spot_imgspot_img
spot_img

ಸಂಗೀತಜ್ಞಾನಮು ಭಕ್ತಿ ವಿನಾ

SRInnerLogoಎಲ್ಲಿ ಕೆಲಸ ಮಾಡ್ತಾ ಇದ್ದೀರಿ” ಎನ್ನುವ ಪ್ರಶ್ನೆಗೆ “ಆಕಾಶವಾಣಿಯಲ್ಲಿ” ಅಂತ ಉತ್ತರ ಕೊಟ್ಟರೆ ಸಾಕು “ನೀವು ಹಾಡುಗಾರರಾ”? ಎಂಬ ಪ್ರಶ್ನೆ ಹಿಂಬಾಲಿಸಿ ಬರುವುದು ಸಾಮಾನ್ಯವಾಗಿ ನನ್ನ ವೃತ್ತಿ ಜೀವನದ ಅನುಭವದ ಮಾತು. ಆಕಾಶವಾಣಿ ಅಂದರೆ ಹಾಡುಗಾರರಾಗಿರಬೇಕು ಎನ್ನುವುದು ಜನರ ಸಾಮಾನ್ಯ ತಿಳುವಳಿಕೆ. ಆದರೆ ಸಂಗೀತವೂ ಒಂದು ಶಾಸ್ತ್ರ, ಖುಷಿ ಬಂದಂತೆ ಹಾಡುವಂಥದಲ್ಲ, ಅದಕ್ಕೆ ತಾಳ, ಶ್ರುತಿಗಳ ಲೆಕ್ಕಾಚಾರ ಇದೆ ಅನ್ನುವ ಸಂಗತಿ ನನಗೆ ತಿಳಿದದ್ದು ಆಕಾಶವಾಣಿಗೆ ಸೇರಿದ ಮೇಲೆಯೇ. ಅಲ್ಲದೆ ತನ್ನಷ್ಟಕ್ಕೆ ಗುನುಗಿಕೊಂಡು ಹಾಡುವ ಹಾಡಿಗೂ ಆಕಾಶವಾಣಿಯಲ್ಲಿ ಪಕ್ಕವಾದ್ಯದವರೊಡನೆ ಹಾಡುವ ಹಾಡಿಗೂ ನಡುವೆ ಎಷ್ಟೆಲ್ಲ ಸಾಧನೆಯ ಅಗತ್ಯವಿದೆ ಎನ್ನುವುದೂ ತಿಳಿದಿರಲಿಲ್ಲ.

ಮಾತ್ರವಲ್ಲ ಆಕಾಶವಾಣಿಯ ಮಟ್ಟಿಗೆ ನನ್ನ ಸಂಗೀತದ ಬಗೆಗಿರುವ ಜ್ಞಾನ ಏನೇನೂ ಸಾಲದು ಅನ್ನುವುದು ನನಗೆ ಹಲವಾರು ಸಂದರ್ಭಗಳಲ್ಲಿ ತಿಳಿಯುತ್ತಾ ಬಂದಿತು, ಆ ಕೆಲವು ನೆನಪುಗಳನ್ನು ಈಗ ಸಂಕಲಿಸುತ್ತಾ ಹೋಗುತ್ತೇನೆ. ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ಯಾವುದೋ ರೂಪಕದ ನಿರ್ಮಾಣಕ್ಕಾಗಿ ಆ ಕಾರ್ಯಕ್ರಮದ ನಿರ್ಮಾಪಕರಿಗೆ ಕೆಲವು ತ್ರಿಪದಿಗಳು ಬೇಕಾದವು. ಅವರು ನಿಲಯನಿರ್ದೇಶಕರಲ್ಲಿ ಬಂದು ಆ ತ್ರಿಪದಿಗಳನ್ನು ಹಾಡಿಸಲು ಒಂದು ಹೆಣ್ಣುಧ್ವನಿಯನ್ನು ಹೊರಗಡೆಯಿಂದ ಬುಕ್ ಮಾಡಿಸಲು ಅನುಮತಿ ಕೋರಿದರು. ಆಗ ಬಜೆಟ್ ನ ಕೊರತೆಯಿದ್ದ ಕಾಲ. ನಿರ್ದೇಶಕರು “ಆ ಹೊಸ ಹುಡುಗಿ ಕೈಲಿ ಹಾಡಿಸಿ ಬಿಡಪ್ಪಾ, ಮೂರ್ನಾಲ್ಕು ತ್ರಿಪದಿಗಳಿಗಾಗಿ ಮತ್ತೆ ಬುಕಿಂಗ್ ಯಾಕೆ” ಅಂದುಬಿಟ್ರು. ಅಲ್ಲದೆ ನನ್ನನ್ನು ಕರೆದು, “ನೋಡಮ್ಮ,ತ್ರಿಪದಿಗಳನ್ನು ರಿಸಾಯ್ಟ್ ಮಾಡಿದರೆ ಸಾಕು” ಅಂತ ಹೇಳಿದ್ರು. ನನಗೆ ಈ ಹಾಡುವುದು ಮತ್ತು ರಿಸಾಯ್ಟ್ ಮಾಡುವುದರ ನಡುವಣ ದೊಡ್ಡ ವ್ಯತ್ಯಾಸವೇನೆಂದು ಗೊತ್ತಿರಲಿಲ್ಲ. ಸ್ಟುಡಿಯೋದೊಳಗೆ ಹೋಗಿ ಸ್ಕ್ರಿಪ್ಟ್ ಹಿಡಿದು ಕುಳಿತೆ. ಧ್ವನಿ ಮುದ್ರಿಸಲು ಸಂಗೀತಗಾರರು ಬಂದರು. ಜಗನ್ಮೋಹನ ರಾವ್ ವಯೊಲಿನ್ ಹಾಗೂ ರಾಮ್ ಜಾಧವ್ ತಬ್ಲಾ ನುಡಿಸಿದರು. ನಾನೂ ತಕ್ಕ ಮಟ್ಟಿಗೆ ಚೆನ್ನಾಗಿಯೇ ಹಾಡಿದೆ. ಆ ರೂಪಕ ಪ್ರಸಾರವಾದ ಮರುದಿನ ನಿಲಯನಿರ್ದೇಶಕರು ನನ್ನನ್ನು ತನ್ನ ಚೇಂಬರಿಗೆ ಕರೆಸಿದಾಗ, “ಹಾಡಿದ್ದು ಚೆನ್ನಾಗಿತ್ತು” ಎಂದು ಹೇಳಲು ಕರೆಸಿದ್ದಾರೆಂದು ಸಂತೋಷದಿಂದ ಹೋಗಿದ್ದ ನನಗೆ “ನೋಡಮ್ಮಾ, ಧ್ವನಿ ಪರೀಕ್ಷೆ ಆಗದೆ ವಾದ್ಯಗಳ ಜೊತೆ ಹಾಡಬಾರದು ಅಂತ ಗೊತ್ತಿಲ್ವೇ? ರಿಸಾಯ್ಟ್ ಮಾಡು ಅಂತ ಹೇಳಿದ್ರೆ ವಾದ್ಯಗಳ ಜೊತೆ ಹಾಡಿಬಿಟ್ಟಿದ್ದೀಯಲ್ಲ” ಅಂತ ಜೋರು ಮಾಡಿದರು. ಗದರಿದರೂ ಪರವಾಗಿಲ್ಲ ಹೊಸ ಒಂದು ವಿಷಯ ತಿಳಿಯಿತಲ್ಲ ಅಂತ ಸಮಾಧಾನ ಪಟ್ಟುಕೊಂಡೆ, ಸಂಗೀತದ ಧ್ವನಿ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿನಹ ವಾದ್ಯಗಳ ಜೊತೆ ಹಾಡುವಂತಿಲ್ಲ ಅಂತ.

ಮುಂದೆ ನಾನೇ ಬರೆದು ನಿರ್ಮಿಸುವ ಎಷ್ಟೋ ರೂಪಕಗಳಿಗಾಗಿ ಹಾಡಲು ಅಂಗೀಕೃತ ಕಲಾವಿದರಿಗಾಗಿ ಕಾಯುವ, ದುಂಬಾಲು ಬೀಳುವ ಕಷ್ಟ ನೆನೆದು ನಾನೂ ಯಾಕೆ ಧ್ವನಿ ಪರೀಕ್ಷೆ ಮಾಡಿಸಿಕೊಳ್ಳಬಾರದು ಎಂದು ಮನಸ್ಸಿನಲ್ಲಿ ತೋಚಿದ್ದೇ ನಾನು ಲಘುಸಂಗೀತ ವಿಭಾಗಕ್ಕೆ ಒಂದು ಅರ್ಜಿ ಹಾಕಿಯೇ ಬಿಟ್ಟೆ. ಗ್ರಹಚಾರಕ್ಕೆ ಧ್ವನಿ ಪರೀಕ್ಷೆಯಲ್ಲಿ ತೇರ್ಗಡೆಯೂ ಆಗಿ ಬಿಟ್ಟೆ. ತೇರ್ಗಡೆ ಆದ ಮೇಲೆ ಅವರು ಹಾಡುಗಳ ಧ್ವನಿಮುದ್ರಣಕ್ಕೆ ಕರೆದೇ ಕರೆಯುತ್ತಾರೆಂದು ಅದಕ್ಕೂ ಮುನ್ನವೇ ಒಂದಷ್ಟು ಸಂಗೀತ ಕಲಿಯುವ ಅಂತ ನಮ್ಮ ನಿಲಯದ ಕಲಾವಿದರಾದ ಶ್ರೀನಾಥ್ ಮರಾಠೆಯವರ ಮನೆಗೆ ಒಂದು ಶುಭ ದಿನ ಅಕ್ಕಿ, ತೆಂಗಿನಕಾಯಿ, ಹಣ್ಣು ಸಮೇತ ಹೋಗಿ ಶಾಸ್ತ್ರೋಕ್ತವಾಗಿ ತರಗತಿ ಆರಂಭಿಸಿಕೊಂಡೆ. ವಾರಕ್ಕೆ ಮೂರೋ ನಾಲ್ಕೋ ತರಗತಿಗಳು, ಅವರ ಮನೆಗೆ ಹೋಗುವ ದಾರಿ ಬಹಳ ದುರ್ಗಮವಾದದ್ದು, ಗುಡ್ಡದ ದಾರಿಯಲ್ಲಿ ಹತ್ತಿ ಇಳಿಯುವ ಬಹಳಷ್ಟು ಏರಿಳಿತಗಳು. ಅಂತೂ ಕಷ್ಟ ಪಟ್ಟು ಸುಮಾರು ಎರಡು ತಿಂಗಳ ಸಂಗೀತಾಭ್ಯಾಸ ಸಾಗುತ್ತಿದ್ದಂತೆಯೇ ನನ್ನ ಮೊದಲ ಭಾವಗೀತಾ ಹಾಡುಗಳ ಧ್ವನಿಮುದ್ರಣಕ್ಕೆ ಹಾಜರಾಗುವಂತೆ ನನಗೆ ಕರೆ ಬಂತು. ಹೇಗೂ ಗುರುಗಳೇ ತಂಬೂರ ಹಿಡಿದು ಕುಳಿತ ಕಾರಣ ಪಕ್ಕ ವಾದ್ಯದವರೊಡನೆ ಏಗಿ ಹೇಗೋ ಎರಡು ಹಾಡುಗಳನ್ನು ಹಾಡಿ ಮುಗಿಸಿದೆ. ಆ ದಿನಗಳಲ್ಲೇ ತಮ್ಮ ಮೂತ್ರಕೋಶದಲ್ಲಿನ ಕಲ್ಲನ್ನು ತೆಗೆಸುವ ಶಸ್ತ್ರ ಚಿಕಿತ್ಸೆಗಾಗಿ ನನ್ನ ಅಮ್ಮ ನಮ್ಮಲ್ಲಿಗೆ ಬಂದರು. ನನ್ನ ಹಾಡು ಪ್ರಸಾರವಾಗುವ ದಿನವೇ ಅವರ ಶಸ್ತ್ರಚಿಕಿತ್ಸೆ ನಡೆದ ಕಾರಣ ನಾನದನ್ನು ಕೇಳಲಾಗಿರಲೂ ಇಲ್ಲ. ಹೊಟ್ಟೆ ಕೊಯ್ದು ನಡೆಸಿದ ಆ ಶಸ್ತ್ರ ಚಿಕಿತ್ಸೆಯ ಬಳಿಕ ನನ್ನ ಅಮ್ಮ ಆರೈಕೆಗಾಗಿ ಎರಡು ತಿಂಗಳು ನಮ್ಮಲ್ಲೇ ಉಳಿದರು. ಅವರೊಡನೆ ವಯಸ್ಸಾದ ನನ್ನ ಅಪ್ಪಯ್ಯನೂ ಇದ್ದ ಕಾರಣ ಅವರಿಬ್ಬರ ಆರೈಕೆಯ ಹೆಚ್ಚಿನ ಹೊಣೆಗಾರಿಕೆಯಿಂದ ನನಗೆ ಮರಾಠೆಯವರ ಮನೆಗೆ ಸಂಗೀತ ಕ್ಲಾಸಿಗೆ ಹೋಗಲಾಗಲಿಲ್ಲ. ಅವರು ಆಗಾಗ ಈ ಬಗ್ಗೆ ನನ್ನಲ್ಲಿ ಕೇಳುತ್ತಾ ಕ್ರಮೇಣ ಬೇಸರಬಂದು ಕೇಳುವುದನ್ನೇ ಬಿಟ್ಟರು.

ಮತ್ತೊಮ್ಮೆ ನನಗೆ ಹಾಡುಗಳ ಧ್ವನಿಮುದ್ರಣಕ್ಕೆ ವಿಭಾಗದಿಂದ ಕರೆ ಬಂತು. ಹಿರಿಯ ಸಹೋದ್ಯೋಗೀ ಮಿತ್ರರಾದ ಶಂಕರ ಭಟ್ಟರ ಸಹಾಯ ಪಡೆದು ಎರಡು ಹಾಡುಗಳನ್ನು ಕಲಿತು ಧ್ವನಿ ಮುದ್ರಣಕ್ಕೆ ಹೋಗಿ ಕುಳಿತೆ. ತಂಬೂರ ಹಿಡಿದು ಕುಳಿತ ಮರಾಠೆಯವರು ನನ್ನನ್ನು ನೋಡುತ್ತಾ ನಿಮ್ಮ ಶ್ರುತಿ ಎಷ್ಟು ಅಂತ ಕೇಳಿದರು. ಆ ಪ್ರಶ್ನೆಯಲ್ಲೇ ನಿನಗೆ ಸಂಗೀತ ಎಷ್ಟು ಗೊತ್ತು ಅನ್ನುವ ಧ್ವನಿ ನನಗೆ ಕೇಳಿಸಿದಂತಾಗಿ ಅಲ್ಲಿಂದಲೇ ಕೈಕಾಲು ಅದುರಲು ಆರಂಭವಾಗಿ ಹಲವಾರು ತಪ್ಪುಗಳಾದುವು. ನಿಮ್ಮನ್ನು ಧ್ವನಿ ಮುದ್ರಿಸಲು ನಿಮ್ಮನ್ನು ಪಾಸು ಮಾಡಿದವರೇ ಬರಬೇಕೇನೋ ಎಂದು ಮರಾಠೆಯವರು ಹೇಳಿದ ಮಾತಿಗೆ ಪಕ್ಕವಾದ್ಯದ ಕಲಾವಿದರೆಲ್ಲಾ ಮುಸಿ ಮುಸಿ ನಕ್ಕರು. ನಾನು ಅಂದುಕೊಂಡೆ, ನನ್ನದಲ್ಲದ ಕ್ಷೇತ್ರದೊಳಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು ನನ್ನ ತಪ್ಪು, ಈ ಹಾಡುಗಾರಿಕೆಯ ಕೆಲಸ ನನಗೆ ಹೇಳಿಸಿದ್ದಲ್ಲ ಅಂತ ನಾನು ಅಂದೇ ತೀರ್ಮಾನಿಸಿದೆ. ಅಪಮಾನವಾದರೆ ಒಳಿತು ಅನ್ನುವ ದಾಸರ ಕೀರ್ತನೆಯಂತೆ ಸಂಗೀತದ ಬಗ್ಗೆ ಇನ್ನು ಮುಂದೆ ನನ್ನನ್ನು ಯಾರೇ ಆಗಲಿ ಆಡಿಕೊಂಡು ನಗದಂತೆ ನನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿದೆ. ನನ್ನ ಹಾಡುವ ಉತ್ಸಾಹ ಅಲ್ಲಿಗೇ ಕಮರಿ ಹೋಯಿತು.

ಆಕಾಶವಾಣಿಗೆ ನಾನು ಉದ್ಯೋಗಕ್ಕೆ ಸೇರುವಾಗ ನನಗೆ ಎಳ್ಳಷ್ಟೂ ಸಂಗೀತಜ್ಞಾನ ಇರಲಿಲ್ಲ. ಮಾತ್ರವಲ್ಲ, ನನಗೆ ಆ ಜ್ಞಾನವಿಲ್ಲ ಅನ್ನುವ ಸಂಗತಿಯೂ ನನಗೆ ಗೊತ್ತಿರಲಿಲ್ಲ. ಮನೆಯಲ್ಲಿ ಸಂಜೆಯ ಹೊತ್ತು ಭಜನೆ ಹಾಡುವ ರೂಢಿ ಇದ್ದುದರಿಂದ ಸಾಂಪ್ರದಾಯಿಕ ಶೈಲಿಯ ಕೆಲವು ಭಜನೆಗಳನ್ನು ಬಿಟ್ಟರೆ ಬೇರಾವ ಹಾಡುಗಳೂ ನನಗೆ ಬರುತ್ತಿರಲಿಲ್ಲ. ಅಣ್ಣಂದಿರು ಪಟ್ಟಣದಲ್ಲಿ ಕಾಲೇಜು ಕಲಿಯುತ್ತಿದ್ದಾಗ ಅವರು ಅಲ್ಲಿ ನೋಡಿದ ಚಲನಚಿತ್ರಗಳ ಗೀತೆಗಳ ಪುಸ್ತಿಕೆಯನ್ನು ತರುತ್ತಿದ್ದ ಕಾರಣ ನನಗೂ ಅವು ಅಲ್ಪಸ್ವಲ್ಪ ಕರಗತವಾಗಿದ್ದುವು.

SRK 1 ಆದರೆ ಆಕಾಶವಾಣಿಗೆ ಸೇರಿದ ಬಳಿಕ ದಿನನಿತ್ಯ ಪ್ರಸಾರಿಸಬೇಕಾಗಿ ಬಂದ ಸಂಗೀತಕಚೇರಿ, ಸಂಗೀತಸುಧಾ, ವಂದನಾ ಮುಂತಾದ ಕಾರ್ಯಕ್ರಮಗಳಿಂದಾಗಿ ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ತಿಳಿದಿರಲೇ ಬೇಕಾದ ಅನಿವಾರ್ಯತೆ ಉಂಟಾಯಿತು. ಸಾಲದ್ದಕ್ಕೆ ಸೇರಿದ ಹೊಸತರಲ್ಲಿ “ರಾಗಮಾಲಿಕೆ ರಾಗದಲ್ಲಿ ಇಂಥವರ ರಚನೆ” ಎಂದು ತ್ಯಾಗರಾಜರ ಕೃತಿಯೊಂದನ್ನು ಉದ್ಘೋಷಿಸಿ ಎಡವಟ್ಟು ಮಾಡಿಕೊಂಡಿದ್ದೆ. ರಾಗಮಾಲಿಕೆ ಎಂದರೆ ರಾಗಗಳ ಮಾಲಿಕೆಯೇ ಹೊರತು ಒಂದು ನಿರ್ದಿಷ್ಟ ರಾಗವಲ್ಲ ಎಂಬ ಸಂಗತಿ ನನಗೆ ಗೊತ್ತಿರಲಿಲ್ಲ. ಮರುದಿನವೇ ಶ್ರೀಮತಿ ಮನೋರಮಾ ಭಟ್ ಅವರು ನಿಮ್ಮ ಉದ್ಘೋಷಕರಿಗೆ ಮೊದಲು ಸಂಗೀತ ಕಲಿಸಿ ಎಂದು ನಿಲಯಕ್ಕೆ ಕಾಗದ ಬರೆದಾಗಲೇ ನನಗೆ ನನ್ನ ತಪ್ಪು ಗೊತ್ತಾದದ್ದು. ಅವರು ಆ ಪತ್ರ ಬರೆದು ನನಗೆ ಬಹಳ ಉಪಕಾರ ಮಾಡಿದರು. ಯಾಕೆಂದರೆ ಸಂಗೀತದ ರಾಗ, ತಾಳಗಳ ಬಗ್ಗೆ ಅಲ್ಲಿಂದ ಮುಂದೆ ನಾನು ಸಾಕಷ್ಟು ಕಾಳಜಿ ವಹಿಸುವಂತೆ ಅವರ ಪತ್ರ ನನಗೆ ಎಚ್ಚರಿಕೆಯನ್ನು ನೀಡಿತು.

ನನಗೆ ಉದ್ಘೋಷಣೆಯ ಮೊದಲ ಪಾಠಗಳನ್ನು ಹೇಳಿಕೊಟ್ಟ ಗುರುಗಳಾದ ಶ್ರೀ ಕೆ. ಆರ್. ರೈಗಳು ಯಾವುದೇ ಸಂಗೀತದ ಕೃತಿ ಮುಕ್ತಾಯದ ಹಂತಕ್ಕೆ ಬಂತು ಎಂದು ತಿಳಿಯಬೇಕಾದರೆ “ಟಕಟಕ ಡಿಂ ಟಕಟಕ ಡಿಂ ಟಕಟಕ ಡಿಂ” ಎಂದು ಮೂರು ಬಾರಿ ಮೃದಂಗದಲ್ಲಿ ನುಡಿಸಿರಬೇಕು. ಆಗ ಮುಂದಿನ ಕೃತಿಯ ವಿವರಗಳನ್ನು ಉದ್ಘೋಷಿಸಲು ಸಿದ್ಧರಾಗಬೇಕು ಎಂದೂ ಕಿವಿಮಾತು ಹೇಳಿದ್ದರು. ಯಾವಾಗ, ಎಷ್ಟು ಹೊತ್ತಿಗೆ ಮುಂದಿನ ಕೃತಿಯ ವಿವರಗಳನ್ನು ಉದ್ಘೋಷಿಸಬೇಕೆಂದು ಬಕ ಪಕ್ಷಿಗಳಂತೆ ಕಾಯುವ ನಮಗೆ ಅದಕ್ಕಿಂತ ಹೆಚ್ಚಿನ ಸಂಗೀತಜ್ಞಾನದ ಅವಶ್ಯಕತೆ ಬೇಕಿಲ್ಲವೆಂದು ಆವರೂ ತಿಳಿದಿದ್ದರೇನೋ, ಅದನ್ನೇ ನನಗೂ ಪ್ರಾಮಾಣಿಕವಾಗಿ ಹೇಳಿಕೊಟ್ಟಿದ್ದರು. ವಂದನ ಅಥವಾ ಯಾವುದೇ ಭಕ್ತಿಗೀತೆಗಳ ಪ್ರಸಾರದ ಸಮಯದಲ್ಲಿ ಹಾಡುಗಳ ಕೊನೆಯಲ್ಲಿ ದಾಸರ, ಶರಣರ ಅಂಕಿತ ಬರುತ್ತದೆ. ಅದು ಬಂದ ಕೂಡಲೇ ಬೆನ್ನು ನೆಟ್ಟಗೆ ಮಾಡಿ ಮುಂದಿನ ಉದ್ಘೋಷಣೆಗೆ ಸಜ್ಜಾಗಬೇಕು ಎಂದವರು ಸ್ವಲ್ಪ ತಮಾಷೆ ಬೆರೆಸಿಯೇ ಹೇಳಿಕೊಟ್ಟಿದ್ದರೂ ಮುಂಜಾಗೃತೆಗಾಗಿ ನಾನು ಎಲ್ಲ ಟೇಪುಗಳನ್ನು ಹಿಂದೆ, ಮುಂದೆ ಓಡಿಸಿ ಆಯಾ ಕೃತಿಗಳು ಮುಗಿಯುವ ಹಂತಕ್ಕೆ ಬರುತ್ತಿದ್ದಂತೆಯೇ ಒಂದೊಂದು ಕಾಗದದ ಚೂರನ್ನು ಗುರುತಿಗಾಗಿ ಟೇಪಿನ ಸುರುಳಿಗೆ ಸಿಕ್ಕಿಸುತ್ತಿದ್ದೆ. ಕ್ರಮೇಣ ನನಗೆ ಈ ಸಂಗೀತದ ಪರಿಭಾಷೆ ಅರ್ಥವಾಗತೊಡಗಿತ್ತು. ಆರಂಭದ ವರ್ಣ, ದೀರ್ಘ ಕೃತಿಗಳಿದ್ದರೆ ಮೊದಲು ರಾಗಾಲಾಪನೆ, ಬಳಿಕ ಕೃತಿಯ ಪ್ರಸ್ತುತಿ, ಕೊನೆಯಲ್ಲಿ ತನಿಯಾವರ್ತನ, ಕಚೇರಿಯ ಕೊನೆಯಲ್ಲಿ ಭೈರವಿ ಇಲ್ಲವೇ ಸಿಂಧುಭೈರವಿ ರಾಗದ ಭಜನ್, ತಿರುಪ್ಪುಗಳ್ ಇಲ್ಲವೇ ಜಾವಳಿ – ಇದು ಕರ್ನಾಟಕ ಪದ್ಧತಿಯ ಸಂಗೀತ ಕಚೇರಿಯಲ್ಲಿ ನಡೆಯುವ ವಿಧಾನ. ಹಿಂದೂಸ್ತಾನೀ ಪದ್ಧತಿಯಲ್ಲಾದರೆ ಮೊದಲು ವಿಲಂಬಿತ್, ಬಳಿಕ ಧೃತಗತಿಯ ರಾಗಾಲಾಪನೆಗಳು – ಇವನ್ನೆಲ್ಲಾ ನಾನು ನನ್ನಷ್ಟಕ್ಕೇ ಅರ್ಥ ಮಾಡಿಕೊಂಡೆ.
ನಾನು ಸೇರಿದ ಹೊಸತರಲ್ಲಿ ದಕ್ಷಿಣವಲಯ ಸಂಗೀತಕಚೇರಿ ಎಂಬ ಒಂದು ಗಂಟೆಯ ಅವಧಿಯ ಕಾರ್ಯಕ್ರಮವು ಪ್ರತಿ ಶುಕ್ರವಾರ ರಾತ್ರಿ ಹತ್ತು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಪ್ರಸಾರವಾಗುತ್ತಿತ್ತು. ಆಗ ನಾವು ಕರ್ತವ್ಯದಲ್ಲಿರುವವರೇ ಆ ಕಲಾವಿದರ ಜನ್ಮವೃತ್ತಾಂತವನ್ನು ಆ ಟೇಪಿನಲ್ಲಿರುತ್ತಿದ್ದ ಇಂಗ್ಲಿಷ್ ಬರಹವನ್ನು ಅನುವಾದಿಸಿ ತಯಾರಿಸಿಟ್ಟುಕೊಳ್ಳಬೇಕಿತ್ತು. ಕರ್ನಾಟಕ ಸಂಗೀತಗಾರರ ಹೆಸರಿನ ಜೊತೆಗೆ ಅವರ ಊರಿನ ಹೆಸರುಗಳೂ (ಉದಾ: ಮಾವೆಲ್ಲಿಕ್ಕರ, ಪಾಲ್ಘಾಟ್, ಊತ್ತುಕ್ಕಾಡ್, ಪುದುಕೋಟೈ, ತಿರುವಿಳ, ತಿರುವೆಂಗಾಡು, ತಿರುವಾರೂರು ಇತ್ಯಾದಿ) ಇರುತ್ತಿದ್ದು ಅವನ್ನು ನಾನು ಸಂಜೆ ಸಂಗೀತಕಲಾವಿದರು ಕಚೇರಿಯಿಂದ ನಿರ್ಗಮಿಸುವ ಮೊದಲೇ ಅವರಲ್ಲಿ ಸರಿಯಾದ ಉಚ್ಚಾರ ಹೇಗೆಂದು ಕೇಳಿ ತಿಳಿದುಕೊಳ್ಳುತ್ತಿದ್ದೆ. ಕ್ರಮೇಣ ಎಲ್ಲರ ಮನೆಗೂ ದೂರವಾಣಿ ಸಂಪರ್ಕವಾಯಿತು, ಮೊಬೈಲೂ ಬಂದ ಬಳಿಕ ಅತಿ ಸಣ್ಣ ರಾಗ, ತಾಳಗಳ ವಿವರವನ್ನೂ ಶ್ರೀನಾಥ್ ಮರಾಠೆ, ಕೆ.ಆರ್.ಕುಮಾರ್, ರಫೀಕ್ ಖಾನ್ ಮುಂತಾದವರಿಗೆ ಫೋನಾಯಿಸಿ ತಿಳಿದುಕೊಳ್ಳುತ್ತಿದ್ದೆ. ಎಲ್ಲೂ ಎಂದೂ ರಾಗ, ತಾಳಗಳ, ಕಲಾವಿದರ ಹೆಸರು ತಪ್ಪಾಗದಂತೆ ನೋಡಿಕೊಳ್ಳುತ್ತಿದ್ದೆ. ಆಹ್ವಾನಿತ ಶ್ರೋತೃಗಳ ಕಾರ್ಯಕ್ರಮದ ಸಂದರ್ಭದಲ್ಲೂ ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದವರ ಮುಂದೆ ನಾನು ಬರೆದ ಪ್ರವರಗಳನ್ನೆಲ್ಲಾ ಒಪ್ಪಿಸಿ ನಿರಾಳಳಾಗುತ್ತಿದ್ದೆ. ಸಂಗೀತದ ರಾಗ, ತಾಳ, ಕಲಾವಿದರ ಹೆಸರಿನ ಉಚ್ಚಾರದ ಬಗ್ಗೆ ನನ್ನ ಉದ್ಘೋಷಣೆಯೇ ಪ್ರಮಾಣೀಕೃತವಾದುದೆಂದು ನನ್ನ ಕಿರಿಯ ತಾತ್ಕಾಲಿಕ ಉದ್ಘೋಷಕರೆಲ್ಲ ಭಾವಿಸುವ ಮಟ್ಟಿಗೆ ನಾನು ಅವುಗಳ ಸರಿಯಾದ ಉಚ್ಚಾರದ ಜ್ಞಾನವನ್ನು ವೃದ್ಧಿಸಿಕೊಂಡಿದ್ದೆ. ಆದರೆ ಇದರ ಹಿಂದೆ ಅಪಾರವಾದ ಶ್ರಮ, ಕಾಳಜಿ, ಅಪಮಾನದ ನೋವು ಎಲ್ಲವೂ ಇದ್ದುವೆಂದು ಯಾರಿಗೂ ಗೊತ್ತೇ ಇರಲಿಲ್ಲ. ಇದರ ಹಿಂದೆ ಒಂದು ವ್ರತದಂತೆ ಕಷ್ಟಪಟ್ಟು ನಾನು ಮಾಹಿತಿ ಸಂಪಾದಿಸಿದ ದೊಡ್ಡ ಕಥೆಯೇ ಇದೆ.
ಪ್ರತಿ ಬಾರಿ ಯಾವುದೇ ಭಾವಗೀತೆ, ಭಕ್ತಿಗೀತೆಗಳನ್ನು ಧ್ವನಿಮುದ್ರಿಸಿದ ಬಳಿಕ ಧ್ವನಿ ಮುದ್ರಿಸಿದವರು ಅದನ್ನು ಹಾಡಿದ ಕಲಾವಿದರ ಬಳಿ ಆ ಹಾಡುಗಳ ರಚನೆಕಾರರು ಯಾರು ಎಂದು ಕೇಳಿ ಆ ವಿವರಗಳನ್ನು ಆಯಾ ಟೇಪ್ ಅಥವಾ ಸಿ.ಡಿ ಗಳಲ್ಲಿ ನಮೂದಿಸುವುದು ಪದ್ಧತಿ. ಆದರೆ ಧ್ವನಿ ಮುದ್ರಿಸುವವರಾಗಲೀ, ಹಾಡುಗಾರರಾಗಲೀ ಸಾಹಿತಿಗಳೋ ಅಥವಾ ಭಾಷಾ ವಿದ್ವಾಂಸರೋ ಆಗಿರಬೇಕೆಂದೇನೂ ಇಲ್ಲದ ಕಾರಣ ಎಷ್ಟೋ ಬಾರಿ ತಪ್ಪು ವಿವರಗಳು ದಾಖಲಾಗುತ್ತಿದ್ದುವು. ರಚನೆಕಾರರು ಗೊತ್ತಿಲ್ಲವೆಂದಾದರೆ ಅದನ್ನು ಕುವೆಂಪು ಅವರಿಗೋ, ಶಿವರುದ್ರಪ್ಪ ಅವರಿಗೋ ಸಲ್ಲಿಸಿ ಕೈ ತೊಳೆದುಕೊಂಡುಬಿಡುತ್ತಿದ್ದರು. ಅಂಥ ತಪ್ಪುಗಳು ನಾನು ಪಾಳಿಯಲ್ಲಿದ್ದಾಗ ಪ್ರಸಾರಕ್ಕೆ ಸಿಕ್ಕರೆ ನಾನು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹಲವಾರು ಫೋನ್ ಕರೆಗಳನ್ನು ಮಾಡಿ ತಪ್ಪು ವಿವರ ಪ್ರಸಾರವಾಗದಂತೆ ಕಾಳಜಿ ವಹಿಸುತ್ತಿದ್ದೆ. ಆದರೆ ಇಂಥ ತೆರೆ ಮರೆಯ ಕೆಲಸಗಳು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಮಾತ್ರವಲ್ಲ ಹಳೆಯ ಭೆಲ್, ಮೆಲ್ಟ್ರೋನ್ ಮೆಶೀನ್ ಗಳು ಮೂಲೆಗುಂಪಾಗಿ ಕಂಪ್ಯೂಟರೀಕೃತ ಧ್ವನಿಮುದ್ರಣದ ವ್ಯವಸ್ಥೆ ಬಂದ ಮೇಲೆ ಆಕಾಶವಾಣಿಯ ಅಸಂಖ್ಯ ಟೇಪುಗಳಲ್ಲಿ ಧ್ವನಿಮುದ್ರಿತವಾಗಿದ್ದ ಅಮೂಲ್ಯ ಸಂಗೀತ ಕಾರ್ಯಕ್ರಮಗಳನ್ನು, ಗ್ರಾಮಾಫೋನ್ ರೆಕಾರ್ಡ್ ಗಳನ್ನು ಸಿ.ಡಿ ಗಳಿಗೆ ವರ್ಗಾಯಿಸುವ ಕೆಲಸ ಯಜ್ಞದೋಪಾದಿಯಲ್ಲಿ ನಡೆಯ ತೊಡಗಿತು. ಕ್ರಮೇಣ ಹೊರಗಿನಿಂದ ಬಂದ ಹೊಸ ಕೈಗಳಿಗೆ ಈ ಕೆಲಸ ಒಪ್ಪಿಸಲಾಯಿತು. ಅವರೋ ಕಾರ್ಯಕ್ರಮವನ್ನು ವರ್ಗಾಯಿಸುವ ಜೊತೆಗೆ ಕಲಾವಿದರ ಹೆಸರು, ರಾಗ, ತಾಳಗಳ ಹೆಸರು ಎಲ್ಲವನ್ನೂ ಅಪಭ್ರಂಶಮಾಡಿ ಬರೆದಿಟ್ಟು ಹೋದರು. ಅಂಥ ವರ್ಗಾವಣೆಗೊಂಡ ಕಾರ್ಯಕ್ರಮಗಳ ಸಿ.ಡಿ.ಗಳನ್ನು ನಾನು ಕರ್ತವ್ಯದಲ್ಲಿದ್ದಾಗ ಪ್ರಸಾರಕ್ಕೆ ಶೆಡ್ಯೂಲ್ ಮಾಡಿದ್ದಾಗ ನಾನವುಗಳನ್ನು ತಿದ್ದಿ ಬರೆಯುವ ಕೆಲಸ ಮಾಡಿದ್ದೇನೆ. ಆದರೆ ಈಗಿನ ಹೊಸ ತಲೆಮಾರಿನ ಕಿರಿಯ ಉದ್ಘೋಷಕರಿಗೆ ಅದು ತಪ್ಪೋ ಒಪ್ಪೋ ಎಂಬ ಅರಿವಿಲ್ಲದೆ ಅವರು ಅದನ್ನು ತಪ್ಪಾಗಿ ಉದ್ಘೋಷಿಸುವುದನ್ನು ಕೇಳುವಾಗ ಮನದ ಮೂಲೆಯಲ್ಲಿ ಸಣ್ಣಗೆ ನೋವಾಗುತ್ತದೆ. ಸಂಗೀತವೆಂದರೆ ಆಕಾಶವಾಣಿ, ಆಕಾಶವಾಣಿಯೆಂದರೆ ಸಂಗೀತ ಎಂಬಂಥ ಛಾಪನ್ನು ಹೊತ್ತಿದ್ದ ಆಕಾಶವಾಣಿಯಿಂದ ತಪ್ಪಾಗಿ ಸಂಗೀತದ ವಿವರಗಳು ಪ್ರಸಾರವಾಗುವುದನ್ನು ನನ್ನ ಮಡಿವಂತಿಕೆಯ ಮನಸ್ಸು ಒಪ್ಪುವುದಿಲ್ಲ. ಬಹುಶ: ನಾನು ಆಕಾಶವಾಣಿಗೆ ಸೇರಿದ ಹೊಸತರಲ್ಲಿ ನನ್ನ ಅಜ್ಞಾನದಿಂದ ಸಂಗೀತ ಬಲ್ಲವರಿಗೆಲ್ಲಾ ಇಂಥ ಮುಜುಗರವನ್ನೇ ಉಂಟುಮಾಡಿದ್ದೆನಲ್ಲಾ ಎಂದು ಮನಸ್ಸು ಈಗ ಪರಿತಪಿಸುತ್ತದೆ, “ಅಪಮಾನವಾದರೆ ಒಳಿತು” ಎಂಬ ಕೀರ್ತನೆಯ ಸಾಲುಗಳನ್ನು ಮತ್ತೆ ಗುನುಗುತ್ತದೆ.

ಮುಂದಿನ ಸಂಚಿಕೆಗೆ ►►

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.