ನಾನು ಸೇರಿದ ಕೆಲವು ದಿನಗಳಲ್ಲೆ ಪ್ರತಿದಿನ ಮಧ್ಯಾನ್ಹ ಒಂದುಗಂಟೆ ಮೂವತ್ತೈದು ನಿಮಿಷಕ್ಕೆ ಚಿತ್ರಗೀತೆಗಳ ನಡುವೆ ಐದು ನಿಮಿಷಗಳ ಅವಧಿಯ”ಸಕಾಲಿಕ” ಎಂಬ ಶೀರ್ಷಿಕೆಯ ಒಂದು ಹೊಸ ಕಾರ್ಯಕ್ರಮ ಆರಂಭವಾಗಿ ಆಯಾ ದಿನದ ವೈಶಿಷ್ಟ್ಯ ಅಥವಾ ಆ ದಿನಗಳಲ್ಲಿನ ಪ್ರಚಲಿತ ವಿದ್ಯಮಾನಗಳ ಕುರಿತು ಬರೆದು ಅದನ್ನು ಪ್ರಸ್ತುತಪಡಿಸುವ ಹೊಣೆ ದಿನಕ್ಕೊಬ್ಬರಿಗೆ ಹಂಚಿಹಾಕಿದ್ದರು. ಆ ಕಾರ್ಯಕ್ರಮ ನನಗೂ ಪಾಳಿಯಂತೆ ಹತ್ತು ಹದಿನೈದು ದಿನಕ್ಕೊಮ್ಮೆ ಮಾಡಲು ಸಿಗುತ್ತಿತ್ತು. ಈ ಸಕಾಲಿಕದ ದೆಸೆಯಿಂದ ಹಲವಾರು ವಿಷಯಗಳ ಕುರಿತು ನಾನೂ ಬರೆಯುವಂತಾಯಿತು. ಬಾನುಲಿ ಬರವಣಿಗೆ ಎಂದರೆ ತೀರಾ ಅಂಕಿಅಂಶಗಳಿಂದ ಕೂಡಿದ ಶುಷ್ಕ ಬರಹವೂ ಆಗಬಾರದು, ತೀರಾ ಅಳ್ಳಕವೂ ಆಗಬಾರದು. ಆದರೆ ಕೇಳಿದರೆ ನೇರವಾಗಿ ಮಾಹಿತಿ ಕೇಳಿದವನ ಎದೆಗೆ ನಾಟುವಂತಿರಬೇಕು, ಪ್ರಸ್ತುತ ಪಡಿಸುವ ರೀತಿ ಆಡುಮಾತಿನಲ್ಲಿದ್ದು ಎದೆಯಿಂದ ಎದೆಗೆ ಸಂವಹನಗೊಳ್ಳುವಂತಹ ಸಲೀಸು ಹರಿವನ್ನು ಹೊಂದಿರಬೇಕು. ವ್ಯಕ್ತಿಯ ಹೆಸರು, ಪದನಾಮ, ಅಂಕಿತನಾಮಗಳನ್ನು ತಪ್ಪಾಗಿ ಹೇಳದಂತೆ, ತಪ್ಪು ಮಾಹಿತಿ ಪ್ರಸಾರವಾಗದಂತೆ, ಯಾರ ಮನಸ್ಸಿಗೂ ನೋವಾಗದಂತೆ, ಬಳಸುವ ಪದಗಳಲ್ಲಿ ಶಿಷ್ಟಾಚಾರವನ್ನು ಕಾಯ್ದುಕೊಳ್ಳಬೇಕಿತ್ತು. ಹೀಗೆ ಈ ಸಕಾಲಿಕ ಎನ್ನುವ ಐದು ನಿಮಿಷಗಳ ಬರವಣಿಗೆ ನನ್ನ ಬಾನುಲಿ ಬರವಣಿಗೆಗಳಿಗೆ ಗಟ್ಟಿಯಾದ ಬುನಾದಿಯನ್ನು ಹಾಕಿತು. ಬರೆದ ಬರಹವನ್ನು ಹಿರಿಯ ಅಧಿಕಾರಿಗಳಿಗೆ ತೋರಿಸಿ ಸಮ್ಮತಿಯ ಸಹಿಯನ್ನು ಪಡೆಯಬೇಕಿತ್ತು. ಕೆಲವೊಮ್ಮೆ ಪದಪದಗಳನ್ನೂ ಹಿಂಜಿ, ತಿದ್ದುಪಡಿಯನ್ನು ಸೂಚಿಸಲಾಗುತ್ತಿತ್ತು. ಹಿರಿಯ ಅಧಿಕಾರಿಗಳ ಸಮ್ಮತಿ ಪಡೆಯದ ಯಾವೊಂದು ಬರಹವೂ ಪ್ರಸಾರವಾಗುವಂತಿರಲಿಲ್ಲ. ಆದರೆ ಕೆಲವೊಮ್ಮೆ ಆಯಾದಿನಕ್ಕೆ ನಿಗದಿಯಾದ ವ್ಯಕ್ತಿ ಅದನ್ನು ಮಾಡದೇ ಹೋಗಿದ್ದು, ನಾವು ಡ್ಯೂಟಿಯಲ್ಲಿದ್ದಾಗಲೆ ಆ ಪರಿಸ್ಥಿತಿ ಎದುರಾದರೆ ನಾವೇ ಸಂತೆ ಹೊತ್ತಿಗೆ ಮೂರು ಮೊಳ ನೆಯ್ದು ಅದನ್ನು ಅಲ್ಲೇ ಆ ಕ್ಷಣದಲ್ಲೇ ಲೈವ್ ಆಗಿ ಪ್ರಸಾರಿಸಿದ್ದೂ ಇದೆ. ಆಗ ಯಾರ ಸಮ್ಮತಿಗೂ ಕಾಯದೇ ಅವು ಪ್ರಸಾರವಾಗುತ್ತಿದ್ದುದರಿಂದ ಆಕ್ಷೇಪಾರ್ಹ ಸಂಗತಿಗಳಿಲ್ಲದೆ ಬರೆಯುವ ಕಲೆ ಅನಿವಾರ್ಯವಾಗಿ ಸಿದ್ಧಿಸಿತು.
ಸಕಾಲಿಕದಿಂದ ತೊಡಗಿದ ನನ್ನ ಬಾನುಲಿ ಬರವಣಿಗೆ ಮುಂದೆ ಹಲವಾರು ರೂಪಕ, ನಾಟಕ, ಚಿತ್ರಗೀತೆಗಳನ್ನು ಆಧರಿಸಿದ ಕಾರ್ಯಕ್ರಮ, ಭಾವಗೀತೆಗಳನ್ನು ನೆಯ್ದು ಮಾಡಿದ ಕಾರ್ಯಕ್ರಮ, ಕನ್ನಡದ ಖ್ಯಾತ ಕವಿಗಳ ಕುರಿತು ಶಬ್ದಚಿತ್ರಗಳು, ಹಬ್ಬಹರಿದಿನ, ರಾಷ್ಟ್ರೀಯ ಹಬ್ಬಗಳು ಇವುಗಳ ಸಂದರ್ಭದಲ್ಲಿ ಹಾಡುಗಳನ್ನೋ, ಸಂದರ್ಶನಗಳನ್ನೋ ಆಧರಿಸಿ ಮಾಡುವ ಕಾರ್ಯಕ್ರಮ ಅಂತ ಈ ಮೂವತ್ತೈದು ವರ್ಷಗಳ ಕಾಲ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳಿಗಾಗಿ ಬರೆದ ನೂರಾರು ಅಲ್ಲಲ್ಲ ಸಾವಿರಾರು ಪುಟಗಳು ಅಲ್ಲಲ್ಲೆ ಬರೆದು, ಗಾಳಿಯಲ್ಲಿ ತೇಲಿ ಬಿಟ್ಟ ಬಳಿಕ ಇನ್ನೆಲ್ಲೋ ಹರಿದು ಚಿಂದಿಚೂರಾಗಿ ಹಾರಿವೆ. ಈಗ ಕುಳಿತು ನೆನಪಿಸುವಾಗ ಎಷ್ಟೊಂದು ಮೌಲಿಕ ಬರಹಗಳು ಎಲ್ಲಿ ಕಳೆದು ಹೋದವೋ ಎಂದು ವಿಷಾದವಾಗುತ್ತದೆ.
“ಚಿಟ್ ಚಾಟ್ ಅತಿಥಿ” ಕಾರ್ಯಕ್ರಮಕ್ಕಾಗಿ ಒಬ್ಬೊಬ್ಬ ಸಾಧಕರನ್ನೂ ಸಂದರ್ಶಿಸುವ ಮುನ್ನ ಮಾಡಿಕೊಂಡ ಟಿಪ್ಪಣಿಗಳು, ಪ್ರಶ್ನಾವಳಿಗಳು, ಉಪಸಂಹಾರದ ಮಾತುಗಳು – ಎಲ್ಲವೂ ಹೀಗೆ ಬಿಡುವಿಲ್ಲದ ದಿನಚರಿಯಲ್ಲಿ ಡ್ಯೂಟಿರೂಮಿನ ಡ್ರಾವರಿನಲ್ಲೋ, ನಮಗಾಗಿ ಕೊಟ್ಟ ಗುಬ್ಬಚ್ಚಿಗೂಡಿನಂಥ ಲಾಕರಿನಲ್ಲೋ ಅವಸರದಲ್ಲಿ ತುರುಕಿದ್ದು ಹಾಗೆ ಎಲ್ಲೋ ಕಳೆದು ಹೋಗಿವೆ. ಆಗ ಈಗಿನಂತೆ ಕಂಪ್ಯೂಟರೀಕೃತ ವ್ಯವಸ್ಥೆ ಇಲ್ಲದ ಕಾರಣ ಟೇಪಿನ ಸುರುಳಿಗಳಲ್ಲಿದ್ದ ಧ್ವನಿಮುದ್ರಿತ ಕಾರ್ಯಕ್ರಮಗಳು ಮತ್ತೆ ಮತ್ತೆ ಹೊಸಕಾರ್ಯಕ್ರಮಗಳ ಧ್ವನಿಮುದ್ರಣದ ಸಮಯದಲ್ಲಿ ಬಳಸಬೇಕಾಗಿ ಬಂದಾಗ ಇರೇಸರ್ ಮೆಶೀನ್ ನಲ್ಲಿ ನಾಮಾವಶೇಷವಾಗಿ ಹೋಗಿವೆ. ಆದರೂ ಹಿಂದುಮುಂದಿಲ್ಲದ ಅಲ್ಲೊಂದು ಇಲ್ಲೊಂದು ಹಾಳೆಗಳು ನಿವೃತ್ತಿಯ ಸಮಯದಲ್ಲಿ ಲಾಕರ್ ಖಾಲಿ ಮಾಡುವ ಸಂದರ್ಭದಲ್ಲಿ ದೊರಕಿ ಬಾನುಲಿ ಬರವಣಿಗೆಯ ಅವಶೇಷಗಳಂತೆ ಉಳಿದು ನನ್ನ ಹಳಹಳಿಕೆಯನ್ನು ಇನ್ನಷ್ಟು ಹೆಚ್ಚಿಸಿವೆ.ಆದರೆ ಅಪರೂಪಕ್ಕೆ ನನ್ನ ವ್ಯಾನಿಟಿಬ್ಯಾಗಿನೊಳಗೆ ತುರುಕಿ ಮನೆವರೆಗೆ ಬಂದ ನನ್ನ ಕೆಲವೊಂದು ಬರಹಗಳು ಮತ್ತು ಕಛೇರಿಯ ಸರ್ಕ್ಯುಲರ್ ಗಳು, ಆಫೀಸ್ ಆರ್ಡರ್ ಗಳು ಮಾತ್ರ ನನ್ನ ಪತಿದೇವರ ಚೊಕ್ಕ ಫೈಲಿಂಗ್ ವ್ಯವಸ್ಥೆಗೆ ಒಳಪಟ್ಟು ಇನ್ನೂ ಸುರಕ್ಷಿತವಾಗಿವೆ.
ನನ್ನ ಬಾನುಲಿ ಬರವಣಿಗೆಯಲ್ಲಿ ಬಿಡಿಬಿಡಿ ಲೇಖನದ ಮಾದರಿಯವು ಹೆಚ್ಚಿಗೆ ಇವೆ. ಸಕಾಲಿಕ, ಚೆಲುವು-ನಲಿವು, ಗುಡ್ ಮಾರ್ನಿಂಗ್ ಮಂಗಳೂರು ಮುಂತಾದ ಕಾರ್ಯಕ್ರಮಗಳಿಗಾಗಿ ಬರೆದ ಐದು ನಿಮಿಷಗಳ ಕಾಲಾವಧಿಯ ಬರಹಗಳು. “ಚೆಲುವು-ನಲಿವು”- ನಾನೇ ಸೂಚಿಸಿದ ತಲೆಬರಹ. ಮೊದಲು ಈ ಕಾರ್ಯಕ್ರಮ ನನ್ನ ಪಾಲಿಗೆ ತಿಂಗಳಿಗೆ ಒಂದೋ ಎರಡೋ ಮಾತ್ರ ಸಿಗುತ್ತಿತ್ತು. ಬಳಿಕ ಈ ಕಾರ್ಯಕ್ರಮವನ್ನು ಪಡುಬಿದ್ರಿಯ ಅಂಚನ್ ಆಯುರ್ವೇದಿಕ್ ಸಂಸ್ಥೆಯವರು ಪ್ರಾಯೋಜಿಸ ತೊಡಗಿದ ಮೇಲೆ ವಾರಕ್ಕೆ ಐದೂ ದಿನ ನಾನೇ ಬರೆದು ಪ್ರಸ್ತುತಪಡಿಸುವ ಅವಕಾಶ ನನ್ನದಾಯಿತು. ದೈಹಿಕ,ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿದಿನ ಬೆಳಗ್ಗೆ ಆರು ಗಂಟೆ ನಲ್ವತ್ತೈದು ನಿಮಿಷಕ್ಕೆ ಪ್ರಸಾರವಾಗುತ್ತಿದ್ದು ಇದಕ್ಕೆ ಸಾಕಷ್ಟು ಸಂಖ್ಯೆಯ ಕೇಳುಗರು, ಅಭಿಮಾನಿಗಳು ಇದ್ದು ಪತ್ರಗಳ ರಾಶಿಯೇ ಹರಿದು ಬರುತ್ತಿತ್ತು. ಕೆಲವರು ಹೊಟ್ಟೆನೋವು, ಅಜೀರ್ಣದಂಥ ಸಮಸ್ಯೆಗಳಿಗೆ ನನಗೆ ಫೋನಾಯಿಸಿ ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಳ್ಳುವಷ್ಟು ಈ ಕಾರ್ಯಕ್ರಮ ಜನಪ್ರಿಯತೆಯನ್ನು ಪಡೆಯಿತು. ಮುಂಜಾನೆಯ ನಿದ್ದೆಯ ಮಂಪರಿನಲ್ಲಿದ್ದವರನ್ನು ಸೆಳೆಯುವಂತ ಶೈಲಿಯ ಮಾತಿನ ವರಸೆಯ, ವಿಷಯದ ವೈವಿಧ್ಯ ಹಾಗೂ ಪ್ರಸ್ತುತತೆಯಲ್ಲಿ ದಿನದಿನವೂ ನಾವೀನ್ಯವನ್ನು ಕಾಯ್ದುಕೊಂಡು ಬರಬೇಕಿದ್ದ ಈ ಬರಹಗಳು ನನಗೆ ಛಾಲೆಂಜಿಂಗ್ ಆಗಿದ್ದುವು. ಸುಮಾರು ಸಮಯಗಳ ಕಾಲ ಇದನ್ನು ನಾನು ಒಂದು ವ್ರತದಂತೆ ಚಾಚೂ ತಪ್ಪದೆ ನಡೆಸಿಕೊಟ್ಟೆ.ಅಲ್ಲದೆ “ಗುಡ್ ಮಾರ್ನಿಂಗ್ ಮಂಗಳೂರು” ಕೂಡಾ ದಿನದಿನವೂ ಉದ್ಭೋದಕ ವಿಚಾರಗಳಿಂದ ಶ್ರೋತೃಗಳ ಮನಸ್ಸನ್ನು ವೈಚಾರಿಕವಾಗಿ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ವಿಚಾರಗಳಿಂದ ಮುಂಜಾವಿನ ಪ್ರಶಾಂತ ಸಮಯದಲ್ಲಿ ಪ್ರೇರೇಪಿಸುವ ಗುಣ ಲಕ್ಷಣಗಳನ್ನು ಹೊಂದಿರಬೇಕಿದ್ದು ಐದು ನಿಮಿಷಗಳ ಸ್ಕ್ರಿಪ್ಟ್ ತಯಾರಿಗೆ ಬಹಳಷ್ಟು ಓದಿಗೆ, ಅಧ್ಯಯನಕ್ಕೆ ನನ್ನನ್ನು ಹಚ್ಚುತ್ತಿದ್ದ ಕಾರ್ಯಕ್ರಮ. ಕೆಲವು ಸಮಯಗಳ ಕಾಲ ನಾನು ಗಾಂಧೀ ಸ್ಮೃತಿಯನ್ನು ನಡೆಸಿಕೊಡುತ್ತಿದ್ದ ಕಾರಣ ಅದಕ್ಕಾಗಿಯೂ ಕೆಲವು ಬರಹಗಳನ್ನು ಬರೆಯಬೇಕಾಯಿತು. ಗಾಂಧೀಜಿಯವರ ವಿಚಾರಧಾರೆಯ ಆಳ ಆಗ ನನ್ನ ಅರಿವಿಗೆ ಬಂತು.
ಕರಾವಳಿಯ ಸಾಹಿತಿಗಳ ಕುರಿತ “ಕಡಲ ತಡಿಯ ಕಬ್ಬಿಗರು”ಸರಣಿಯಲ್ಲಿ(ಈ ಶೀರ್ಷಿಕೆ ಕೂಡಾ ನಾನೇ ಸೂಚಿಸಿದ್ದು) ನಾನು ಕವಿ ಮುದ್ದಣ, ಕಡೆಂಗೋಡ್ಲು ಶಂಕರ ಭಟ್, ಮುಳಿಯ ತಿಮ್ಮಪ್ಪಯ್ಯನವರ ಕುರಿತು ಶಬ್ದಚಿತ್ರಗಳನ್ನು ಬರೆದು ಪ್ರಸ್ತುತ ಪಡಿಸಿದೆ. ಈ ಸರಣಿಗೂ ಮುನ್ನ ಕವಿ ಮುದ್ದಣನ ಕುರಿತು ನಾನು ಬರೆದ ರೂಪಕಕ್ಕಾಗಿ ಒಂದು ಹಾಡನ್ನು ಬರೆದಿದ್ದು ಅದನ್ನು ಶ್ರೀನಾಥ್ ಮರಾಠೆಯವರು ಸೊಗಸಾಗಿ ಹಾಡಿದ್ದರು. “ಶ್ರೀ ಸಾಮಾನ್ಯೆಯ ತವರು ಮನೆ”ಎಂಬ ರೂಪಕವನ್ನು ನಾನು ಹಾಸ್ಟೆಲ್ ವಾಸಿಣಿಯರಿಗಾಗಿ ಬರೆದು ನಿರ್ಮಿಸಿದ್ದೆ. ಅದಕ್ಕಾಗಿ ಬರೆದ ಹಾಡನ್ನು ನಾರಾಯಣೀ ದಾಮೋದರ್ ಅವರು ಹಾಡಿದ್ದರು. ಫ್ಲಾರೆನ್ಸ್ ನೈಟಿಂಗೇಲ್ ಕುರಿತು ಆಸ್ಪತ್ರೆಯ ದಾದಿಯರ ಸಂದರ್ಶನಗಳನ್ನು ಆಧರಿಸಿ ನಿರ್ಮಿಸಿದ ರೂಪಕ “ದೀಪಧಾರಿಣಿ ತೋರಿದ ಹಾದಿ”ಗಾಗಿಯೂ ಹಾಡೊಂದನ್ನು ಬರೆದಿದ್ದೆ. ಕಸೂತಿ ಕಲೆಯನ್ನು ಕುರಿತ ರೂಪಕಕ್ಕಾಗಿ, ದೀಪಾವಳಿ ಹಬ್ಬಕ್ಕಾಗಿ ಬರೆದ ರೂಪಕದಲ್ಲಿ ಐದಾರು ಹಾಡುಗಳನ್ನು ಬರೆದಿದ್ದು ಅವನ್ನು ಶಂಕರ್ ಭಟ್ ಹಾಗೂ ನಾರಾಯಣೀ ದಾಮೋದರ್ ಅವರು ತಾವೇ ಸಂಗೀತ ಸಂಯೋಜಿಸಿ ಹಾಡಿದ್ದರು. ನಿಲಯದ ಕಲಾವಿದೆ ಪಿ.ವಿ.ಗೀತಾದೇವಿ, ಮೌನೇಶ್ ಕುಮಾರ್ ಛಾವಣಿಯವರೂ ನಾನು ಬರೆದ ಹಲವಾರು ಹಾಡುಗಳನ್ನು ನನ್ನ ನಿರ್ಮಾಣದ ಕಾರ್ಯಕ್ರಮಗಳಿಗೆ ಮಾತ್ರವಲ್ಲ ಬೇರೆಯವರ ಅಪೇಕ್ಷೆಯಂತೆ ನಾನು ಬರೆದು ಕೊಟ್ಟ ಸಂದರ್ಭದಲ್ಲೂ ಹಾಡಿದ್ದಾರೆ. ಹೀಗೆ ಗದ್ಯ ಬರಹಗಳ ಜೊತೆಗೆ ಹಾಡುಗವನಗಳನ್ನೂ ಬರೆಯುವುದು ಅಭ್ಯಾಸವಾಗಿ ಹೋಯಿತು. ಮುಂದೆ ಆಕಾಶವಾಣಿಯ ಇಪ್ಪತ್ತೈದಕ್ಕೂ ಮಿಕ್ಕಿದ ಕಾಯಕ್ರಮಗಳಿಗೆ ಅಂಕಿತಗೀತೆ(ಸಿಗ್ನೇಚರ್ ಟ್ಯೂನ್ ಹಾಡು)ಗಳನ್ನು ನಾನು ಬರೆದೆ. ವನಿತಾವಾಣಿಯನ್ನು ಆಗ ನೋಡಿಕೊಳ್ಳುತ್ತಿದ್ದ ಶ್ರೀಮತಿ ಮಾಲತಿ.ಆರ್.ಭಟ್ ಅವರು ನನ್ನಿಂದ ಹಲವಾರು ಗೀತೆಗಳನ್ನು ಬರೆಸಿ ಅವನ್ನು ಶ್ರೀ ರಫೀಕ್ ಖಾನ್, ಶ್ರೀ ಟಿ. ಜಿ. ಗೋಪಾಲಕೃಷ್ಣನ್ ಮುಂತಾದವರ ಸಂಗೀತ ಸಂಯೋಜನೆಯಲ್ಲಿ ವಿವಿಧ ಕಲಾವಿದರಿಂದ ಹಾಡಿಸಿ ತಮ್ಮ ಕಾರ್ಯಕ್ರಮಗಳಿಗೆ ಅಂಕಿತಸಂಗೀತವಾಗಿ ಬಳಸಿಕೊಂಡರು. ವಿಕಾಸಿನಿ, ಸಖಿ, ಗೃಹಿಣಿ, ಹರ್ಷಬೆಳಕು, ಸಚೇತನ ಮುಂತಾದ ಕಾರ್ಯಕ್ರಮಗಳಿಗೆ ಹಾಗೇ ಮುಂದೆ ಹಲೋ ಕೆ.ಎಂ.ಸಿ, ನೂರೆಂಟು ನಮಸ್ಕಾರ, ಕಡಲ ತಡಿಯ ಕಬ್ಬಿಗರು, ಜನಪದ ಮಡಿಲ ಸಿರಿ ಹೀಗೆ ಹಲವಾರು ಕಾರ್ಯಕ್ರಮಗಳಿಗೆ ನಾನು ಅಂಕಿತಗೀತೆಗಳನ್ನು ಬರೆದೆ.
ಕೊಂಕಣಿ ಕಲಾವಿದರಿಗೆ ಹಾಡಲು ಗೀತೆಗಳ ಅಭಾವವಾದಾಗ ಶ್ರೀಮತಿ ವಸಂತಿ.ಆರ್.ನಾಯಕ್ ಶ್ರೀಮತಿ, ಲತಿಕಾ ಶೆಣೈ ಮುಂತಾದವರ ಕೋರಿಕೆಯ ಮೇರೆಗೆ ಹಲವಾರು ಕೊಂಕಣಿ ಗೀತೆಗಳನ್ನೂ ಬರೆದೆ. ಹೀಗೆ ಆಕಾಶವಾಣಿಗೆ ಬಂದು ನಾನು ಅನಿವಾರ್ಯ ಕವಯತ್ರಿಯಾದೆ. ಆಕಾಶವಾಣಿಯಲ್ಲಿ ಪ್ರಸಾರವಾಗುವ ನನ್ನ ಕವನಗಳನ್ನು ಕೇಳಿ ಹೊರಗಡೆಯಿಂದಲೂ ನನಗೆ ಕವಿಗೋಷ್ಠಿಗಳಿಗೆ ಆಹ್ವಾನ ಬರತೊಡಗಿದುವು. ಖ್ಯಾತ ಗಾಯಕ ಹಾಗೂ ಬಾನ್ಸುರಿ ವಾದಕ ಶ್ರೀ ವೆಂಕಟೇಶ ಗೋಡ್ಖಿಂಡಿಯವರು ಮಂಗಳೂರಿಗೆ ನಿಲಯನಿರ್ದೇಶಕರಾಗಿ ವರ್ಗವಾಗಿ ಬಂದಮೇಲೆ ಅವರು “ಭಾವಗಾನ”ವೆಂಬ ನೂತನ ಕಾರ್ಯಕ್ರಮವನ್ನು ಆರಂಭಿಸಿ ತಿಂಗಳಹಾಡು ಎಂಬ ಪರಿಕಲ್ಪನೆಯಲ್ಲಿ ಹೊಸಹಾಡುಗಳಿಗೆ ಸಂಗೀತ ಸಂಯೋಜಿಸಿ ತಿಂಗಳ ಪ್ರತಿ ಭಾನುವಾರ ಅದನ್ನು ಪ್ರಸಾರಿಸುವ ವ್ಯವಸ್ಥೆ ಮಾಡಿದರು. ಅದೇ ಸಮಯದಲ್ಲಿ ಸಂಗೀತವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಖ್ಯಾತ ಕೊಳಲು ವಾದಕರಾದ ಶ್ರೀ ಪ್ರಪಂಚಂ ಎಸ್. ಬಾಲಚಂದ್ರನ್ ಅವರು. ಅವರು ನನ್ನ ಕವನ ಬರೆಯುವ ಗೀಳನ್ನು ಗಮನಿಸಿ ಭಾವಗಾನಕ್ಕಾಗಿ ಹಾಡೊಂದನ್ನು ಬರೆಯುವಂತೆ ಕೇಳಿಕೊಂಡರು. ನಾನು ಆ ಸಮಯದಲ್ಲಿ ಮದುವೆ, ಉದ್ಯೋಗವೆಂದು ಊರಿನಿಂದ ಅನಿವಾರ್ಯವಾಗಿ ದೂರವಿರಬೇಕಾಗಿಬಂದ ಮಕ್ಕಳನ್ನು ನೆನೆಯುತ್ತಾ ಹಂಬಲಿಸುವ ವೃದ್ಧ ದಂಪತಿಗಳನ್ನು ಕುರಿತ “ಹಕ್ಕಿಗಳು ಹಾರಿದವೆ ಗೂಡಿಂದಲಿ” ಎಂಬ ಯುಗಳಗೀತೆಯನ್ನು ಬರೆದುಕೊಟ್ಟೆ. ಪ್ರಪಂಚಂ ಅವರ ಸಂಗೀತ ನಿರ್ದೇಶನದಲ್ಲಿ ಕಾರ್ಯಕ್ರಮ ನಿರ್ವಾಹಕರಾದ ಮಲೆಯಾಳೀ ಮನೆಮಾತಿನ ಶ್ರೀ ಶ್ರೀರಾಂ.ಸಿ.ಗೋಪಾಲನ್ ನಾಯರ್, ಶ್ರೀಮತಿ ಹಾಗೂ ವಸುಧಾ ಗಿರಿಧರ್ ಅವರು ಅದನ್ನು ಹಾಡಿದರು. ಈ ಹಾಡಿಗೆ ಪ್ರಪಂಚಂ ಅವರು ಕೊಳಲನ್ನೂ, ಗೋಡ್ಖಿಂಡಿಯವರು ಬಾನ್ಸುರಿಯನ್ನೂ ನುಡಿಸಿದ್ದರು. ಅಮೋಘವಾಗಿ ಮೂಡಿಬಂದ ಈ ಗೀತೆ ತಿಂಗಳ ನಾಲ್ಕೂ ಭಾನುವಾರ ಪ್ರಸಾರವಾಗಿ ನನಗೆ ಅಧಿಕೃತ ಕವಯತ್ರಿಯ ಹೆಸರನ್ನು ಕೊಟ್ಟಿತು. ಈ ಭಾವಗಾನದಿಂದ ಪ್ರೇರಿತರಾಗಿ ರೂಪಕ, ನಾಟಕ ವಿಭಾಗದ ಶ್ರೀಮತಿ ರಮಾ ಹಿರೇಮಠ್ ಅವರು ನನಗೆ ಸಂಗೀತರೂಪಕವೊಂದನ್ನು ಬರೆಯುವಂತೆ ಸೂಚಿಸಿದರು. “ಒಲವಿನ ಪಯಣ”ವೆಂಬ ಸಂಗೀತರೂಪಕಕ್ಕಾಗಿ ನಾನು ಎಂಟು ಹಾಡುಗಳನ್ನು ಬರೆದೆ. ಪ್ರಪಂಚಂ ಹಾಗೂ ಗೋಡ್ಖಿಂಡಿಯವರ ಜಂಟಿ ಸಂಗೀತನಿರ್ದೇಶನದಲ್ಲಿ ಈ ರೂಪಕ ಅಧ್ಭುತವಾಗಿ ಮೂಡಿಬಂತು. ಈ ಕುರಿತು ಮುಂದೆ ವಿಸ್ತಾರವಾಗಿ ಬರೆಯುವೆ. ಹಕ್ಕಿಗಳು ಹಾಡಿನಿಂದ ಆರಂಭವಾದ ನನ್ನ ಭಾವಗಾನ ಮುಂದೆ ಹತ್ತಕ್ಕೂ ಹೆಚ್ಚು ಭಾವಗಾನಗಳನ್ನು ನನ್ನಿಂದ ಬರೆಸಿತು.
ಆಕಾಶವಾಣಿ ರಾಷ್ಟ್ರೀಯ ನಾಟಕ ಸ್ಪರ್ಧೆಗಳಲ್ಲಿ ಬಹುಮಾನಿತ ನಾಟಕಗಳನ್ನು ದೇಶದ ಅಂಗೀಕೃತ ಎಲ್ಲ ಭಾಷೆಗಳಲ್ಲೂ ಅನುವಾದಿಸಿ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರ ಮಾಡುತ್ತಾರೆ. ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಗೆ ಸರತಿಯಂತೆ ಈ ನಾಟಕಗಳನ್ನು ಕನ್ನಡದಲ್ಲಿ ಅನುವಾದಿಸಿ ನಿರ್ಮಿಸಿ ಉಳಿದ ಕೇಂದ್ರಗಳಿಗೆ ಕಳಿಸಿಕೊಡುವ ಜವಾಬ್ದಾರಿ ಬರುತ್ತದೆ. ಹೀಗೆ ಒಮ್ಮೆ ಕವಿಪ್ರಿಯ ಎಂಬ ಸಂಗೀತ – ನೃತ್ಯ ಪ್ರಧಾನ ನಾಟಕ ಮಂಗಳೂರಿನ ಪಾಲಿಗೆ ಬಂದು ಸ್ಕ್ರಿಪ್ಟ್ ಕೇವಲ ಪ್ರಸಾರದ ಎರಡು ದಿನಗಳ ಮುಂಚಿತವಾಗಿ ದೆಹಲಿಯ ನಾಟಕ ವಿಭಾಗದಿಂದ ಬಂದು ತಲುಪಿತ್ತು. ಅದರ ಅನುವಾದವನ್ನು ಅಷ್ಟು ಕಡಿಮೆ ಅವಧಿಯಲ್ಲಿ ಹೊರಗಿನವರಿಗೆ ಕೊಟ್ಟರೆ ಕಷ್ಟವೆಂದು ಹಿಂದಿ ವಿಭಾಗದ ಅಧಿಕಾರಿ ಶ್ರೀಮತಿ ಮಾಲತಿ .ಆರ್.ಭಟ್ ಅವರು ಅನುವಾದ ಹಾಗು ನಿರ್ಮಾಣದ ಹೊಣೆಯನ್ನು ತಾವೇ ಹೊತ್ತಿದ್ದರು. ಆ ನಾಟಕದಲ್ಲಿ ಒಂಬತ್ತು ಹಿಂದಿಯ ಹಾಡುಗಳಿದ್ದುವು. ಕೇವಲ ಒಂದೇ ರಾತ್ರಿಯ ಒಳಗೆ ಆ ಒಂಬತ್ತೂ ಹಾಡುಗಳನ್ನು ನಾನು ಕನ್ನಡಕ್ಕೆ ಅನುವಾದಿಸಿ ಕೊಟ್ಟೆ. ಮರುದಿನವೇ ಆ ಹಾಡುಗಳ ಹಾಗೂ ನಾಟಕದ ಧ್ವನಿಮುದ್ರಣ ನಡೆದು ನಾಟಕ ನಿರ್ಮಾಣವಾಗಿ ನಿಗದಿತ ದಿನ ಹಾಗೂ ಸಮಯಕ್ಕೆ ಅದು ಕರ್ನಾಟಕದ ಎಲ್ಲಾ ಬಾನುಲಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಯಿತು.
ಹೀಗೆ ಮುಂದೆಯೂ ಹಿಂದಿಕವಿ ಗುಲ್ಜಾರ್ ಕುರಿತ ರೂಪಕ, ಮಳೆಗಾಲವನ್ನು ಕುರಿತ ಮತ್ತೆ ಮಳೆ ಹೊಯ್ಯುತ್ತಿದೆ, ಅಷ್ಟಮಿಯ ಸಂದರ್ಭದಲ್ಲಿ ಕೊಳಲನೂದುವ ಚದುರನ್ಯಾರೆ, ಬಂದನೇನೆ ರಂಗ ಬರುವನೇನೆ, ನವರಾತ್ರಿಯ ಜಗದ ಜನನಿ ಅಂಬಿಕೆ, ಜನಪದ ಹಾಡುಗಳನ್ನು ಆಧರಿಸಿದ ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ – ಇವೇ ಮುಂತಾದ ಹಲವಾರು ರೂಪಕಗಳನ್ನು ಬರೆದು ನಿರ್ಮಿಸಿದ್ದೇನೆ. ಇವು ಈಗ ನೆನಪಿಗೆ ಬಂದ ಕೆಲವೇ ಹೆಸರುಗಳು. ಹೀಗೆ ನನ್ನ ಬಾನುಲಿ ಬರವಣಿಗೆ ಧ್ವನಿತರಂಗಾಂತರಗಳಾಗಿ ಗಾಳಿಯಲ್ಲಿ ತೇಲಿ ಹೋಗಿ ಅದೃಶ್ಯವಾಗಿವೆ, ಕೆಲವು ಕೇಳುಗರ ಮನದಾಳದಲ್ಲಿ ನೆಲೆ ನಿಂತಿವೆ. ಹಾಳೆಗಳಲ್ಲಿ ಉಳಿದಿರುವುದು ಕಿಂಚಿತ್, ಆದರೆ ಅದು ಕೊಟ್ಟ ತೃಪ್ತಿ, ಹೆಸರು ಅಪಾರ. ಇವೆಲ್ಲವನ್ನೂ ನನಗೆ ಇತ್ತುದುದು ನನ್ನ ಪ್ರೀತಿಯ ಬಾನುಲಿಯೆಂದಷ್ಟೇ ನಾನೀಗ ಹೇಳಬಲ್ಲೆ.
ಮುಂದಿನ ವಾರಕ್ಕೆ ►►




