ಮೊದಲು ಕೇವಲ ಏಕಮುಖ ಸಂವಹನವಷ್ಟೇ ಸಾಧ್ಯವಿದ್ದ ಆಕಾಶವಾಣಿಯಲ್ಲಿ ದ್ವಿಮುಖ ಸಂವಹನ ಪ್ರಕ್ರಿಯೆ ಆರಂಭವಾಯಿತು. 1994 ರ ಸುಮಾರಿಗೆ ಶ್ರೀ ರಾಘವನ್ ಅವರು ಸಹಾಯಕ ನಿಲಯನಿರ್ದೇಶಕರಾಗಿದ್ದ ಕಾಲದಲ್ಲಿ ಶ್ರೋತೃಗಳ ಫೋನ್ ಕರೆಗಳನ್ನು ಚೀಟಿಯಲ್ಲಿ ಬರೆದು ಉದ್ಘೋಷಕರಿಗೆ ಹಸ್ತಾಂತರಿಸುವ ಹೊಸ ಪ್ರಯೋಗ ಆರಂಭವಾಯಿತು. ಆ ಚೀಟಿಯಲ್ಲಿದ್ದ ಪ್ರಶ್ನೆಗಳಿಗೆ ಸ್ಟುಡಿಯೋದಿಂದ ಉತ್ತರಿಸುವ ವಿಧಾನವನ್ನು ಆರಂಭಿಸಿದಾಗ ಅಷ್ಟು ಮಾತ್ರಕ್ಕೇ ನಾವು ಹಾಗೂ ಶ್ರೋತೃಗಳು ಪುಲಕಿತರಾಗಿ ಹೋಗುತ್ತಿದ್ದೆವು. ಈ ವಿಧಾನದಲ್ಲಿ ಮೊದಲ ಬಾರಿ ನಡೆಸಿಕೊಟ್ಟ “ಪ್ರಜಾವೇದಿಕೆ” ಕಾರ್ಯಕ್ರಮದಲ್ಲಿ ನಾನು ಮತ್ತು ಶಂಕರ್. ಎಸ್. ಭಟ್ ಅವರಲ್ಲದೆ ಈಗ ನಾನು ಹೆಸರು ಮರೆತಿರುವ ಸಾರಿಗೆ ಇಲಾಖೆಯ ಯಾರೋ ಸರಕಾರೀ ಅಧಿಕಾರಿ ಕೂಡಾ ಇದ್ದರು. ಅದುವರೆಗೆ ಪತ್ರಮುಖೇನ ವಾರಕ್ಕೂ ಮುನ್ನ ಪ್ರಶ್ನೆ ಕಳಿಸುತ್ತಿದ್ದ ಶ್ರೋತೃಗಳು ಈಗ ದೂರವಾಣಿ ಮೂಲಕ ತಮ್ಮ ಪ್ರಶ್ನೆಗಳನ್ನು ರವಾನಿಸುವಂತಾದಾಗ ಅತೀವ ಹರ್ಷಗೊಂಡಿದ್ದರು. ದೂರವಾಣಿ ಮೂಲಕ ಕೇಳಲಾಗುತ್ತಿದ್ದ ಪ್ರಶ್ನೆಗಳನ್ನು ಬರೆದು ನಮ್ಮ ವರೆಗೆ ತಲುಪಿಸಲು ಸ್ವತಹ ರಾಘವನ್ ಅಲ್ಲದೆ ಹಲವಾರು ಸಹೋದ್ಯೋಗಿಗಳು ತೊಡಗಿದ್ದು ಆಗಿಂದಾಗಲೇ ನೇರವಾಗಿ ಉತ್ತರಿಸುವ ಚಾಕಚಕ್ಯತೆಯನ್ನು ವಾತಾನುಕೂಲ ವ್ಯವಸ್ಥೆಯಲ್ಲೂ ಬೆವರುತ್ತಾ ನಾವು ರೂಢಿಸಿಕೊಳ್ಳತೊಡಗಿದ್ದೆವು. ಲೈವ್ ಅನ್ನುವುದರ ಮೊದಲ ಪುಳಕದ ಕ್ಷಣಗಳವು. ಕ್ರಮೇಣ ದ್ವಿಮುಖವಾಗಿ ನೇರ ಸಂವಾದ ನಡೆಸಬಲ್ಲ ಉಪಕರಣ ನಮ್ಮ ನಿಲಯವನ್ನೂ ಪ್ರವೇಶಿಸಿತು. “ಹಲೋ ಕೆ.ಎಂ.ಸಿ.” ಮುಂತಾದ ದ್ವಿಮುಖ ಸಂವಹನದ ಕಾರ್ಯಕ್ರಮಗಳು ಆರಂಭವಾದುವು. ಮೊದಲು ತಮ್ಮ ಕೋರಿಕೆಯ ಚಿತ್ರಗೀತೆಗಳಿಗಾಗಿ ಪತ್ರ ಬರೆದು ಕಾಯುತ್ತಿದ್ದ ಶ್ರೋತೃಗಳು ಈಗ ನೇರವಾಗಿ ಫೋನ್ ಮುಖಾಂತರ ತಮ್ಮ ಕೋರಿಕೆಯನ್ನು ಸಲ್ಲಿಸುವಂತಾಯಿತು. ಆಗ ಅವರೊಡನೆ ಗೀತೆಗೆ ಸಂಬಂಧಿಸಿದಂತೆ ಆಡುವ ಮಾತುಗಳ ಜೊತೆಗೆ ಬೆಳಗ್ಗಿನ ತಿಂಡಿ, ಊರು, ಕೇರಿ ಬಗ್ಗೆ ಉಭಯ ಕುಶಲೋಪರಿ ತೊಡಗಿ ಕ್ರಮೇಣ ನಾನು ಆ ಮಾತುಕತೆಗಳಿಗೆ ಜೀವಂತಿಕೆ ತುಂಬುವ ಕೆಲಸ ಮಾಡತೊಡಗಿದೆ. ಅಲ್ಲೂ ಶಿಷ್ಟಾಚಾರದ ಗೆರೆ ಮೀರದಂತೆ ನಮ್ಮ ಮಾತಿನಲ್ಲಿ ಎಚ್ಚರವನ್ನು, ತೂಕವನ್ನು ಕಾಯ್ದುಕೊಳ್ಳುವತ್ತ ಗಮನವಿಟ್ಟೇ ಸಂವಾದ ನಡೆಸುವ ಹಗ್ಗದ ಮೇಲಿನ ನಡಿಗೆಯಾಗಿತ್ತದು. ಬರಬರುತ್ತ ಈ ಮಾತುಕತೆ ಲವಲವಿಕೆಯ ಛಾಪನ್ನು ಪಡೆಯತೊಡಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗತೊಡಗಿತು. ಪ್ರತಿಯೊಬ್ಬ ಶ್ರೋತೃ ಕೂಡಾ ನನ್ನ ಆತ್ಮೀಯ ಕಕ್ಷೆಯೊಳಗಿನ ಸದಸ್ಯನೆಂಬಂಥ ಭಾವದಿಂದ ನಾನು ಅವರೊಡನೆ ಆಡುವ ಮಾತುಕತೆಯ ಶೈಲಿಗೆ ನಾನು ಅವರ ಎದೆ ಬಾಗಿಲಿನೊಳಕ್ಕೆ ನೇರ ಪ್ರವೇಶವನ್ನು ಬಹುಬೇಗ ಪಡೆದೆ. “ಎಂತದು ಮಾರಾಯ್ರೇ” ಅನ್ನುತ್ತ ಆರಂಭವಾಗ್ತಾ ಇದ್ದ ನನ್ನ ಮಾತಿನ ಹರಿವು ನಗು, ತಮಾಷೆ, ಆತ್ಮೀಯ ಸ್ಪರ್ಶದೊಡನೆ ಹೃದಯಕ್ಕೆ ಹತ್ತಿರವಾಗತೊಡಗಿತು. ನೂರಾರು, ಸಾವಿರಾರು ಜನರ ಒಲವು, ಗೆಳೆತನ, ಜನಪ್ರಿಯತೆಯನ್ನು ಸಂಪಾದಿಸಿಕೊಟ್ಟ ಈ ಕಾರ್ಯಕ್ರಮ ನನ್ನ ಬಾನುಲಿ ಬದುಕಿಗೆ ರಂಗನ್ನು, ಜೀವಂತಿಕೆಯನ್ನು, ಸ್ಪೂರ್ತಿಯನ್ನು, ಅರ್ಥವನ್ನು ತುಂಬಿದ ಹೃದಯಸ್ಪರ್ಶಿ ಕಾರ್ಯಕ್ರಮ.
ಚಿತ್ರಗೀತೆಗಳ ಫೋನ್ ಇನ್ ಕಾರ್ಯಕ್ರಮ ಮೊದಲು ಸೋಮವಾರ ಬೆಳಗ್ಗೆ ಮತ್ತು ಶುಕ್ರವಾರ ಮಧ್ಯಾನ್ಹ – ಹೀಗೆ ವಾರಕ್ಕೆರಡು ಇದ್ದುದು ಶ್ರೀ ರಾಜಶೇಖರನ್ ಅವರು ನಿಲಯನಿರ್ದೇಶಕರಾಗಿ ಬಂದ ಮೇಲೆ ವಾರಕ್ಕೆ ಐದು ಆಯಿತು. ಗುರುವಾರ ಮುಂಜಾನೆ “ಹನಿ ಹನಿ ಇಬ್ಬನಿ” ಎಂಬ ಪೂರ್ವ ಧ್ವನಿಮುದ್ರಿತ ಸಂಯೋಜಿತ ಕಾರ್ಯಕ್ರಮವನ್ನು ಡಾ.ಶರಭೇಂದ್ರಸ್ವಾಮಿಯವರು ನಡೆಸುತ್ತಿದ್ದರು. ಉಳಿದಂತೆ ನಾವು ನಾಲ್ವರು ಉದ್ಘೋಷಕರು ವಾರಕ್ಕೊಬ್ಬರಂತೆ ಈ ನೇರ ಫೋನ್ ಇನ್ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದು ನನ್ನ ಪಾಲಿಗೆ ಮಂಗಳವಾರ ಬೆಳಗ್ಗೆ “ಗೀತಗಂಗಾ” ಎಂಬ ಹಿಂದಿಚಿತ್ರಗೀತೆಗಳ ಕೋರಿಕೆಯ ಫೋನ್ ಇನ್ ಕಾರ್ಯಕ್ರಮ ಸಿಕ್ಕಿತು. ನಾನು ಅದಕ್ಕಾಗಿಯೇ “ಗೀತ್ ಗಾತಾ ಚಲ್”ಗೀತೆಯ ಆರಂಭಿಕ ಸಾಲುಗಳನ್ನು ಬಳಸಿ ಅಂಕಿತ ಸಂಗೀತದಂತೆ ಮಾಡಿಕೊಂಡು ಪ್ರತಿವಾರವೂ ಅದನ್ನು ವಿಶೇಷ ಸಂಚಿಕೆಯಾಗಿ ರೂಪಿಸಿದೆ. ಒಂದೊಂದು ವಾರ ಒಬ್ಬೊಬ್ಬ ಗಾಯಕ ಅಥವಾ ಗಾಯಕಿ, ಗೀತರಚನಕಾರ, ಸಂಗೀತಸಂಯೋಜಕ, ಸಿನೆಮಾ ನಿರ್ದೇಶಕರ ಸ್ಪೆಷಲ್ ಕಾರ್ಯಕ್ರಮಗಳನ್ನು ಯೋಜಿಸಿ ಶ್ರೋತೃಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿದೆ. ಹಳೆಯ ಹಿಂದಿ ಚಿತ್ರಗೀತೆಗಳ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಬೆಳಕಿಗೆ ಬಂದರು. ಮೂಡಬಿದಿರೆಯ ಸುಧಾಕರ್ – ಆರತಿ ದಂಪತಿ, ಮೋಹಿನಿ, ಉಡುಪಿ ಬ್ರಹ್ಮಗಿರಿಯ ಶ್ರೀಧರರಾವ್, ನಿರ್ಮಲಾ ರಾವ್, ಮಣಿಪಾಲದ ಅನುರಾಧಾ ರಾವ್, ಬದಿಯಡ್ಕದ ವೈದ್ಯ ದಂಪತಿಗಳು, ಸುರತ್ಕಲ್ ನ ಖಾಯಂ ಶ್ರೋತೃಗಳು, ಕಾವೂರಿನ ರೇಗೋ, ಕುಂದಾಪುರದ ರವೀಂದ್ರ ಪೈ, ಕಿನ್ನಿಗೋಳಿಯ ರಾಮಕೃಷ್ಣ ರಾವ್, ಉಪ್ಪಿನಂಗಡಿಯ ವಿದ್ಯಾರ್ಥಿ ಮಿತ್ರ – ಹೀಗೆ ಹಲವರು ನಾನು ಯೋಜಿಸುತ್ತಿದ್ದ ಹಿಂದಿಚಿತ್ರಗೀತೆಗಳ ರಸ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಖಾಯಂ ಶ್ರೋತೃಗಳಲ್ಲಿ ಕೆಲವರು.
ಆದರೆ ಗೀತಗಂಗಾದ ಪ್ರಯೋಗಕ್ಕೂ ಮುನ್ನ ಕನ್ನಡ ಚಿತ್ರಗೀತೆಗಳ ಫೋನ್ ಇನ್ ಕಾರ್ಯಕ್ರಮದಲ್ಲಿ ನನ್ನ ಪರಿಚಯ ಕಕ್ಷೆಗೆ ಬಂದ ಎಷ್ಟೋ ಶ್ರೋತೃಗಳು ತಮಗೆ ಹಿಂದಿ ಚಿತ್ರಗೀತೆಗಳ ಬಗ್ಗೆ ಇರುವ ಮಾಹಿತಿಯ ಕೊರತೆಯಿಂದ ಅದರಲ್ಲಿ ಭಾಗವಹಿಸಲು ಸಾಧ್ಯವಾಗದ ಬಗ್ಗೆ ನನ್ನಲ್ಲಿ ತಮ್ಮ ದು:ಖ ತೋಡಿಕೊಳ್ಳುತ್ತಿದ್ದರು. ಕಲ್ಮಡ್ಕದ ಭಾಗೀರಥಿ ಎಂಬವರು ತಮ್ಮ ಎಷ್ಟೋ ಕೌಟುಂಬಿಕ ಸಮಸ್ಯೆಗಳಿಗೆ ಈ ಫೋನ್ ಇನ್ ಕಾರ್ಯಕ್ರಮದ ಸಂವಾದದಿಂದಲೇ ಸಮಾಧಾನ ಪಡೆಯುತ್ತಿದ್ದು ಒಮ್ಮೆ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತ ತಮ್ಮ ಕೊರಗನ್ನು ಅವರು ತೋಡಿಕೊಂಡಾಗ ನಾನವರಿಗೆ ಹೆಣ್ಣು ಮಕ್ಕಳೆಂದು ಚಿಂತಿಸದಿರಿ, ಅವರಿಗೆ ಒಳ್ಳೆಯ ಶಿಕ್ಷಣ ಕೊಡಿ ಎಂದು ಹೇಳಿದ ಮಾತನ್ನು ಧನ್ಯತೆಯಿಂದ ಸ್ವೀಕರಿಸಿದ್ದರು, ಗದ್ಗದ ಕಂಠದಿಂದ ಧನ್ಯವಾದ ಹೇಳಿದ್ದರು. ತಲಪಾಡಿಯ ಗುಡ್ಡದ ಮೇಲೆ ವಾಸವಾಗಿದ್ದ ಅಜ್ಜಿಯೊಬ್ಬರು ನನ್ನಲ್ಲಿ ಮಾತನಾಡಲೆಂದೇ ಫೋನ್ ಸೌಕರ್ಯ ಇರುವ ಗುಡ್ಡದ ಕೆಳಗಿನ ತಮ್ಮ ಸಂಬಂಧಿಕರ ಮನೆಗೆ ನನ್ನ ಫೋನ್ ಇನ್ ಕಾರ್ಯಕ್ರಮದ ದಿನ ಬಂದು ಮಾತನಾಡಿದ್ದರು. ಸಕಲೇಶಪುರದ ಯೋಗೇಶ್, ಕುಂದಬಾರಂದಾಡಿಯ ಸುಬ್ರಹ್ಮಣ್ಯ ಪೂಜಾರಿ, ಮಂಜೇಶ್ವರದ ನಳಿನಾಕ್ಷಿ, ತೋಕೂರಿನ ಸುಕನ್ಯಾ, ಕೊಂಜಾಡಿಯ ಕೃಷ್ಣ, ವಾಮದಪದವಿನ ಪ್ರಭುಗಳು, ಕೊಣಾಜೆಯ ವಿಷ್ಣು, ಕುರ್ಕಾಲು ರಾಜು ಶೆಟ್ಟಿಗಾರ್, ಕಲ್ಲಾಡಿಯ ಇಸ್ಮಾಯಿಲ್, ಕಾಳಾವರದ ವೇದಾ ಶೆಟ್ಟಿ(ಮಾನಸ ಕುಂದಾಪುರ), ಗಣೇಶ್ ಬಜಾರಿನ ಹರೇಕಳ ನರೇಂದ್ರ ನಾಯಕ್, ಕಾವೂರಿನ ಪ್ರಭಾ ಪೈ – ಹೀಗೆ ಅಸಂಖ್ಯ ಶ್ರೋತೃಗಳು ನನ್ನ ಸ್ನೇಹಿತರಾದರು.
ಈ ಕಾರ್ಯಕ್ರಮಕ್ಕಾಗಿ ನಾನು ಕೇಳುಗರಿಗೆ ವಾರಕ್ಕೊಂದು ಹೊಸ ವಿಷಯ ಕೊಡುತ್ತಿದ್ದೆ. ಒಮ್ಮೆ ಮಳೆಗಾಲದ ಸಮಯದಲ್ಲಿ ಮಳೆಯಬಗ್ಗೆ ಸಣ್ಣ ಕವನ ಬರೆಯಲು ಹೇಳಿದ್ದೆ. ಹಲವಾರು ಕವಿಗಳು ನನಗಾಗ ದೊರಕಿದರು. ಈಗ ಆಕಾಶವಾಣಿಯಲ್ಲಿ ತಾತ್ಕಾಲಿಕ ನಿರೂಪಕಿಯಾಗಿರುವ ಸಾವಿತ್ರಿ ಪೂರ್ಣಚಂದ್ರ ಇಂಥದ್ದೇ ಸಮಯದಲ್ಲಿ ನನಗೆ ಪರಿಚಯವಾದವರು. ಹೆಣ್ಣು ನೋಡಲು ಹೋದ ಪ್ರಸಂಗ, ಮೊದಲ ಬಾರಿ ನೋಡಿದ ಸಿನೆಮಾ, ಮೊದಲ ಅಡುಗೆ – ಇಂಥ ವಿಷಯಗಳನ್ನು ಕೊಟ್ಟು ಎಷ್ಟೋ ರಂಜನೀಯ ಪ್ರಸಂಗಗಳನ್ನು ಕೇಳುಗರ ಬಾಯಿಯಿಂದ ಹೇಳಿಸುವ ಪ್ರಯತ್ನ ಮಾಡಿದ್ದೆ. ಒಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಎಳೆಯರಿಂದ ಹಿಡಿದು ತೀರಾ ವಯಸ್ಸಾದವರ ವರೆಗಿನ ಸಾವಿರಾರು ಕೇಳುಗರು ಮಾತಿಗೆ ಸಿಕ್ಕರು. ಪ್ರತಿಯೊಂದು ಹೃದಯವೂ ಬಯಸುವುದು ಒಂದು ಬೊಗಸೆ ಪ್ರೀತಿಗಾಗಿ, ಸಹಾನುಭೂತಿಗಾಗಿ, ತನ್ನೊಳಗಿನ ಒತ್ತಡಗಳ ಸಂವಹನಕ್ಕಾಗಿ ಎಂಬ ಸತ್ಯದ ದರ್ಶನ ನನಗಾಯಿತು. ನಮ್ಮ ಪ್ರತಿಯೊಂದು ಮಾತನ್ನೂ ಅವರು ವೇದವಾಕ್ಯವೆಂಬಂತೆ ಸ್ವೀಕರಿಸುತ್ತಿದ್ದರು. ಹೀಗಿರುವಾಗ ಅವರ ನಿರೀಕ್ಷೆಗೆ ತಕ್ಕಂತೆಯಾದರೂ ನಾವೂ ನಮ್ಮ ಮಾತುಕತೆಯಲ್ಲಿ ಅಪಾರ ಕರುಣೆ, ಸಹಾನುಭೂತಿ, ಪ್ರೀತಿ, ವಾತ್ಸಲ್ಯವನ್ನು ತೋರಬೇಕಾಗುತ್ತಿತ್ತು. ಕೆಲವೊಮ್ಮೆ ಫೋನ್ ಸಂಪರ್ಕ ಸಿಗದ ಕೇಳುಗರು ನಮ್ಮ ವೈಯಕ್ತಿಕ ಫೋನ್ ಗಳಿಗೆ, ಮನೆ ಫೋನ್ ಗಳಿಗೆ ನಾವು ಬೆಳಗ್ಗಿನ ಪಾಳಿ ಮುಗಿಸಿ ವಿರಮಿಸುವ ವೇಳೆಯಲ್ಲಿ, ಬೆಳಗ್ಗೆ ಕೆಲಸದ ತರಾತುರಿಯಲ್ಲಿದ್ದಾಗ ಕರೆ ಮಾಡಿ ಮಾತನಾಡುತ್ತಿದ್ದರು. ಅವರ ಕೌಟುಂಬಿಕ, ಮಾನಸಿಕ, ಆರೋಗ್ಯ ಸಂಬಂಧೀ ಸಮಸ್ಯೆಗಳಿಗೆಲ್ಲಾ ಅವರು ಆತು ಕೊಳ್ಳುತ್ತಿದ್ದುದು ನಮ್ಮನ್ನು. ಮಾತ್ರವಲ್ಲ ನಾವು ಹಗಲೂ ರಾತ್ರಿಯೂ ಆಕಾಶವಾಣಿಯಲ್ಲಿಯೇ ಇರುವಂಥವರು ಎಂಬ ಭಾವನೆ ಅವರದು. ಕೆಲವೊಮ್ಮೆ ನಾನು ನನ್ನ ಪ್ರವಾಸದ ನಿಮಿತ್ತ ಒಂದೆರಡು ವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವೆಂದಾದರೆ ಫೋನ್ ಮಾಡಿಯೋ ಪತ್ರ ಬರೆದೋ ಅರೋಗ್ಯ ವಿಚಾರಿಸುವವರು, ಯಾವಾಗಲೋ ಮಾತಿನ ನಡುವೆ ಉಪ್ಪಿನ ಕಾಯಿ ಹಾಕಲು ಮಾವಿನಮಿಡಿ ಬೇಕೆಂಬ ನನ್ನ ಬೇಡಿಕೆ ಕೇಳಿಸಿಕೊಂಡು ಉಪ್ಪಿನಕಾಯಿ ಜಾಸ್ತಿ ತಿನ್ನಬೇಡಿ, ಅರೋಗ್ಯಕ್ಕೆ ಹಾಳು ಎಂದು ಪತ್ರ ಬರೆದು ಪ್ರೀತಿಯಿಂದ ಎಚ್ಚರಿಸುವವರು, ಮಲೇರಿಯ ಪೀಡಿತಳಾಗಿ ಮಲಗಿದ್ದಾಗ ತನ್ನೂರ ದೇವರಿಗೆ ಎಳ್ಳೆಣ್ಣೆ ಹರಕೆ ಹೇಳಿಕೊಳ್ಳುವವರು – ಹೀಗೆ ನಾನಾ ಬಗೆಯಲ್ಲಿ ನಮ್ಮ ಕಾಳಜಿ ತೆಗೆದುಕೊಳ್ಳುವ ಶ್ರೋತೃಮಿತ್ರರಿದ್ದರು. ಹಲೋ ಕೆ.ಎಂ.ಸಿ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪೀಡಿತ ರೋಗಿಗೆ ಡಾಕ್ಟರ್ ಹೇಳುವ ಪರಿಹಾರಕ್ಕಿಂತಲೂ ನಮ್ಮ ಸಾಂತ್ವನದ, ಭರವಸೆಯ ಮಾತುಗಳ ಮೇಲೆ ಅವರಿಗೆ ಹೆಚ್ಚಿನ ವಿಶ್ವಾಸವಿತ್ತು.
ವನಿತಾವಾಣಿಯ ಮುಕ್ತವೇದಿಕೆ ಎಂಬ ಕಾರ್ಯಕ್ರಮದ ಮೂಲಕ ನಾನು ತಿಂಗಳಿಗೊಮ್ಮೆ ನಮ್ಮ ಸಹೋದರಿಯರಿಗೆ ಮಾತನಾಡಲು ನೀಡುತ್ತಿದ್ದ ವಿಷಯಗಳಿಂದಾಗಿ ತೀರಾ ವಯಸ್ಸಾದ ಅಜ್ಜಿಯಂದಿರೂ ನನಗೆ ಗೆಳತಿಯರಾದರು. ಒಮ್ಮೆ “ಮಿಕ್ಕಿದ ಹೆಚ್ಚುವರಿ ಅಡುಗೆಯ ಸದುಪಯೋಗ”ದ ಬಗ್ಗೆ ಮಾತನಾಡಿ ಎಂದಾಗ ಕೋಟೇಶ್ವರ ಕಡೆಯ ವಯಸ್ಸಾದ ಹೆಂಗಸೊಬ್ಬರು “ಹೌದನಾ ಶಕುಂತಲಾ, ನನಗೆ ಮುಸುರೆ ತಿನಿಸ್ಬೇಕು ಅಂತ ಮಾಡಿದ್ದಿಯಾ” ಅಂತ ಪ್ರೀತಿಯಿಂದ ಕೇಳಿದ್ದನ್ನು ಎಂದೂ ಮರೆಯೆ. ’ಅತ್ತೆ – ಸೊಸೆ” – ಸಂಬಂಧ ಸುಧಾರಣೆಯ ಬಗ್ಗೆ ನಡೆದ ಮುಕ್ತವೇದಿಕೆಯಂತೂ ಹಲವು ಜ್ವಲಂತ ಸತ್ಯಗಳನ್ನು ಬೆಳಕಿಗೆ ತಂದಿತ್ತು.
ವರ್ಷಾಂತ್ಯದ ರಾತ್ರಿ ನಾನು ನಡೆಸಿಕೊಡುತ್ತಿದ್ದ ಫೋನ್ ಇನ್ ಸಂವಾದವನ್ನು ವರ್ಷವಿಡೀ ನೆನಪಿಟ್ಟು, ನಿವೃತ್ತಿಯ ಅನಂತರವೂ ನನ್ನ ಭಾಗವಹಿಸುವಿಕೆಗಾಗಿ ಹಂಬಲಿಸಿದವರಿದ್ದಾರೆ. ಒಂದು ಗಂಟೆಯಷ್ಟು ದೀರ್ಘಕಾಲದ ಆ ಕಾರ್ಯಕ್ರಮದಲ್ಲಿ ದೂರದೂರದ ಊರುಗಳಿಂದ ಕರೆಮಾಡಿ ಮಾತನಾಡಿದವರಿದ್ದಾರೆ. ಆಗುಂಬೆ ತಪ್ಪಲಿನ ಕೂಡಿಗೆಯ ಅನಂತಪದ್ಮನಾಭರು, ಶೃಂಗೇರಿಯ ದೇವರಾಜರು, ಕುಂದಾಪುರದ ಕೇಶವಮಯ್ಯ, ಸಾಗರ, ತೀರ್ಥಹಳ್ಳಿಯ ಶ್ರೋತೃಗಳು, ಬಿಕರ್ನಕಟ್ಟೆಯ ಶಕುಂತಲಾ ರಾಮಚಂದ್ರ – ಹೀಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ಎದೆ ಬಾಗಿಲನ್ನು ಪ್ರವೇಶಿಸಿದ ಅಸಂಖ್ಯ ಅಭಿಮಾನೀ ಶ್ರೋತೃಗಳು.
ಫೋನ್ ಇನ್ ಕಾರ್ಯಕ್ರಮದ ಮೂಲಕವೇ ನನ್ನ ಅಭಿಮಾನಿಯಾದ ವೈದ್ಯ ಡಾ| ಮೋಹನದಾಸ ಭಂಡಾರಿಯವರು ರೋಟರೀಕ್ಲಬ್ ನ ಕಾರ್ಯಕ್ರಮವೊಂದಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದಾಗ ನಾನು ಆ ಮೊದಲು ಪರಿಚಯವೇ ಇಲ್ಲದ ಅವರ ಬಳಿ “ನೀವು ಬೇರೆ ಯಾರನ್ನೋ ನಾನೆಂದು ತಪ್ಪಾಗಿ ತಿಳಿದು ಅಹ್ವಾನಿಸುತಿದ್ದೀರೇನೋ” ಎಂದು ತಬ್ಬಿಬ್ಬಾಗಿ ಹೇಳಿದ್ದೆ. “ಇಲ್ಲ ನಾನು ಸರಿಯಾಗಿಯೇ ತಿಳಿದು ನಿಮ್ಮನ್ನೇ ಅತಿಥಿಯಾಗಿ ಕರೆಯುತ್ತಿದ್ದೇನೆ. ನಾನು ನಿಮ್ಮ ಅಭಿಮಾನಿ” ಎಂದವರು ಹೇಳಿ ತುಂಬ ಹೊತ್ತು ನನ್ನ ಬಳಿ ಹರಟಿದ್ದರು. “ಬೋರ್ಕಟ್ಟೆ”ಎಂಬ ತುಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಖ್ಯಾತ ಚಿತ್ರನಟ ಶ್ರೀ ನವೀನ್ ಪಡೀಲರಿಗೆ ಅದೇ ಕಾರ್ಯಕ್ರಮದಲ್ಲಿ ಅವರೊಂದಿಗೆ ಭಾಗವಹಿಸಲಿದ್ದ ನನ್ನನ್ನು ಸಹೋದ್ಯೋಗಿ ಶ್ರೀ ಮುದ್ದು ಮೂಡುಬೆಳ್ಳೆಯವರು ಪರಿಚಯಿಸಿದಾಗ, “ಓಹೋ,ಶಕುಂತಲಾ ಕಿಣಿಯವರು ಯಾರಿಗೆ ಗೊತ್ತಿಲ್ಲ. ನಾನವರ ಫ್ಯಾನ್” ಎಂದು ಅವರು ಉದ್ಗರಿಸಿದ್ದು ನನ್ನ ವೃತ್ತಿ ಜೀವನದಲ್ಲೇ ಮರೆಯಲಾಗದ ಕ್ಷಣ. ಇಂಥ ಕ್ಷಣಗಳನ್ನು ನನಗೆ ಕೊಟ್ಟಿದ್ದು ಈ ಫೋನ್ ಇನ್ ಎಂಬ ನೇರ ಸಂವಾದದ ಕಾರ್ಯಕ್ರಮ. ಸಾಹಿತ್ಯ ಸಂಘದ ಕಾರ್ಯಕ್ರಮಕ್ಕಾಗಿ ನನ್ನನ್ನು ದೂರವಾಣಿಯಲ್ಲಿ ಮಾತನಾಡಿಸಿದ ಕಾರ್ಕಳದ ಪ್ರೊ. ಎಂ. ರಾಮಚಂದ್ರರು ರಿಸೀವರ್ ಇರಿಸುವ ಮೊದಲು “ನನ್ನ ಶ್ರೀಮತಿಗೊಮ್ಮೆ ನಿಮ್ಮ ಬಳಿ ಮಾತನಾಡಬೇಕಂತೆ. ಅವಳು ನಿಮ್ಮ ಅಭಿಮಾನಿ “ಎಂದದ್ದು, ಅಭಿಮಾನ್ ರೆಸಿಡೆನ್ಸಿ, ರೋಯಲ್ ದರ್ಬಾರ್ ಮುಂತಾದ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಮೆನು ಕಾರ್ಡ್ ಕೇಳಿದ ಮಾತ್ರದಿಂದಲೇ ನನ್ನ ಧ್ವನಿ ಪರಿಚಯ ಹಿಡಿದು ನನ್ನನ್ನು ಸುತ್ತುವರಿದ ಸಿಬ್ಬಂದಿ, ಕಿನ್ನಿಗೋಳಿಯ ಬಟ್ಟೆಯಂಗಡಿಗೆ ಸಣ್ಣ ವಸ್ತುವೊಂದನ್ನು ಕೇಳಿಕೊಂಡು ಹೋದಾಗ ನಾನು ಕೇಳಿದ ವಸ್ತು ಇದೆಯೇ ಎಂದು ಹೇಳುವುದಕ್ಕೂ ಮುನ್ನ “ನೀವು ಆಕಾಶವಾಣಿಯ ಕಿಣಿಯವರೇ?” ಎಂದು ಕೇಳಿ ಅಲ್ಲಿಂದ ನನ್ನನ್ನೂ ನನ್ನ ಯಜಮಾನರನ್ನೂ ಹೋಟೇಲಿಗೆ, ಬಳಿಕ ತನ್ನ ಮನೆಗೂ ಅಹ್ವಾನಿಸಿ ಆತಿಥ್ಯ ನೀಡಿದ ರಾಮಕೃಷ್ಣ ರಾವ್, ಕುಂದಾಪುರಕ್ಕೆ ಬಂದಾಗಲೆಲ್ಲಾ ತನ್ನ ಮನೆಗೂ ಕರೆದು ಅಮ್ಮನಿಂದ ಉಡಿ ತುಂಬಿಸಿ ಕಳಿಸುವ ರವೀಂದ್ರ ಪೈ, ಮಾಣಿಯ ಶಾಲೆಯ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆದ ಮೌನೇಶ್, ಮೂಡಬಿದಿರೆ, ಪುತ್ತೂರು ಮುಂತಾದ ಕಡೆ ನೇರ ಪ್ರಸಾರದ ಕಾರ್ಯಕ್ರಮಕ್ಕೆ ಹೋದಾಗ ಭೇಟಿಯಾಗಿ ಕತ್ತಿ, ಚೂರಿ ಮುಂತಾದ ವಸ್ತುಗಳನ್ನು ಬೇಡವೆಂದರೂ ಪ್ರೀತಿಯಿಂದ ಕೊಡುವ ಕಬ್ಬಿಣದ ಕೆಲಸ ಮಾಡುವ ದಾಮೋದರ ಆಚಾರ್ಯರ ಕುಟುಂಬ, ನನ್ನ ಕಾರ್ಯಕ್ರಮ ಇದ್ದಲ್ಲೆಲ್ಲಾ ಬಂದು ಭೇಟಿಯಾಗುವ ಬಂಟಕಲ್ಲಿನ ಸದಾನಂದ ನಾಯಕ್, ಮುರ್ಡೇಶ್ವರದ ರೈಲು ನಿಲ್ದಾಣದಲ್ಲಿ ನಮ್ಮವರೊಡನೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡು ಸುತ್ತುವರಿದ ಅಭಿಮಾನಿಗಳ ಸೈನ್ಯ, ನವರಾತ್ರಿ,ಗಣೇಶೋತ್ಸವಗಳಿಗೆ ಅತಿಥಿಯಾಗಿ ಬರುವಂತೆ ದುಂಬಾಲು ಬಿದ್ದ ನೂರಾರು ಅಭಿಮಾನಿಗಳು, ರೇಡಿಯೋ ಕೇಳುಗರ ಸಂಘದ ಯು.ರಾಮರಾವ್, ಸಾವಿತ್ರಿ ದಂಪತಿಗಳು ಹಾಗೂ ಸಂಘದ ಸದಸ್ಯರು ಇವರೆಲ್ಲರೂ ನನಗೆ ಫೋನ್ ಇನ್, ಮಾತುಕತೆ ಕಾರ್ಯಕ್ರಮದ ಮೂಲಕ ದೊರಕಿದವರು, ಒಂದು ಬೊಗಸೆ ಪ್ರೀತಿ ಕೊಟ್ಟರೆ ಪ್ರೀತಿಯ ಧಾರೆಯನ್ನೇ ಪಡೆಯುವೆ ಅನ್ನುವುದಕ್ಕೆ ಜ್ವಲಂತ ಸಾಕ್ಷಿಯಾದವರು.
ನಗುತ್ತಾ, ನಗಿಸುತ್ತಾ, ಮಾತಾಡುತ್ತ, ಮಾತನಾಡಿಸುತ್ತಾ ನಾನು ಆಕಾಶವಾಣಿಯಲ್ಲಿ ನಡೆಸಿಕೊಟ್ಟ ಆ ಫೋನ್ ಇನ್ ಕಾರ್ಯಕ್ರಮಗಳು ನನಗೆ ಕೊಟ್ಟ ನೂರಾರು, ಸಾವಿರಾರು ನಾನಿಲ್ಲಿ ಹೆಸರಿಸದ ಅಭಿಮಾನೀ ಶ್ರೋತೃಗಳು ನನ್ನ ನಿವೃತ್ತಿಯ ಈ ದಿನಗಳಲ್ಲಿ ಬೆಚ್ಚನೆಯ ನೆನಪಾಗಿ, ಚಿರ ಚೇತೋಹಾರಿ ಚೇತನರಾಗಿ ಸದಾ ಸ್ಮರಣೀಯರು.
ಮುಂದಿನ ವಾರಕ್ಕೆ ►




