ್ಲವೂ ಸಿನೆಮಾ ರೀಲಿನಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಪ್ರಸಾರದ ಆರಂಭಿಕ ಶಿಕ್ಷಣ ನೀಡಿದ ಎಚ್.ಸಿ.ವೆಂಕಟೇಶ್, ವಾರಿಯರ್, ವಿಜಯಕುಮಾರ್ ಮುಂತಾದವರು ಮೊದಮೊದಲು ನಾನು ಮಾಡಿದ ಎಡವಟ್ಟುಗಳಿಂದಾಗಿ ಕರ್ತವ್ಯಕೊಠಡಿಯಿಂದ ಆಗಾಗ ಪ್ಲೇ ಬ್ಯಾಕ್ ಸ್ಟುಡಿಯೋಗೆ ಧಾವಿಸಿಬರುವಂತೆ ಮಾಡಿದ್ದೇ ಹೆಚ್ಚು. ಸುಧಾರಾವ್ ಅವರು ಮೈಸೂರಿನಿಂದ ವರ್ಗವಾಗಿ ಬರುವ ಕಾಲಕ್ಕೆ ನಾನು ಅಲ್ಪಸ್ವಲ್ಪ ಪಳಗಿದ್ದೆ. ಆದರೆ ಅವರು ಸಮಾಧಾನದಿಂದ ಕಿರಿಯ ತಂಗಿಗೆ ತಿಳಿಯ ಹೇಳುವಂತೆ ಪ್ರೀತ್ಯಾದರಗಳಿಂದ ನನ್ನನ್ನು ನಡೆಸಿಕೊಂಡದನ್ನು ಎಂದೂ ಮರೆಯುವಂತಿಲ್ಲ. ಅಶೋಕ್ ಪವಾರ್, ಅನಿಲ್ ಗಾಯಕ್ ವಾಡ್ ಧಾರವಾಡದಿಂದ ವರ್ಗವಾಗಿ ಬಂದು ಅಲ್ಲಿನ ಪೇಡೆಯಂಥ ಸ್ನೇಹದ ಸವಿಯನ್ನು ಹಂಚಿದವರು. ನೇರವಾಗಿ ಡ್ಯೂಟಿರೂಮಿಗೆ ಸಂಬಂಧಿಸದೇ ಹೋದರೂ ಶ್ಯಾಮ್ ಭಟ್, ಸಿ.ಎನ್.ರಾಮಚಂದ್ರ ಉದ್ಘೋಷಕರಾಗಿಯೂ, ಕರ್ತವ್ಯಾಧಿಕಾರಿಗಳಾಗಿಯೂ ಅನಿವಾರ್ಯ ಪರಿಸ್ಥಿಗಳನ್ನು ನಿಭಾಯಿಸಿ ಮನೆಯ ಸಹೋದರರಂಥ ಬಾಂಧವ್ಯ ತೋರಿದವರು. ಈ ಸಾಲುಗಳನ್ನು ಬರೆಯುತ್ತಿರುವಾಗಲೇ ಸಿ.ಎನ್.ರಾಮಚಂದ್ರ ನಿಧನರಾದ ಸುದ್ದಿ ಬಂದಿದೆ. ಕೀಟಲೆ, ಸಿಟ್ಟು, ಸಮಾಧಾನ, ಪ್ರೀತಿ, ಸಾಹಿತ್ಯದ ಒಲವು, ಸ್ನೇಹ ಗುಣ ಇವುಗಳಿಂದ ಸದಾ ನೆನಪಿಡುವಂಥ ರಾಮಚಂದ್ರ ಅವಸರದಿಂದ ನಿರ್ಗಮಿಸಿದ್ದಾರೆ. ಚೆನ್ನೈ ದೂರದರ್ಶನ ಕೇಂದ್ರದ ನಿರ್ದೇಶಕರಾಗಿ ಸೇವೆಯಲ್ಲಿರುವಾಗಲೇ ಕಾಣದ ಊರಿಗೆ ದೂರದ ಪ್ರಯಾಣ ಬೆಳೆಸಿದ್ದಾರೆ.

ತೀರಾ ಕೀಟಲೆ ಸ್ವಭಾವದ ಉದಯಾದ್ರಿ, ಶಿಸ್ತಿನ ಸಿಪಾಯಿ ಸಾತ್ವಿಕ್, ಕವಿ,ಕಥೆಗಾರ ಅಬ್ದುಲ್ ರಶೀದ್ ಹಾಗೂ ದೇವು ಹನೆಹಳ್ಳಿ, ಆಪ್ತ ಸಲಹೆಗಾರ ಕೆ.ವೆಂಕಟೇಶ್, ಪದೋನ್ನತಿ ಪಡೆದು ಕರ್ತವ್ಯಕೊಠಡಿಗೆ ಬಂದ ಕೆ.ಶಾರದಾ, ಹುಡುಗಿಯರಾಗಿ ಬಂದು ತಮ್ಮ ಮದುವೆ, ಹೆರಿಗೆ, ಮಕ್ಕಳು ಮುಂತಾದ ಸಂಗತಿಗಳಿಗೆ ನಮ್ಮನ್ನು ಸಾಕ್ಷೀಭೂತರನ್ನಾಗಿಸಿದ ಕನ್ಸೆಪ್ಟಾ ಫೆರ್ನಾಂಡಿಸ್, ಫ್ಲೋರಿನ್ ರೋಶ್, ಮನೆಮಕ್ಕಳಂಥ ತುಂಟಾಟದ ಸೂರ್ಯನಾರಾಯಣ ಭಟ್, ಅನಂತಪದ್ಮನಾಭ, ಹನುಮಂತರಾಯಪ್ಪ, ಕಡಿಮೆ ಮಾತಿನ ಮೃದು ಹೃದಯಿ ಮೋಹನ್ ಕುಮಾರ್, ಗೋವಾದಿಂದ ವರ್ಗವಾಗಿ ಬಂದ ರಮಾ ಹಿರೇಮಠ್, ಮಡಿಕೇರಿಯಿಂದ ವರ್ಗವಾಗಿ ಬಂದ ನವೀನ್ ಕುಮಾರ್ ಕದ್ರಿ, ಆಗೊಮ್ಮೆ ಈಗೊಮ್ಮೆ ಕರ್ತವ್ಯಕೊಠಡಿಯಲ್ಲಿ ಡ್ಯೂಟಿ ನಿರ್ವಹಿಸಿದ ಡಾ.ಬಿ.ಎಮ್.ಶರಭೇಂದ್ರಸ್ವಾಮಿ, ಡಾ.ಸದಾನಂದ ಪೆರ್ಲ, ಕೆ.ಅಶೋಕ್, ಹಾಗೂ ಸುಧಾಕರ್ – ಇವರೆಲ್ಲರ ಜೊತೆಗಿನ ಕೆಲವು ವಿಶಿಷ್ಟ ನೆನಪುಗಳನ್ನು ಆಗಾಗ ಮುಂದೆ ಸಮಯ, ಸಂದರ್ಭ ಒದಗಿದಾಗ ಉಲ್ಲೇಖಿಸುವೆ.

ಅಬ್ದುಲ್ ರಶೀದ್ ಹಾಗೂ ದೇವು ಹನೆಹಳ್ಳಿಯವರ ಸಾಹಿತ್ಯಿಕ ಚಟುವಟಿಕೆ, ಬರವಣಿಗೆಗಳನ್ನು ಕರ್ತವ್ಯಕೊಠಡಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದ ನನ್ನ ’ಬಳ್ಳಂಬೆಟ್ಟಿನ ಬಾಲ್ಯಕಾಲ’ ವೆಂಬ ನೆನಪಿನ ಗುಚ್ಛ ಜನ್ಮ ತಳೆದದ್ದು ರಶೀದರೊಡನೆ ಪಾಳಿ ಹಂಚಿಕೊಳ್ಳುತ್ತಿದ್ದ ಸಂದರ್ಭದಲ್ಲೇ. ದೇವು ಅವರ ಹೆಚ್ಚಿನ ಬರವಣಿಗೆಗಳ ಮೊದಲ ಓದುಗಳು ನಾನೇ ಆಗಿರುತ್ತಿದ್ದೆ. ಸಂಗೀತ ಕಲಾವಿದ ಎ.ಎಲ್.ಅನಂತಪದ್ಮನಾಭರ ಸಾಹಿತ್ಯಿಕ ಅಭಿರುಚಿಯಿಂದಾಗಿ ನಾವು ಓದಿದ ಪುಸ್ತಕಗಳ ಕುರಿತ ಚರ್ಚೆ, ವಿಚಾರ ವಿನಿಮಯವನ್ನು ಕರ್ತವ್ಯ ಕೊಠಡಿಯಲ್ಲಿ ನಡೆಸಿದ ನೆನಪು ಹೀಗೆ ನೆನಪುಗಳ ಸಾಲು ಮೆರವಣಿಗೆ. ತುಂಟ ಹುಡುಗರೆಲ್ಲಾ ಮದುವೆಯಾಗಿ ಸಂಸಾರಿಗಳಾಗುತ್ತಿದ್ದಾಗ ಹಿರಿಯಕ್ಕನಂತೆ ಅವರಿಗೆಲ್ಲ ಸಲಹೆ, ಸೂಚನೆ ಕೊಡುತ್ತಾ, ಅವರ ಸಮಸ್ಯೆಗಳಿಗೆ ನನ್ನಿಂದ ಆದಷ್ಟು ಪರಿಹಾರ ಸೂಚಿಸುತ್ತಾ ಒಂದೇ ಮನೆಯವರಂತೆ ಕಳೆದ ದಿನಗಳು ಅದೆಷ್ಟು ಬೇಗ ಸರಿದು ಹೋದವಲ್ಲಾ ಅನಿಸುತ್ತದೆ.

ಇವರಷ್ಟೇ ಅಲ್ಲದೆ ಹಿರಿಯ ಉದ್ಘೋಷಕರಾದ ಶಂಕರ್ ಭಟ್, ನಾರಾಯಣಿ ದಾಮೋದರ್, ಕೃಷ್ಣಕಾಂತ್, ಕೆ.ಆರ್.ರೈ, ಮುದ್ದು ಮೂಡುಬೆಳ್ಳೆ ಇವರೂ ಕೂಡಾ ಅನುಭವದ ಹಿರಿತನದಿಂದಲೂ ವಯಸ್ಸಿನ ಹಿರಿತನದಿಂದಲೂ ಕರ್ತವ್ಯ ಕೊಠಡಿಯಲ್ಲಿ ನನ್ನನ್ನು ಮುನ್ನಡೆಸಿದವರು. ಎಂಥೆಂಥ ಘಟಾನುಘಟಿಗಳಿಂದ ತುಂಬಿ ತುಳುಕುತ್ತಿದ್ದ ಕರ್ತವ್ಯಕೊಠಡಿ ಈಗ ಕೇವಲ ಇವರೆಲ್ಲರ ನೆನಪುಗಳಿಂದಷ್ಟೇ ತುಂಬಿದೆ.

ಮುಂದಿನ ವಾರಕ್ಕೆ  ►

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.