spot_imgspot_img
spot_img

ಭಾವಗಾನ ತೋರಿದ ಒಲವಿನ ಹಾದಿ

SRInnerLogoನನ್ನ “ಬಾನುಲಿ ಬರವಣಿಗೆ” ಎಂಬ ಹಿಂದಿನ ಒಂದು ಕಂತಿನಲ್ಲಿ “ಭಾವಗಾನ”ದ ಬಗ್ಗೆ ಅಲ್ಪಸ್ವಲ್ಪ ಬರೆದಿದ್ದೆ. ಸಮಯ ಸಿಕ್ಕಾಗ ಮತ್ತೆ ವಿಸ್ತಾರವಾಗಿ ಬರೆಯುವೆ ಎಂದೂ ಹೇಳಿದ್ದೆ.1992 ರ ಸುಮಾರಿಗೆ ನಿಲಯನಿರ್ದೇಶಕರಾಗಿ ಬಂದ ಶ್ರೀ ವೆಂಕಟೇಶ ಗೋಡಖಿಂಡಿಯವರು ಸ್ವತಹ “ಎ’ ಶ್ರೇಣಿಯ ಗಾಯಕರು ಹಾಗೂ ಬಾನ್ಸುರಿ ವಾದಕರು. ಅವರು ಮಂಗಳೂರು ಕೇಂದ್ರದ ನಿರ್ದೇಶಕರಾಗಿ ಬಂದ ಮೇಲೆ ಸಂಗೀತದ ಕಾರ್ಯಕ್ರಮಗಳಿಗೆ ಸ್ವಲ್ಪ ಹೆಚ್ಚಿನ ಕಾಯಕಲ್ಪವಾಯಿತು. ಅಲ್ಲದೆ ನಮ್ಮಲ್ಲಿ ಸಾಕಷ್ಟು ಸಂಖ್ಯೆಯ ಸಂಗೀತದ ನಿಲಯದ ಕಲಾವಿದರೂ ನೇಮಕಗೊಂಡ ಕಾಲ ಅದು. ಆದುದರಿಂದ ಸಂಗೀತದ ಕಾರ್ಯಕ್ರಮಗಳ ನಿರ್ಮಾಣದ ಸುಗ್ಗಿಯ ಕಾಲ ಅದು.

 ಗೋಡಖಿಂಡಿಯವರು ಮಂಗಳೂರಿಗೆ ಬಂದ ಕೆಲವೇ ದಿನಗಳಲ್ಲಿ “ಭಾವಗಾನ”ವೆಂಬ ನೂತನ ಕಾರ್ಯಕ್ರಮವನ್ನು ಆರಂಭಿಸಿದರು. ಪ್ರತಿ ತಿಂಗಳಿಗೊಂದು ಹೊಸಹಾಡು ರಾಗ ಸಂಯೋಜನೆಗೊಂಡು ತಿಂಗಳ ಪ್ರತಿ ಭಾನುವಾರ ಒಂಭತ್ತು ಗಂಟೆಗೆ ಪ್ರಸಾರವಾಗುತ್ತಿತ್ತು. ಮೊದಲು ಕವಿವಾಣಿ, ಅದರಲ್ಲಿ ಕವಿ ತನ್ನ ಕವಿತೆಯ ಬಗ್ಗೆ ಹೇಳಿ, ಕವಿತಾವಾಚನ ಮಾಡುತ್ತಾನೆ, ಬಳಿಕ ಆ ಕವಿತೆಯನ್ನು ಸಂಗೀತಬದ್ಧಗೊಳಿಸಿ ಹಾಡಲಾಗುತ್ತದೆ. ಸಾಕಷ್ಟು ಮೈಕ್ ಪ್ರಚಾರ ಕೊಟ್ಟ ಕಾರಣ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಖ್ಯಾತ ಕವಿಗಳು ಹಾಗೂ ಹೊಸದಾಗಿ ಬರೆಯುವವರು ಎಲ್ಲರೂ ತಮ್ಮ ತಮ್ಮ ಕವನಗಳನ್ನು ಆಕಾಶವಾಣಿಗೆ ಭಾವಗಾನಕ್ಕಾಗಿ ಕಳುಹಿಸಿಕೊಡಲು ಆರಂಭಿಸಿದರು. ಪರಮೇಶ್ವರ ಭಟ್, ಸೊಡಂಕೂರು ತಿರುಮಲೇಶ್ವರ ಭಟ್, ವಾಸಂತಿ ಕದ್ರಿ, ಕೊಂಚಾಡಿ ಸೀತಾರಾಮ ಭಟ್, ಸುಬ್ರಾಯ ಚೊಕ್ಕಾಡಿ, ಪುರಂದರ ಭಟ್, ಕುತ್ಯಾಳ ನಾಗಪ್ಪ ಗೌಡ, ಜಾನಕಿ ಬ್ರಹ್ಮಾವರ, ಯು.ಮಹೇಶ್ವರಿ, ಸುಕನ್ಯಾ ಕಳಸ, ರಘುರಾಮ್ ರಾವ್ ಬೈಕಂಪಾಡಿ, ಶ್ರೀಕೃಷ್ಣ ಚೆನ್ನಂಗೋಡು, ನಾ.ಮೊಗಸಾಲೆ, ರಾಮಚಂದ್ರ ಪೈ, ವೇಣುಗೋಪಾಲ ಕಾಸರಗೋಡು, ಟಿ.ದಿನಕರ್, ವಿ.ಮ.ಭಟ್ಟ, ಅಡ್ಯನಡ್ಕ, ವಸಂತಕುಮಾರ ಪೆರ್ಲ, ವಿ.ಮಾ.ಜಗದೀಶ್ ಹಾಗೂ ಇನ್ನೂ ಹಲವರ ಗೀತೆಗಳು ಈ ಕಾರ್ಯಕ್ರಮದಡಿಯಲ್ಲಿ ಭಾವಗಾನಗಳಾದುವು.

 ಬಹುಶ: ಸುಬ್ರಾಯ ಚೊಕ್ಕಾಡಿಯವರ “ಎಂಥ ದಿನಗಳು ಕಳೆದವೋ” ಈ ಗೀತೆ ಮಲೆಯಾಳೀ ಮನೆಮಾತಿನ ಶ್ರೀರಾಂ ಗೋಪಾಲನ್ ನಾಯರ್ ಅವರ ಧ್ವನಿಯಲ್ಲಿ ಭಾವಪೂರ್ಣವಾಗಿ ಬಂದ ದಿನಗಳವು. ಪ್ರಪಂಚಂ ಅವರ ಸಂಗೀತ ನಿರ್ದೇಶನದಲ್ಲಿ ಬಹು ಸುಂದರವಾಗಿ ರಾಗ ಸಂಯೋಜನೆಗೊಂಡ ಆ ಹಾಡು ಎಲ್ಲರ ಮನೆಮಾತಾಯಿತು, ಗುನುಗುವ ಎದೆಯ ಹಾಡಾಯಿತು. ಈ ಸಂದರ್ಭದಲ್ಲಿ ಕನ್ನಡ ವಿಭಾಗದ ವಿ. ಮಾ. ಜಗದೀಶರು ನನ್ನ ಬಳಿ ಭಾವಗಾನಕ್ಕಾಗಿ ಒಂದು ಗೀತೆಯನ್ನು ಬರೆಯುವಂತೆ ಹೇಳಿದರು. ನಾನು ಈ ಮೊದಲೇ ಹಲವಾರು ಅಂಕಿತ ಗೀತೆಗಳನ್ನು ಹಾಗೂ ರೂಪಕಗಳಿಗಾಗಿ ಹಲವಾರು ಸಾಂದರ್ಭಿಕ ಗೀತೆಗಳನ್ನು ಬರೆದಿದ್ದೆನಾದರೂ ಭಾವಗಾನದಂಥ ಪ್ರತಿಷ್ಠಿತ ಕಾರ್ಯಕ್ರಮಕ್ಕಾಗಿ ಬರೆದಿರಲಿಲ್ಲ. ತಿಂಗಳ ಪ್ರತಿ ಭಾನುವಾರ ಪ್ರಸಾರವಾಗುವ, ವಿಶೇಷ ಶ್ರಮವಹಿಸಿ ನಿರ್ಮಾಣ ಮಾಡುವ ಭಾವಗಾನವೆಂಬ ಕಾರ್ಯಕ್ರಮಕ್ಕಾಗಿ ಬರೆಯಲು ಹೇಳಿದಾಗ ನಾನು ಸ್ವಲ್ಪ ಹಿಂಜರಿಕೆಯಿಂದಲೇ ಒಪ್ಪಿಕೊಂಡೆ. ಯಾವ ವಿಷಯವನ್ನು ಆಯ್ದುಕೊಂಡರೆ ಒಳಿತು ಎಂದು ಚಿಂತಿಸಿದೆ. ಪ್ರೀತಿ, ಪ್ರೇಮ, ಪ್ರಕೃತಿ, ದೇಶ ಭಕ್ತಿ, ವಿರಹ – ಈ ಎಲ್ಲವೂ ಭಾವಗಾನದ ವಿಷಯಗಳಾಗಿ ಹಳಸಲಾಗ ಹತ್ತಿದ್ದುವು. ಆ ಸಮಯದಲ್ಲಿ ನನ್ನ ತೌರಿನಲ್ಲಿ ನನ್ನ ವಯಸ್ಸಾದ ತಂದೆ, ತಾಯಿ ಇದ್ದರು. ಹತ್ತು ಮಕ್ಕಳನ್ನು ಹೆತ್ತು ಹೊತ್ತಿದ್ದರೂ, ಒಬ್ಬ ಮಗ, ಸೊಸೆಯನ್ನು ಬಿಟ್ಟರೆ ಉಳಿದವರೆಲ್ಲಾ ತಮ್ಮ ಉದ್ಯೋಗ, ವಿವಾಹದ ನಿಮಿತ್ತ ದೂರದ ಊರುಗಳಲ್ಲಿ ಅನಿವಾರ್ಯವಾಗಿ ವಾಸವಿದ್ದರು. ಆಗ ಈಗಿನಂತೆ ದೂರವಾಣಿ ಸೌಲಭ್ಯವೂ ನಮ್ಮ ಹಳ್ಳಿಗೆ ಇರಲಿಲ್ಲ. ಯಾವಾಗಲೋ ಒಮ್ಮೆ ಬರುವ ಪತ್ರಕ್ಕಾಗಿ ಕತ್ತನ್ನು ಗೇಣುದ್ದ ಮಾಡಿ ಮಕ್ಕಳ ಕ್ಷೇಮ ಸಮಾಚಾರಕ್ಕಾಗಿ ವಯಸ್ಸಾದ ನನ್ನ ಹೆತ್ತವರು ಕಾಯುತ್ತಿದ್ದ ಕಾಲವದು. ವೃದ್ಧ ದಂಪತಿಗಳ ಮಾಗಿದ ದಾಂಪತ್ಯ, ಕೊನೆಯಿಲ್ಲದ ನಿರೀಕ್ಷೆ, ಪರಸ್ಪರ ಅವಲಂಬನ ಇವುಗಳ ಕುರಿತೇ ಯಾಕೆ ಬರೆಯಬಾರದು ಎಂದೆನಿಸಿತು. ಹಾಗೆ ಜನ್ಮ ತಾಳಿದ್ದು ನನ್ನ “ಹಕ್ಕಿಗಳು ಹಾರಿದವೆ ಗೂಡಿಂದಲಿ, ಮರಿಹಕ್ಕಿಗಳು ಹಾರಿದವೆ ಗೂಡಿಂದಲಿ” ಎಂಬ ಗೀತೆ.

 ಈ ಗೀತೆಯನ್ನು ನಾನು ವಿ. ಮಾ. ಜಗದೀಶರ ಕೈಗೆ ಕೊಟ್ಟೆ. ಅವರು ಅದನ್ನು ಓದಿ ತುಂಬ ಸಂತಸ ಪಟ್ಟರು. ಕೂಡಲೇ ಸಂಗೀತ ವಿಭಾಗದ ಪ್ರಪಂಚಂ ಅವರಿಗೆ ತೋರಿಸಿದರು. ಅವರಿಗೂ ಇಷ್ಟವಾಯಿತು. ಅವರು ಯುಗಳ ಗೀತೆಯಾಗಿ ಸಂಯೋಜಿಸಿದ ಈ ಗೀತೆಯನ್ನು ಶ್ರೀರಾಂ ಗೋಪಾಲನ್ ನಾಯರ್ ಹಾಗೂ ವಸುಧಾ ಹಾಡಿದರು. ಈ ಹಾಡಿನ ವಿಶೇಷತೆಯೆಂದರೆ ಸ್ವತ:ನಿಲಯ ನಿರ್ದೇಶಕರಾದ ಶ್ರೀ ವೆಂಕಟೇಶ ಗೋಡಖಿಂಡಿಯವರೇ ಹಿಂದೂಸ್ತಾನೀ ಶೈಲಿಯ ಬಾನ್ಸುರಿಯನ್ನು ನುಡಿಸಿದ್ದು, ಅವರ ಜೊತೆಗೆ ಸಂಗೀತ ಸಂಯೋಜಕರಾದ ಪ್ರಪಂಚಂ ಅವರು ಕರ್ನಾಟಕ ಶೈಲಿಯ ಕೊಳಲನ್ನು ನುಡಿಸಿದುದು. ಇವೆರಡೂ ಶೈಲಿಯ ಸಂಗೀತದ ಸುಂದರ ರಸಪಾಕವಾಗಿ, ಎ.ಕೆ.ವಿಜಯ್ ಅವರು ಓರ್ಗನ್ ನಲ್ಲಿ ಆರಂಭದಲ್ಲಿ ಹೃದ್ಯವಾಗಿ ನುಡಿಸಿದ ಹಕ್ಕಿಗಳ ಚಿಲಿಪಿಲಿಯ ಇಂಚರದೊಡನೆ ಅದ್ಭುತಗೀತೆಯಾಗಿ ಅದು ಜನ್ಮ ತಾಳಿತು.

SRK 1 ನಾನು ಬರೆದ ಹಾಡೊಂದು ಸಂಗೀತದ ಪೋಷಾಕು ತೊಟ್ಟು ಭಾವಪೂರ್ಣವಾಗಿ ಅವತರಿಸುತ್ತಿದ್ದಂತೆ ನನಗರಿವಿಲ್ಲದೇ ನನ್ನ ಕಣ್ಣುಗಳು ಹನಿಗೂಡಿದುವು. ಆ ಕ್ಷಣಗಳನ್ನು ನಾನು ಎಂದೂ ಮರೆಯೆ. ಗಾಯಕರ, ಸಂಗೀತಸಂಯೋಜಕರ, ಎಲ್ಲ ವಾದ್ಯವಾದಕರ ಒಂದು ಧ್ಯಾನಸ್ಥ ಸ್ಥಿತಿಯ ನಿರ್ಮಿತಿ ಅದು. ನನ್ನ ಕವಿವಾಣಿಯೊಡನೆ ಪ್ರತಿ ಭಾನುವಾರ ಅದು ಪ್ರಸಾರವಾದಾಗ ದೂರದರ್ಶನದಲ್ಲಿ “ಟಿಪ್ಪು ಸುಲ್ತಾನ್” ಧಾರಾವಾಹಿ ಬರುತ್ತಿದ್ದ ಸಮಯ ಅದು. ಹೆಚ್ಚಿನ ಮನೆಗಳಲ್ಲಿ ಈ ಭಾವಗಾನ ಪ್ರಸಾರವಾದ ಬಳಿಕ “ಟಿಪ್ಪು ಸುಲ್ತಾನ್” ಧಾರಾವಾಹಿಯನ್ನು ವೀಕ್ಷಿಸುತ್ತಿದ್ದ ಬಗ್ಗೆ ಬಹಳಷ್ಟು ಜನ ನನ್ನೊಡನೆ ಹೇಳಿದ್ದರು. ಪತ್ರಗಳ ರಾಶಿಯೇ ನಿಲಯಕ್ಕೆ ಹರಿದು ಬಂತು, ನನಗೆ ಬಂದ ದೂರವಾಣಿ ಕರೆಗಳಿಗೆ ಮಿತಿಯೇ ಇರಲಿಲ್ಲ. ಒಟ್ಟಿನಲ್ಲಿ ನನ್ನನ್ನು ಕವಯತ್ರಿಯ ಪಟ್ಟಕ್ಕೇರಿಸಿದ ಈ ಗೀತೆಯಿಂದಾಗಿ ಮುಂದೆ ಕವಿಗೋಷ್ಠಿಗಳಿಗೆ ನನಗೆ ವಿಪುಲ ಆಹ್ವಾನಗಳು ಬರತೊಡಗಿದುವು. ಈ ಗೀತೆಯಿಂದ ತೊಡಗಿದ ನನ್ನ ಭಾವಗಾನ ಯಾತ್ರೆ ಮುಂದೆ ಹತ್ತಕ್ಕೂ ಮಿಕ್ಕು ಭಾವಗಾನ ಗೀತೆಗಳನ್ನು ಆಕಾಶವಾಣಿಗಾಗಿ ಬರೆಯುವ ಮೂಲಕ ನಿರಂತರ ಸಾಗಿತು.

 “ಹಕ್ಕಿಗಳು ಹಾರಿದವೆ” ಅನ್ನುವ ಈ ಗೀತೆ ಕ್ರಮೇಣ ನನ್ನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಈ ವಸ್ತುವನ್ನು ಒಂದು ರೂಪಕವಾಗಿ ಹೇಗೆ ಬೆಳೆಸಬಹುದೆಂದು ನಾನು ಹಗಲಿರುಳೂ ಯೋಚಿಸತೊಡಗಿದೆ. ಮಾಡಬೇಕೆಂಬ ಹಠವಿದ್ದರೆ, ಆ ಕುರಿತೇ ಬಹಳಷ್ಟು ಚಿಂತಿಸಿದರೆ ಖಂಡಿತವಾಗಿ ಒಂದು ದಾರಿ ಹೊಳೆದೇ ಹೊಳೆಯುತ್ತದೆ ಅನ್ನುವುದಕ್ಕೆ ಸಾಕ್ಷಿಯಾಗಿ, ಹದಿಹರೆಯದ ಒಲವು ತನ್ನೆಲ್ಲ ಹುಡುಗಾಟಿಕೆ, ದೈಹಿಕ ಆಕರ್ಷಣೆ, ಅಪ್ರಬುದ್ಧತೆಗಳನ್ನು ಕಳೆದು ಜೀವನಸಂಧ್ಯೆಯ ಕಾಲದಲ್ಲಿ ಮಾಗಿ ದೈವೀಕ ಪ್ರೇಮವಾಗಿ ಸಾಗುವ ಒಂದು ಕಥಾನಕವಾಗಿ ಅದು ನನ್ನೊಳಗೆ ಮೊಳೆತು”ಒಲವಿನ ಪಯಣ”ವೆಂಬ ರೂಪಕವಾಗಿ ಜನ್ಮ ತಾಳಿತು.

 “ಒಲವಿನ ಪಯಣ”ವೆಂಬ ಸಂಗೀತ ರೂಪಕಕ್ಕಾಗಿ ನಾನು ಮತ್ತೆ ಏಳು ಹಾಡುಗಳನ್ನು ಬರೆದೆ. ಪ್ರಪಂಚಂ ಅವರು ಸಂಗೀತ ಸಂಯೋಜಿಸಿದ ಈ ರೂಪಕದ ಎರಡು ಹಾಡುಗಳನ್ನು ತಮ್ಮದೇ ಸಂಗೀತಸಂಯೋಜನೆಯಲ್ಲಿ ವೆಂಕಟೇಶ ಗೋಡಖಿಂಡಿಯವರು ಹಾಡಿದ್ದರು. “ಮನದ ಒಳಗೆ ಅವನು ಇರಲು ಇವನ ಜೊತೆಗೆ ಮದುವೆ”, ಹಾಗೂ “ಕಾಯಬೇಕು ಇನ್ನು ಎಲ್ಲಿ ವರೆಗೆ” ಎಂಬ ನನ್ನ ಈ ಎರಡು ಹಾಡುಗಳನ್ನು ಗೋಡಖಿಂಡಿಯವರು ಹಾಡಿದಾಗ ಧನ್ಯತೆಯ ಭಾವ. ಮಂಗಳೂರಿಗೆ ವರ್ಗವಾಗಿ ಬರುವ ಮೊದಲು ವಂದನಾ ಎಂಬ ಭಕ್ತಿಗೀತೆಗಳ ಕಾರ್ಯಕ್ರಮದಲ್ಲಿ ಅವರು ಹಾಡಿದ್ದ “ವೀರ ಹನುಮ ಬಲು ಪರಾಕ್ರಮ’, “ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ’, “ಅರವಿಂದಾಲಯೇ ತಾಯೆ” ಮುಂತಾದ ಹಾಡುಗಳನ್ನು ಕೇಳುತ್ತಾ, ಪ್ರಸಾರಿಸುತ್ತಾ ಪರವಶಳಾಗುತ್ತಿದ್ದ ನಾನು, ಅಂಥ ಆ ದೈವೀಕ ಗಾಯಕ ನನ್ನ ಹಾಡುಗಳನ್ನು ಹಾಡಿದಾಗ ಅನುಭವಿಸಿದ ಆನಂದಕ್ಕೆ ಪಾರವೇ ಇರಲಿಲ್ಲ.

 ಗೆಳತಿ ಹೇಳೇ ಗೆಳತಿ, ನೀನಿರದ ಈ ಹೊತ್ತು, ಮತ್ತೆ ಮತ್ತೆ ಮೂಡುವುದು, ನಗುವಾ ಕಂದನ ತಂದೆ ನನಗೆ, ಕಾಡದಿರು ಕಾಡದಿರು ಮರೆತ ಹಳೆ ಒಲವೇ ಮುಂತಾದ ಹಾಡುಗಳನ್ನು ಶ್ರೀರಾಂ ಗೋಪಾಲನ್ ನಾಯರ್, ಸುಮಾ ಭಟ್, ವಸುಧಾ ಹೃದಯಂಗಮವಾಗಿ ಅನುಭವಿಸಿ ಹಾಡಿದ್ದರು. ಆ ಒಂದೊಂದೂ ಹಾಡುಗಳು ಧ್ವನಿ ಮುದ್ರಿತವಾಗುತ್ತಿದ್ದಂತೆಯೆ ನಾನು ವಿಶಿಷ್ಟವಾದ ಅನುಭೂತಿಯನ್ನು ಪಡೆಯುತ್ತಿದ್ದೆ. ಈಗ ಈ ಕಲಾವಿದರೆಲ್ಲ ಚಲನಚಿತ್ರ ರಂಗದ ತಾರೆಯರಾಗಿದ್ದಾರೆ. ಶ್ರೀರಾಂ ಗೋಪಾಲನ್ ನಾಯರ್ ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ, ಪ್ರಶಸ್ತಿ ವಿಜೇತ ಗಾಯಕರಾಗಿದ್ದಾರೆ. ಸುಮಾ ಭಟ್ ಸುಮಾ ಶಾಸ್ತ್ರಿಯಾಗಿ ಕನ್ನಡ ಚಲನ ಚಿತ್ರಗಳ ಗಾಯಕಿಯಾಗಿದ್ದಾರೆ. ವಸುಧಾ ಅವರು ಎಂ.ಎಸ್.ಗಿರಿಧರ್ ಅವರ ಕೈ ಹಿಡಿದು ಬೆಂಗಳೂರಿನಲ್ಲಿ ಬಹು ಬೇಡಿಕೆಯ ದೂರದರ್ಶನ ಕಲಾವಿದೆಯಾಗಿದ್ದಾರೆ. ವಾದ್ಯವೃಂದದಲ್ಲಿ ಸರ್ವಶ್ರೀ ಟಿ.ಜಿ.ಗೋಪಾಲಕೃಷ್ಣನ್ ಹಾಗೂ ಟಿ.ಎಚ್.ಸುಬ್ರಹ್ಮಣ್ಯಂ – ವಯೊಲಿನ್, ಕೆ.ವಿ.ಕೃಷ್ಣ – ವೀಣೆ, ರಫೀಕ್ ಖಾನ್ – ಸಿತಾರ್, ಪಿ.ಬಾಲಕೃಷ್ಣ ತಂತ್ರಿ, ಪ್ರಪಂಚಂ ಹಾಗೂ ಗೋಡಖಿಂಡಿಯವರು ಕೊಳಲು, ಮೈಸೂರು ಎಂ.ಆರ್.ಸಾಯಿನಾಥ್ – ತಬ್ಲಾ ಹಾಗೂ ಧೋಲಕ್, ಎಂ.ಗುರುರಾಜ್ – ಘಟ,ಶ್ರೀನಾಥ್ ಮರಾಠೆ – ಶ್ರುತಿ ಸಹಕಾರ ನೀಡಿದ್ದರು. ಈ ಹಾಡುಗಳ ಧ್ವನಿಮುದ್ರಣದ ಕಾಲದಲ್ಲಿ ಈ ಎಲ್ಲ ಕಲಾವಿದರೊಡನೆ ನಾನು ಸ್ಟುಡಿಯೋದಲ್ಲಿ ಕಳೆದ ಗಂಟೆಗಳಿಗೆ ಲೆಕ್ಕವಿಲ್ಲ. ನಾಟಕ ಹಾಗೂ ರೂಪಕ ವಿಭಾಗದ ರಮಾ.ಎಸ್.ಹಿರೇಮಠ್ ಅವರ ಪ್ರೋತ್ಸಾಹ, ಧ್ವನಿಮುದ್ರಣ ಹಾಗೂ ನಿರ್ಮಾಣದಲ್ಲಿ ಸಹಕರಿಸಿದ ತ್ರಿಚ್ಚಿ. ಕೆ. ಆರ್. ಕುಮಾರ್ ಅವರ ನೆರವಿನ ಹಸ್ತಗಳನ್ನು ಮರೆಯುವಂತೆಯೇ ಇಲ್ಲ. ಗಂಟೆಗಟ್ಟಲೆ ನಿಂತು ಸೋತು ಹೋದ ಪಾದಗಳನ್ನು ಮನೆಗೆ ಬಂದು ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ಮುಳುಗಿಸಿ ಕುಳಿತುಕೊಳ್ಳುತ್ತಿದ್ದ ನಾನು ಆ ದಿನಗಳಲ್ಲಿ ನನ್ನ ವೈಯಕ್ತಿಕ ನೋವು, ನಲಿವುಗಳನ್ನು ಮರೆತೇ ಬಿಟ್ಟಿದ್ದೆ. ಹಲವಾರು ವಾರಗಳ ಪ್ರಯತ್ನದ ಫಲವಾಗಿ ಒಂದು ಸುಂದರ ಕಾರ್ಯಕ್ರಮ ರೂಪುಗೊಳ್ಳುತ್ತದೆ.ಆ ಕಾರ್ಯಕ್ರಮದ ಸಾಕ್ಷಾತ್ಕಾರದಲ್ಲಿ ಹತ್ತಾರು ಜನರ ಪ್ರಾಮಾಣಿಕ ಪ್ರಯತ್ನಗಳಿರುತ್ತವೆ. ತಾಂತ್ರಿಕ ವರ್ಗದವರ ನೆರವು ಕೂಡಾ ಕೂಡಿರುತ್ತದೆ. ಹೀಗೆ ಸಾಂಘಿಕವಾಗಿ ದುಡಿದು ನಿರ್ಮಿಸುವ ಒಂದೊಂದು ಕಾರ್ಯಕ್ರಮ ಜನ್ಮ ತಾಳುವಾಗಲೂ ಅದು ಬಹಳಷ್ಟು ಪಾಠಗಳನ್ನು ಕಲಿಸುತ್ತದೆ, ಸಹನೆ, ತಾಳ್ಮೆಗಳನ್ನು ರೂಢಿಸುತ್ತದೆ. “ಒಲವಿನ ಪಯಣ”ರೂಪಕ ನನ್ನ ವೃತ್ತಿ ಜೀವನದಲ್ಲೇ ಮರೆಯಲಾಗದ ನಿರ್ಮಿತಿ. ಅದಕ್ಕೆ ಬಂದ ಪ್ರತಿಕ್ರಿಯೆಗಳು, ಜನರ ಚೇತೋಹಾರೀ ಮಾತುಗಳು, ಪತ್ರಗಳ ರಾಶಿ ಇವನ್ನೆಲ್ಲಾ ಹೇಗೆ ಮರೆಯಲಿ?ಈಗಲೂ ಈ ರೂಪಕವನ್ನು ಕೇಳಿದಾಗಲೆಲ್ಲಾ ಇದನ್ನು ನಾನು ಬರೆದೆನೆ? ನಾನು ನಿರ್ಮಿಸಿದೆನೆ? ಎಂದು ಸೋಜಿಗವಾಗುತ್ತದೆ. ಈ ರೂಪಕವನ್ನು ಪ್ರಸಾರದಲ್ಲಿ ಕೇಳಿದ ಬಳಿಕ ಗೋಡಖಿಂಡಿಯವರು ಮೂವತ್ತೈದರ ವಯಸ್ಸಿಗೇ ಎಷ್ಟೊಂದು ಜೀವನಾನುಭವ ಪಡೆದಿದ್ದೀರಿ ಎಂದು ಮುಕ್ತಕಂಠದಿಂದ ನನ್ನನ್ನು ಪ್ರಶಂಸಿಸಿದರು. ಅವರ ಮಗ ಖ್ಯಾತ ಬಾನ್ಸುರಿ ವಾದಕ ಶ್ರೀ ಪ್ರವೀಣ್ ಗೋಡಖಿಂಡಿಯವರು ಮಂಗಳೂರಿಗೆ ಬಂದಿದ್ದಾಗ ಈ ರೂಪಕವನ್ನು ಅವರಿಗೆ ಕೇಳಿಸಿದ್ದರು ಕೂಡಾ.

 ಹೀಗೆ “ಹಕ್ಕಿಗಳು ಹಾರಿದವೆ ಗೂಡಿಂದಲಿ” ಎಂಬ ನನ್ನ ಭಾವಗಾನದ ಒಂದು ಎಳೆಯನ್ನು ಹಿಡಿದು ಒಂದು ರೂಪಕವಾಗಿ ಬೆಳೆಯಿಸಿದ ಈ ಕಥಾನಕದಲ್ಲಿ ಯಾವುದೋ ಗಂಡು,ಯಾವುದೋ ಹೆಣ್ಣು ಒಗೆತನದ ಒಮ್ಮುಖದಲ್ಲಿ ಕೂಡಿ ಬಾಳಬಳ್ಳಿಯನ್ನು ಹಬ್ಬಿಸಿದ ವಿಸ್ಮಯವನ್ನು, ಸ್ವಾರ್ಥಪರವಾದ ಪ್ರಣಯದ ತಿಳಿಗೇಡಿತನದ ಒಗರು, ಹುಳಿಗಳು ಮಾಗುತ್ತ ಹೋದಂತೆ ಆತ್ಮದ ಆಳಕ್ಕಿಳಿದು ಸಾರ್ಥಕ್ಯ ಹಾಗೂ ಪೂರ್ಣತೆಯ ಪ್ರಜ್ಞೆಯನ್ನು ಹುಟ್ಟಿಸಿದ ಪವಾಡವನ್ನು, ಒಂದು ಜೀವ ಇನ್ನೊಂದು ಜೀವದೊಡನೆ ಸುಖದು:ಖವೆರಡರಲ್ಲೂ ಸಾಮರಸ್ಯವನ್ನು ತೋರುತ್ತಾ ಸಮಗ್ರವಾಗಿ ಹೊಂದಿಕೊಂಡ ಅದ್ಭುತವನ್ನು ನಾನು ಚಿತ್ರಿಸಿದೆ. “ಈ ಸಾಮರಸ್ಯದಲ್ಲೇ ಅಲ್ಲವೇ ನಿಜವಾದ ಒಲವಿನ ಉದಯ? ಇದೇ ಅಲ್ಲವೇ ಸುಮಧುರ ದಾಂಪತ್ಯದ ಫಲಶ್ರುತಿ? ಪ್ರಿಯ ಕೇಳುಗ, ಒಲವಿನ ಪಯಣ ಇಲ್ಲಿಗೆ ಕೊನೆಗೊಂಡಿಲ್ಲ. ಅದು ಕೇವಲ ಆರಂಭವಾಗಿದೆ”ಎಂದು ಹೇಳುತ್ತಾ ರೂಪಕವನ್ನು ಕೊನೆಗೊಳಿಸಿದೆ. ಹೀಗೆ ಕೊನೆಯೇ ಅರಂಭವೆಂದು ಹೇಳುವ ಒಂದು ಜೀವನದರ್ಶನವನ್ನು ನನ್ನ ಹೆತ್ತವರ ವೃದ್ಧಾಪ್ಯದ ಪರಸ್ಪರ ಅವಲಂಬಿತ ಜೀವನ ನನಗೆ ತಂದು ಕೊಟ್ಟಿತು, ನನ್ನಿಂದ ಆ ರೂಪಕವನ್ನು ಅದು ಬರೆಯಿಸಿತು, ನಿರ್ಮಾಣ ಮಾಡಿಸಿತು. ನಾನು ಈ ಒಲವಿನ ಪಯಣದ ಹುಟ್ಟಿಗೆ ಕೇವಲ ನಿಮಿತ್ತ ಮಾತ್ರಳಾಗಿದ್ದೆ ಎಂದು ನನಗೀಗ ಅನಿಸುತ್ತಿದೆ.

ಮುಂದಿನ ವಾರಕ್ಕೆ ►►

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.