spot_imgspot_img
spot_img

“ಮಾತುಕತೆ”- ಎಂಬ ಅನುಭವ ಮಂಟಪ

BanuliPayana 4

ಪ್ರತಿಯೊಂದನ್ನೂ ಮೊದಲೇ ಬರೆದು ಸಹಿ ಪಡೆದೇ ಪ್ರಸಾರಿಸಬೇಕಾದ ಕಟ್ಟುನಿಟ್ಟಿನ ಶಿಸ್ತುಬದ್ಧ ವ್ಯವಸ್ಥೆಯಲ್ಲಿ 1985ರ ಸುಮಾರಿಗೆ ಅಂತ ನೆನಪು,”ಹರಟೆ’ ಎಂಬ ಅರ್ಧ ಗಂಟೆಯ ಪಟ್ಟಾಂಗದ ಕಾರ್ಯಕ್ರಮವೊಂದು ಅವತರಿಸಿತು. ಈ ಪಟ್ಟಾಂಗದ ಮಾದರಿಯ ಕಾರ್ಯಕ್ರಮ ಆಕಾಶವಾಣಿಯ ಬೇರೆ ನಿಲಯಗಳಲ್ಲಿ ಮೊದಲೇ ಇತ್ತು. ಅಲ್ಲದೆ ನಮ್ಮ ಕೇಂದ್ರದಲ್ಲಿ “ತ್ಯಾಂಪನ ಮಾಹಿತಿ” ಎಂಬ ತುಳು ಹಾಗೂ “ಮಾತಿನ ಮಂಜಣ್ಣ” ಎಂಬ ಕನ್ನಡ ಕಾರ್ಯಕ್ರಮಗಳು ಕೃಷಿರಂಗದಲ್ಲಿ ಪ್ರಸಾರವಾಗುತ್ತಿದ್ದುವು. ಈ ಕಾರ್ಯಕ್ರಮಗಳಲ್ಲಿ ಮಾತಿನ ಮಲ್ಲ ಕೆ.ಆರ್.ರೈಗಳು ತ್ಯಾಂಪಣ್ಣನಾಗಿ, ಕೆ.ಶ್ಯಾಮ ಭಟ್ಟರು ರಾಮಣ್ಣನಾಗಿ, ಚೇತನ ಕುಮಾರ ನಾಯಕರು ಮಂಜಣ್ಣನಾಗಿ ಭಾಗವಹಿಸುತ್ತಿದ್ದರು. ನಾನು ಸೇರಿದ ಬಳಿಕ ಆಗೊಮ್ಮೆ, ಈಗೊಮ್ಮೆ ನನ್ನನ್ನೂ ಸೇರಿಸಿ ಈ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದುವು. ಪ್ರಚಲಿತ ವಿದ್ಯಮಾನಗಳು, ಆರೋಗ್ಯ, ಸಾಮಾಜಿಕ ಜಾಗೃತಿಯ ಕುರಿತ ವಿಷಯಗಳು ಇದರಲ್ಲಿ ಚರ್ಚಿತವಾಗುತ್ತಿದ್ದುವು. ತುಳುವಿನಲ್ಲಿ ತನ್ನದೇ ಆದ ಗ್ರಾಮೀಣ ಸೊಗಡಿನೊಡನೆ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ ತ್ಯಾಂಪಣ್ಣ ತನ್ನ ಮಗನನ್ನು”ದಿನೇಸಾ…’ ಎಂದು ಕರೆದು ಎರಡು ಲೋಟ ಬಿಸಿಬಿಸಿ ಕಷಾಯ ತರಲು ಹೇಳುವಲ್ಲಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತಿತ್ತು. ಅಷ್ಟು ವರ್ಷಗಳಲ್ಲಿ ಆ ’ದಿನೇಸ’ ನೆಂಬ ವ್ಯಕ್ತಿ ಯಾವತ್ತೂ ಬಂದದಿಲ್ಲ, ಮಾತಾಡಿದ್ದಿಲ್ಲ. ಆದರೆ ಇಳಿ ಸಂಜೆಯ ಆ ಹೊತ್ತಿನಲ್ಲಿ ತ್ಯಾಂಪಣ್ಣ ತರಲು ಹೇಳುತ್ತಿದ್ದ ಆ ಕಷಾಯದ ಕಂಪು ದಿನೇಸನೆಂಬ ವ್ಯಕ್ತಿ ಅದನ್ನು ತಾರದೆಯೂ ಮೂಗಿಗೆ ಬಡಿಯುತ್ತಿತ್ತು. ಇನ್ನು ಮಾತಿನ ಮಂಜಣ್ಣದಲ್ಲಿ ಚೇತನಕುಮಾರ ನಾಯಕರು ಇಂಗ್ಲಿಷ್ ವ್ಯಾಮೋಹಿ ಹಳ್ಳಿಗನೊಬ್ಬನ ಪಾತ್ರದಲ್ಲಿ ರಂಜಿಸುತ್ತಿದ್ದರು. ಧಾರವಾಡದ ಮಾತಿನ ಗಂಧ ಬೆರೆಸಿ ಮಾತನಾಡುವ ಶಂಕರನೆಂಬವರು ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಅವರ ಪಾತ್ರದ ಹೆಸರೇನೆಂದು ಮರೆತಿರುವೆ, ಅದ್ಭುತವಾಗಿ ಮಾತನಾಡುತ್ತಿದ್ದರು. ಒಟ್ಟಿನಲ್ಲಿ ನಗೆಯ ಬುಗ್ಗೆಯನ್ನು ಹಬ್ಬಿಸುತ್ತಾ ಜನಜಾಗೃತಿಯನ್ನುಂಟುಮಾಡುವ ಈ ಕಾರ್ಯಕ್ರಮಗಳಿಗೆ ಸಾಕಷ್ಟು ಸಂಖ್ಯೆಯ ಶ್ರೋತೃಗಳಿದ್ದರು.ಇವತ್ತು ತ್ಯಾಂಪಣ್ಣ ಏನು ಹೇಳಿದ್ರು ಅಂತ ಜನ ಮೆಲುಕಾಡುವಷ್ಟು ಅವು ಜನಪ್ರಿಯವಾಗಿದ್ದುವು. ಬಹುಶ: ರೈಗಳ ಪ್ರಭಾವದಿಂದ ಹರಟೆಮಲ್ಲಿಯಂತೆ ಮಾತನಾಡುವುದು ನನಗೂ ಚಾಳಿಯಾಗಿ ಬಂತು. “ಅಕ್ಕೆ’ ಎಂದು ಅವರು ಕರೆಯುವುದು ಈಗಲೂ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ.

1985 – 86 ರ ಸುಮಾರಿಗೆ ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ವರ್ಗವಾಗಿ ಬಂದ ಡಿ.ಎಸ್.ನಾಗಭೂಷಣರು ಆಗ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಾಹಕರಾಗಿದ್ದರು. ಅವರು ಪ್ರಸಾರ ನಿರ್ವಾಹಕ ಉದಯಾದ್ರಿಯವರೊಡನೆ ಸೇರಿ ಮೊದಲು “ಹರಟೆ” ಎಂಬ ಕಾರ್ಯಕ್ರಮವನ್ನು ಆರಂಭಿಸಿದರು. ಅದು ಕೆಲವು ದಿನ ನಡೆದು ಮತ್ತೆ ಕುಂಟತೊಡಗಿತು. ಆಗ ನಿಲಯನಿರ್ದೇಶಕರಾಗಿದ್ದ ಬಿ. ಆರ್. ಚಲಪತಿರಾಯರು ಶಂಕರ್ ಎಸ್. ಭಟ್ ಅವರಿಗೆ ಈ ಕಾರ್ಯಕ್ರಮವನ್ನು ನಡೆಸುವಂತೆ ಆದೇಶ ನೀಡಿದರು. ಶಂಕರ್ ಭಟ್ ಅವರು ಈ ಕಾರ್ಯಕ್ರಮಕ್ಕೆ ಮಾತುಕತೆಯೆಂದು ನಾಮಕರಣ ಮಾಡಿ ಅದರಲ್ಲಿ ನನ್ನನ್ನೂ, ಕೆ.ವೆಂಕಟೇಶ್ ಎಂಬವರನ್ನೂ ಸೇರಿಸಿಕೊಂಡರು. ಗಂಡ, ಹೆಂಡತಿ ಹಾಗೂ ಒಬ್ಬ ಸ್ನೇಹಿತ, ಪ್ರತಿ ಮಂಗಳವಾರ ಸಂಜೆ ಆತನ ಭೇಟಿ, ಲೋಕಾಭಿರಾಮದ ಮಾತುಗಳನ್ನಾಡುತ್ತ ಸಮಾಜದ ಕುಂದು, ಕೊರತೆ ವಿಚಾರ, ಜನಜಾಗೃತಿ ಇತ್ಯಾದಿಗಳನ್ನು ಚರ್ಚಿಸಿ ಕೊನೆಗೆ ಕಾಫಿ ಕುಡಿದು ಗೆಳೆಯನ ನಿರ್ಗಮನ. ಸಾಮಾಜಿಕ, ರಾಜಕೀಯವಾಗಿ ಆಳವಾದ ಜ್ಞಾನವುಳ್ಳ ಈ ಇಬ್ಬರ ನಡುವೆ ನಾನು ಪೆದ್ದುಪೆದ್ದು ಪ್ರಶ್ನೆಗಳನ್ನು ಎತ್ತುತ್ತಾ ತಾತ್ವಿಕವಾದ ಚರ್ಚೆ ಮುಂದುವರಿಯುತ್ತಿತ್ತು. ಚರ್ಚೆಯ ಶುಷ್ಕತೆಯನ್ನು ಮುರಿಯಲೋಸುಗ ನನ್ನ ಪೆದ್ದು ಪ್ರಶ್ನೆಗಳನ್ನು ಬೇಕೆಂದೇ ಕೇಳುತ್ತಿದ್ದೆ. ಈ ತರಹದ ಕಾರ್ಯಕ್ರಮ ಹೊಸದಾಗಿ ಆರಂಭವಾಗಿ ಜನರ ಕುತೂಹಲವನ್ನು ಕೆರಳಿಸಿದ ನಿಮಿತ್ತ ಈ ಕಾರ್ಯಕ್ರಮಕ್ಕೂ ಸಾಕಷ್ಟು ಕೇಳುಗರಿದ್ದರು, ಆದರೆ ನನಗೆ ನನ್ನ ನಿರ್ವಹಣೆಯ ಬಗ್ಗೆ ಅಷ್ಟೊಂದು ತೃಪ್ತಿ ಇರಲಿಲ್ಲ. ಕೆಲವು ಕಾಲದಲ್ಲಿ ನಾನು ನನ್ನ ಸಾಂಸಾರಿಕ ತಾಪತ್ರಯಗಳಿಂದ ಎರಡು ತಿಂಗಳ ರಜೆ ಪಡೆಯಬೇಕಾಗಿ ಬಂದ ಸಂದರ್ಭದಲ್ಲಿ ಅದರ ಸ್ವರೂಪ ಬದಲಾಯಿತು.

 SRKINIಕ್ರಮೇಣ ಈ ಮಾತುಕತೆಗೆ ಪೂರ್ವ ಅಂಗೀಕೃತ ಸ್ಕ್ರಿಪ್ಟ್ ಬೇಕು ಎಂದು ಕೆಲವರು ಆಕ್ಷೇಪ ಎತ್ತಿದರು. ಪ್ರತಿವಾರ ಸ್ಕ್ರಿಪ್ಟ್ ಬರೆಯುವುದು ಅಂಥ ಸುಲಭದ ಕೆಲಸ ಅಲ್ಲ. ಅಲ್ಲದೆ ಸ್ಕ್ರಿಪ್ಟ್ ಬರೆದ ತಕ್ಷಣ ಅದು ತನ್ನ ಸಹಜ ಜೀವಂತಿಕೆಯನ್ನು ಕಳೆದುಕೊಂಡುಬಿಡುತ್ತದೆ. ಈ ಸತ್ಯ ಎಲ್ಲರಿಗೂ ಗೊತ್ತಿರುವಂಥದ್ದೇ. ಕೊನೆಗೆ ವಾರಕ್ಕೊಬ್ಬರು ಸ್ಕ್ರಿಪ್ಟ್ ಬರೆದು ನಿರ್ಮಾಣ ಮಾಡುವಂತೆ ಎಲ್ಲರಿಗೂ ವಾರಕ್ಕೊಬ್ಬರಂತೆ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಪ್ರಸಾದದಂತೆ ಹಂಚಿ ಕೊಡಲಾಯಿತು. ಮೊದಮೊದಲು ಉತ್ಸಾಹದಲ್ಲಿಯೇ ಎಲ್ಲರೂ ಸ್ಕ್ರಿಪ್ಟ್ ಬರೆದರು, ಕೈಗೆ ಸಿಕ್ಕವರನ್ನು, ಎದುರಿಗೆ ಸಿಕ್ಕವರನ್ನು ಎಳೆದೊಯ್ದು ಧ್ವನಿಮುದ್ರಿಸುವ ನರಕಯಾತನೆ ಕೊಟ್ಟರು. ಕ್ರಮೇಣ ಇಂಥವರ ಮಾತುಕತೆ ಇದೆ ಅಂತ ಗೊತ್ತಾದ ದಿನ ತಲೆಮರೆಸಿ ಓಡಾಡುವಷ್ಟು ಅದು ಅಸಹನೀಯ ಪೀಡೆಯಾಗತೊಡಗಿತು. ಯಾಕೆಂದರೆ ಅವರ ಹಸ್ತಾಕ್ಷರ ಅರ್ಥವಾಗುವುದಿರಲಿ, ಕಾಗುಣಿತ, ವ್ಯಾಕರಣ ದೋಷಗಳನ್ನು ತಿದ್ದುವುದೇ ಉಳಿದವರಿಗೆ ಕೆಲಸವಾಗತೊಡಗಿತು. ಯಾಕೆಂದರೆ ಎಲ್ಲರಿಗೂ ಹಂಚುವಾಗ ಯಾರು ಬರೆಯಬಲ್ಲವರು, ಯಾರು ಬರೆಯಲಾರರು ಎಂದು ನೋಡದೇ ಆದೇಶಕೊಟ್ಟದ್ದೇ ಮೋಸವಾದದ್ದು. ಈ ಎಲ್ಲ ಸರ್ಕಸ್ ಗಳ ನಡುವೆ ಮಾತುಕತೆ ರಸ ಹಿಂಡಿದ ಕಬ್ಬಿನ ಜಲ್ಲೆಯಂತಾಗ ತೊಡಗಿತು. ಕೊನೆಕೊನೆಗೆ ಸ್ಕ್ರಿಪ್ಟೂ ಇಲ್ಲ, ಜನವೂ ಇಲ್ಲ ಎಂಬಲ್ಲಿಗೆ ಬಂದು ನಿಂತು, ತಿಂಗಳ ಮೊದಲೇ ಕೊಡಲಾಗುವ ಆದೇಶದ ಪ್ರತಿ ಎಲ್ಲೋ ಇದ್ದು ಅದನ್ನು ಮಾಡಬೇಕಿದ್ದವರು ರಜೆಯಲ್ಲಿ ಹೋಗಿದ್ದೋ, ಮರೆತೋ ಅಂತೂ ಪ್ರಸಾರದ ಕೊಂಚ ಹೊತ್ತಿನ ಮೊದಲು ಅದು ರೆಕಾರ್ಡ್ ಆಗಿಲ್ಲ ಎನ್ನುವುದು ಇತರರ ಗಮನಕ್ಕೆ ಬಂದು ಕೊನೆಗೆ ಫಿಲ್ಲರ್ ನುಡಿಸಿಯೋ, ಚಿತ್ರಗೀತೆ ಹಾಕಿಯೋ ಸಮಯ ತುಂಬಿದ ಘಟನೆಗಳು ಹಲವಾರು ಬಾರಿ ನಡೆದು ಕೊನೆಗೆ ಸ್ಕ್ರಿಪ್ಟ್ ಬರೆಯುವ ಹಾಗೂ ಭಾಗವಹಿಸುವ ಎರಡೂ ಜವಾಬ್ದಾರಿಗಳನ್ನು ಹೊರಗಿನವರಿಗೆ ಒಪ್ಪಿಸಿ ಕೈ ತೊಳೆಯಲಾಯಿತು. ಹೊರಗಿನವರು ಬರೆದದ್ದು ಮಾತುಕತೆಯಾಗದೇ ಪ್ರಹಸನದಂತಾಗತೊಡಗಿತು. ಸಾಲದ್ದಕ್ಕೆ ಹೊರಗಿನವರ ಬರಹವನ್ನು ತಿದ್ದುವ ಕೆಲಸ, ಬಂದ ಅಭಿನಯ ಕಲಾವಿದರಿಗೆ ರಿಹರ್ಸಲ್ ಮಾಡಿಸುವ ಹೆಚ್ಚುವರಿ ಕೆಲಸವೂ ವಿಭಾಗದವರಿಗೆ ಬಿತ್ತು. ಅವರಿಗೆ ಕರಾರು ಪತ್ರ ಕಳಿಸುವ, ಹಣ ಪಾವತಿ ಮಾಡುವ ಹೊಸ ಹೊರೆಯೂ ಸೇರಿದಂತೆ ಇದೇನೂ ಕಡಿಮೆ ತಲೆಬಿಸಿಯ ಕೆಲಸವಾಗಿ ಉಳಿಯಲಿಲ್ಲ. ಈ ನಡುವೆ ಯಾರೋ ಬರೆದ ಸ್ಕ್ರಿಪ್ಟ್ ನಲ್ಲಿ ಅಂಗೀಕೃತಗೊಳಿಸಿಯೂ ಹೋಗಬಾರದ್ದು ಗಾಳಿಯಲ್ಲಿ ಹೋಗಿ, ಹೊರಗಡೆಯಿಂದ ಕೆಲವು ಸಂಘಟನೆಯವರು ಪ್ರತಿಭಟನೆ ನಡೆಸಿ ಕೆಲವು ಕಾಲ ಮಾತುಕತೆ ಬಂದ್ ಆಗಿ ನಮಗೆಲ್ಲಾ ನೆಮ್ಮದಿ ಲಭಿಸಿತು. ಹೆಚ್ಚು ಕಡಿಮೆ ನಿಂತೇ ಹೋಗಿದ್ದ ಈ ಕಾರ್ಯಕ್ರಮಕ್ಕೆ ಮತ್ತೆ ಕಾಯಕಲ್ಪ ಕೊಟ್ಟವರು ಶ್ರೀನಿವಾಸ ಪ್ರಸಾದ್ ಅವರು. ಮಾಲತಿ. ಆರ್. ಭಟ್ ಹಾಗೂ ಕೆ.ಶ್ಯಾಮ್ ಭಟ್ ಅವರೊಡನೆ ಸೇರಿ ಒಂದು ಹೃದ್ಯವಾದ ಚೌಕಟ್ಟನ್ನು ಈ ಕಾರ್ಯಕ್ರಮಕ್ಕೆ ಕೊಟ್ಟರು. ಶ್ರೀನಿವಾಸ ಪ್ರಸಾದರ ವರ್ಗಾವಣೆಯ ವರೆಗೂ ಇದು ಬಹಳ ಸುಂದರವಾಗಿ, ಗೊಂದಲಗಳಿಲ್ಲದೇ ನಿರಾತಂಕವಾಗಿ ಮುಂದುವರಿಯಿತು.

 ಶ್ರೀನಿವಾಸ ಪ್ರಸಾದರ ವರ್ಗಾವಣೆಯ ಬಳಿಕ ಕೆ.ಆರ್.ರೈಗಳು ಅಜ್ಜಯ್ಯನಾಗಿ, ಮಾಲತಿ .ಆರ್.ಭಟ್ ಅವರು ಸೊಸೆಯಾಗಿ, ಶ್ಯಾಂ ಭಟ್ ಅವರು ಮಗನಾಗಿ, ನಾನು ಸೊಸೆಯ ಊರಿನ ಗೆಳತಿಯಾಗಿ, ಮುದ್ದು ಮೂಡುಬೆಳ್ಳೆ ಅಂಗಡಿಯ ಸುಂದರಣ್ಣನಾಗಿ, ವಸಂತಕುಮಾರ್ ಪೆರ್ಲ ಶಾಲಾ ಮೇಷ್ಟ್ರಾಗಿ , ಸೂರ್ಯನಾರಾಯಣ ಭಟ್ ಕೀಟಲೆಯ ಹುಡುಗ ಸುರೇಶನಾಗಿ, ಸುಜಿತ್ ಕುಮಾರ್ ನಾಣುವಾಗಿ – ಹೀಗೆ ಒಟ್ಟಿನಲ್ಲಿ ಮೂರು ತಲೆ ಸಿಕ್ಕರೆ ಸಾಕು ಅಜ್ಜನ ಅಧ್ಯಕ್ಷತೆಯಲ್ಲಿ ಅದ್ಭುತ ಮಾತುಕತೆ ಜೀವತಾಳತೊಡಗಿತು. ಪ್ರತಿ ಶನಿವಾರ ಬೆಳಗ್ಗೆ ಏಳೂ ಕಾಲು ಗಂಟೆಗೆ ಅಜ್ಜಯ್ಯನ ಮನೆಗೆ ಬಂದು ಅವರ ಸವಿನಿದ್ರೆ ಕೆಡಿಸಿ, ಬಾಯಿಗೆ ಕೋಲು ಹಾಕಿ ಮಾತಿಗೆಳೆದು ಪಟ್ಟಾಂಗ ಹೊಡೆದು, ಕೊನೆಯಲ್ಲಿ ಸೊಸೆ ಶಾಂತಕ್ಕ ಕೊಡುವ ರುಚಿರುಚಿಯಾದ ಪತ್ರೊಡೆಯೋ, ಪುಂಡಿಯೋ, ಪಲಾವೋ ತಿಂದು ಜಾಗ ಖಾಲಿ ಮಾಡುವ ನಾವು ಅಲ್ಲಿಂದ ಹೊರಟ ಮೇಲೂ ಅಲ್ಲೊಂದು ಆತ್ಮೀಯ ಗಾಳಿ ಚಾವಡಿಯಲ್ಲಿ ಸುಳಿದಾಡುತ್ತಿತ್ತು. ಆ ಚಾವಡಿಯಲ್ಲಿ ನಾವಾಡಿದ ಮಾತುಗಳು ಅನುರಣಿಸುತ್ತಿದ್ದುವು. ಈ ಕಾರ್ಯಕ್ರಮವನ್ನು ಬಹಳಷ್ಟು ಶ್ರೋತೃಗಳು ಕಾದು ಕುಳಿತು ಕೇಳುತ್ತಿದ್ದರು. ಕೀಟಲೆಯ ಹುಡುಗ ಸುರೇಶ, ಘಟವಾಣಿ ಗೀತಕ್ಕ, ಶಾಂತಿ ಸಮಾಧಾನಿ ಶಾಂತಕ್ಕ, ಕೆಪ್ಪುಮುಪ್ಪಿನ ಅಜ್ಜಯ್ಯ, ವೇದಾಂತಿ ಸುಂದರಣ್ಣ, ಬೈರಿಗೆ ಕೊರೆತದ ಮಾಸ್ತ್ರು ಬೆಳ್ಳಂಬೆಳಗ್ಗೆ ಮಾತಿನ ಮಂಟಪದಲ್ಲೇ ನಿರ್ಮಿಸುತ್ತಿದ್ದ ಮನೆಯ ಚಾವಡಿಯ ದೃಶ್ಯ ಸಹಜ ಸುಂದರವಾದದ್ದು. ಒಂದು ಹಲಸಿನ ಹಣ್ಣಿಗಾಗಿ, ಮಾವಿನ ಮಿಡಿಗಾಗಿ, ಕೆಸುವಿನ ಎಲೆಗಾಗಿ ಮನುಷ್ಯ ಸಹಜ ಹಪಹಪಿಕೆ ಇರಬಹುದು, ಮೊಬೈಲ್ ತಂದ ಸಾಮಾಜಿಕ ಕ್ರಾಂತಿ ಇರಬಹುದು, ಚಿಕುನ್ ಗುನ್ಯಾ, ಡೆಂಗ್ಯೂ ಕಾಯಿಲೆ ಇರಬಹುದು, ಹಬ್ಬ, ಹರಿದಿನಗಳಿರಬಹುದು – ಒಟ್ಟಿನಲ್ಲಿ ಅಜ್ಜಯ್ಯನ ಸಮಕ್ಷಮ ನಡೆಯುವ ಈ ಮಾತಿನ ಗೋಷ್ಠಿ ಕೇವಲ ಹದಿನೈದು ನಿಮಿಷಗಳಲ್ಲಿ ಸೃಜಿಸುತ್ತಿದ್ದ ಒಂದು ಕೌಟುಂಬಿಕ ಚೌಕಟ್ಟಿನ, ಮನೆ ಚಾವಡಿಯ ಚಿತ್ರ, ಅದು ಕೊಡುತ್ತಿದ್ದ ನಿರ್ಮಲ ಆನಂದ, ಮೌಲಿಕ ಮಾಹಿತಿಗಳು ವರ್ಣಿಸಲು ಅಸಾಧ್ಯ.

 ಬಹುಬೇಡಿಕೆಯ ಈ ಕಾರ್ಯಕ್ರಮದ ನಿರ್ಮಾಣ ಬಹಳ ಸುಲಭದಲ್ಲಿ ನಡೆದುಬಿಡುತ್ತಿತ್ತು.ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸುವ ಕಾರ್ಯಕ್ರಮಕ್ಕೆ ಹೋಲಿಸಿದರೆ ಈ ಕಾರ್ಯಕ್ರಮದ ನಿರ್ಮಾಣಕ್ಕೆ ಹಣದ ವೆಚ್ಚ ಇರಲಿಲ್ಲ, ಹೊರಗಡೆಯ ಕಲಾವಿದರೂ ಬೇಕಿರಲಿಲ್ಲ. ಧ್ವನಿ ಮುದ್ರಿಸುವ ಹೊತ್ತಿಗೆ ಯಾರು ಲಭ್ಯರೋ ಅವರನ್ನು ಸ್ಟುಡಿಯೋ ಒಳಗೆ ಕೂರಿಸಿಬಿಟ್ಟರೆ ಮುಗಿಯಿತು. ಮತ್ತೆಲ್ಲವೂ ತನ್ನಷ್ಟಕ್ಕೇ ನಡೆದುಹೋಗಿ ಬಿಡುತ್ತಿತ್ತು. ಮಾತನಾಡುವ ಮೊದಲು ಆ ಮುಂಬರುವ ವಾರದ ವಿಶೇಷತೆಗಳೇನು? ಮಳೆ, ಚಳಿ, ಸೆಖೆ, ಹಬ್ಬ, ಜಾತ್ರೆ, ಕಾಯಿಲೆ – ಯಾವುದೋ ಒಂದು ಎಳೆ ಹಿಡಿದುಕೊಂಡು ಮಾತಿನ ಮಂಟಪ ನೆಯ್ದು ಬಿಡುತ್ತಿದ್ದೆವು. ಅಶ್ವಿನ್ ಕುಮಾರ್ ಸೊಗಸಾಗಿ ಧ್ವನಿ ಮುದ್ರಿಸಿ, ಪ್ರಸಾರಕ್ಕೆ ಸಜ್ಜುಗೊಳಿಸಿಬಿಡುತ್ತಿದ್ದರು. ಏನು ಮಾತಾಡಿದ್ದೆವು ಅನ್ನುವುದೂ ಕೆಲವೊಮ್ಮೆ ನಮಗೆ ನೆನಪಿರುತ್ತಿರಲಿಲ್ಲ. ಆದರೆ ಕೇಳಿಸಿಕೊಂಡವರು ಆ ಬಗ್ಗೆ ಹೇಳಿದಾಗ “ಹೌದಲ್ಲಾ, ಈ ಬಗ್ಗೆ ಮಾತಾಡಿದ್ದೆವಲ್ಲಾ” ಅಂದುಕೊಳ್ಳುತ್ತಿದ್ದೆವು.

 ಮಾವ – ಸೊಸೆಯ ನಡುವಣ ಸುಮಧುರ ಬಾಂಧವ್ಯವನ್ನು ಮುರಿಯಲು ಪ್ರಯತ್ನಿಸುವ ಮನೆಮುರುಕಿಯ, ಅತಿ ಆಸೆಯ, ಡಂಬಾಚಾರದ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾನು ಬೇಕೆಂದೇ ಆ ನೆಗೆಟಿವ್ ಗುಣಗಳನ್ನು ನನ್ನ ಮೇಲೆ ಆರೋಪಿಸಿಕೊಳ್ಳುತ್ತಿದ್ದೆ. ಯಾಕೆಂದರೆ ಒಂದು ಹಾಲಿನಂಥ ಸಂಸಾರವನ್ನು ಹೇಗೆ ಬೇರೆಯವರು ಅನಗತ್ಯ ಪ್ರವೇಶಿಸಿ ಹುಳಿ ಹಿಂಡಬಲ್ಲರು, ಈ ಮಂಥರೆಯಂಥವರಿಂದ ಎಷ್ಟೊಂದು ಸಂಸಾರಗಳು ಹಾಳಾಗಬಲ್ಲವು ಎಂಬುದನ್ನು ನನಗೆ ನಿರೂಪಿಸಬೇಕಿತ್ತು, ನಾನು ಕೆಟ್ಟವಳೆಂಬ ಇಮೇಜ್ ನನಗೆ ಲಭಿಸಿದರೂ ಪರವಾಗಿಲ್ಲ ಎಂಬ ನಿಲುವಿನಿಂದ ನಾನು ಆ ಪಾತ್ರವನ್ನು ನಿರ್ವಹಿಸಿದೆ. ಆದರೆ ಆ ಕೆಟ್ಟ ಗುಣದ ಹೆಣ್ಣಿನ ಪಾತ್ರವನ್ನೂ ಜನ ಮೆಚ್ಚಿದರು. ಒಮ್ಮೆ ಕೆಲವು ದಿನಗಳ ಟೂರ್ ನಿಮಿತ್ತ ರಜೆಯಲ್ಲಿದ್ದಾಗ, ಗೀತಕ್ಕನ ಗೈರು ಹಾಜರಿಗೆ ಮಲೇರಿಯಾ ಕಾರಣವೆಂದು ಆ ವಾರದ ಮಾತುಕತೆಯಲ್ಲಿ ಹೇಳಲಾಗಿತ್ತು. ಅಷ್ಟು ಮಾತ್ರಕ್ಕೇ ನನ್ನ ಆರೋಗ್ಯ ವಿಚಾರಿಸಿ ಬಂದ ನೂರಾರು ಫೋನ್ ಕರೆಗಳ, ಬರೆದ ಪತ್ರಗಳ ಕರ್ತೃಗಳ ಪ್ರೀತಿ, ಅಭಿಮಾನಗಳಿಗೆ ಏನೆಂದು ಹೆಸರಿಡಬೇಕೆಂದೇ ತಿಳಿಯುತ್ತಿಲ್ಲ. ಮಾವಿನ ಮಿಡಿ ಉಪ್ಪಿನಕಾಯಿಗಾಗಿ ಹಂಬಲಿಸುವ ಗೀತಕ್ಕನಿಗೆ, ಉಪ್ಪಿನಕಾಯಿ ಜಾಸ್ತಿ ತಿನ್ನಬೇಡಿ, ಆರೋಗ್ಯಕ್ಕೆ ಹಾಳು ಎಂದು ಕಳಕಳಿಯಿಂದ ಪತ್ರ ಬರೆದ ಶ್ರೋತೃಗಳೂ ಇದ್ದರು.

 ಒಟ್ಟಿನಲ್ಲಿ ಶ್ರೋತೃಗಳ ಮೇಲಿನ ಪ್ರೀತಿಯಿಂದ ಆಡಿದ, ಮಾಡುವ ಯಾವ ಮಾತೂ, ಕಾರ್ಯಕ್ರಮವೂ ವ್ಯರ್ಥವಾಗುವುದಿಲ್ಲ ಎನ್ನುವುದನ್ನು ಮಾತುಕತೆಯಂಥ ಕಾರ್ಯಕ್ರಮ ಸಿದ್ಧಮಾಡಿ ತೋರಿಸಿದೆ. ಪ್ರೀತಿ ಕೊಟ್ಟದ್ದಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಮರಳಿ ಬರುತ್ತದೆ. ಯಾವುದೇ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡದೆ ಶ್ರೋತೃಗಳ ಮೇಲಿನ ಪ್ರೀತಿ, ಕಾಳಜಿಯಿಂದ ಮಾಡಿದಾಗ ಅದು ಹೇಗೆ ಅವರನ್ನು ತಟ್ಟುತ್ತದೆ, ಮುಟ್ಟುತ್ತದೆ ಅನ್ನುವುದಕ್ಕೆ “ಮಾತುಕತೆ” ಯಂಥಾ ಯಾವುದೇ ಘನವಾದ ಪೂರ್ವ ಸಿದ್ಧತೆಗಳಿಲ್ಲದ, ಸರಳ, ಸಹಜ ಕಾರ್ಯಕ್ರಮವೇ ಸಾಕ್ಷಿ.

ಮುಂದಿನ ವಾರಕ್ಕೆ   

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.